ಭಾವುಕತೆ ಇಲ್ಲದೆ ಹೋದರೆ ದೇಶ, ಭಾಷೆ, ಸಮುದಾಯ, ಸಮಾಜ ಸೇರಿದಂತೆ ನಮ್ಮ ಬದುಕಿನ ಭಾಗವಾದ ಯಾವುದರೊಂದಿಗೂ ಗಾಢ ಸಂಬಂಧ ಉಳಿಸಿಕೊಳ್ಳಲಾರೆವು. ಆದರೆ, ಕೆಲವೊಮ್ಮೆ ಈ ಭಾವುಕತೆಯೇ ನಮ್ಮ ವಿವೇಕವನ್ನು ಮಸುಕು ಮಾಡುತ್ತದೆ ಹಾಗೂ ಭಾವುಕತೆಯ ಅತಿರೇಕದಲ್ಲಿ ನಮ್ಮ ಜೀವಕೋಶಕ್ಕೆ ನಾವೇ ಹಾನಿ ಮಾಡಿಕೊಳ್ಳುತ್ತಿರುತ್ತೇವೆ. ಇದಕ್ಕೆ ಹೊಸ ಉದಾಹರಣೆ, ಕನ್ನಡದ ಬಗ್ಗೆ ತಪ್ಪು ಗ್ರಹಿಕೆಯಿಂದ ಮಾತನಾಡಿರುವ ಚಿತ್ರನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಮುಗಿಬಿದ್ದ ಪ್ರಕರಣ.
‘ತಮಿಳಿನಿಂದ ಕನ್ನಡ ಹುಟ್ಟಿತು’ ಎನ್ನುವ ಕಮಲ್ ಹಾಸನ್ ಅವರ ಹೇಳಿಕೆಯನ್ನು ಕನ್ನಡಿಗರು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ಆ ಹೇಳಿಕೆಗೆ ಸಂಬಂಧಿಸಿದಂತೆ ನಮ್ಮ ಪ್ರತಿಕ್ರಿಯೆಗಳಿಂದ ಕನ್ನಡದ ಘನತೆಯೇನೂ ಹೆಚ್ಚಲಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳಬೇಕು. ನಟನೆಯ ಸೂಕ್ಷ್ಮಗಳನ್ನು ಅರಗಿಸಿಕೊಂಡ ಭಾರತದ ಕೆಲವೇ ಕೆಲವು ಸಂವೇದನಾಶೀಲ ಕಲಾವಿದರಲ್ಲಿ ಕಮಲ್ ಅವರೂ ಒಬ್ಬರು. ಆದರೆ, ಕನ್ನಡಕ್ಕೆ ಸಂಬಂಧಿಸಿದಂತೆ ಅವರು ಆಡಿದ ಮಾತು ಓರ್ವ ಪ್ರಬುದ್ಧ ಕಲಾವಿದನಿಗೆ ತಕ್ಕಂತಿರದೆ, ವೇದಿಕೆಯ ಔಚಿತ್ಯವನ್ನು ಮರೆತು ವಾಚಾಳಿಯಾಗುವ ರಾಜಕಾರಣಿಯ ನಡವಳಿಕೆಯಂತಿತ್ತು. ಯಾವ ಭಾಷೆ ಯಾವುದರ ತಾಯಿ ಎನ್ನುವುದನ್ನು ನಿರ್ಣಯಿಸುವುದಕ್ಕೆ ಕಮಲ್ ಹಾಸನ್ ಭಾಷಾತಜ್ಞರಲ್ಲ ಹಾಗೂ ತಮ್ಮ ಮಾತಿಗವರು ಯಾವ ದಾಖಲೆಯನ್ನೂ ನೀಡಿಲ್ಲ. ಕನ್ನಡದ ಹುಟ್ಟಿನ ಬಗೆಗಿನ ಅವರ ಮಾತು ಅವಿವೇಕದಿಂದ ಕೂಡಿದ್ದು ಮಾತ್ರವಲ್ಲ, ಉದ್ಧಟತನದ್ದೂ ಹೌದು.
ಆದರೆ, ಕಮಲ್ ಅವರ ಮಾತಿಗೆ ಕನ್ನಡಿಗರಾದ ನಾವು ನೀಡಿದ ಪ್ರತಿಕ್ರಿಯೆಯೂ ಭಾವಾತಿರೇಕದಿಂದ ಕೂಡಿತ್ತು, ಒರಟಾಗಿತ್ತು ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಭಾಷಾ ರಾಜಕಾರಣದ ಹಿನ್ನೆಲೆಯಲ್ಲಿ ನೋಡಿದರೂ ನಮ್ಮ ಪ್ರತಿಕ್ರಿಯೆ ಅಸೂಕ್ಷ್ಮವಾದುದೇ ಆಗಿದೆ.
ಕ್ಷಮೆ ಕೋರುವಂತೆ ಕಮಲ್ ಹಾಸನ್ ಅವರ ಮೇಲೆ ಒತ್ತಾಯ ಹೇರಿದ್ದು ಹಾಗೂ ಕ್ಷಮೆ ಕೋರದೆ ಹೋದರೆ ಅವರ ಅಭಿನಯದ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ತೆರೆಕಾಣಲು ಅವಕಾಶ ನೀಡುವುದಿಲ್ಲವೆನ್ನುವ ಮನಃಸ್ಥಿತಿ ಆತಂಕ ಹುಟ್ಟಿಸುವಂತಹದ್ದು; ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂಬಲಿಸುವವರು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು ಒಪ್ಪಲು ಸಾಧ್ಯವಿಲ್ಲದಂತಹದ್ದು.
ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿಕ್ಕೆ ಕಮಲ್ ಅವರಿಗೆ ಸ್ವಾತಂತ್ರ್ಯವಿದೆ ಹಾಗೂ ಅದನ್ನು ವಿರೋಧಿಸಲಿಕ್ಕೆ ನಮಗೂ ಹಕ್ಕಿದೆ. ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವಂತಹ ಅಭಿಪ್ರಾಯಗಳು ವ್ಯಕ್ತವಾದಾಗ, ಅವುಗಳ ಹುಸಿತನವನ್ನು ಸಾಬೀತುಪಡಿಸುವ ಅಕಡೆಮಿಕ್ ಪ್ರಯತ್ನಗಳು ನಡೆಯಬೇಕು. ದುರದೃಷ್ಟವಶಾತ್, ಮಾಧ್ಯಮಗಳಲ್ಲಿನ ಕೆಲವು ಅವಸರದ ಬರಹಗಳ ಹೊರತು, ಕನ್ನಡದ ಅನನ್ಯತೆ ಹಾಗೂ ದಕ್ಷಿಣದ ಭಾಷೆಗಳ ನಡುವಿನ ಒಡಹುಟ್ಟು ನಂಟನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆದದ್ದು ವಿರಳ.
ಕನ್ನಡದ ಮೇಲಿನ ತಮ್ಮ ಪ್ರೀತಿಯನ್ನು ಕಮಲ್ ಹೇಳಿಕೊಂಡ ನಂತರವೂ, ಅವರ ಮೇಲಿನ ಮಾತಿನ ದಾಳಿ ಮುಂದುವರೆಯಿತು. ಕ್ಷಮೆ ಕೇಳದ ಹೊರತು ಕಮಲ್ ಜೊತೆ ಮತ್ತೊಂದು ಮಾತು ಸಾಧ್ಯವೇ ಇಲ್ಲ ಎನ್ನುವ ಮನಃಸ್ಥಿತಿ ಪ್ರದರ್ಶನಗೊಂಡಿತು.
ನಮ್ಮ ಪ್ರತಿಕ್ರಿಯೆಗಳ ಭರಾಟೆ ಎಷ್ಟರಮಟ್ಟಿಗಿತ್ತೆಂದರೆ, ವಿವಾದಕ್ಕೆ ಕಾರಣವಾದ ಮಾತನ್ನು ಕಮಲ್ ಆಡಿದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರಣಕ್ಕೆ ನಟ ಶಿವರಾಜ್‌ಕುಮಾರ್ ಅವರೂ ಟೀಕೆಗಳನ್ನು ಎದುರಿಸಬೇಕಾಯಿತು. ಯಾವ ಭಾಷೆಯ ಹುಟ್ಟು ಯಾವುದರಿಂದ ಎನ್ನುವುದು ತಿಳಿಯಲಿಕ್ಕೆ ಶಿವರಾಜ್‌ಕುಮಾರ್ ಅವರೇನು ಭಾಷಾತಜ್ಞರೇ? ಶಿವರಾಜ್‌ಕುಮಾರ್ ಕನ್ನಡ ಪ್ರೇಮವನ್ನು ಶಂಕಿಸಿದವರಿಗೆ, ಅವರ ತಂದೆ ರಾಜ್‌ಕುಮಾರ್ ಕನ್ನಡ ಚಳವಳಿಗೆ ಜೀವಶಕ್ತಿಯಾಗಿ ಪರಿಣಮಿಸಿದ್ದುದಾದರೂ ನೆನಪಿರಬೇಕಾಗಿತ್ತು. ನಡೆದುಬಂದ ದಾರಿಯನ್ನು ಮರೆಯುವುದಾದರೆ, ಭಾಷೆಯ ಬಗೆಗಿನ ನಮ್ಮ ಅಭಿಮಾನ ಪೊಳ್ಳುತನದಿಂದ ಕೂಡಿದ್ದು ಎಂದು ಭಾವಿಸಬೇಕಾಗುತ್ತದೆ.
ನಾಡು– ನುಡಿಗೆ ಸಂಬಂಧಿಸಿದ ವಿದ್ಯಮಾನಗಳಿಗೆ ಶ್ರೀಸಾಮಾನ್ಯರು ಹಾಗೂ ಕನ್ನಡ ಚಳವಳಿಯಲ್ಲಿ ತೊಡಗಿಕೊಂಡವರು ಭಾವಾವೇಶದಿಂದ ಪ್ರತಿಕ್ರಿಯಿಸುವುದು ಸಹಜ. ಆದರೆ, ಹೈಕೋರ್ಟ್ ಹಾಗೂ ಸರ್ಕಾರದ ಪ್ರತಿನಿಧಿಗಳೂ ಜನರ ಭಾವೋದ್ವೇಗದ ಭಾಗವಾಗಿ ಕಮಲ್ ಕ್ಷಮೆಗೆ ಒತ್ತಾಯಿಸಿದ್ದು ಆಶ್ಚರ್ಯಕರ. ಜನಪರ ಚಿಂತನೆಗಳ ಲೇಖಕರೊಂದಿಗೆ ಬಲಪಂಥದ ಒಲವಿನವರೂ ಕಮಲ್ ವಿರುದ್ಧ ದನಿಯೆತ್ತಿದ್ದು ಕನ್ನಡ ಸಾಂಸ್ಕೃತಿಕ ಲೋಕದ ಇತ್ತೀಚಿನ ವರ್ಷಗಳಲ್ಲಿನ ವಿಸ್ಮಯಗಳಲ್ಲೊಂದು.
ಇವೆಲ್ಲ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ, ಕಮಲ್ ಕ್ಷಮೆ ಕೇಳುವ ಮೂಲಕ ಪ್ರಕರಣ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬಹುದಿತ್ತು ಎಂದು ಹೇಳಬಹುದು. ಆದರೆ, ತನ್ನ ಮಾತು ಕ್ಷಮೆ ಕೇಳುವಷ್ಟು ಘೋರವಾದುದಲ್ಲ ಎಂದು ಕಮಲ್‌ಗೆ ಅನ್ನಿಸಿದಾಗ, ಅವರಿಂದ ಬಲವಂತವಾಗಿ ಕ್ಷಮೆ ಕೇಳಿಸುವುದರಲ್ಲಿ ಅರ್ಥವಿಲ್ಲ. ಸ್ವಯಂಪ್ರೇರಣೆಯಿಂದ ಹೃದಯಪೂರ್ವಕವಾಗಿ ಕೋರುವ ಕ್ಷಮೆಗೂ ಒತ್ತಾಯಪೂರ್ವಕವಾದ ಕ್ಷಮೆಗೂ ವ್ಯತ್ಯಾಸವಿದೆ. ಒತ್ತಡ, ಭಯ, ಅಳುಕು, ಲಾಭದ ಲೆಕ್ಕಾಚಾರಗಳಿಂದ ಕೂಡಿದ ಕ್ಷಮೆಯನ್ನು ಅಪೇಕ್ಷಿಸುವುದು ಕನ್ನಡ ಪ್ರತಿಪಾದಿಸುವ ‘ವಿವೇಕ ಪರಂಪರೆ’ಗೆ ತಕ್ಕುದಾದುದಲ್ಲ.
ಕಮಲ್ ಅವರಿಗೆ ಎದುರಾದ ಟೀಕೆಗಳಲ್ಲಿ, ತಮಿಳಿನ ಬಗ್ಗೆ ಕನ್ನಡಿಗರ ಮನಸ್ಸಿನಲ್ಲಿ ಇರಬಹುದಾದ ಸುಪ್ತ ಅಸಮಾಧಾನದ ಪಾತ್ರವೂ ಇರುವಂತಿದೆ. ಕನ್ನಡ ಮತ್ತು ತಮಿಳನ್ನು ವಿರುದ್ಧ ಪದಗಳ ರೂಪದಲ್ಲಿ ನೋಡಲಿಕ್ಕೆ ಕನ್ನಡ ಚಳವಳಿಯ ಇತಿಹಾಸ ಒತ್ತಾಯಿಸುತ್ತದೆ. ಆದರೆ, ವರ್ತಮಾನದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವುದರಿಂದ ಎರಡೂ ಭಾಷೆಗಳಿಗೆ ಲಾಭವಿದೆ. ತಮಿಳನ್ನು ಎದುರು ಪಾಳಯದಲ್ಲಿ ನಿಲ್ಲಿಸುವುದರಿಂದ ಕನ್ನಡಕ್ಕೆ ಯಾವ ಉಪಯೋಗವೂ ಇಲ್ಲ. ತಮಿಳಿನೊಂದಿಗಿನ ತಿಕ್ಕಾಟದಲ್ಲಿ ಹಿಂದಿ ವಿರುದ್ಧದ ದಕ್ಷಿಣದ ದನಿ ದುರ್ಬಲಗೊಳ್ಳುತ್ತದೆ. ತಮಿಳಿನಿಂದ ಕನ್ನಡ ಜನಿಸಿದೆ ಎನ್ನುವ ಮಾತನ್ನು ಒಪ್ಪಿಕೊಳ್ಳಲಾಗದು. ಆದರೆ, ತಾಯ್ನುಡಿಯನ್ನು ಎತ್ತಿಹಿಡಿಯುವುದರಲ್ಲಿ ಹಾಗೂ ಹಿಂದಿ ವಿರೋಧಿ ಆಂದೋಲನದಲ್ಲಿ ತಮಿಳುನಾಡು ಮುಂಚೂಣಿಯಲ್ಲಿರುವುದನ್ನು ಅಲ್ಲಗಳೆಯಲಾದೀತೆ? ತಮಿಳು ಹಾಗೂ ತಮಿಳರನ್ನು ಹೊರತುಪಡಿಸಿ ಹಿಂದಿಯ ಸೊಲ್ಲಿಗೆ ಪರಿಣಾಮಕಾರಿ ಪ್ರತಿರೋಧ ರೂಪಿಸುವುದು ಕಷ್ಟ.
ಕಮಲ್ ಅವರ ಮಾತಿಗೆ ಎದುರಾದ ತೀವ್ರ ಟೀಕೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇಂಗ್ಲಿಷ್ ಬಗೆಗಿನ ಮಾತಿಗೆ ವ್ಯಕ್ತವಾಗದಿರುವುದು ಭಾಷಾ ರಾಜಕಾರಣಕ್ಕೆ ಸಂಬಂಧಿಸಿದ ನಮ್ಮ ಅಸ್ಪಷ್ಟತೆ ಹಾಗೂ ದ್ವಂದ್ವಕ್ಕೆ ನಿದರ್ಶನದಂತಿದೆ. ‘ಇಂಗ್ಲಿಷ್ ಮಾತನಾಡುವವರು ನಾಚಿಕೊಳ್ಳುವ ಕಾಲ ಬರಲಿದೆ’ ಎನ್ನುವ ಅಮಿತ್ ಶಾ ಅವರ ಮಾತಿನ ಹಿನ್ನೆಲೆಯಲ್ಲಿರುವುದು ಹಿಂದಿ ವ್ಯಾಪಾರಿಯ ಮನಸ್ಸು ಎನ್ನುವುದು ಭಾಷಾ ರಾಜಕಾರಣ ಬಲ್ಲ ಯಾರಿಗಾದರೂ ಸುಲಭವಾಗಿ ಅರ್ಥ ಆಗುವಂತಹದ್ದು. ಮುಂದೆಂದೋ ಒಮ್ಮೆ ಇಂಗ್ಲಿಷ್ ಮಾತನಾಡಿದರೆ ನಾಚುವ ಕಾಲ ಬರುತ್ತದೆಯೋ ಇಲ್ಲವೋ ತಿಳಿಯದು. ಆದರೆ, ಕನ್ನಡ ಮಾತನಾಡಲು ನಾಚುವ ಹಾಗೂ ಅಳುಕುವ ಕಾಲವಂತೂ ಬಂದಾಗಿದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಕನ್ನಡ ಮಾತನಾಡಿದ ಬೋಧಕರೊಬ್ಬರ ಕೆಲಸಕ್ಕೆ ಕುತ್ತೊದಗಿದ್ದ ಪ್ರಕರಣ ಇತ್ತೀಚೆಗಷ್ಟೇ ನಡೆದಿದೆ.
ಇಂಗ್ಲಿಷನ್ನು ಹೀಗಳೆವ ಅಮಿತ್ ಶಾ ಅವರ ಮಾತಿನ ಹಿಂದಿರುವುದು ಹಿಂದಿ ಪ್ರೇಮವೇ ಹೊರತು, ದಕ್ಷಿಣದ ಭಾಷೆಗಳ ಬಗೆಗಿನ ಒಲವಲ್ಲ. ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ವರದಿ, ಕಳೆದ ಹತ್ತು ವರ್ಷಗಳ (2014–2025) ಅವಧಿಯಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ₹2,532.59 ಕೋಟಿ ಖರ್ಚು ಮಾಡಿದೆ ಎಂದು ಹೇಳುತ್ತಿದೆ. ಇದೇ ಅವಧಿಯಲ್ಲಿ, ಹಿಂದಿ, ಸಿಂಧಿ ಹಾಗೂ ಉರ್ದು ಭಾಷೆಗಳಿಗೆ ₹1,317.96 ಕೋಟಿ ಅನುದಾನ ದೊರೆತಿದೆ. ಶಾಸ್ತ್ರೀಯ ಭಾಷೆಗಳೆಂದು ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ಕನ್ನಡ, ತಮಿಳು, ತೆಲುಗು, ಮಲಯಾಳ ಹಾಗೂ ಒಡಿಯಾ ಭಾಷೆಗಳ ಅಭಿವೃದ್ಧಿಗೆ ದೊರೆತಿರುವ ಅನುದಾನ ₹147.56 ಕೋಟಿಯಷ್ಟೇ. ಈ ವ್ಯತ್ಯಾಸವೇ ಕೇಂದ್ರ ಸರ್ಕಾರದ ಭಾಷಾ ಆದ್ಯತೆ ಯಾವ ಬಗೆಯದೆನ್ನುವುದನ್ನು ಸೂಚಿಸುವಂತಿದೆ.
ಸಂಸ್ಕೃತಕ್ಕೆ ಪ್ರತಿವರ್ಷ ಸರಾಸರಿ ಸುಮಾರು ₹230 ಕೋಟಿಗೂ ಹೆಚ್ಚು ಮೊತ್ತ ದೊರೆತಿದ್ದರೆ, ಉಳಿದ ಐದು ಭಾಷೆಗಳಿಗೆ ವಾರ್ಷಿಕವಾಗಿ ದೊರೆತಿರುವುದು ₹13.41 ಕೋಟಿ ಮಾತ್ರ. ಸಂಸ್ಕೃತಕ್ಕೆ ದೊರೆತಿರುವ ಗಂಟಿನ ಶೇ 5ರಷ್ಟು ತಮಿಳಿಗೆ ದೊರೆತಿದ್ದರೆ, ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ದೊರೆತಿರುವುದು ಶೇ 0.5ಕ್ಕೂ ಕಡಿಮೆ. ಸಂಸ್ಕೃತ ಹಾಗೂ ಹಿಂದಿಗಾಗಿ ತಮ್ಮ ಹೃದಯ ಮಿಡಿತವನ್ನು ಮೀಸಲಾಗಿ ಇರಿಸುವವರಿಂದ ಕನ್ನಡವೂ ಸೇರಿದಂತೆ ದಕ್ಷಿಣದ ಭಾಷೆಗಳ ಹಿತ ಸಾಧ್ಯವಾದೀತೆ?
ಹಿಂದಿ ಆಕ್ಟೋಪಸ್‌ನಂತೆ ಕನ್ನಡದ ಪರಿಸರವನ್ನು ಆವರಿಸಿಕೊಳ್ಳುತ್ತಿದೆ. ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಗಳ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಕೆಲವು ಅಂಚೆ ಕಚೇರಿಗಳಲ್ಲಿ ಕನ್ನಡೇತರರು ತುಂಬಿಕೊಂಡಿದ್ದಾಗಿದೆ. ಇವರಲ್ಲಿ ಅನೇಕರು ಹಿಂದಿ ಬಾರದವರನ್ನು ಕೇವಲವಾಗಿ ನೋಡುವವರು ಹಾಗೂ ಕನ್ನಡದ ಬಗ್ಗೆ ತಿರಸ್ಕಾರವುಳ್ಳವರು. ನಡೆ– ನುಡಿಯಲ್ಲಿ ಮೇಲರಿಮೆಯನ್ನು ಆವಾಹಿಸಿಕೊಂಡಿರುವವರು ಕನ್ನಡವನ್ನಷ್ಟೇ ಮಾತನಾಡುವವರಲ್ಲಿ ನಾಚಿಕೆ ಹುಟ್ಟಿಸಬಲ್ಲರು. ಶಾಲಾ– ಕಾಲೇಜುಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕನ್ನಡದ ವಿದ್ಯಾರ್ಥಿಗಳು ಭಾಷಾ ದಲಿತರು. ಬಹುತೇಕ ಶಾಲಾ–ಕಾಲೇಜುಗಳ ಪರಿಸರದಲ್ಲಿ ಕನ್ನಡ ನಾಚಿಕೆ ಹುಟ್ಟಿಸುವ ಭಾಷೆಯಾಗಿ ಸಾಕಷ್ಟು ವರ್ಷಗಳಾದವು. ಕನ್ನಡಿಗರಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ ಎಂದು ನಂಬಿದವರು ಲೋಕದ ಕಣ್ಣಿಗೀಗ ಬದುಕಲು ಗೊತ್ತಿಲ್ಲದವರು.
ಹಿಂದಿ ಹೇರಿಕೆಯಲ್ಲಿ ನಿರತರಾಗಿರುವ ರಾಜಕಾರಣಿಗಳ ಮೈಮನಸ್ಸಿನ ತುಂಬೆಲ್ಲ ಕೋಮುವಾದ ಆವರಿಸಿಕೊಂಡಿರುವುದನ್ನು ನೋಡಿದರೆ, ಹಿಂದಿ ಹೇರಿಕೆಯ ವಿರೋಧ ಭಾರತೀಯ ಸಮಾಜದ ಜಾತ್ಯತೀತ ಸ್ವರೂಪದ ಸಂಕೇತವೂ ಹೌದು. ಹಿಂದಿ ಹೇರಿಕೆಯ ಅಪಾಯಗಳ ಬಗ್ಗೆ ಸ್ಪಷ್ಟತೆಯಿದ್ದಾಗ, ಕನ್ನಡದ ಬಗ್ಗೆ ನೆರೆಹೊರೆಯ ಯಾರಾದರೂ ಲಘುವಾಗಿ ಮಾತನಾಡಿದಾಗ ನಾವು ವಿವೇಚನೆ ಕಳೆದುಕೊಳ್ಳುವುದಿಲ್ಲ. ಕಮಲ್ ಅಂಥವರಿಗೆ ಬುದ್ಧಿ ಹೇಳಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕೇ ಹೊರತು, ನಿರಾಕರಿಸುವುದು ಹಾಗೂ ನಡೆಯಬೇಕಾದ ದಾರಿಯಲ್ಲಿ ಒಂಟಿಯಾಗಿ ಉಳಿಯುವುದು ವಿವೇಕವಲ್ಲ, ಅದರಲ್ಲಿ ಕನ್ನಡದ ಹಿತವೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.