ಸಂವಿಧಾನದ ಅಮೃತ ಮಹೋತ್ಸವ ಆಚರಣೆಯ ಆಸುಪಾಸಿನಲ್ಲಿ ಎರಡು ಘೋರ ವಿನೋದಗಳಿಗೆ ಈ ದೇಶ ಸಾಕ್ಷಿಯಾಗಿದೆ. ಒಂದು, ‘ಅಖಂಡ ಹಿಂದೂರಾಷ್ಟ್ರ’ಕ್ಕಾಗಿ 501 ಪುಟಗಳ ‘ಸಂವಿಧಾನ’ ಸಿದ್ಧಗೊಂಡಿರುವ ಸುದ್ದಿ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಹೊರಬಿದ್ದಿರುವುದು. ಎರಡನೆಯದು, ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆದ 2024ರ ಜನವರಿ 22 ಭಾರತದ ನೈಜ ಸ್ವಾತಂತ್ರ್ಯ ದಿನ ಎನ್ನುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೊಳಹು.
ಹಿಂದೂ ರಾಷ್ಟ್ರ ಸಂವಿಧಾನದ ಹೇಳಿಕೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಸಂವಿಧಾನಕ್ಕೆ ಎಸಗಿರುವ ಅಪಚಾರ. ಒಂದು ವರ್ಷದ ಹಿಂದಷ್ಟೇ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳುವುದು, ಭಾರತದ ಸ್ವಾತಂತ್ರ್ಯ ಚಳವಳಿಗೆ ಹಾಗೂ ಆ ಚಳವಳಿಯಲ್ಲಿ ಜೀವ ತೆತ್ತವರಿಗೆ ಎಸಗಿರುವ ಅವಮಾನ. ಹೀಗೆ, ಏಕಕಾಲಕ್ಕೆ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟಗಾರರನ್ನು ಅಪ್ರಸ್ತುತಗೊಳಿಸುವ ಹೇಳಿಕೆಗಳು ಕೇಂದ್ರ ಸರ್ಕಾರದ ಕಣ್ಣಿಗೆ ಅಥವಾ ಸರ್ಕಾರವನ್ನು ಪ್ರತಿನಿಧಿಸುವ ಪಕ್ಷಗಳಿಗೆ ದೇಶದ್ರೋಹದಂತೆ, ದೇಶದ ಪರಂಪರೆಗೆ ಎಸಗಿದ ಅವಮಾನದಂತೆ ಕಾಣಿಸದಿರುವುದು ದುರದೃಷ್ಟಕರ. ಸ್ವಾತಂತ್ರ್ಯ ಚರಿತೆ ಹಾಗೂ ಸಂವಿಧಾನವನ್ನು ಅಪಮಾನಗೊಳಿಸುವ ಮಾತು–ಕೃತಿಗಳಿಗೆ ಕಿವುಡು ಕುರುಡಾಗಿರುವ ಮಂದಿಯೇ, ಅಮಿತ್ ಶಾ ಅವರ ಕುಂಭಸ್ನಾನವನ್ನು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಮುಗಿಬಿದ್ದುದನ್ನು ನೋಡಿದರೆ, ಈ ಕೂಗುಮಾರಿಗಳ ನಿಷ್ಠೆ ಮತ್ತು ಬದ್ಧತೆ ಯಾರಿಗೆ ಮತ್ತು ಯಾವುದಕ್ಕೆ ಎನ್ನುವುದನ್ನು ಹೇಳುವಂತಿವೆ.
ಅಮಿತ್ ಶಾ ಕುಂಭಮೇಳಕ್ಕೆ ಹೋಗಿದ್ದನ್ನು ಪ್ರಶ್ನಿಸಿದರೆ, ಮೆಕ್ಕಾ ಹಾಗೂ ಇಟಲಿಗೆ ಹೋಗುವವರನ್ನು ಯಾಕೆ ಪ್ರಶ್ನಿಸುವುದಿಲ್ಲ ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಈ ಪ್ರಶ್ನೆ ಸರಿಯಾದುದೇ. ವ್ಯಕ್ತಿಯೊಬ್ಬನ ವೈಯಕ್ತಿಕ ನಂಬಿಕೆಗಳು ಹಾಗೂ ಧಾರ್ಮಿಕ ಆಚರಣೆಗಳನ್ನು ಗೌರವಿಸಬೇಕು. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ನೂರು ಬಾರಿ ಯೋಚಿಸಬೇಕಾಗುತ್ತದೆ. ಅಮಿತ್ ಶಾ ಅವರು ಕೇಂದ್ರ ಸಚಿವರಾಗಿದ್ದುಕೊಂಡೂ, ಧಾರ್ಮಿಕ ಶ್ರದ್ಧೆಯುಳ್ಳ ವ್ಯಕ್ತಿಯಾಗಿ ಕುಂಭಮೇಳದಲ್ಲಿ ಭಾಗವಹಿಸುವುದರಲ್ಲಿ ಇಲ್ಲವೇ ಗಂಗಾಸ್ನಾನ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ, ಹೀಗೆ ಬಹಿರಂಗವಾಗಿ ತಮ್ಮ ಧಾರ್ಮಿಕ ಶ್ರದ್ಧೆಯನ್ನು ಪ್ರಕಟಪಡಿಸುವ ವ್ಯಕ್ತಿ ಈ ಮೊದಲೂ ಹಿಂದೂ ಧರ್ಮದ ವಕ್ತಾರರಂತೆ ವರ್ತಿಸಿದ್ದರು. ವ್ಯಕ್ತಿಯೊಬ್ಬ ಸಾಂವಿಧಾನಿಕ ಹುದ್ದೆಯಲ್ಲಿದ್ದಾಗ ತನ್ನ ವ್ಯಕ್ತಿಗತ ನಂಬಿಕೆಗಳಿಂದ ಅಂತರ ಉಳಿಸಿಕೊಳ್ಳುವುದು ಅಗತ್ಯ. ಸಾಂವಿಧಾನಿಕ ಹುದ್ದೆಯಿಂದ ಹೊರ ಬಂದ ನಂತರ ಕುಂಭಮೇಳಕ್ಕೆ, ಇಲ್ಲವೇ ಮೆಕ್ಕಾ ಅಥವಾ ವ್ಯಾಟಿಕನ್‌ಗೆ ಹೋಗುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ.
ಸಾಂವಿಧಾನಿಕ ಹುದ್ದೆಯಲ್ಲಿರುವವರು ಧರ್ಮದಿಂದ ಅಂತರ ಕಾಯ್ದುಕೊಳ್ಳುವುದು ಎಷ್ಟು ಅಗತ್ಯವೋ ಧಾರ್ಮಿಕ ಸ್ಥಾನಗಳನ್ನು ಪ್ರತಿನಿಧಿಸುವವರು ಸಂವಿಧಾನ ನಿರ್ದೇಶಿತ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದೂ ಸರಿಯಲ್ಲ, ಧರ್ಮಸಮ್ಮತವಲ್ಲ. ಹಿಂದೂಗಳು ಏನನ್ನು ಪಾಲಿಸಬೇಕು ಎಂದು ಹಿಂದೂ ಧರ್ಮಕ್ಕೆ ಸೇರಿದ ಸಾಧುಸಂತರು ಹೇಳುವುದು ಅಸಹಜವಲ್ಲ. ಆದರೆ, ಸಂವಿಧಾನ ಹೇಗಿರಬೇಕು, ಏನನ್ನು ಒಳಗೊಂಡಿರಬೇಕು ಎಂದು ಹೇಳುವುದು ಅವರ ಕೆಲಸವಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡೂ ನಿರ್ದಿಷ್ಟ ಧರ್ಮದ ಬಗ್ಗೆ ಒಲವು ಪ್ರಕಟಪಡಿಸುವವರು ಸಂವಿಧಾನಕ್ಕೆ ಅಪಚಾರ ಎಸಗುತ್ತಿರುತ್ತಾರೆ ಹಾಗೂ ಧರ್ಮಗುರುಗಳ ರಾಜಕೀಯ ಚಿಂತನೆ ಅಧಾರ್ಮಿಕ ಎಂದೇ ಹೇಳಬೇಕಾಗುತ್ತದೆ.
ಸಂವಿಧಾನ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ ಎನ್ನುವ ಪ್ರಾಥಮಿಕ ತಿಳಿವಳಿಕೆ ಇಲ್ಲದವರಷ್ಟೇ ಸಂವಿಧಾನವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಬಲ್ಲರು. ಹಿಂದೂ ಸಂವಿಧಾನ, ಮುಸ್ಲಿಂ ಸಂವಿಧಾನ, ಕ್ರಿಶ್ಚಿಯನ್ ಸಂವಿಧಾನ ಎಂದು ಸಂವಿಧಾನವನ್ನು ಪ್ರತ್ಯೇಕವಾಗಿ ಗುರ್ತಿಸುವುದು ಸಾಧ್ಯವಿಲ್ಲ.
‘‘ದಾಸ್ಯ ಮತ್ತು ಅನುಗ್ರಹದಿಂದ ಭಾರತವನ್ನು ಬಿಡುಗಡೆಗೊಳಿಸುವ ಸಂವಿಧಾನಕ್ಕಾಗಿ ನಾನು ಶ್ರಮಿಸುತ್ತೇನೆ. ಅತ್ಯಂತ ಬಡವರು ಸಹ ಇದು ತಮ್ಮ ದೇಶ ಎಂದು ಭಾವಿಸುವ, ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಧ್ವನಿಯನ್ನು ಅಭಿವ್ಯಕ್ತಗೊಳಿಸುವ, ಯಾವುದೇ ಉನ್ನತ ಅಥವಾ ಕೆಳ ವರ್ಗಗಳಿಲ್ಲದ, ಎಲ್ಲ ಸಮುದಾಯಗಳು ಪೂರ್ಣ ಪ್ರಮಾಣದ ಸಾಮರಸ್ಯದಿಂದ ಜೀವಿಸುವ ಭಾರತಕ್ಕಾಗಿ ನಾನು ಕೆಲಸ ಮಾಡುತ್ತೇನೆ’’ ಎಂದು ಗಾಂಧೀಜಿ ಹೇಳಿದ್ದರು (ಯಂಗ್ ಇಂಡಿಯಾ, 1931). ಈ ಅರಿವಿಗೆ ವಿರುದ್ಧವಾದ ‘ಹಿಂದೂ ಸಂವಿಧಾನ’ದ ಪರಿಕಲ್ಪನೆಯಲ್ಲಿ ಮುಸ್ಲಿಮರನ್ನು ದಮನಿಸುವ ಕೋಮು ಮನಸ್ಥಿತಿ ಮೇಲ್ನೋಟಕ್ಕೆ ಕಾಣಿಸಿದರೂ, ವಿಭಜಕ ಮನೋಧರ್ಮದ ಆಳದಲ್ಲಿರುವುದು ಸಮ ಸಮಾಜದ ವಿರೋಧ. ಜಾತಿಯ ಹೆಸರಿನಲ್ಲಿ ಈ ದೇಶದ ಬಹುಸಂಖ್ಯಾತರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕನಿಷ್ಠರನ್ನಾಗಿಸಿದ ವರ್ಗವೇ ಈಗ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ.
ಮನುಸ್ಮೃತಿ, ರಾಮ ರಾಜ್ಯ ಮತ್ತು ಚಾಣಕ್ಯನ ‘ಅರ್ಥಶಾಸ್ತ್ರ’ದಲ್ಲಿನ ತತ್ವಾದರ್ಶಗಳ ನೆಲೆಗಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎನ್ನಲಾದ ‘ಅಖಂಡ ಹಿಂದೂ ರಾಷ್ಟ್ರ’ದ ಸಂವಿಧಾನ, ಸನಾತನ ಧರ್ಮದ ಅನುಯಾಯಿಗಳಿಗಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುತ್ತದಂತೆ. ಆ ಚುನಾವಣಾ ವ್ಯವಸ್ಥೆಯಲ್ಲಿ ಸನಾತನ ಧರ್ಮೀಯರೊಂದಿಗೆ ಜೈನ, ಸಿಖ್, ಬೌದ್ಧ ಅನುಯಾಯಿಗಳು ಮಾತ್ರವೇ ಮತದಾನದ ಹಕ್ಕುಗಳನ್ನು ಪಡೆಯಲಿದ್ದಾರೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಹಾಗೂ ಸಮ ಸಮಾಜವನ್ನು ಹಂಬಲಿಸುವ ಸಂವಿಧಾನವನ್ನು ಬದಲಿಸಲು ಹೊರಟವರಿಗೆ ‘ನೊಂದವರ ನೋವ ನೋಯದವರೆತ್ತ ಬಲ್ಲರು’ ಎನ್ನುವ ಮಾತು ಅರ್ಥವಾಗುವುದು ಕಷ್ಟ. ನೊಂದವರು, ಸಮಾಜದ ತರತಮಗಳನ್ನು ಅನುಭವಿಸಿದವರು ಹಾಗೂ ಗಾಯಗೊಂಡವರ ಪ್ರತಿನಿಧಿಯ ಮುಂದಾಳತ್ವದಲ್ಲಿ ರೂಪುಗೊಂಡ ಕಾರಣದಿಂದಲೇ ‘ಭಾರತೀಯ ಸಂವಿಧಾನ’ವು ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಲು ಸಾಧ್ಯವಾಗಿದೆ; ‘ಬಡವರ ನಗುವಿನ ಶಕ್ತಿ’ಯಾಗಿದೆ.
ದೇವರು ಹಾಗೂ ಧರ್ಮ ಸಾಮಾಜಿಕ ಸಂರಚನೆಯ ಕೇಂದ್ರದಲ್ಲಿರುವ ಸಂಗತಿಗಳು. ಒಂದಲ್ಲಾ ಒಂದು ಬಗೆಯಲ್ಲಿ ದೇವರು ಹಾಗೂ ಧರ್ಮವನ್ನು ಒಳಗೊಳ್ಳದ ಯಾವ ನಾಗರಿಕತೆಯೂ ಇಲ್ಲ, ಯಾವ ದೇಶ–ಕಾಲವೂ ಇಲ್ಲ. ಮನುಷ್ಯನನ್ನು ಸರಿ ದಾರಿಯಲ್ಲಿ ನಡೆಸುವುದರಲ್ಲಿ ದೇವರು–ಧರ್ಮದ ಅಸ್ತಿತ್ವವಿದೆ. ಆದರೆ, ದೇವರು ಮತ್ತು ಧರ್ಮ ಸೃಷ್ಟಿಸಿರುವ ಸಂಕೇತಗಳು ಜನರ ಶರಣಾಗತಿಯನ್ನು ಬಯಸುತ್ತವೆ. ಭಕ್ತಿ, ಪಾಪಪ್ರಜ್ಞೆಯ ಮೂಲಕ ಸಮುದಾಯವನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ಸಂವಿಧಾನದ ಅನನ್ಯತೆ ಇರುವುದು, ವ್ಯಕ್ತಿಯಲ್ಲಿ ಹಾಗೂ ಸಮುದಾಯದಲ್ಲಿ ಆತ್ಮಾಭಿಮಾನವನ್ನು ರೂಪಿಸುವುದರಲ್ಲಿ. ಸಂವಿಧಾನ ಕೊಟ್ಟಿರುವ ಸಂಕೇತಗಳು ನಮ್ಮಿಂದ ಶರಣಾಗತಿಯನ್ನು ಬಯಸುವುದಿಲ್ಲ; ಸಹಭಾಗಿತ್ವವನ್ನು ಬಯಸುತ್ತವೆ. ದೇವರ ಸನ್ನಿಧಿಯಲ್ಲಿ ಭಕ್ತ ಶಿರಬಾಗುತ್ತಾನೆ; ರಾಷ್ಟ್ರಗೀತೆ ಹಾಡುವಾಗ ನಾವು ಎದೆಯುಬ್ಬಿಸುತ್ತೇವೆ, ರಾಷ್ಟ್ರಧ್ವಜಕ್ಕೆ ತಲೆಯೆತ್ತಿ ವಂದಿಸುತ್ತೇವೆ. ಶರಣಾಗತಿಯ ಭಕ್ತಿಮಾರ್ಗ ಒಂದೆಡೆಯಾದರೆ, ಸಂವಿಧಾನದ ಶಕ್ತಿಮಾರ್ಗ ಇನ್ನೊಂದೆಡೆ. ದೇವರು–ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ತರತಮ ಭಾವಗಳ ನಿವಾರಣೆಗೆ ಸಂವಿಧಾನದ ‘ಶಕ್ತಿಮಾರ್ಗ’ವೇ ಮದ್ದು. ಈ ಸಂವಿಧಾನ ಮಾರ್ಗ ಜಾತೀಯ ಮನಸ್ಸುಗಳಿಗೆ ಮುಳ್ಳಿನ ಮಾರ್ಗವಾಗಿರುವುದರಿಂದಲೇ, ಅವರು ಧರ್ಮಾಧಾರಿತ ಸಂವಿಧಾನದ ಮಾತುಗಳನ್ನು ಚಲಾವಣೆಗೆ ತರುತ್ತಾರೆ.
ಸಂವಿಧಾನದ ಶಕ್ತಿಯನ್ನು ಅರಿಯಲು ‘ಚರ್ಮ ಕುಟೀರ’ಗಳಿಗೆ ಹೋಗಬೇಕು. ಮನುಷ್ಯನೊಬ್ಬ ಕಾಲು ಚಾಚಿ ಕೂರಬಹುದಾದಷ್ಟು ಸಣ್ಣದಾದ ಕುಟೀರಗಳಲ್ಲಿ ಅಂಬೇಡ್ಕರ್ ಭಾವಚಿತ್ರವೊಂದು ಕಾಣಿಸುತ್ತದೆ. ದೇವರ ಪಟದ ಸ್ಥಾನದಲ್ಲಿರುವ ಅಂಬೇಡ್ಕರ್ ಚಿತ್ರಪಟ ಏನನ್ನು ಸೂಚಿಸುತ್ತದೆ? ‘ಜೈ ಭೀಮ್’ ಎನ್ನುವ ಘೋಷಣೆ ಕೋಟಿ ಕೋಟಿ ಜನರಲ್ಲಿ ರೋಮಾಂಚನ ಹುಟ್ಟಿಸುವುದರ ಜೊತೆಗೆ ಬದುಕಿನ ತಾತ್ವಿಕತೆ ಆಗಿರುವುದು ಹೇಗೆ? ಸಾಮಾಜಿಕ ಬದಲಾವಣೆಗೆ ಹಂಬಲಿಸುತ್ತಿರುವ ಅಸಂಖ್ಯ ಮನಸ್ಸುಗಳು ಅಂಬೇಡ್ಕರ್ ಚಿಂತನೆಗಳನ್ನು ನೆಚ್ಚಿಕೊಂಡಿರುವುದೇಕೆ? ಅಂತಃಕರಣದ ಅನಂತ ಬಯಲಿನಂತೆ ನೀಲಿ ಶಾಲು ಭಾಸವಾಗುವುದು ಹೇಗೆ? ಈ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳಿಗೆ ಅಳುಕಿದ ಮಂದಿಯೇ, ಇಂಥ ಪ್ರಶ್ನೆಗಳನ್ನೇ ಹುಟ್ಟಿಸದ ಸಂವಿಧಾನದ ಕುರಿತು ಮಾತನಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.