ADVERTISEMENT

ಚಳವಳಿ ನೆಪ; ‘ಉತ್ತರ’ದ ಜಪ

ಚಳವಳಿಕಾರರು ಪುಂಡರಾದರೆ, ಧರ್ಮದ ಹೆಸರಲ್ಲಿ ಪುಂಡಾಟಿಕೆ ನಡೆಸುವವರೇನು?

ಚ.ಹ.ರಘುನಾಥ
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
   

ಬೆಂಗಳೂರಿನಲ್ಲಿ ಜೈನ ಸಮುದಾಯದವರ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಹಿಂದಿ ಕಟೌಟ್‌ ಅನ್ನು ಕಿತ್ತುಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಕನ್ನಡಪ್ರೇಮದ ಅಸಲಿಯತ್ತಿನ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಹಿಂದಿ ಕಟೌಟ್‌ ಕಿತ್ತುಹಾಕಿದವರು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಕಣ್ಣಿಗೆ ಕಿಡಿಗೇಡಿಗಳಾಗಿ ಕಂಡಿದ್ದಾರೆ. ‘ಸಾಹಿತ್ಯ–ಸಂಸ್ಕೃತಿಯ ಅರಿವಿಲ್ಲದ ಚಳವಳಿಕಾರರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಜೈನರನ್ನು ನೋಯಿಸಿರುವುದು’ ಸಂಸದ ತೇಜಸ್ವಿ ಸೂರ್ಯ ಅವರಿಗೆ ಖೇದವನ್ನುಂಟು ಮಾಡಿದೆ. ‘ಹಿಂದಿ ಬ್ಯಾನರ್‌ ಹಾಕಿದ ಜೈನ ಸಹೋದರರ ಮೇಲೆ ರೌಡಿಗಳು ದಾಳಿ ನಡೆಸಿದ್ದಾರೆ. ಉರ್ದು ಭಾಷೆಯಲ್ಲಿ ಬೋರ್ಡ್ ಹಾಕಿದವರನ್ನು ಯಾರೂ ಏಕೆ ಪ್ರಶ್ನಿಸುವುದಿಲ್ಲ?’ ಎಂದು ಕೇಳುವ ಮೂಲಕ ಭಾಷಾ ಚಳವಳಿಯಲ್ಲಿ ಧರ್ಮವನ್ನು ಸಂಶೋಧಿಸಿರುವ ಕೀರ್ತಿ ಅವರದಾಗಿದೆ. ಈ ಈರ್ವರು ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿದಾಗ ಹೊಳೆಯುವುದು– ಇವು ವ್ಯಕ್ತಿಗತ ಪ್ರತಿಕ್ರಿಯೆಗಳಷ್ಟೇ ಅಲ್ಲ, ಒಂದು ಸಮುದಾಯದ ಭಾವನೆಗಳ ಅಭಿವ್ಯಕ್ತಿ ಎನ್ನುವ ಸರಳ ಸತ್ಯ.

ಕನ್ನಡ ಚಳವಳಿಯ ಇತಿಹಾಸದ ಪುಟಗಳನ್ನು ತೆರೆದುನೋಡಿದರೆ– ಪುಂಡರು, ರೋಲ್‌ಕಾಲ್‌ ಹೋರಾಟಗಾರರೆನ್ನುವ ವಿಶೇಷಣಗಳು ಚಳವಳಿಕಾರರಿಗೆ ಹೊಸವೇನಲ್ಲ. ಹೋರಾಟಗಾರರನ್ನು ಕಲ್ಲು ಹೊಡೆಯುವವರೆಂದು, ವಸೂಲಿವೀರರೆಂದು ಜರೆದವರು 60–70ರ ದಶಕದಲ್ಲೂ ಇದ್ದರು, ಈಗಲೂ ಇದ್ದಾರೆ. ಲಂಕೇಶ್‌ ಅಂಥವರೇ ‘ಉಟ್ಟು ಓರಾಟಗಾರ’ ಎನ್ನುವ ಪದ ಬಳಸಿದರು. ಕನ್ನಡದ ಅಸ್ಮಿತೆಯನ್ನೇ ಪ್ರಶ್ನಿಸುವಂತೆ ರಾಜಾಜಿ ಅವರು ಮಾತನಾಡಿದಾಗ, ಅವರ ಹೇಳಿಕೆಯನ್ನು ಡಿ.ವಿ. ಗುಂಡಪ್ಪ ಅವರಂತಹವರೂ ಬೆಂಬಲಿಸಿದ್ದರು. ಆಗಲೇ, ‘ಕನ್ನಡ ಚಳವಳಿಗೆ ಸಂಬಂಧಿಸಿದಂತೆ ಒಂದು ಜನಾಂಗವು ಜಾತಿಮೋಹದಿಂದ ತಟಸ್ಥವಾಗಿ ಉಳಿದಿದೆ’ ಎನ್ನುವ ಆರೋಪ ಕೇಳಿಬಂದಿದ್ದು.

ಕನ್ನಡದ ಪ್ರಾತಃಸ್ಮರಣೀಯರ ಸಾಲಿಗೆ ಸೇರಿದ ಹಿರಿಯರೇ ಜಾತಿಮೋಹದ ಕಾರಣದಿಂದಾಗಿ ಕನ್ನಡ ಚಳವಳಿಯ ಬಗ್ಗೆ ಅಪಸ್ವರಗಳನ್ನೆತ್ತಿದ ಪರಂಪರೆ ಈಗಲೂ ಜೀವಂತವಾಗಿದೆ; ಜಾತಿಯ ಜೊತೆಗೆ ಧರ್ಮ–ರಾಜಕಾರಣವನ್ನೂ ಕಸಿ ಮಾಡಿಕೊಂಡಿದೆ. ಅಂಥ ಪರಂಪರೆಯ ಭಾಗವಾಗಿಯೇ ಈ ಹೊತ್ತಿನ ತೇಜಸ್ವಿ ಸೂರ್ಯ ಹಾಗೂ ಸದಾನಂದಗೌಡರನ್ನು ನೋಡಬೇಕಾಗಿದೆ. ಆದರೆ, ಕನ್ನಡ ಚಳವಳಿಯನ್ನು ಅನುಮಾನದಿಂದ ನೋಡಿದ ಡಿವಿಜಿ ಅಥವಾ ಜಿ.ಪಿ. ರಾಜರತ್ನಂ ಅಂಥವರು ಕನ್ನಡವನ್ನು ಕಟ್ಟುವ ರಚನಾತ್ಮಕ ಕೆಲಸವನ್ನು ತಮ್ಮದೇ ಮತ್ತೊಂದು ನೆಲೆಯಲ್ಲಿ ಮಾಡಿದರು. ಆ ಕಾರಣದಿಂದಲೇ ಅಂಥ ಮಹನೀಯರನ್ನು ಅವರ ಕೊರತೆಗಳ ನಡುವೆಯೂ ‘ಕನ್ನಡದ ಹೆಮ್ಮೆ’ಯ ರೂಪದಲ್ಲಿ ನಾಡು ನೆನಪಿಸಿಕೊಳ್ಳುವುದು. ದುರದೃಷ್ಟವೆಂದರೆ, ಪ್ರಸ್ತುತ ಕನ್ನಡ ಚಳವಳಿಯ ಬಗ್ಗೆ ಅಪಸ್ವರ ಎತ್ತುತ್ತಿರುವವರಿಗೆ ಜಾತಿ–ಧರ್ಮ–ಅಧಿಕಾರದ ಅಮಲಿನಲ್ಲಿ ಬೇರೆಲ್ಲವೂ ನಗಣ್ಯವಾಗಿ ಕಾಣಿಸುತ್ತಿರುವುದು. ಇವರುಗಳೆಲ್ಲ ಕನ್ನಡದ ಪಾಲಿಗೆ ಹುರುಡು ಹೆಮ್ಮೆಯಲ್ಲ– ಬರಡು ಎಮ್ಮೆಗಳು.

ADVERTISEMENT

ಕನ್ನಡ ಚಳವಳಿಕಾರರು ಪರಭಾಷೆಯ ನಾಮಫಲಕಗಳನ್ನು ಇಳಿಸುವುದು ಇಲ್ಲವೇ ಡಾಂಬರು ಬಳಿಯುವುದು ಬೆಂಗಳೂರಿಗೆ ಹೊಸತೇನಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಎನ್ನುವ ನೀತಿಯನ್ನು ನೆಚ್ಚಿರುವ ನಾಮ ಫಲಕಗಳ ಡಾಂಬರೀಕರಣದ ಕಾಮಗಾರಿ ಆರು ದಶಕಗಳಿಂದಲೂ ಜೀವಂತವಾಗಿಯೇ ಇದೆ. ಆ ಕಾಮಗಾರಿಯಒಂದು ಚಟುವಟಿಕೆ ಭಾಗವಾಗಿಯೇ ಹಿಂದಿ ಕಟೌಟ್‌ ಇಳಿಸಿದ ಘಟನೆಯನ್ನು ನೋಡ ಬೇಕಾಗಿದೆ. ಆ ಸಣ್ಣ ಘಟನೆಗೆ ಪ್ರತಿಭಟನೆ ಸೂಚಿಸುವ ಮೂಲಕ ಅದನ್ನು ರಾಜಕೀಯಗೊಳಿಸುವ ಕೆಲಸವನ್ನು ಮಾಡಿದ ಕೀರ್ತಿ ಸಂಸದ–ಸಚಿವ ಜೋಡಿಗೇ ಸಲ್ಲಬೇಕು. ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರದ ಸಂಚುಗಾರಿಕೆಯ ಭಾಗವಾಗಿಯೂ ಇವರುಗಳ ಸೊಲ್ಲನ್ನು ಗಮನಿಸಬೇಕು. ‘ಉತ್ತರದ ಕಾಶಿಯಲ್ಲಿ ಕತ್ತೆಮಿಂದೈತರಲು/ ದಕ್ಷಿಣದ ದೇಶಕದು ಕುದುರೆಯಹುದೆ?’ ಎಂದು ಕುವೆಂಪು ಕುಟುಕಿದ್ದು ಇಂಥ ಮಳ್ಳರನ್ನೇ. ‘ಧಣಿಯಾಗಬೇಕಿದ್ದ ಕನ್ನಡಿಗ ಇಲ್ಲಿ ಕೂಲಿಗೂ ಉತ್ತರ ಭಾರತದ ಧಣಿಗಳ ಕೃಪೆಗಾಗಿ ಕಾಯುವ ಪರಿಸ್ಥಿತಿಯಿದೆ’ ಎಂದು ಮ. ರಾಮಮೂರ್ತಿ ಅವರ ದಶಕಗಳ ಹಿಂದಿನ ಉದ್ಗಾರ ಇಂದು ಹೆಚ್ಚು ಸತ್ಯವಾಗಿದೆ.

ಹಿಂದಿಯ ಕಟೌಟ್‌ ಇಳಿಸಿದವರನ್ನು ಕಿಡಿಗೇಡಿಗಳು ಎನ್ನುವ ಸದಾನಂದಗೌಡರು, ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವವರಿಗೆ ಏನನ್ನಬೇಕು ಎನ್ನುವ ಪ್ರಶ್ನೆಗೆ ಮೊದಲು ಉತ್ತರಿಸಬೇಕಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಇಲ್ಲಿ ಧರ್ಮಕ್ಕೆ ಸಾಧ್ಯವಾಗದ ಬಹುತ್ವ, ಭಾಷೆಯಿಂದ–ಭಾಷೆಗಳಿಂದ ಸಾಧ್ಯವಾಗಿದೆ. ಭಾಷೆಗಳ ಸೊಕ್ಕಿನ ವಿಷಯ ಬಂದಾಗ ಕನ್ನಡಿಗರು ಪ್ರತಿನುಡಿದಿದ್ದಾರೆಯೇ ವಿನಾ, ಭಾಷೆಗಳ ಸಾಮರಸ್ಯದ ನಿಟ್ಟಿನಲ್ಲಿ ತಮ್ಮ ಸಹೃದಯತೆಯಿಂದ ಭಾರತಕ್ಕೇ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಚಳವಳಿಕಾರರನ್ನು ಭಾಷಾಂಧರು ಎನ್ನುವುದಾದರೆ– ಧರ್ಮಾಂಧತೆಗಿಂತಲೂ ಭಾಷಾಂಧತೆಯೇ ಭಾರತೀಯ ಸಂಸ್ಕೃತಿಗೆ, ಗಣತಂತ್ರಕ್ಕೆ ಹೆಚ್ಚು ಸಹನೀಯವಾದುದು ಎನ್ನಬಹುದು.

ಕನ್ನಡ ಚಳವಳಿಗೀಗ ಬಿಕ್ಕಟ್ಟಿನ ಕಾಲ. ಕನ್ನಡದ ಹಿತಾಸಕ್ತಿ ಕಾಯಬೇಕಾದ ಪ್ರಜಾಪ್ರತಿನಿಧಿಗಳೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಕನ್ನಡ ಚಳವಳಿಯ ನಾಯಕರೆನ್ನಿಸಿಕೊಂಡ ಕೆಲವರು ವಿಸ್ಮೃತಿಯಲ್ಲಿದ್ದಾರೆ. ಈವರೆಗೂ ಅವರ ಮೈಮನಗಳನ್ನು ಬೆಚ್ಚಗಾಗಿಸುತ್ತಿದ್ದ ‘ಕನ್ನಡಪ್ರೇಮ’ದ ಜಾಗದಲ್ಲೀಗ ‘ದೇಶಭಕ್ತಿ’ ಬಂದು ಕೂತಿದೆ. ‘ದೇಶಭಕ್ತಿ’ಯ ಜ್ವರದ ಎದುರು ‘ಕನ್ನಡ ಕಳಕಳಿ’ ಕಾವು ಕಳೆದುಕೊಂಡಂತಿದೆ. ಕೆಲವು ಚಳವಳಿಕಾರರ ಈ ಬದಲಾದ ನಿಷ್ಠೆ ಕೂಡ ತೇಜಸ್ವಿ ಸೂರ್ಯರಂಥವರು ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆಯ ಬಗ್ಗೆ ಪಾಠ ಮಾಡಲಿಕ್ಕೆ ಪ್ರೇರಣೆಯಾಗಿದೆ. ಕರ್ನಾಟಕದಲ್ಲಿ ಬೆಳಗೊಳ–ಮೂಡುಬಿದಿರೆಯ ಜೈನಪರಂಪರೆಯೊಂದಿಗೆ ಚಿಕ್ಕಪೇಟೆ ಜೈನಪರಂಪರೆಯೂ ಇದೆ. ಕನ್ನಡ ಸಾಹಿತ್ಯಕ್ಕೆ ಪುಷ್ಟಿಯಾಗಿ ಪರಿಣಮಿಸಿದ ಕನ್ನಡಿಗರೇ ಆದ ಜೈನರು ಬೇರೆ, ಈಗ ಹಿಂದಿಯ ಹೆಸರಿನಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿರುವ ಉತ್ತರ ಭಾರತದ ವ್ಯಾಪಾರಿಜೈನರು ಬೇರೆ ಎನ್ನುವ ಪಾಠವನ್ನು ಯುವಸಂಸದರಿಗೆ ಯಾರಾದರೂ ಹೇಳಬೇಕಾಗಿದೆ.

ಕನ್ನಡ ಚಳವಳಿಯನ್ನು ಸಹಾನುಭೂತಿಯಿಂದ ನೋಡುವುದೆಂದರೆ, ಕನ್ನಡದ ಹೆಸರಿನಲ್ಲಿ ನಡೆಯುವ ಯಾವುದೇ ಬಗೆಯ ಪುಂಡಾಟಿಕೆ–ರೋಲ್‌ಕಾಲ್‌ಗಳ ಸಮರ್ಥನೆಯಲ್ಲ. ಕನ್ನಡವನ್ನು ಕೆಲವರು ‘ಚಂದಾ’ಭಾಷೆಯನ್ನಾಗಿ ಬಳಸಿಕೊಂಡಿರುವುದೂ ಸುಳ್ಳಲ್ಲ. ಆದರೆ, ಯಾರೋ ಕೆಲವರ ಕಾರಣದಿಂದಾಗಿ ಇಡೀ ಕನ್ನಡ ಚಳವಳಿಯನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಹೌದು, ಕನ್ನಡ ಚಳವಳಿ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ, ಗಲಭೆಗಳು ಉಂಟಾಗಿವೆ. ಇಂಥ ಸಂಘರ್ಷವು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲೂ ಇತ್ತು. ತಂತಮ್ಮ ಮನೆ–ಮಠಗಳ ಸ್ವಾಸ್ಥ್ಯ ನೋಡಿಕೊಂಡ ಪರಂಪರೆಗೆ ಸೇರಿದವರಿಗೆ ಸ್ವಾತಂತ್ರ್ಯ ಚಳವಳಿಯೆನ್ನುವುದು ದಂಗೆ–ಗದ್ದಲವಾಗಿ ಕಾಣಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕನ್ನಡ ಚಳವಳಿಕಾರರನ್ನು ಪುಂಡರು ಎಂದವರಿಗೆ ಕುವೆಂಪು ಎಂದೋ ಉತ್ತರ ನೀಡಿದ್ದಾರೆ: ‘ಕಲ್ಲೋ ಸೊಲ್ಲೋ ಕನ್ನಡದ ಉಳಿವಿಗೆ ಎಲ್ಲವೂ ಬೇಕು’. ಹಾಗೆ ನೋಡಿದರೆ, ಕಿಡಿಗೇಡಿತನ ಇರುವುದು ಕನ್ನಡ ಚಳವಳಿಗಾರರನ್ನು ಕಿಡಿಗೇಡಿಗಳು ಎಂದಿರುವ ಸದಾನಂದಗೌಡರ ಮಾತಿನಲ್ಲಿ; ಮತಿಗೇಡಿತನ ಇರುವುದು ಚಳವಳಿಕಾರರನ್ನು ಖಂಡಿಸುತ್ತ, ಜೈನರ ಬಗ್ಗೆ ಹುಸಿಮರುಕ ವ್ಯಕ್ತಪಡಿಸುವ ತೇಜಸ್ವಿ ಸೂರ್ಯ ವರ್ತನೆಯಲ್ಲಿ. ಕನ್ನಡ–ಕರ್ನಾಟಕವನ್ನು ಮಂತ್ರ–ಶಕ್ತಿ ಎಂದು ಭಾವಿಸುವ ಕುವೆಂಪು, ‘ತಾಯಿ ಕಣಾ! ದೇವಿ ಕಣಾ!/ ಬೆಂಕಿ ಕಣಾ! ಸಿಡಿಲು ಕಣಾ!/ ಕಾವ ಕೊಲುವ ಒಲವ ಬಲವ/ ಪಡೆದ ಚಲದ ಚಂಡಿಕಣಾ!’ ಎಂದೂ ಉದ್ಗರಿ
ಸಿದ್ದಾರೆ. ಕನ್ನಡದ ಹೆಸರಿನಲ್ಲಿ ಈವರೆಗೆ ಒಲವು ಬಲವನ್ನಷ್ಟೇ ಪಡೆದಿರುವವರು ಬದಲಾಗದೇ ಹೋದಲ್ಲಿ, ಕಾವು–ಬೆಂಕಿ–ಸಿಡಿಲಿನ ಅನುಭವವನ್ನೂ ಪಡೆಯುವ ಸಂದರ್ಭ ಒದಗಿದರೂ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.