ADVERTISEMENT

ಕಸ್ತೂರಬಾ ‘ಭಾರತರತ್ನ’ ಯಾಕಾಗಬಾರದು?

‘ಗಾಂಧಿ–150’ರ ಜೊತೆಯಲ್ಲೇ ‘ಕಸ್ತೂರಬಾ–150’ರ ಸ್ಮರಣೆಯೂ ನಡೆಯಬೇಕು

ಚ.ಹ.ರಘುನಾಥ
Published 22 ಅಕ್ಟೋಬರ್ 2019, 1:25 IST
Last Updated 22 ಅಕ್ಟೋಬರ್ 2019, 1:25 IST
   

ಮಹಾತ್ಮ ಗಾಂಧಿ ಅವರ 150ನೇ ಜಯಂತಿ ವರ್ಷದಲ್ಲಿ ನೆನಪಿಸಿಕೊಳ್ಳಲೇಬೇಕಾದ ಮುಖ್ಯ ಹೆಸರು ಕಸ್ತೂರಬಾ ಅವರದು. ಮೋಹನದಾಸ ಗಾಂಧಿ ಎನ್ನುವ ವ್ಯಕ್ತಿಮಹಾತ್ಮನಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ
ಮಹತ್ವದ ‍ಪಾತ್ರ ವಹಿಸಿದ ವ್ಯಕ್ತಿ ಕಸ್ತೂರಬಾ. ಸ್ವಾತಂತ್ರ್ಯಚಳವಳಿಯಲ್ಲಿ ವಹಿಸಿದ ಪಾತ್ರ ಹಾಗೂ ವ್ಯಕ್ತಿಯಾಗಿ
ಹೊಂದಿದ್ದ ಅನನ್ಯತೆ ಕೂಡ ಕಸ್ತೂರ ಅವರ ಅಸಾಮಾನ್ಯತೆಯನ್ನು ಸೂಚಿಸುವಂತಿವೆ. ಅರ್ಧನಾರೀಶ್ವರ
ತತ್ತ್ವ ಸಾಕಾರಗೊಂಡ ಅಪರೂಪದ ಉದಾಹರಣೆಗಳಲ್ಲಿ ಗಾಂಧಿ–ಕಸ್ತೂರಬಾ ಅವರದೂ ಒಂದು. ಆ ಕಾರಣ
ದಿಂದಲೇ ಗಾಂಧಿಯ ಕುರಿತ ಮಾತೆಂದರೆ ಅದು ಅವರ ಪತ್ನಿಯ ಕುರಿತ ಮಾತೂ, ಕಸ್ತೂರರ ಬಗ್ಗೆ ಮಾತನಾಡುವುದು ಗಾಂಧಿಯ ಕುರಿತ ಸ್ಮರಣೆಯೂ ಹೌದು.

ಗುಜರಾತಿನ ಪೋರಬಂದರಿನ ಶ್ರೀಮಂತ ಕುಟುಂಬಕ್ಕೆ ಸೇರಿದ ಕಸ್ತೂರಬಾ, ಮದುವೆಯ ನಂತರ ಎದುರಿಸಿದ್ದು ಸಾಲು ಸಾಲು ಅಗ್ನಿಪರೀಕ್ಷೆಗಳನ್ನು. ರಮ್ಯ ಕನಸುಗಳೊಂದಿಗೆ ಗಂಡನ ಮನೆ ಸೇರಿದ ಆಕೆ ಆರಂಭದಲ್ಲೇ ಗಂಡನ ಹಟಮಾರಿತನ ಹಾಗೂ ಚಂಚಲ ವ್ಯಕ್ತಿತ್ವದ ಪರಿಣಾಮವನ್ನು ಎದುರಿಸಬೇಕಾಯಿತು. ಪೋಕರಿಯ ಸಂಗ ಮಾಡಿದ ಗಂಡನ ಸಾಹಸಕೃತ್ಯಗಳನ್ನು ಮೌನದಲ್ಲೇ ಸಹಿಸಿಕೊಳ್ಳಬೇಕಾಯಿತು.

ಕಸ್ತೂರಬಾಗೆ ಜೀವನದ ಮೊದಲ ಅಗ್ನಿಪರೀಕ್ಷೆ ಎದುರಾದುದು ದಕ್ಷಿಣ ಆಫ್ರಿಕಾದಲ್ಲಿ. ತುಂಬು ಕುಟುಂಬದ ಗದ್ದಲದಿಂದ ಪಾರಾಗಿ, ಗಂಡನೊಟ್ಟಿಗೆ ಸ್ವತಂತ್ರವಾಗಿ ಬಾಳುವ ಕನಸಿನೊಂದಿಗೆ ಸಮುದ್ರ ದಾಟಿದ ಹೆಣ್ಣುಮಗಳಿಗೆ, ಅಲ್ಲಿನ ಮಣ್ಣು ಮೆಟ್ಟುವ ಸಂದರ್ಭದಲ್ಲಿ ದೊರೆತ ಸ್ವಾಗತ ಗಂಡನ ಮೇಲೆ ನಡೆದ ಕೊಲೆ ಪ್ರಯತ್ನದ ರೂಪದಲ್ಲಿತ್ತು. ಆ ಆಘಾತವನ್ನು ಕಸ್ತೂರಬಾ ಅಪೂರ್ವ ಸಂಯಮ–ಸಾವಧಾನದಿಂದ ಎದುರಿಸಿದ್ದು ಮಾತ್ರವಲ್ಲದೆ, ನಂತರದ ದಿನಗಳಲ್ಲಿ ತೋರಿದ ಪ್ರೌಢಿಮೆ– ದಿಟ್ಟತನ ವಿಶೇಷವಾದುದು. ಕರ್ಮಠ ಕುಟುಂಬದಲ್ಲಿ ಬೆಳೆದುಬಂದ ಹೆಣ್ಣುಮಗಳು ಭಿನ್ನ ಧರ್ಮ–ಸಂಸ್ಕೃತಿಯ ಜನರೊಂದಿಗೆ ಒಂದೇ ಮನೆಯಲ್ಲಿ ವಾಸಿಸಿದ್ದು ಎಲ್ಲರಿಗೂ ಸಾಧ್ಯವಾಗುವಂತಹ ಸಂಗತಿಯೇನಲ್ಲ.

ADVERTISEMENT

ದಕ್ಷಿಣ ಆಫ್ರಿಕಾದಲ್ಲಿನ ದಿನಗಳು ಗಾಂಧೀಜಿಯ ಬದುಕಿನ ಸಂಕ್ರಮಣ ಕಾಲ. ಆಗ ಪತಿಯ ಆದರ್ಶ–ನಂಬಿಕೆಗಳಿಗೆ ಮೊದಲ ಪ್ರಯೋಗಪಶುವಿನಂತೆ ಒದಗಿಬಂದವರು ಕಸ್ತೂರ. ಇಡೀ ಮಾನವಕುಲಕ್ಕೆ ಆದರ್ಶ
ಪ್ರಾಯನಾದರೂ, ಹೆಂಡತಿಗೆ ಸಂಬಂಧಿಸಿದಂತೆ ಗಾಂಧೀಜಿ ಅನೇಕ ಸಂದರ್ಭಗಳಲ್ಲಿ ‘ಟಿಪಿಕಲ್‌ ಗಂಡಸು’. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅತಿಥಿಯ ಮೂತ್ರದ ಮಡಕೆಯನ್ನು ಸ್ವಚ್ಛಗೊಳಿಸಲು ಹಿಂದುಮುಂದು ನೋಡಿದ ಪತ್ನಿಯನ್ನು ಹೊರದಬ್ಬಲು ಮುಂದಾದ ಕಾಠಿಣ್ಯ ಅವರ ವ್ಯಕ್ತಿತ್ವದ್ದು. ಅಂಥ ವ್ಯಕ್ತಿಯನ್ನು ಸಂಭಾಳಿಸಿಕೊಂಡು ಬದುಕನ್ನು ಕಟ್ಟಿಕೊಂಡಿದ್ದು ಕಸ್ತೂರ ಅವರ ಗಟ್ಟಿತನಕ್ಕೆ ಸಾಕ್ಷಿ. ಪ್ಲೇಗ್‌ ತಗುಲಿದ ಕಾರ್ಮಿಕರ ಶುಶ್ರೂಷೆಯಲ್ಲಿ ಗಂಡ ತೊಡಗಿದರೆ, ಹೆಂಡತಿ ಕೂಲಿಕಾರರು ಇದ್ದಲ್ಲಿಗೆ ಹೋಗಿ ಅವರಿಗೆ ಸ್ವಚ್ಛತೆಯ ಅರಿವು ಹೇಳಿಕೊಟ್ಟಳು. ಭಾರತೀಯರ ವಿವಾಹಗಳನ್ನು ಅಕ್ರಮ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಘೋಷಿಸಿದಾಗ ಗಂಡನ ‘ಸತ್ಯಾಗ್ರಹ’ ಮಾರ್ಗವನ್ನು ಬಾ ತಾವೂ ಅನುಸರಿಸಿದರು.

‘ಫೀನಿಕ್ಸ್‌’ನಲ್ಲಿನ ವಾಸ್ತವ್ಯ ಕಸ್ತೂರ ಅವರಲ್ಲಿ ನಾಯಕತ್ವದ ಗುಣಗಳಿಗೆ ಹೊಳಪು ನೀಡಿತು. ಗಂಡನ ಅನುಪಸ್ಥಿತಿಯಲ್ಲಿ ದೊಡ್ಡ ಬಳಗವನ್ನು ಸಂಭಾಳಿಸುವುದರ ಜೊತೆಗೆ, ಗಾಂಧಿಯ ತತ್ವಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸ್ಥಿತಿಗತಿ ಸುಧಾರಣೆಗೆ ಬ್ಯಾರಿಸ್ಟರ್‌ ಗಾಂಧಿ ನೀಡಿದ ಕೊಡುಗೆಯಷ್ಟೇ ಅನಕ್ಷರಸ್ಥ ಗೃಹಿಣಿ ಕಸ್ತೂರ ಅವರು ನೀಡಿದ ಕೊಡುಗೆಯೂ ಮಹತ್ವದ್ದು.

ಬ್ಯಾರಿಸ್ಟರ್‌ ಪದವಿ ಪಡೆಯಲಿಕ್ಕಾಗಿ ಇಂಗ್ಲೆಂಡ್‌ಗೆ ಹೊರಟು ನಿಂತ ಗಾಂಧೀಜಿಗೆ ಹಣಕಾಸಿನ ವ್ಯವಸ್ಥೆ ಎಲ್ಲಿಯೂ ಒದಗದೆ ಹೋದಾಗ, ಮನೆಯವರ ಕಣ್ಣು ಬಿದ್ದುದು ಕಸ್ತೂರಬಾ ಒಡವೆಗಳ ಮೇಲೆ. ಗಂಡ ಇಂಗ್ಲೆಂಡ್‌ಗೆ ಹೋಗುವುದು ಇಷ್ಟವಿಲ್ಲದಿದ್ದರೂ ಕಸ್ತೂರ ಮೌನದಿಂದಲೇ ಒಡವೆಗಳನ್ನು ಕೊಟ್ಟರು. ಇಂಥ ಹೆಣ್ಣುಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಉಡುಗೊರೆಯಾಗಿ ದೊರೆತ ಒಡವೆಗಳನ್ನು ಉಳಿಸಿಕೊಳ್ಳಲೂ ಗಂಡ ಒಪ್ಪಲಿಲ್ಲ. ಆ ವೇಳೆಗಾಗಲೇ ಗಾಂಧೀಜಿ ‘ಅಪರಿಗ್ರಹ’ ತತ್ತ್ವದ ಮೊರೆಹೋಗಿದ್ದರು. ಗಂಡನೇ ತನ್ನ ಪಾಲಿನ ನಿಜವಾದ ಒಡವೆ ಎನ್ನುವ ಮನಃಸ್ಥಿತಿಯನ್ನು ಹೊಂದುವ ಮುನ್ನ ಕಸ್ತೂರಬಾ ಸಾಕಷ್ಟು ನಿರಾಶೆಗಳನ್ನು ಅನುಭವಿಸಬೇಕಾಯಿತು. ಒಂದು ದಿನ ‘ಇನ್ನು ಮುಂದೆ ಬ್ರಹ್ಮಚರ್ಯ ಅನುಸರಿಸುತ್ತೇನೆ’ ಎಂದು ಗಂಡ ಇದ್ದಕ್ಕಿದ್ದಂತೆ ಹೇಳಿದಾಗ ಆಕೆ ತಣ್ಣನೆ ದನಿಯಲ್ಲಿ ಹೇಳಿದ್ದು – ‘ನನ್ನ ಆಕ್ಷೇಪವೇನಿಲ್ಲ’.

ಗಂಡನಿಗೆ ಸಹವರ್ತಿಯಾಗಿ ನಡೆಯುವ ಹಾದಿ ಕಸ್ತೂರಬಾ ಅವರಿಗೆ ಸುಲಭಸಾಧ್ಯವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಿಂದ ಮೊದಲ ಬಾರಿಗೆ ಹಿಂದಿರುಗುವ ವೇಳೆಗೆ ಆಕೆಯ ತಂದೆ–ತಾಯಿ ನಿಧನರಾಗಿದ್ದರು. ಎರಡನೇ ಬಾರಿ ಭಾರತಕ್ಕೆ ಬರುವ ವೇಳೆಗೆ ಕುಟುಂಬದ ಆಧಾರಸ್ತಂಭಗಳೆಲ್ಲ ಉರುಳಿಬಿದ್ದಿದ್ದವು. ಮಕ್ಕಳಿಂದ ಕೂಡ ಆಕೆ ನೆಮ್ಮದಿ ಅನುಭವಿಸಿದ್ದು ಅಷ್ಟಕ್ಕಷ್ಟೇ. ಹಿರಿಯಮಗ ಹರಿಲಾಲ್‌, ಅಪ್ಪನನ್ನು ವಿರೋಧಿಸಿಕೊಂಡೇ ಬೆಳೆದ. ಉಳಿದ ಮೂವರು ಗಂಡುಮಕ್ಕಳು ಸ್ವಾತಂತ್ರ್ಯ ಚಳವಳಿಯ ಕಷ್ಟಗಳನ್ನು ಅನುಭವಿಸಬೇಕಾಯಿತು.

ಗಾಂಧೀಜಿಯೊಂದಿಗಿನ ಸುಮಾರು ಆರು ದಶಕಗಳ ಒಡನಾಟದಲ್ಲಿ ಕಸ್ತೂರಬಾ ಅನೇಕ ಸಲ ಸಾವಿನಂಚಿಗೆ ಹೋಗಿಬಂದರು. ಹಾಗೆಯೇ ಸಾವಿನಂಚಿಗೆ ಸರಿದಿದ್ದ ತಮ್ಮ ಪತಿಯನ್ನು ರಕ್ಷಿಸಿಕೊಂಡರು. ದೇಶದ ಸ್ವಾತಂತ್ರ್ಯ ಯಜ್ಞಕ್ಕೆ ಇಡೀ ಕುಟುಂಬವೇ ಒಡ್ಡಿಕೊಂಡಾಗ ಅದನ್ನು ಬೆಂಬಲಿಸಿದರು. ಗಂಡ ಜೈಲಿನಲ್ಲಿದ್ದಾಗ ತಾವೇ ಚಳವಳಿಯನ್ನು ಸಂಘಟಿಸಿದರು, ಜೈಲು ಶಿಕ್ಷೆ ಅನುಭವಿಸಿದರು. ಕೊನೆಗೆ, ಜೈಲಿನಲ್ಲೇ ಸಾವು ಕಂಡರು.

ಭಾರತೀಯ ಸಮಾಜ ಹೆಣ್ತನಕ್ಕೆ ಆರೋಪಿಸಿರುವ ಎಲ್ಲ ಆದರ್ಶಗಳ ಮೂರ್ತರೂಪದಂತೆ ಬದುಕಿದವರು ಕಸ್ತೂರಬಾ. ಗಂಡ ಅಕಾರಣವಾಗಿ ಸಿಟ್ಟಾದಾಗ ಸಹಿಸಿಕೊಂಡರು. ಆದರೆ, ಗಂಡ ಹೇಳಿದ್ದು ಸರಿಯಲ್ಲ
ವೆನ್ನಿಸಿದಾಗ ‘ಅದು ಸರಿಯಲ್ಲ’ ಎಂದು ಹೇಳಲೂ ಹಿಂಜರಿಯಲಿಲ್ಲ. ‘ನೀನು ದೊಡ್ಡ ಮಹಾತ್ಮ. ಆದರೆ
ನಿನ್ನನ್ನು ಮಹಾತ್ಮನನ್ನಾಗಿ ಮಾಡಿದ್ದು ನನ್ನ ತಾಯಿ’ ಎಂದು ಗಾಂಧಿಯವರ ಮುಖಕ್ಕೆ ರಾಚಿದಂತೆ ಒಮ್ಮೆ
ಹರಿಲಾಲ್ ಹೇಳಿದ್ದ. ಆ ಸತ್ಯ ಗಾಂಧೀಜಿಗೂ ತಿಳಿದಿತ್ತು. ಪತ್ನಿಯಿಲ್ಲದೆ ತಾನು ಅಪೂರ್ಣ ಎನ್ನುವುದೂ,
ತಾನು ಪ್ರತಿಪಾದಿಸಿದ ಹಾಗೂ ಬದುಕಿದ ಸತ್ಯ– ಅಹಿಂಸೆಗಳು ತನ್ನ ಪತ್ನಿಯ ಜೀವನ ವಿಧಾನವೇ ಆಗಿದ್ದವು ಎನ್ನುವುದು ಅವರಿಗೆ ತಿಳಿದಿತ್ತು. ಬಹುಶಃ, ಗಾಂಧಿ ಅವರನ್ನು ಯಾರಾದರೂ ಅವರ ಅಸ್ತ್ರಗಳ ಮೂಲಕವೇ ಮಣಿಸಿದ್ದರೆ ಅದು ಕಸ್ತೂರಬಾ ಮಾತ್ರ.

ಗಾಂಧಿ ಅವರ 150ನೇ ಜನ್ಮದಿನದ ಸಂಭ್ರಮವನ್ನು ಸ್ಮರಣೀಯವಾಗಿಸಲು ದೇಶದೆಲ್ಲೆಡೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ಕಸ್ತೂರಬಾ ಅವರ 150ನೇ ಜನ್ಮವರ್ಷವೂ ಹೌದು. ಕಸ್ತೂರ ಅವರ
ವ್ಯಕ್ತಿತ್ವ–ಸಾಧನೆಯನ್ನು ನೆನಪಿಸಿಕೊಳ್ಳದೇ ಹೋದರೆ ಗಾಂಧೀಸ್ಮರಣೆ ಅಪೂರ್ಣವೇ ಸರಿ. ‘ಭಾರತರತ್ನ’
ಪ್ರಶಸ್ತಿಗೆ ಅರ್ಹರಾದ ‘ವೀರ’ರ ಹೆಸರುಗಳನ್ನು ಚಾಲ್ತಿಗೆ ಬಿಡುತ್ತಿರುವ ಸಂದರ್ಭ ಇದು. ಈ ನಿಟ್ಟಿನಲ್ಲಿ
ನಾವು ಮೊದಲಿಗೆ ನೆನಪಿಸಿಕೊಳ್ಳ ಬೇಕಾದುದು ಕಸ್ತೂರಬಾ ಅವರನ್ನು. ಆ ಮಹಾನ್‌ ಚೇತನಕ್ಕೆ ‘ಭಾರತರತ್ನ’ ನೀಡುವುದು ಸಾಧ್ಯವಾದರೆ, ಅದು ಮಹಾತ್ಮನ 150ನೇ ಜಯಂತಿಯನ್ನು ಅವಿಸ್ಮರಣೀಯ ಗೊಳಿಸಬಲ್ಲದು ಹಾಗೂ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಸ್ತ್ರೀಶಕ್ತಿ ನೀಡಿದ ಕೊಡುಗೆಯನ್ನು ಗೌರವಿಸಿ
ದಂತಾಗುವುದು. ಗಾಂಧೀಜಿಯಂತೂ ಭಾರತರತ್ನ ಪುರಸ್ಕಾರವನ್ನು ಮೀರಿಹೋದರು; ಕನಿಷ್ಠ ಅವರ ಪತ್ನಿ
ಗಾದರೂ ಆ ಗೌರವ ಸಲ್ಲಬೇಕಿದೆ. ‘ಭಾರತರತ್ನ’ ಪುರಸ್ಕಾರಸೇರಿದಂತೆ ದೇಶಭಕ್ತಿಯೊಂದಿಗೆ ತಳಕು ಹಾಕಿಕೊಂಡ ಅನೇಕ ಸಂಗತಿಗಳಿಗೆ ಪ್ರಸ್ತುತ ಜರೂರಾಗಿ ಆಗಬೇಕಿರುವುದು ಮಾತೃತ್ವದ ಸ್ಪರ್ಶವೇ ಹೊರತು ಸಿದ್ಧಾಂತದ ಲೇಪನವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.