ADVERTISEMENT

ವೈ.ಗ. ಜಗದೀಶ್‌ ಬರಹ | ಕೊರೊನಾ ಏರಿಗೆ, ಸರ್ಕಾರ ನೀರಿಗೆ

ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ ಗೈರತ್ತು ಏಕಿಲ್ಲ? ದೆಹಲಿ, ಕೇರಳ ಮಾದರಿ ಅಪಥ್ಯ ಏಕೆ?

ವೈ.ಗ.ಜಗದೀಶ್‌
Published 17 ಜುಲೈ 2020, 21:18 IST
Last Updated 17 ಜುಲೈ 2020, 21:18 IST
.
.   

ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದೆ. ಸಾಮಾನ್ಯ ವೈರಾಣು ಅದು; ಅಂಟಿದರೂ ಭಯ ಬೀಳಬೇಕಿಲ್ಲ; ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಂತು ಆರೋಗ್ಯ ಕಾಪಾಡಲು ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡುತ್ತೇವೆ ಎಂದು ಆಳುವವರು ಧೈರ್ಯ ಹೇಳಬೇಕಾದ ತುರ್ತಿನ ಹೊತ್ತಿದು. ಅವರೇ ಅಳಲು ಆರಂಭಿಸಿದರೆ...!

ಕರ್ನಾಟಕದ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ‘ಮುಂದಿನ ಎರಡು ತಿಂಗಳಲ್ಲಿ ಕೋವಿಡ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಹೇಳಿಕೆ ಕೊಟ್ಟು ಈಗ ಹಪಹಪಿಸುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳ ಉಸ್ತುವಾರಿ ಹೊತ್ತಿರುವ ಡಾ. ಕೆ.ಸುಧಾಕರ್‌, ದಿನಕ್ಕೊಂದು ಚೆಂದದ ಕತೆ ಹೇಳಿ ರಂಜಿಸುತ್ತಿದ್ದಾರೆ. ಸಂಕಷ್ಟದ ಕಾಲದಲ್ಲಿ ಕಾಪಾಡುತ್ತಾರೆ ಎಂದು ಜನರು ನಂಬಿರುವ ‘ದೇವರು’ಗಳನ್ನು ಲಾಕ್‌ಡೌನ್ ಮಾಡಿ ಅತ್ತ ಸುಳಿಯದಂತೆ ಅಷ್ಟ ದಿಗ್ಬಂಧನ ಹಾಕಿಡಲಾಗಿದೆ. ಸರ್ಕಾರವೇ ಹೀಗೆ ಕೈಚೆಲ್ಲಿ ಕುಳಿತ ಮೇಲೆ, ಮೂಗು–ಬಾಯಿ ಮುಟ್ಟಿಕೊಂಡರೆ ದೇಹವನ್ನೇ ಪ್ರವೇಶಿಸುವ ಮೂಗಾಸುರ, ಬಾಯಾಸುರರನ್ನು ಸ್ವಯಂ ನಿರ್ಬಂಧಿಸಿಕೊಳ್ಳುವುದು ಜನರಿಗೆ ಉಳಿದಿರುವ ಏಕೈಕ ದಾರಿ.

ಆರಂಭದಲ್ಲಿ 20–30 ಜನರಿಗೆ ಕೋವಿಡ್‌ ಅಂಟಲಾರಂಭಿಸಿದಾಗ ತಬ್ಲೀಗ್ ಜಮಾತ್‌ನ ಸದಸ್ಯರಿಂದಲೇ ಹಬ್ಬಿತು ಎಂದು ಹುಯಿಲೆಬ್ಬಿಸಿದರು. ಹರಡುವಿಕೆ ತಡೆಗೆ ರೂಪಿಸಬೇಕಾದ ಕಾರ್ಯತಂತ್ರದ ಬಗ್ಗೆ ಆಲೋಚಿಸುವುದು ಬಿಟ್ಟು, ಹರಡುವಿಕೆ ಹೊಣೆಯನ್ನು ಒಂದು ಸಮುದಾಯದ ಮೇಲೆ ಹೇರಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸಿದರು. ಹೀನ ರಾಜಕಾರಣದ ಬದಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರೆ, ಈಗ ಆರೈಕೆಗಾಗಿ ಜನರು ಬೀದಿ ಬೀದಿಯಲ್ಲಿ ಒದ್ದಾಡುವುದು ತಪ್ಪುತ್ತಿತ್ತು.

ADVERTISEMENT

ಮತ್ತೊಂದೆಡೆ ಇದೇ ಹೊತ್ತಿನಲ್ಲೇ ಸೋಂಕು ನಿಯಂತ್ರಣಕ್ಕೆ ಬೆಂಗಳೂರು ಹಾಗೂ ಕರ್ನಾಟಕವೇ ಮಾದರಿ ಎಂದು ಕೇಂದ್ರ ಸರ್ಕಾರವೇ ಬೆನ್ನು ತಟ್ಟಿತ್ತು. ಆ ಹುಸಿ ಹರ್ಷದಲ್ಲೇ ಸಂಭ್ರಮಿಸಿದ ಮಂದಿ ಈಗ ಪಶ್ಚಾತ್ತಾಪಪಡುವ ಸ್ಥಿತಿಗೆ ತಲುಪಿದ್ದಾರೆ. ಸರ್ಕಾರದಲ್ಲಿ ಇರುವ ಗೊಂದಲಗಳು, ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಜನರ ಆರೋಗ್ಯ ಕಾಪಾಡುವುದಕ್ಕಿಂತ ಪ್ರತಿಷ್ಠೆ–ಪ್ರಚಾರಕ್ಕೆ ಕೋವಿಡ್‌ ಅನ್ನು ಬಳಸಿಕೊಂಡಿರುವುದೇ ಇದಕ್ಕೆ ಕಾರಣ.

ವಿಪತ್ತಿನ ನಿರ್ವಹಣೆಯೆಂಬುದು ಎಲ್ಲ ಸರ್ಕಾರಗಳಿಗೂ ಸವಾಲು. 2018ರ ಜುಲೈ– ಆಗಸ್ಟ್‌ನಲ್ಲಿ ಮಹಾಪ್ರವಾಹದಿಂದ ಕೊಡಗು ಒಂದರ್ಥದಲ್ಲಿ ಕರಗಿಹೋಗಿತ್ತು. ಅಂದು ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದವರು ಎಚ್.ಡಿ. ಕುಮಾರಸ್ವಾಮಿ. ಅದಕ್ಕೆ ಕೆಲವು ದಿನಗಳ ಮೊದಲಷ್ಟೇ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ ದಾಖಲಾಗಿದ್ದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ವಿರುದ್ಧ ಮೊದಲ ದಾಳ ಉರುಳಿಸಿ, ಅಸ್ಥಿರತೆಯ ಕಿಡಿ ಹೊತ್ತಿಸಿದ್ದರು. ಕೂರುವ ಕುರ್ಚಿಯೇ ಭದ್ರ ಇರದಿದ್ದರೂ ಅದನ್ನು ಲೆಕ್ಕಿಸದ ಕುಮಾರಸ್ವಾಮಿ, ಕೊಡಗಿನ ಪ್ರವಾಹಕ್ಕೆ ತಕ್ಷಣ ಸ್ಪಂದಿಸಿದರು. ಸಾ.ರಾ. ಮಹೇಶ್ ಅವರನ್ನು ಅಲ್ಲಿಗೆ ಕಳುಹಿಸಿ ಜನರ ನೋವಿಗೆ ಮಿಡಿಯುವ ಯತ್ನ ಮಾಡಿದರು.

ಮೊನ್ನೆ ಮೊನ್ನೆ, ಈಗಿನ ಸರ್ಕಾರದ ಅವಧಿಯಲ್ಲಿ ಅಸಾಧ್ಯವೆನಿಸಿದ್ದನ್ನು ಅತ್ಯಂತ ಸಮನ್ವಯದಿಂದ ಸಾಧಿಸಿದವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದು ತಪ್ಪೋ ಸರಿಯೋ ಎಂಬುದು ಮತ್ತೊಂದು ಚರ್ಚೆಯ ವಿಷಯ. ನೆರೆಹೊರೆಯ ರಾಜ್ಯಗಳು ಪರೀಕ್ಷೆ ನಡೆಸುವುದಿಲ್ಲ ಎಂದು ಕೈಚೆಲ್ಲಿ ಕುಳಿತವು. ಸೋಂಕು ಏರುತ್ತಿರುವ ಹೊತ್ತಿನಲ್ಲೂ ಪರೀಕ್ಷೆ ನಡೆಸಲು ಸಚಿವರು ಮುಂದಾದರು. ತಾವೇ ಮುಂದೆ ನಿಂತು ಗೃಹ, ಸಾರಿಗೆ... ಹೀಗೆ ಎಲ್ಲ ಸಚಿವರು ಹಾಗೂ ಅಧಿಕಾರಿಗಳ ಜತೆ ಹತ್ತಾರು ಸಭೆಗಳನ್ನು ನಡೆಸಿದರು. ಪರೀಕ್ಷೆ ನಡೆಸಲು ಹಿಂಜರಿಯುತ್ತಿದ್ದ ಜಿಲ್ಲಾಧಿಕಾರಿಗಳು,ಉಪನಿರ್ದೇಶಕರ ಜತೆ ಚರ್ಚಿಸಿ, ವಿಶ್ವಾಸ ತುಂಬಿದರು. ಎಲ್ಲರೂ ಏಕ ಆಶಯ ಹಾಗೂ ತದೇಕ ಕಾಳಜಿಯಿಂದ ದುಡಿದಿದ್ದರಿಂದಾಗಿ ಭಯ ಕರಗಿ, ಹಾಳೆ ಮಗುಚಿದಂತೆ ಪರೀಕ್ಷೆ ಮುಗಿಯಿತು.

ಇದೇ ಸಮನ್ವಯವು ಕೊರೊನಾ ನಿಯಂತ್ರಣದಲ್ಲಿ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ವಯಸ್ಸಿನಲ್ಲೂ ಏಕಾಂಗಿಯಾಗಿ ಬಡಿದಾಡುತ್ತಿದ್ದಾರೆ. ಸಚಿವರ ಮಧ್ಯೆ ಇರುವ ಸ್ವಪ್ರತಿಷ್ಠೆ, ಹಮ್ಮು ತೊಲಗಿಸಿ, ಎಲ್ಲರನ್ನೂ ಏಕಾತ್ಮಕವಾಗಿ ದುಡಿಸಿಕೊಳ್ಳಲು ಅವರಿಗೂ ಸಾಧ್ಯವಾಗಿಲ್ಲ; ಸಚಿವರೂ ಅದಕ್ಕೆ ಕೈಜೋಡಿಸಿದಂತಿಲ್ಲ.ಹಾಗಾಗಿಯೇ ಕೊರೊನಾ ಏರಿಗೆ, ಸರ್ಕಾರ ನೀರಿಗೆ ಎಂಬಂಥ ಸ್ಥಿತಿ ಬಂದೊದಗಿದೆ.

1.30 ಕೋಟಿ ಆಸುಪಾಸು ಜನರಿರುವ ಬೆಂಗಳೂರಿನಲ್ಲಿ ಕೊರೊನಾ ಹರಡುವಿಕೆ ಕೈಮೀರಿದೆ. ರಾಜಧಾನಿಯ ಉಸ್ತುವಾರಿಯು ಮುಖ್ಯಮಂತ್ರಿ ಬಳಿಯೇ ಇದೆ. ಪರಿಸ್ಥಿತಿ ಹತೋಟಿ ತಪ್ಪುತ್ತಿದೆ ಎಂದು ಗೊತ್ತಾದಾಗ ಇಲ್ಲಿನ ಜವಾಬ್ದಾರಿಯನ್ನು ಕಂದಾಯ ಸಚಿವಆರ್. ಅಶೋಕ ಅವರಿಗೆ ವಹಿಸಲಾಯಿತು. ವಿಕ್ಟೋರಿಯಾದ ಕೋವಿಡ್‌ ಆಸ್ಪತ್ರೆಗೂ ಭೇಟಿ ಕೊಡುವ ಎದೆಗಾರಿಕೆ ತೋರಿದ ಅಶೋಕ, ಸಭೆಗಳನ್ನು ನಡೆಸಿದರು. ಆ ಸಮಯದಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದ ಸಚಿವ ಸುಧಾಕರ್, ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ‘ನಾನು ಇಲಾಖೆಯ ಸಚಿವ. ನಾನೇ ಬೆಂಗಳೂರು ನೋಡಿಕೊಳ್ಳುತ್ತೇನೆ’ ಎಂದು ಘೋಷಿಸಿಕೊಂಡು ಅಖಾಡಕ್ಕೆ ಇಳಿದರು. ಜನ್ಮದಿನ ಆಚರಣೆಗಾಗಿ ಅಶೋಕ ಚಿಕ್ಕಮಗಳೂರಿನತ್ತ ದೌಡಾಯಿಸಿದರು. ಹೀಗೆ ನಾಟಕದ ಒಂದಂಕ ಮುಗಿಯಿತು. ಎಲ್ಲವೂ ಕೈತಪ್ಪಿ ಹೋದ ಮೇಲೆ ಎಂಟು ಜನರಿಗೆ ಉಸ್ತುವಾರಿ ವಹಿಸಲಾಯಿತು. ಈಗ ಮೇಲಿಂದ ಮೇಲೆ ಸಭೆಗಳು ನಡೆಯುತ್ತಿವೆ. ಪರಿಣಾಮ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಇಂತಹ ಪೈಪೋಟಿ ಯಾರಿಗೂ ಒಳಿತು ಮಾಡದು, ಯಾರೂ ಕ್ಷಮಿಸರು ಎಂಬುದು ಸಚಿವರಿಗೆ ಅರ್ಥವಾಗಬೇಕಿದೆ.

ಸಿದ್ಧತೆಯ ವಿಷಯಕ್ಕೆ ಬಂದರೆ, ಕರ್ನಾಟಕ ಸರ್ಕಾರ ಮಾಡಿದ್ದಕ್ಕಿಂತ ಆಡಿದ್ದೇ ಜಾಸ್ತಿ. ಕೊರೊನಾ ಕಾಲಿಟ್ಟು ನಾಲ್ಕು ತಿಂಗಳು ಕಳೆದಿದ್ದು, ಇಂದಿಗೂ ಸಮರ್ಪಕ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಲು ಆಗಿಲ್ಲ. ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಇದ್ದರೂ ಖಾಸಗಿ ಆಸ್ಪತ್ರೆಗಳ ಶೇ 80ರಷ್ಟು ಹಾಸಿಗೆಗಳನ್ನು ಆರಂಭದಲ್ಲೇ ವಶಕ್ಕೆ ಪಡೆಯಲಾಯಿತು. ಅತ್ಯುತ್ಕೃಷ್ಟ ಆರೋಗ್ಯ ವ್ಯವಸ್ಥೆಯ ಆವಾಸ (ಹೆಲ್ತ್ ಹಬ್‌) ಬೆಂಗಳೂರು ಎಂಬ ಹೆಗ್ಗಳಿಕೆ ಈಗ ಮರೆಯಾಗಿ ಹೋಗಿದೆ. ಏಕೆಂದರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳು ಒಳಗೇ ಬಿಟ್ಟುಕೊಳ್ಳುತ್ತಿಲ್ಲ. ಸರ್ಕಾರ ಅಥವಾ ವಿರೋಧ ಪಕ್ಷದಲ್ಲಿ ಇರುವವರೇ ಬಹಳಷ್ಟು ಆಸ್ಪತ್ರೆಗಳ ಮಾಲೀಕರು. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕಿ ಚಾಟಿ ಬೀಸುವ ಗೈರತ್ತು ಸರ್ಕಾರಕ್ಕೆ ಇಲ್ಲ.

ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ 10 ಸಾವಿರ ಹಾಸಿಗೆಗಳ ಆಸ್ಪತ್ರೆ ಸಿದ್ಧಪಡಿಸಿತು. ಕರ್ನಾಟಕ ಈಗಷ್ಟೇ ಅಂತಹ ಕೆಲಸಕ್ಕೆ ಕೈಹಾಕಿದೆ. ಕೇರಳದಲ್ಲಿರುವ ಕಮ್ಯುನಿಸ್ಟ್ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳ ನೆರವು ಬಳಸಿಕೊಂಡು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಹರಡುವಿಕೆಯನ್ನು ನಿಯಂತ್ರಣಕ್ಕೆ ತಂದಿತು. ಕರ್ನಾಟಕದಲ್ಲಿರುವ ಬಿಜೆಪಿ ಕಾರ್ಯಕರ್ತರ ದೊಡ್ಡ ಪಡೆಯು ಸರ್ಕಾರದ ಜತೆ ಹೀಗೆ ಕೈ ಜೋಡಿಸಲಿಲ್ಲ.

ಕರ್ನಾಟಕ ಇಂದಿಗೂ ಎಂದಿಗೂ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿದೆ. ಆದರೆ, ಕೊರೊನಾ ಬಂದು ನಾಲ್ಕು ತಿಂಗಳು ಕಳೆದರೂ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳಿವೆ, ಎಲ್ಲಿ ಖಾಲಿ ಇವೆ, ಎಲ್ಲಿ ವೈದ್ಯರ ಸೇವೆ ತಕ್ಷಣ ಲಭ್ಯ ಇದೆ ಎಂಬ ಮಾಹಿತಿ ನೀಡುವ ಆನ್‌ಲೈನ್ ವ್ಯವಸ್ಥೆ, ಡ್ಯಾಷ್ ಬೋರ್ಡ್‌ ಮಾಡಲು ಈಗಲೂ ಪರದಾಡಲಾಗುತ್ತಿದೆ. ಪ್ರಚಾರಕ್ಕಾಗಿನತೋರುಗಾಣಿಕೆಯಾಚೆಗೆ ಇರಬೇಕಾದ ಇಚ್ಛಾಶಕ್ತಿ ಹಾಗೂ ಕಾಳಜಿ ಇಲ್ಲದಿದ್ದರೆ ಇಂತಹ ಎಡವಟ್ಟುಗಳು ಆಗುತ್ತಲೇ ಇರುತ್ತವೆ.

ಅಂತಹ ಸರ್ಕಾರವನ್ನು ‘ಅರಸ ರಕ್ಕಸನಂತೆ ವರಮಂತ್ರಿ ಹುಲಿಯಂತೆ/ ಬರೆವಾತ ನಾಡ ನರಿಯಂತೆ ಪರಿವಾರ ಗರಗಸದಂತೆ’ ಎಂಬ ಸರ್ವಜ್ಞನ ಮಾತಿನಲ್ಲಲ್ಲದೆಬೇರೇನೆಂದು ಹೇಳಲು ಸಾಧ್ಯವಾದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.