ಭೂಸುಧಾರಣೆ, ಪಂಚಾಯತ್ ಕಾಯ್ದೆ, ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ, ಮಲ ಹೊರುವ ಹಾಗೂ ಜೀತ ಪದ್ಧತಿ ನಿಷೇಧ, ಮಾಹಿತಿ ತಂತ್ರಜ್ಞಾನ ಕ್ರಾಂತಿಯಂತಹ ಕಾರಣಗಳಿಗೆ ರಾಷ್ಟ್ರಮಟ್ಟದಲ್ಲಿ ನಾಡಿನ ಹೆಸರಿಗೆ ಹಿಂದೆಲ್ಲ ಹೊಳಪು ಬಂದಿದ್ದುಂಟು. ಇತ್ತೀಚಿನ ವರ್ಷಗಳಲ್ಲಿ ನಕಾರಾತ್ಮಕ ಕಾರಣಗಳಿಗಾಗಿ ಕರ್ನಾಟಕ ಸದ್ದು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸಚಿವರು, ಮುಖ್ಯಮಂತ್ರಿಯಾಗಿದ್ದವರು ಜೈಲು ಸೇರಿದ್ದರು. ಅಕ್ರಮ ಹಣ ವರ್ಗಾವಣೆಯ ಆಪಾದನೆ ಮೇರೆಗೆ ಪ್ರಭಾವಿ ನಾಯಕರೊಬ್ಬರು ಜೈಲು ಪಾಲಾಗಿದ್ದರು. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪತ್ತೆಯಾಗಿದ್ದ ಬಿಟ್ ಕಾಯಿನ್ ಹಗರಣವಂತೂ ಬೆಚ್ಚಿ ಬೀಳಿಸುವಂತಿತ್ತು.
2024ರ ಲೋಕಸಭೆ ಚುನಾವಣೆ ಬಳಿಕ ನಡೆದ ಮತ್ತಷ್ಟು ವಿದ್ಯಮಾನಗಳು ನಾಡಿಗೆ ಕಪ್ಪುಚುಕ್ಕಿಗಳನ್ನೇ ಇಟ್ಟವು. ಯುವ ರಾಜಕಾರಣಿ ಪ್ರಜ್ವಲ್ ರೇವಣ್ಣ, ನಟ ದರ್ಶನ್ ಪ್ರಕರಣಗಳು ಅಧಿಕಾರಸ್ಥರು ಹಾಗೂ ಹಣವಂತರ ದುಷ್ಟತನವನ್ನು ಬಯಲುಗೊಳಿಸಿದವು. ಅದಾದ ಬಳಿಕ, ವಾಲ್ಮೀಕಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಗಳು ಮುನ್ನೆಲೆಗೆ ಬಂದವು. ಕಳೆದ ಹತ್ತು ದಿನಗಳಿಂದೀಚೆಗೆ ಚಿನ್ನದ ಕಳ್ಳಸಾಗಣೆ ವಿಷಯ ಭಾರಿ ಸದ್ದು ಮಾಡುತ್ತಿದೆ. ಈ ಜಾಲ ದೇಶದ ಹಲವು ನಗರ ಹಾಗೂ ವಿದೇಶಕ್ಕೂ ಚಾಚಿರುವುದು ಒಂದು ಕಾರಣವಾದರೆ, ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸಿ
ದಂತಿರುವ ನಟಿ ರನ್ಯಾ ರಾವ್‌ಗೆ ಇರಬಹುದಾದ ಹಲ ಬಗೆಯ ನಂಟುಗಳೂ ಮತ್ತೊಂದು ಕಾರಣ.
ಅದರಲ್ಲೂ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಇಬ್ಬರು ಪ್ರಭಾವಿ ಸಚಿವರ ನಂಟಿದೆ ಎಂಬ ಮಾಹಿತಿಯು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಆ ಸಚಿವರು ಯಾರೆಂಬುದು ನಿಗೂಢವಾಗಿಯೇ ಉಳಿದಿದೆಯಾದರೂ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಈ ಹೆಸರುಗಳು ರಹಸ್ಯವಾಗಿ ಉಳಿದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ಆಯ್ಕೆಯ ವಿವರಗಳಷ್ಟನ್ನೇ ಅಧಿಕೃತ ಟಿಪ್ಪಣಿಗಳ ರೂಪದಲ್ಲಿ ‘ಸೋರಿಕೆ’ ಮಾಡುತ್ತಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್‌ಐ, ಇ.ಡಿ, ಸಿಬಿಐ ಹೀಗೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಒಂದರ ಮೇಲೊಂದರಂತೆ ತನಿಖೆ ನಡೆಸುತ್ತಿದ್ದರೂ ಯಾವುದೇ ಮಾಹಿತಿಯನ್ನೂ ಹೊರಗೆಡವುತ್ತಿಲ್ಲ. ಇದು ಕುತೂಹಲಕ್ಕೆ ಎಡೆಮಾಡಿದೆ.
ಹಿಂದಿನ ಐದು ವರ್ಷದತ್ತ ಪಕ್ಷಿನೋಟ ಬೀರಿದರೆ, ಇಂತಹ ಪ್ರಕರಣಗಳು ಆರಂಭದಲ್ಲಿ ಜಗತ್ತನ್ನೇ ಬಡಿದೆಬ್ಬಿಸುವಷ್ಟು ಸದ್ದು ಹುಟ್ಟಿಸುತ್ತವೆ. ಯಾರಿಗೋ ನಂಟು ಉಂಟೆಂಬ ಮಾಹಿತಿಯನ್ನು ತನಿಖಾ ಸಂಸ್ಥೆಗಳೇ ಸೋರಿಕೆ ಮಾಡುತ್ತವೆ. ಭಾರಿ ಪ್ರಮಾಣದ ದಾಖಲೆಗಳು ಸಿಕ್ಕಿವೆಯೆಂದು ಸುದ್ದಿಯನ್ನೂ ಹರಿಯಬಿಡಲಾಗುತ್ತದೆ. ಸದ್ದುಗದ್ದಲ ಏನಿದ್ದರೂ, ಮತ್ತೊಂದು ಪ್ರಕರಣ ಮುನ್ನೆಲೆಗೆ ಬರುವವರೆಗಷ್ಟೆ. ಘನಘೋರ ಎನ್ನಿಸಿದ ಪ್ರಕರಣ ಎಲ್ಲರ ನೆನಪಿನಿಂದ ಕ್ರಮೇಣ ಮರೆಯಾಗುತ್ತದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಆಪ್ತ ವಲಯದಲ್ಲಿ ಗುರುತಿಸಿ
ಕೊಂಡಿದ್ದ ಆಯನೂರು ಉಮೇಶ ಸೇರಿದಂತೆ ಹಲವರ ಮನೆ, ಕಚೇರಿಯ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಸಾವಿರಾರು ಕೋಟಿ ರೂಪಾಯಿ ಮೊತ್ತದ ಟೆಂಡರ್ ದಾಖಲೆ
ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದ ದಾಖಲೆ ಲಭ್ಯವಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿತ್ತು. ಆಗ, ಬಿಜೆಪಿ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದ ಯಡಿಯೂರಪ್ಪನವರನ್ನು ಹದ್ದು
ಬಸ್ತಿನಲ್ಲಿಡಲಷ್ಟೇ ಇದನ್ನು ಬಳಸಲಾಯಿತೇ ವಿನಾ ಪ್ರಕರಣಕ್ಕೆ ಸಂಬಂಧಿಸಿದ ಒಂದಿಂಚೂ ವಿವರವನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಐ.ಟಿ ಇಲಾಖೆ ಈವರೆಗೂ ನೀಡಿಲ್ಲ.
ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹೊರಬಂದ ಬಿಟ್ ಕಾಯಿನ್ ಹಗರಣ ನಾಡಿನಲ್ಲಿ ಕಂಪನವನ್ನೇ ಸೃಷ್ಟಿಸಿತು. ಆಗ ಅಧಿಕಾರದಲ್ಲಿದ್ದ ಪ್ರಭಾವಿ ಸಚಿವರ ಮಕ್ಕಳು, ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ, ಕೇಂದ್ರದ ಪ್ರಭಾವಿಗಳಿಗೂ ಇದರ ಪಾಲು ಹೋಗಿದೆ ಎಂಬ ಸುದ್ದಿಗಳೂ ಹರಿದಾಡಿದವು. ಆಗಲೂ ಯಾರ‍್ಯಾರೋ ಅಧಿಕಾರ ಕಳೆದುಕೊಳ್ಳುತ್ತಾರೆ, ಜೈಲು ಸೇರುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ದೊಡ್ಡ ಮಟ್ಟದ ತನಿಖೆಯೂ ನಡೆಯಿತು. ಆದರೆ, ಯಾವುದೇ ಪ್ರಭಾವಿಗಳ ಬಂಧನ ಈವರೆಗೂ ನಡೆಯಲಿಲ್ಲ.
ಲೋಕಸಭೆ ಚುನಾವಣೆ ಹೊತ್ತಿಗೆ ಐ.ಟಿ ಇಲಾಖೆ ನಡೆಸಿದ ದಾಳಿಯಲ್ಲಿ, ಪೆಟ್ಟಿಗೆಗಳಲ್ಲಿ ತುಂಬಿಟ್ಟಿದ್ದ ಸುಮಾರು ₹104 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ‘ಧನಪೆಟ್ಟಿಗೆಗಳನ್ನು ಸಂಗ್ರಹಿಸಿದ್ದ ಕಟ್ಟಡದ ಆಸುಪಾಸಿನ ಸಿ.ಸಿ. ಟಿ.ವಿ ಕ್ಯಾಮೆರಾಗಳಲ್ಲಿ ಪ್ರಭಾವಿಗಳು ಓಡಾಡಿರುವ ಚಿತ್ರಗಳಿವೆ. ಸರ್ಕಾರದ ಪ್ರಭಾವಿಗಳಿಗೆ ಇದು ಮುಳುವಾಗಲಿದೆ’ ಎಂಬ ಮಾಹಿತಿಗಳು ಹೊರಬಿದ್ದಿದ್ದವು. ವರ್ಷ ಮುಗಿಯುತ್ತಾ ಬಂದರೂ ಏನೂ ಆಗಲಿಲ್ಲ. ಅಷ್ಟರ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ₹94.97 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣ ಹೊರಬಂತು. ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆರ್ಥಿಕ ಅಪರಾಧದ ಕಾರಣಕ್ಕೆ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಪತನವಾದರೂ ಅಚ್ಚರಿಯಿಲ್ಲ ಎಂಬ ಸುದ್ದಿಯನ್ನು ಹರಿಯಬಿಡಲಾಯಿತು. ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿ ಹಣ ವರ್ಗಾವಣೆ ಮಾಡಿದ್ದರೂ, ಹಗರಣಕ್ಕೆ ಕಾರಣರಾದ ಬ್ಯಾಂಕ್ ಅಧಿಕಾರಿಗಳು ಎಲ್ಲಿದ್ದಾರೆ ಎಂಬ ರಹಸ್ಯವನ್ನು ಸಿಬಿಐ ಭೇದಿಸಲಿಲ್ಲ.
ಆನಂತರ ಮುಡಾ ನಿವೇಶನ ಹಂಚಿಕೆಯ ವಿವಾದ ಮುನ್ನೆಲೆಗೆ ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿಯನ್ನೂ ನೀಡಿದರು. ತನಿಖೆಯೂ ನಡೆಯಿತು. ಏತನ್ಮಧ್ಯೆ, ಹಣದ ಅಕ್ರಮ ವರ್ಗಾವಣೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿತು. ಸಚಿವರು, ಅವರ ಆಪ್ತರ ಕೈವಾಡವಿದ್ದು, ಸರ್ಕಾರವೇ ಖೆಡ್ಡಾಕ್ಕೆ ಬಿದ್ದಿದೆ ಎಂಬಷ್ಟರಮಟ್ಟಿಗೆ ಜಾರಿ ನಿರ್ದೇಶನಾಲಯ ಮಾಹಿತಿಯನ್ನು ‘ಸೋರಿಕೆ’ ಮಾಡಿತು. ಆದರೆ, ಈವರೆಗೆ ಏನೂ ಆಗಿಲ್ಲ.
ಚಿನ್ನ ಕಳ್ಳಸಾಗಣೆ ಪ್ರಕರಣದ ಸದ್ದು ಈಗ ಜೋರಾಗಿದೆ. ಚಿನ್ನ ತಂದಿರುವುದು ದುಬೈನಿಂದ, ಅಲ್ಲಿಗೆ ಬಂದಿರುವುದು ಮಧ್ಯಪ್ರಾಚ್ಯ ದೇಶಗಳಿಂದ. ದುಬೈ ವಿಮಾನ ನಿಲ್ದಾಣದ ಭದ್ರತೆ, ಕಸ್ಟಮ್ಸ್, ವಲಸೆ ವಿಭಾಗಗಳ ಕಣ್ತಪ್ಪಿಸಿ ಚಿನ್ನವನ್ನು ಭಾರತಕ್ಕೆ ತರಲಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಲಸೆ, ಕಸ್ಟಮ್ಸ್ ಹಾಗೂ ಭದ್ರತೆಯನ್ನು ಭೇದಿಸಿ ರನ್ಯಾ ರಾವ್ ಚಿನ್ನ ಹೊತ್ತು ತಂದಿದ್ದಾರೆ. ವಿಮಾನ ನಿಲ್ದಾಣದ ಸರ್ಪಗಾವಲುಗಳನ್ನೆಲ್ಲ ಕಣ್ತಪ್ಪಿಸಿ, ಅಷ್ಟು ಸಲೀಸಾಗಿ ಚಿನ್ನ ತರಬಹುದು ಎನ್ನುವುದಾದರೆ ರನ್ಯಾ ರಾವ್‌ಗೆ ‘ಮಾಯಾ ವಿದ್ಯೆ’ ಗೊತ್ತಿರಬೇಕು, ಇಲ್ಲವೇ ಎಲ್ಲ ಹಂತದ ಅಧಿಕಾರಿಗಳೂ ಶಾಮೀಲಾಗಿರಬೇಕು.
ರನ್ಯಾ ರಾವ್ ಅವರು ವಿಮಾನ ನಿಲ್ದಾಣದ ಹೊರ ಬರುವ ಕೊನೇ ಹಂತದಲ್ಲಿ ಶಿಷ್ಟಾಚಾರ ನಿಯಮಗಳಡಿ ಸಿಗುವ ಸೌಲಭ್ಯ–ವಿನಾಯಿತಿ ಬಳಸಿಕೊಂಡಿದ್ದಾರೆ. ಅದೂ ಅಪರಾಧವೇ. ಒಟ್ಟಾರೆ ಪ್ರಕರಣದಲ್ಲಿ ರಾಜ್ಯದ ಸಚಿವರ ಪಾತ್ರ ಇದ್ದರೆ ಅವರನ್ನು ತನಿಖೆಗೆ ಗುರಿಪಡಿಸಲು ಕೇಂದ್ರದ ಸಂಸ್ಥೆಗಳಿಗೆ ಅವಕಾಶವಿದೆ. ಶಿಷ್ಟಾಚಾರವೊಂದು ಬಿಟ್ಟರೆ, ಉಳಿದೆಲ್ಲ ಸಂಸ್ಥೆಗಳು ಕೇಂದ್ರ ಸರ್ಕಾರದ ಮೂಗಿನಡಿ ಕಾರ್ಯನಿರ್ವಹಿಸುತ್ತವೆ. ಹಾಗಿದ್ದರೂ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಪ್ರಕರಣದಲ್ಲಿ ಯಾರನ್ನೋ ರಕ್ಷಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿರುವುದು ಬಾಲಿಶವಷ್ಟೆ!
ಐದು ವರ್ಷಗಳಲ್ಲಿ ಹೀಗೆ ಬಹುಕೋಟಿ ಹಗರಣಗಳೇ ಬಯಲಾಗಿವೆ. ಇವೆಲ್ಲವುಗಳ ತನಿಖೆಯನ್ನು ಕೇಂದ್ರದ ತನಿಖಾ ಸಂಸ್ಥೆಗಳೇ ನಡೆಸಿವೆ. ಸೋರಿಕೆ ಮಾಡಿದ ಮಾಹಿತಿ ಹೊರತಾಗಿ, ಈವರೆಗೂ ಯಾವುದೇ ಒಬ್ಬ ಪ್ರಭಾವಿಯನ್ನೂ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸದೇ ಇರುವುದನ್ನು ನೋಡಿದರೆ, ಮಾಹಿತಿಯನ್ನು ರಾಜಕೀಯ ಹಿತಾಸಕ್ತಿಗೆ ಬಳಸಲಾಗಿದೆಯೇ ಎಂಬ ಅನುಮಾನ ಉಳಿಯುತ್ತದೆ. ಮಾತಿಗೆ ಬಗ್ಗದ ಸ್ವಪಕ್ಷೀಯರು, ತಿರುಗಿ ಬೀಳುವ ವಿರೋಧ ಪಕ್ಷದ ನಾಯಕರನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಯಿತೇ ಎಂಬ ಸಂಶಯವೂ ಘನವಾಗುತ್ತದೆ. ದೊಡ್ಡ ಸದ್ದೆಬ್ಬಿಸಿ, ಎದುರಾಳಿ
ಗಳ ತೇಜೋವಧೆ ಮಾಡಲು ಅಥವಾ ಹದ್ದುಬಸ್ತಿನಲ್ಲಿ ಇಡುವುದಕ್ಕಷ್ಟೇ ತನಿಖಾ ಸಂಸ್ಥೆಗಳು ಅಸ್ತ್ರವಾಗುತ್ತವೆ ಎಂದಾದರೆ, ಅವುಗಳನ್ನು ಬಿಳಿಯಾನೆಗಳಂತೆ ಸಾಕುವ ಬದಲು ಮುಚ್ಚುವುದೇ ಲೇಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.