ADVERTISEMENT

ಅಧಿಕಾರವನ್ನು ಜಯಿಸಿದ ಬುದ್ಧಿವಂತಿಕೆ

ಡಾ. ಗುರುರಾಜ ಕರಜಗಿ
Published 7 ಅಕ್ಟೋಬರ್ 2018, 19:52 IST
Last Updated 7 ಅಕ್ಟೋಬರ್ 2018, 19:52 IST

ಕೋಸಲ ದೇಶದಲ್ಲಿ ಒಮ್ಮೆ ಕಳ್ಳರು ಕಾಡಿನಲ್ಲಿ ಪ್ರವಾಸಿಗರನ್ನು ಲೂಟಿ ಮಾಡಿ ಓಡಿಹೋದರೆಂಬ ದೂರು ರಾಜನ ಬಳಿಗೆ ಬಂದಿತು. ರಾಜ ತನ್ನ ಅಧಿಕಾರಿಗಳಿಗೆ ಅವರನ್ನು ಬಂಧಿಸುವಂತೆ ಫರ್ಮಾನು ಹೊರಡಿಸಿದ. ಸೈನಿಕರು ತನಿಖೆಯಲ್ಲಿ ತೊಡಗಿದರು. ಎಷ್ಟು ಹುಡುಕಿದರೂ ಕಳ್ಳರು ಸಿಗಲಿಲ್ಲ. ಮಂತ್ರಿಗಳ ಒತ್ತಡವು ಹೆಚ್ಚಾಗುತ್ತಿತ್ತು.

ಆದ್ದರಿಂದ ಯಾರನ್ನಾದರೂ ಕಳ್ಳರೆಂದು ಹಿಡಿದು ಒಪ್ಪಿಸಿದರಾಯಿತು ಎಂದು ತೀರ್ಮಾನಿಸಿ ಕಾಡಿನ ಹತ್ತಿರವೇ ವ್ಯವಸಾಯ ಮಾಡುತ್ತಿದ್ದ ಮೂವರು ರೈತರನ್ನು ಬಂಧಿಸಿ ಅವರೇ ಕಳ್ಳರೆಂದು ರಾಜನ ಮುಂದೆ ನಿಲ್ಲಿಸಿದರು. ಸೈನಿಕರು ಅವರನ್ನು ಎಷ್ಟು ಹೆದರಿಸಿದ್ದರೆಂದರೆ ಮೂವರೂ ಗಾಬರಿಯಿಂದ ತಾವೇ ಕಳ್ಳರೆಂದು ಒಪ್ಪಿಕೊಳ್ಳಲು ಸಿದ್ಧರಾಗಿದ್ದರು.

ಆ ಸಮಯದಲ್ಲಿ ಒಬ್ಬ ಮಹಿಳೆ ಜೋರಾಗಿ ಅಳುತ್ತ, ಎದೆಬಡಿದುಕೊಳ್ಳುತ್ತ ರಾಜನ ಅರಮನೆಯ ಬಳಿಗೆ ಬಂದಳು. ಆಕೆ, ‘ನನಗೆ ಬಟ್ಟೆಕೊಡಿ, ಬಟ್ಟೆ ಕೊಡಿ’ ಎಂದು ಕೂಗುತ್ತಿದ್ದಳು. ಅವಳ ಧ್ವನಿ ರಾಜನ ಕಿವಿಗೆ ಬಿತ್ತು. ಆತ ತನ್ನ ಅಮಾತ್ಯರಿಗೆ ಹೇಳಿದ, ‘ಅದು ಯಾವುದೋ ಮಹಿಳೆ ಬಟ್ಟೆ ಬೇಡುತ್ತಿದ್ದಾಳೆ. ತಕ್ಷಣವೇ ಆಕೆಗೆ ಬಟ್ಟೆ ನೀಡಿ’. ಅಮಾತ್ಯರು ಆಕೆಯನ್ನು ಕಂಡು ಬಟ್ಟೆಗಳನ್ನು ಕೊಟ್ಟರು. ಆಕೆ, ‘ನನಗೆ ಈ ಬಟ್ಟೆ ಬೇಡ. ಪತಿ ರೂಪದ ಬಟ್ಟೆ ಬೇಕು’ ಎಂದು ಬೇಡತೊಡಗಿದಳು.

ADVERTISEMENT

ರಾಜ ಆಕೆಯನ್ನು ಕರೆಸಿಕೊಂಡು, ‘ಅಮ್ಮಾ, ಪತಿರೂಪದ ಬಟ್ಟೆ ಎಂದರೇನು?’ ಎಂದು ಕೇಳಿದ. ಆಕೆ ಹೇಳಿದಳು, ‘ರಾಜಾ, ಬಟ್ಟೆ ಎಂದರೆ ಉಟ್ಟುಕೊಳ್ಳುವ ವಸ್ತ್ರಮಾತ್ರವಲ್ಲ. ಬಟ್ಟೆ ಎಂದರೆ ಬದುಕು. ನನ್ನ ಬದುಕಿಗೆ ನನ್ನ ಗಂಡನೇ ಆಧಾರ. ಅವನೇ ನನ್ನ ನಿಜವಾದ ಬಟ್ಟೆ. ಗಂಡನಿಲ್ಲದೆ ಸಾವಿರಾರು ನಾಣ್ಯದ ಬೆಲೆಯ ಬಟ್ಟೆ ಧರಿಸಿದರೂ ಆ ಹೆಣ್ಣುಮಗಳು ಬೆತ್ತಲೆಯೇ.’

ರಾಜನಿಗೆ ಏನೋ ಸಂಶಯ ಬಂದು ಕೇಳಿದ, ‘ಈ ಮೂವರು ಕಳ್ಳರು ನಿನಗೇನಾಗಬೇಕು?’ ಆಕೆ ಅಳುತ್ತ ಹೇಳಿದಳು, ‘ಸ್ವಾಮಿ, ನಾವು ಒಕ್ಕಲಿಗರು, ವ್ಯವಸಾಯ ಮಾಡುತ್ತೇವೆ. ನಿಮ್ಮ ಸೈನಿಕರು ಅವರನ್ನು ಕಳ್ಳರೆಂದೇಕೆ ಕರೆತಂದರೋ ತಿಳಿಯದು. ಈ ಮೂವರಲ್ಲಿ ಒಬ್ಬ ನನ್ನ ಗಂಡ, ಇನ್ನೊಬ್ಬ ಪುತ್ರ. ಮತ್ತೊಬ್ಬನು ಸಹೋದರ. ದಯವಿಟ್ಟು ಅವರನ್ನು ಬಿಟ್ಟು ಬಿಡಿ’.

ರಾಜನಿಗೆ ಆಕೆಯ ಮಾತು ಪ್ರಾಮಾಣಿಕವಾದದ್ದು ಎನ್ನಿಸಿತು. ಅವಳನ್ನು ಪರೀಕ್ಷಿಸಲು ಕೇಳಿದ, ‘ಅಮ್ಮ, ನಿನ್ನ ಮಾತಿಗೆ ನಾನು ಸಂತುಷ್ಟನಾಗಿದ್ದೇನೆ. ಈ ಮೂವರಲ್ಲಿ ಒಬ್ಬರನ್ನು ಬಿಡುತ್ತೇನೆ. ಯಾರನ್ನು ಬಿಡಲಿ? ಚೆನ್ನಾಗಿ ಯೋಚಿಸಿ ನಿನ್ನ ಉತ್ತರ ಕೊಡು’. ‘ಹಾಗಾದರೆ ಪ್ರಭು, ನನಗೆ ನನ್ನ ಸಹೋದರನನ್ನು ಬಿಟ್ಟುಕೊಡಿ’ ಎಂದಳಾಕೆ.

ಆಕೆ ಗಂಡನನ್ನು ಬೇಡುತ್ತಾಳೆ ಎಂದುಕೊಂಡಿದ್ದ ರಾಜನಿಗೆ ಆಶ್ಚರ್ಯವಾಗಿ ಕೇಳಿದ. ‘ಯಾಕೆ ಗಂಡ ಬೇಡವೇ?’ ಆಕೆ ನಕ್ಕು ಹೇಳಿದಳು, ‘ಪ್ರಭೂ, ನಾನು ಬದುಕಿದ್ದರೆ ಮತ್ತೊಬ್ಬ ಗಂಡ ದೊರೆತಾನು, ಅವನಿಂದ ಮಗನೂ ಸಿಗಬಹುದು. ಆದರೆ ನನ್ನ ತಂದೆ-ತಾಯಿಯರು ತೀರಿಹೋಗಿರುವುದರಿಂದ ಸಹೋದರ ಎಂದೂ ದೊರೆಯಲಾರ. ಆದ್ದರಿಂದ ಸಹೋದರನನ್ನೇ ಬಿಟ್ಟುಕೊಡಿ’. ರಾಜ ಆಕೆಯ ಬುದ್ಧಿವಂತಿಕೆಗೆ ಮೆಚ್ಚಿಕೊಂಡು ಮೂವರನ್ನೂ ಬಿಟ್ಟು ಕಳುಹಿಸಿದ.

ಬುದ್ಧ ಹೇಳುತ್ತಾನೆ, ‘ಅಧಿಕಾರದಲ್ಲಿರುವ ಜನರ ಅಹಂಕಾರದ ಉನ್ಮತ್ತತೆಯನ್ನು ಶಕ್ತಿಯಿಂದ ಎದುರಿಸುವುದಕ್ಕಿಂತ ಬುದ್ಧಿವಂತಿಕೆಯಿಂದ ಜಯಿಸುವುದು ಸರಿಯಾದ ದಾರಿ’. ಇದು ಇಂದಿಗೂ ಸರಿಯಾಗಿಯೇ ಇದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.