ADVERTISEMENT

ವೈ. ಗ.ಜಗದೀಶ್‌ ಬರಹ: ‘ಕೈ’ ಗ್ಯಾರಂಟಿ: ಮೋದಿಗೆಷ್ಟು ವಾರಂಟಿ?

‘ಬಿಟ್ಟಿಭಾಗ್ಯ’ ಎಂದು ಹೀಗಳೆಯುವುದ ಬಿಡಿ, ‘ತುಟ್ಟಿಭಾಗ್ಯ’ ಕೊಟ್ಟವರ ಕಡೆ ನೋಡಿ

ವೈ.ಗ.ಜಗದೀಶ್‌
Published 15 ಜೂನ್ 2023, 19:55 IST
Last Updated 15 ಜೂನ್ 2023, 19:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ನಾವು ಎಷ್ಟು ಖರ್ಚು ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಯಾರಿಗೆ ಖರ್ಚು ಮಾಡುತ್ತೇವೆ ಎಂಬುದು ಮುಖ್ಯ’ –ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಕುರಿ ಕಾಯುವವನಿಗೆ ಅರ್ಥಶಾಸ್ತ್ರ ಏನು ಗೊತ್ತು’ ಎಂದು ಹಂಗಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾದಾಗಲಷ್ಟೇ ಇಂತಹ ಮಾತು ಕೇಳಲು ಸಾಧ್ಯ. ‘ಬಿಟ್ಟಿಭಾಗ್ಯ’ ಎಂದು ಹೀಗಳೆಯುವವರಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು ಹೀಗೆ. ಬಾಲ್ಯದಲ್ಲಿ ಕಷ್ಟವನ್ನೇ ಉಂಡು, ಹೊದ್ದು ಮಲಗಿದ್ದ ಕೆಲವರಲ್ಲಿ ಮಾತ್ರ ತಾಯ್ತನದ ಅಂತಃಕರಣ ಉಕ್ಕುತ್ತದೆ, ಯೋಜನೆಗಳನ್ನು ರೂಪಿಸುವಾಗ ಹೃದಯ ಕಲಕಿ, ಸಂಕಷ್ಟದಲ್ಲಿರುವವರನ್ನು ಸಂತೈಸುವ ಭಾವ ಮಿಡಿಯುತ್ತದೆ. 

ಸೂಟಿನಲ್ಲಿ ಚಿನ್ನದ ರೇಖುಗಳನ್ನು ಪೋಣಿಸಿಕೊಂಡು, ಕಾರ್ಯಕ್ರಮಕ್ಕೊಂದು ದಿರಿಸು ಧರಿಸಿ ಕಂಗೊಳಿಸುವವರಿಗೆ ಜನರ ಎದೆಯಾಳದಲ್ಲಿನ ಆರ್ತನಾದ, ನೋವಿನಿಂದ ಹಿಪ್ಪೆಯಾಗಿರುವ ಬದುಕಿನ ಪಡಿಪಾಟಲು ಹೇಗೆ ಗೋಚರಿಸೀತು? ‘ಈರುಳ್ಳಿ ದುಬಾರಿಯಾಗಿದೆಯಲ್ಲ’ ಎಂಬ ಪ್ರಶ್ನೆಗೆ, ‘ನಾನು ಈರುಳ್ಳಿಯನ್ನೇ ತಿನ್ನುವುದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉತ್ತರಿಸಿದ್ದರು. ಸಿದ್ದರಾಮಯ್ಯ ಹಾಗೂ ನಿರ್ಮಲಾ ಅವರ ವಾಕ್ಯಗಳನ್ನು ವ್ಯಾಖ್ಯಾನಿಸುವುದು ಬೇಡ, ಅಕ್ಕಪಕ್ಕ ಇಟ್ಟು ನೋಡಿದರೂ ಸಾಕು.

ADVERTISEMENT

ಕಾಂಗ್ರೆಸ್‌ ಗ್ಯಾರಂಟಿಗಳ ಅನುಕೂಲ, ಆರ್ಥಿಕತೆಯ ಮೇಲೆ ಅದು ಬೀರಬಹುದಾದ ‘ದುಷ್ಟ’ ಪರಿಣಾಮಗಳ ಬಗ್ಗೆ ಸ್ವಯಂಘೋಷಿತ ‘ಅರ್ಥಶಾಸ್ತ್ರಜ್ಞ’ರು ಸಂಪುಟಗಟ್ಟಲೇ ಮಾಹಿತಿಗಳನ್ನು ಮುಂದಿಟ್ಟು ವಿಶ್ಲೇಷಣೆ ನಡೆಸಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಜಾಲಾಡಿಕೊಂಡು ಇರುವವರಿಗೆ ಬಿಸಿಲಿನಲ್ಲಿ ಬೆಂದು, ಮಳೆಯಲ್ಲಿ ನೆಂದು ದುಡಿದು ಹಣ್ಣಾಗಿರುವ, ಮಣ್ಣಾಗಿರುವವರ ಪಾಡೇನು ಗೊತ್ತು? ಸರ್ಕಾರದ ಕಾರ್ಯಕ್ರಮಗಳು ಕಟ್ಟಕಡೆಯ ಮನುಷ್ಯನಿಗೆ ತಲುಪದೇ, ಸರ್ಕಾರದ ದುಡ್ಡಿನಲ್ಲೇ ಎಲ್ಲ ಸವಲತ್ತುಗಳನ್ನು ಪಡೆದು ನೆಮ್ಮದಿಯಾಗಿ ಬದುಕುವವರನ್ನಷ್ಟೇ ತಲುಪಿದರೆ, ಅದನ್ನು ‘ಸುಖೀರಾಜ್ಯ’ ಎನ್ನಲಾಗದು. ಇಂತಹ ಸುಖಿಗಳಿಗಾಗಿ ತಮ್ಮ ರಕ್ತ ಬಸಿಯುವವರು ಸುಖದ ಮೋರೆಯನ್ನೇ ನೋಡಿರುವುದಿಲ್ಲ.

ಚುನಾವಣೆಗೆ ಮೊದಲು ಕಾಂಗ್ರೆಸ್ ಘೋಷಿಸಿದ ‘ಗ್ಯಾರಂಟಿ’ಗಳಷ್ಟೇ ಆ ಪಕ್ಷಕ್ಕೆ ಭಾರಿ ಬಹುಮತ ತಂದುಕೊಡಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರದ ಮೇಲಿದ್ದ ಭ್ರಷ್ಟಾಚಾರದ ಆರೋಪ, ಕೂಡಿಬಾಳುತ್ತಿದ್ದ ಜನರ ಮಧ್ಯೆ ಮತದ್ವೇಷದ ವಿಷ ಬಿತ್ತಿದ ಹತ್ತುಹಲವು ಕಿತಾಪತಿಗಳೇ ಕಮಲ ಮುದುಡಲು ಕಾರಣ. ಕುಂದಲು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕೂಡ ಬಿಜೆಪಿ ಕೈಹಿಡಿಯಲಿಲ್ಲ.

ಕಾಂಗ್ರೆಸ್ ಗ್ಯಾರಂಟಿಗಳು ಮತ್ತು ಅವುಗಳ ಅನುಷ್ಠಾನದತ್ತ ಸರ್ಕಾರ ಇಟ್ಟ ಹೆಜ್ಜೆಯು, ಅಧಿಕಾರದಲ್ಲಿದ್ದಾಗ ಅಭಿವೃದ್ಧಿ, ಜನಕಲ್ಯಾಣಕ್ಕಿಂತ ಜನರನ್ನು ಕಿತ್ತಾಟಕ್ಕೆ ಹಚ್ಚುವ ಉಪದ್ವ್ಯಾಪಗಳಲ್ಲೇ ಮುಳುಗಿದ್ದ ‘ಕೇಸರಿ’ ಪಡೆಯನ್ನು ದಂಗುಬಡಿಸಿದೆ. ಕುಟುಂಬವೊಂದನ್ನು ಸಬಲಗೊಳಿಸುವ, ಅದರಲ್ಲೂ ಸಂಸಾರದ ಬಗ್ಗೆ ನೆದರೇ ಇಲ್ಲದಂತಹ ಗಂಡಸರ ಧೋರಣೆಯಿಂದ ಧೃತಿಗೆಟ್ಟಿರುವ ಮಹಿಳೆಯರಿಗೆ ಸುರಕ್ಷಿತ ಹಾಗೂ ನೆಮ್ಮದಿಯ ವಾತಾವರಣ ರೂಪಿಸುವುದನ್ನು ಕಾಂಗ್ರೆಸ್ ಗ್ಯಾರಂಟಿಗಳು ಗುರಿಯಾಗಿಸಿಕೊಂಡಿವೆ. ಹಿಜಾಬ್ ಹಾಕಬಾರದು ಎಂಬಲ್ಲಿಂದ ಶುರುವಾದ ಹಿಂದಿನ ಸರ್ಕಾರದ ಅವಧಿಯ ಕ್ಯಾತೆಗಳು ಕುಂಕುಮ ಇಟ್ಟುಕೊಳ್ಳಬೇಕು, ಮೈಮುಚ್ಚುವ ರೀತಿ ಬಟ್ಟೆ ಹಾಕಿಕೊಳ್ಳಬೇಕು ಎಂಬೆಲ್ಲ ವಾದಗಳನ್ನು ಮುಂದಿಟ್ಟುಕೊಂಡು ‘ಸ್ತ್ರೀಶಕ್ತಿ’ಯನ್ನು ಮನೆಯೊಳಗೆ ಮತ್ತೆ ನೂಕುವತ್ತ ಸಾಗಿದ್ದವು.

ರಾಜ್ಯವ್ಯಾಪಿ ಎಲ್ಲಿ ಬೇಕಾದರೂ ಓಡಾಡಲು ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಿರುವ ಸರ್ಕಾರ, ಹೆಣ್ಣುಮಕ್ಕಳು ಗಂಡಾಳ್ತನದ ಹಂಗಿಲ್ಲದೆ ಮುಕ್ತವಾಗಿ ಓಡಾಡುವಂತೆ, ರೆಕ್ಕೆ ಬಿಚ್ಚಿ ಹಾರುವಂತೆ ಮಾಡಿದೆ. ಸಣ್ಣಪುಟ್ಟ ಕೆಲಸ ಸಿಕ್ಕಿದರೆ ಮನೆಯಿಂದ ಹೊರಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಬಹುದೆಂಬ ಕನಸು ಹೆಣ್ಣುಮಕ್ಕಳಿಗೆ ಸಹಜವಾಗಿ ಇರುತ್ತದೆ. ಆದರೆ, ಸಿಗುವ ಸಂಬಳದಲ್ಲಿ ಹೆಚ್ಚಿನ ಪಾಲು ಬಸ್ ಪ್ರಯಾಣಕ್ಕೇ ಹೋದರೆ ಪ್ರಯೋಜನವೇನು ಎಂಬ ಕಾರಣಕ್ಕೆ ಅನೇಕರು ಹೋಗುತ್ತಿರಲಿಲ್ಲ. ಅಂತಹವರಿಗೆ ದುಡಿಯುವ ಚೈತನ್ಯ ತುಂಬಿ, ತಮ್ಮದೇ ಬದುಕು ಕಟ್ಟಿಕೊಳ್ಳುವ ವಾತಾವರಣ ಕಲ್ಪಿಸಿದೆ. ವಿದ್ಯುತ್ ಬಿಲ್‌ಗೆ ಪ್ರತಿ ತಿಂಗಳು ಗಂಡನ ಕಡೆಗೆ ಕೈಚಾಚಬೇಕಾದ, ತಿನ್ನುವ ಗಂಜಿಗೆ ಕಾಸು ಗಿಂಜಬೇಕಾದ ದಯನೀಯ ಸ್ಥಿತಿಯಿಂದ ಮಹಿಳೆಯರನ್ನು ಹೊರತರಲಿದೆ. ಇವೆಲ್ಲವೂ ಸ್ತ್ರೀಸಂಕುಲ ತಲೆ ಎತ್ತಿ ಜೀವನ ನಡೆಸುವ ನವ ಸಮಾಜವನ್ನು ಸೃಷ್ಟಿಸಲಿವೆ.

ಕಾಂಗ್ರೆಸ್‌ ಗ್ಯಾರಂಟಿಯಿಂದ ದೇಶವೇ ಕೊಳ್ಳೆ ಹೋಗಲಿದೆ ಎಂದು ಹಲುಬುತ್ತಿರುವವರು ಉತ್ತರಿಸಬೇಕಾದ ಇನ್ನೊಂದು ವಿಷಯವಿದೆ. ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದೀಚೆಗೆ, ವಸೂಲಾಗದ ಸಾಲವೆಂದು ಗುರುತಿಸಲಾದ ₹ 11.17 ಲಕ್ಷ ಕೋಟಿಯನ್ನು ‘ರೈಟ್ ಆಫ್‌’ ಮಾಡಲಾಗಿದೆ. ಬಸ್ಸಿಗೆ ಹತ್ತಲು ಕಾಸಿಲ್ಲದವರು, ಗಂಜಿ ಉಣ್ಣಲು ಅಕ್ಕಿ ಇಲ್ಲದವರು ಮಾಡಿದ ಸಾಲ ಇದಲ್ಲ. ದೇಶದ ಸಂಪತ್ತನ್ನು ಕೊಳ್ಳೆಹೊಡೆದು ವಿದೇಶಕ್ಕೆ ಪರಾರಿಯಾದವರು ಮಾಡಿಟ್ಟಿದ್ದ ಸಾಲ. ಕಾಂಗ್ರೆಸ್ ಗ್ಯಾರಂಟಿ ಈಡೇರಿಸಲು ವರ್ಷಕ್ಕೆ ₹ 59 ಸಾವಿರ ಕೋಟಿ ಬೇಕು ಎಂಬ ಅಂದಾಜಿದೆ. ಹಾಗೆ ಮಾಡಿದರೂ ರೈಟ್‌ ಆಫ್ ಮಾಡಿದ ಮೊತ್ತದಲ್ಲಿ ಸುಮಾರು 20 ವರ್ಷ ಕರ್ನಾಟಕದ ಜನರಿಗೆ ಉಚಿತ ಸೌಲಭ್ಯವನ್ನು ಕೊಡಬಹುದಾಗಿತ್ತು. ಅದೆಲ್ಲ ಬೇಡ ಬಿಡಿ, 2019ರ ಲೋಕಸಭೆ ಚುನಾವಣೆಗೆ ಮೊದಲು ಮೋದಿಯವರು ಪ್ರತಿ ರೈತನ ಕುಟುಂಬಕ್ಕೆ ₹ 6 ಸಾವಿರ ನೀಡುವ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಇದಕ್ಕೆ ₹ 4 ಸಾವಿರ ಸೇರಿಸಿದರು. ರೈತನ ಹಿತದೃಷ್ಟಿಯಿಂದ ಒಳ್ಳೆಯದಾದರೂ ಚುನಾವಣೆಗೆ ಮುನ್ನ ಮುಫತ್ತು ನೀಡಿದ್ದನ್ನು ಯಾರೊಬ್ಬರೂ ‘ಬಿಟ್ಟಿಭಾಗ್ಯ’ ಎನ್ನಲೇ ಇಲ್ಲ.

ಸಿದ್ದರಾಮಯ್ಯ ಅಧಿಕಾರ ಬಿಟ್ಟಿಳಿಯುವಾಗ 2018ರಲ್ಲಿ ರಾಜ್ಯದ ಸಾಲ ₹ 2,85,238 ಕೋಟಿಯಷ್ಟಿತ್ತು. ಬಸವರಾಜ ಬೊಮ್ಮಾಯಿ ಅಧಿಕಾರದಿಂದ ಇಳಿಯುವ ವೇಳೆ ರಾಜ್ಯದ ಒಟ್ಟು ಋಣಭಾರ ₹ 5,18,366 ಕೋಟಿಯಷ್ಟಾಗಲಿದೆ ಎಂದು ಬಜೆಟ್ ಅಂದಾಜು ಮಾಡಿದೆ. ಅಂದರೆ, ಕಳೆದ ಐದು ವರ್ಷದಲ್ಲಿ ‘ಬಿಟ್ಟಿಭಾಗ್ಯ’ ನೀಡದೇ ಇದ್ದರೂ ₹ 2,33,126 ಕೋಟಿ ಸಾಲ ಮಾಡಲಾಗಿದೆ. ಯಾರಿಗೆ ಖರ್ಚು ಮಾಡಬೇಕಾಗಿತ್ತೋ ಅದು ಆಗಿಲ್ಲ ಎನ್ನುವುದೇ ಇಲ್ಲಿನ ಸತ್ಯ.

ಅಷ್ಟಕ್ಕೂ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಉಚಿತ ಕೊಡುಗೆಗಳು ಇಲ್ಲವೆಂದೇನೂ ಇಲ್ಲ. ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮೊದಲು ಅಕ್ಕಿ, ಗೋಧಿ, ಎಣ್ಣೆ, ಬೇಳೆಕಾಳು, ಉಪ್ಪು ನೀಡುವುದಾಗಿ ಘೋಷಿಸಲಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಸದ್ಯವೇ ಚುನಾವಣೆ ಬರಲಿದ್ದು, ಅಲ್ಲಿನ ಮುಖ್ಯಮಂತ್ರಿಗಳು ‘ಬಿಟ್ಟಿಭಾಗ್ಯ’ ಪ್ರಕಟಿಸಿದ್ದಾರೆ. ಏಕೆಂದರೆ, ಮೋದಿಯವರ ಹಾವಭಾವ, ರಂಗಿನ ದಿರಿಸು ಜನರನ್ನು ಹೆಚ್ಚು ಆಕರ್ಷಿಸುವುದಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾದಂತಿದೆ. ಏಕೆಂದರೆ, ಬಿಜೆಪಿಯ ರಕ್ಷಾಕವಚದಂತಿರುವ ಆರ್‌ಎಸ್‌ಎಸ್‌ ನಾಯಕರೇ ಇದನ್ನು ಹೇಳಿಬಿಟ್ಟಿದ್ದಾರೆ.

ಕರ್ನಾಟಕದ ಚುನಾವಣೆ ಬಳಿಕ ಆರ್‌ಎಸ್‌ಎಸ್‌ ಮುಖವಾಣಿ  ‘ದಿ ಆರ್ಗನೈಸರ್’ನ ಮೇ 23ರ ಸಂಚಿಕೆಯ ಸಂಪಾದಕೀಯದಲ್ಲಿ ‘ಮೋದಿ ಅವರ ವರ್ಚಸ್ಸು ಹಾಗೂ ಹಿಂದುತ್ವ ಸಿದ್ಧಾಂತವನ್ನು ಮುನ್ನೆಲೆಗೆ ತರುವುದರಿಂದಷ್ಟೇ ಭವಿಷ್ಯದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಸ್ಥಳೀಯವಾಗಿ ಬಲವಾದ ನಾಯಕತ್ವ ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿಯೂ ಅಗತ್ಯ. ರಾಜ್ಯದಲ್ಲಿ ಉತ್ತಮ ಆಡಳಿತವಿದ್ದಾಗ ಮಾತ್ರ ಸಿದ್ಧಾಂತ ಮತ್ತು ನಾಯಕತ್ವವು ಪಕ್ಷಕ್ಕೆ ನಿಜಕ್ಕೂ ಆಸ್ತಿಯಾಗುತ್ತವೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಅಂಕಿ ಅಂಶಗಳನ್ನೇ 2024ರ ಸಾರ್ವತ್ರಿಕ ಚುನಾವಣೆಗೆ ಹೊಂದಿಸಿ ನೋಡಿದರೆ ಭೀತಿ ಮೂಡುತ್ತದೆ. ಕರ್ನಾಟಕದ ಫಲಿತಾಂಶವು ವಿರೋಧ ಪಕ್ಷಗಳ ನೈತಿಕಸ್ಥೈರ್ಯ ವೃದ್ಧಿಸಿದೆ’ ಎಂದು ವಿಶ್ಲೇಷಿಸಲಾಗಿದೆ.

9 ವರ್ಷಗಳಲ್ಲಿ ಮೋದಿಯವರ ಭರವಸೆಗಳು ನಿರಾಸೆಯ ಹಾಸಿಗೆಯ ಮೇಲೆ ಹೇಗೆ ಅಂಗಾತ ಮಲಗಿವೆ ಎಂಬುದನ್ನು ಜನ ನೋಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ, ಕಾಂಗ್ರೆಸ್ ಗ್ಯಾರಂಟಿಗಳಿಗೆ ಮೇ 13ರ ಬಳಿಕ ವಾರಂಟಿಯೇ ಇರುವುದಿಲ್ಲ’ ಎಂದು ಮೋದಿ, ಬಸವರಾಜ ಬೊಮ್ಮಾಯಿ ಹೇಳಿದ್ದರು. ಆರ್‌ಎಸ್‌ಎಸ್‌ ಹೇಳಿರುವುದು, ಬಿಜೆಪಿಗರು ಗ್ಯಾರಂಟಿಗೆ ಜೋತು ಬಿದ್ದಿರುವುದನ್ನು ಕಂಡರೆ, ಮೋದಿಯವರಿಗೆ ಇನ್ನೆಷ್ಟು ದಿನ ವಾರಂಟಿ ಇದೆ ಎಂಬ ಅನುಮಾನ ಮೂಡದಿರದು. 

ಅಷ್ಟಕ್ಕೂ ಗ್ಯಾರಂಟಿ, ಉಚಿತ ಕೊಡುಗೆಗಳ ಬಗ್ಗೆ ಹೀಗಳೆಯುವವರು ತಮ್ಮ ಕುಟುಂಬದ ಪರಿಸ್ಥಿತಿಯನ್ನೊಮ್ಮೆ ನೋಡಿಕೊಳ್ಳಲಿ. ಕೇಂದ್ರ ಸರ್ಕಾರದ ನಿಯಂತ್ರಣ ತಪ್ಪಿದ ಕ್ರಮಗಳಿಂದಾಗಿ ಬೆಲೆ ಏರಿಕೆಯ ಭಾರ ಜನರನ್ನು ಕುಸಿಯುವಂತೆ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಇಂಧನ ಉತ್ಪನ್ನಗಳ ಧಾರಣೆ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಇಳಿಸಿಲ್ಲ. ಅಕ್ಕಿ–ಕಾಳು ತಿನ್ನುವಂತಿಲ್ಲ. ಎಣ್ಣೆ ಬಳಸುವಂತಿಲ್ಲ. ಬಿಟ್ಟಿಭಾಗ್ಯವನ್ನು ಹೀಗಳೆಯುವವರು ಕೇಂದ್ರ ನೀಡಿದ ‘ತುಟ್ಟಿಭಾಗ್ಯ’ದ ಕಡೆಗೂ ನೋಡಲಿ. 

ಕಾಂಗ್ರೆಸ್‌ ಗ್ಯಾರಂಟಿಗಳು ಮುಜರಾಯಿ ದೇವಸ್ಥಾನಗಳಲ್ಲಿ ಜನರಿಗೆ ನೀಡುವ ಪ್ರಸಾದದಂತೆ. ವಿಧಾನಸೌಧದ ಎದುರು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಸರ್ಕಾರ ಕೂಡ ದೇವರ ಗುಡಿ. ಒಳಿತುಗಳೇ ಅಲ್ಲಿಂದ ಬರಬೇಕು. ಅಲ್ಲಿಂದ ಬರುವುದೂ ಪ್ರಸಾದವೇ. ಹಸಿವಿದ್ದವರು, ಅಸಹಾಯಕರು, ಅವಶ್ಯವಿದ್ದವರು ಕಣ್ಣಿಗೆ ಒತ್ತಿಕೊಂಡು ಪ್ರಸಾದ ತಿನ್ನುತ್ತಾರೆ. ದುಡ್ಡಿನ ಕೊಬ್ಬಿದ್ದವರು ದೇವಸ್ಥಾನಕ್ಕೆ ಹೋದರೂ ಪ್ರಸಾದ ಸ್ವೀಕರಿಸದೆ ಹೋಟೆಲ್‌ನಲ್ಲೋ ಡಾಬಾಗಳಲ್ಲೋ ಉಣ್ಣುತ್ತಾರೆ. ಅವರು ಉಣ್ಣಲಿ ಬಿಡಿ; ಅಷ್ಟಾದರೂ ಸರ್ಕಾರದ ದುಡ್ಡು ಉಳಿದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.