ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ| ಸದ್ಗತಿ ಪಡೆದ ಬಿಂದುಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 2 ಜನವರಿ 2022, 19:31 IST
Last Updated 2 ಜನವರಿ 2022, 19:31 IST
   

ಜಗನ್ಮಾತೆ ಗೌರಿಯು ಹೇಳಿದ ಪಾಪಪರಿಹಾರದ ಮಾತು ಕೇಳಿ ಸಂತೋಷದಿಂದ ಕೈಮುಗಿದುಕೊಂಡೇ ಚಂಚುಲೆ ವಿನಮ್ರಳಾಗಿ ‘ಏ ಜಗಜ್ಜನನಿ, ನನ್ನ ಪತಿಯ ಪಾಪಗಳೆಲ್ಲ ನಾಶವಾಗಿ, ಸದ್ಗತಿಯುಂಟಾಗಲು ಅವನಿಗೆ ಶಿವಕಥೆ ಕೇಳುವಂತಾಗಲು ನೀನೇ ಸಹಾಯ ಮಾಡಬೇಕು’ ಅಂತ ಕೇಳಿಕೊಳ್ಳುತ್ತಾಳೆ.

ಆಗ ಜಗನ್ಮಾತೆ ಗಿರಿಜೆ, ಸಂಗೀತ ಸಾಮ್ರಾಟನಾದ ಗಂಧರ್ವರಾಜ ತುಂಬುರುನನ್ನು ಕರೆದು ‘ಎಲೈ ತುಂಬುರು, ನೀನು ನನ್ನ ಮಾನಸಪುತ್ರ. ನೀನು ಯಾವಾಗಲೂ ಶಿವನ ಕೀರ್ತನೆ ಮಾಡಿ ಸಂತೋಷವನ್ನುಂಟುಮಾಡುವವನು. ಈಗ ನೀನು ಚಂಚುಲೆಯೊಡನೆ ವಿಂಧ್ಯಪರ್ವತಕ್ಕೆ ಹೋಗಿ ಅಲ್ಲಿ ಶಿವಕೀರ್ತನೆ ಮಾಡು. ಇದನ್ನು ಕೇಳಿದ ಇವಳ ಪತಿಯ ಪಾಪ ಪರಿಹಾರವಾಗಲಿ’ ಅಂತ ಕಳುಹಿಸಿಕೊಡುತ್ತಾಳೆ. ಪಾರ್ವತಿಮಾತೆ ಮಾತಿನಂತೆ ಚಂಚುಲೆಯೊಡನೆ ತುಂಬುರು ವಿಮಾನವನ್ನೇರಿ ವಿಂಧ್ಯಾದ್ರಿಗೆ ಬರುತ್ತಾನೆ.

ವಿಂಧ್ಯಪರ್ವತದಲ್ಲಿ ದೊಡ್ಡದಾದ ದೇಹ ಮತ್ತು ಉದ್ದವಾದ ದವಡೆಯುಳ್ಳ ಒಂದು ಪಿಶಾಚಿ ಕಾಣಿಸುತ್ತದೆ. ಒಮ್ಮೆ ವಿಕಾರವಾಗಿ ನಗುತ್ತ, ಇನ್ನೊಮ್ಮೆ ಅಳುತ್ತ, ವಿಚಿತ್ರವಾಗಿ ಅಡ್ಡಾಡುತ್ತಿದ್ದ ಪಿಶಾಚಿಯನ್ನು ಗಾನಗಂಧರ್ವರಾಜ ತುಂಬುರು ಹಿಡಿದು ಮರಕ್ಕೆ ಕಟ್ಟಿ ಹಾಕಿದ. ನಂತರ, ಶಿವಕೀರ್ತನೆ ಮಾಡಲು ಬೇಕಾದ ಸಿದ್ಧತೆ ಮಾಡುತ್ತಿದ್ದ. ಅಷ್ಟರಲ್ಲಿ ದೇವತೆಗಳು ಋಷಿಮುನಿಗಳೆಲ್ಲಾ ವಿಂಧ್ಯಪರ್ವತಕ್ಕೆ ಧಾವಿಸಿ ಬರತೊಡಗಿದರು. ಪಿಶಾಚವಿಮೋಚನೆಗೆ ತುಂಬುರು ಮಾಡುವ ಶಿವಪುರಾಣದ ಕೀರ್ತನೆಯನ್ನು ಕೇಳಲು ಅವರೆಲ್ಲ ಗುಂಪುಗೂಡಿದರು. ತುಂಬುರು ವೀಣೆಯನ್ನು ನುಡಿಸುತ್ತಾ ಮಂಗಳಕರವಾದ ಶಿವನ ಕಥೆಯನ್ನು ಹಾಡತೊಡಗಿದ. ಶಿವಪುರಾಣದ ಎಲ್ಲಾ ಏಳು ಸಂಹಿತೆಯನ್ನೂ ಪೂರ್ತಿಯಾಗಿ ಕೇಳಿದ ದೇವಮುನಿಗಳೆಲ್ಲಾ ತುಂಬುರುಸಂಗೀತದ ಮೋಡಿಯಲ್ಲಿ ತೇಲಿಹೋದರು. ಅದ್ಭುತ ಶಿವಕೀರ್ತನೆಯನ್ನು ಕೇಳಿ ಭಕ್ತಿ ಪರವಶರಾಗಿ ತಲೆದೂಗಿ ಕುಣಿದು ಕೃತಾರ್ಥರಾದರು.

ADVERTISEMENT

ಪಿಶಾಚನಾದ ಬಿಂದುಗ ಶಿವಪುರಾಣವನ್ನು ಕೇಳಿ ಪುನೀತನಾದ. ಅವನ ಪಿಶಾಚಜನ್ಮ ಹೋಗಿ ಪರಿಶುದ್ಧನಾದ. ಆ ಕ್ಷಣವೇ ಅವನ ಶರೀರವು ಬಿಳುಪಾಯಿತು. ಅವನು ಬಿಳುಪಾದ ಬಟ್ಟೆಯನ್ನುಟ್ಟು, ಸರ್ವಾಲಂಕಾರಭೂಷಿತನಾಗಿ ಕಂಗೊಳಿಸುತ್ತಿದ್ದ. ಅಷ್ಟರಲ್ಲಿ ಶಿವನಂತೆ ಅವನಿಗೆ ಮೂರು ಕಣ್ಣು ಬಂತು. ತಲೆಯ ಮೇಲೆ ಚಂದ್ರ ಬಂದ. ಸಾಕ್ಷಾತ್ ಶಿವನ ದಿವ್ಯರೂಪವೇ ಆದ. ಇಂಥ ದಿವ್ಯರೂಪವನ್ನೂ ದಿವ್ಯಶರೀರವನ್ನೂ ಧರಿಸಿದ ಬಿಂದುಗ ತನ್ನ ಪತ್ನಿಯಾದ ಚಂಚುಲೆಯೊಡನೆ ಮಹೇಶ್ವರನ ಚರಿತ್ರೆಯ ಗುಣಗಾನಮಾಡಿದ. ದೇವರ್ಷಿಗಳೆಲ್ಲರೂ ಚಂಚುಲೆ-ಬಿಂದುಗ ದಂಪತಿಯ ಪುನರ್ ಮಿಲನದ ಸಂಭ್ರಮ ಕಂಡು ಪರಮಾನಂದಪಟ್ಟರು. ಮಹೇಶ್ವರನ ಚರಿತ್ರೆಯನ್ನು ಕೇಳಿ ಬಿಂದುಗನ ಪಿಶಾಚರೂಪ ಹೋಗಿ, ದಿವ್ಯವಾದ ರೂಪ ತಾಳಿದ್ದನ್ನು ಕಣ್ಣಾರೆ ಕಂಡ ದೇವಋಷಿಗಳೆಲ್ಲರೂ ಶಂಕರನ ಮಹಿಮೆಯನ್ನು ಕೊಂಡಾಡುತ್ತಾ ಅಲ್ಲಿಂದ ತೆರಳಿದರು.
ಪಾಪವಿಮುಕ್ತನಾದ ಬಿಂದುಗ ತನ್ನ ದಿವ್ಯವಾದ ರೂಪಿನಿಂದ ಪತ್ನಿ ಚಂಚುಲೆಯ ಪಕ್ಕದಲ್ಲಿ ಕುಳಿತು ವಿಮಾನದಲ್ಲಿ ಕೈಲಾಸಕ್ಕೆ ಹೋಗುವಾಗ ಬಹಳ ಆನಂದಪಟ್ಟ. ತನ್ನ ಶಾಪವಿಮೋಚನೆಗಾಗಿ ಪತ್ನಿ ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿದ. ಕೈಲಾಸದಲ್ಲಿ ವಿಮಾನದಿಂದ ಇಳಿದು ಶಿವನ ಬಳಿ ಹೋಗುವಾಗ, ಮತ್ತೆ ಗಂಧರ್ವಗಾಯಕ ತುಂಬುರು ಮಹೇಶ್ವರನ ಮನೋಹರವಾದ ಗುಣಗಳ ಕೀರ್ತನೆ ಮಾಡಿದ. ಅಲ್ಲಿ ನೆರೆದಿದ್ದ ದೇವಗಣಗಳು ಭಕ್ತಿಯಿಂದ ಮೈಮರೆತು ಕುಣಿದವು. ಕೊನೆಯಲ್ಲಿ ತಮ್ಮ ಬಳಿ ಬಂದು ಭಕ್ತಿಯಿಂದ ನಮಸ್ಕರಿಸಿದ ಬಿಂದುಗನನ್ನು ಈಶ್ವರ-ಪಾರ್ವತಿ ಕರುಣೆಯಿಂದ ಅನುಗ್ರಹಿಸಿದರು.ಗಂಡನ ಪಾಪಮುಕ್ತಿಗೆ ಶ್ರಮಿಸಿದ ಚಂಚುಲೆಯು ಪಾರ್ವತಿಗೆ ಪ್ರಿಯಸಖಿಯಾದಳು. ಆನಂದಮಯವಾದ ಕೈಲಾಸದಲ್ಲಿ ಬಿಂದುಗನು ಪತ್ನಿಯೊಂದಿಗೆ ಶಾಶ್ವತವಾಗಿ ನೆಲೆಸಿ ಪರಮಸುಖ ಪಡೆದ.

ಹೀಗೆ ಬಿಂದುಗ ಮತ್ತು ಚಂಚುಲೆ ದಂಪತಿಕಥೆ ಹೇಳಿದ ಸೂತಮುನಿಯು ‘ಯಾರು ಶಿವಪುರಾಣವನ್ನು ಭಕ್ತಿಯಿಂದ ಕೇಳುವರೋ, ಏಕಚಿತ್ತದಿಂದ ಯಾವಾಗಲೂ ಗಾನಮಾಡುವರೋ, ಅವರು ಈ ಲೋಕದಲ್ಲಿ ಅನೇಕ ಸುಖವನ್ನನುಭವಿಸಿ, ಕೊನೆಯಲ್ಲಿ ಮುಕ್ತಿಯನ್ನು ಪಡೆಯುವರು’ ಎಂದು ಶೌನಕ ಮತ್ತಿತರ ಮುನಿಗಳಿಗೆ ತಿಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.