ADVERTISEMENT

ಸೀಮೋಲ್ಲಂಘನ | ತೈವಾನ್‌ನ ಪ್ರಜಾತಂತ್ರ ಪತಾಕೆ

ಸರ್ವಾಧಿಕಾರ ತೊಡೆದುಹಾಕಲು ಚೀನಾದ ನೆರೆಮನೆಯ ‘ಮಿಸ್ಟರ್ ಡೆಮಾಕ್ರಸಿ’ ಮಾಡಿದ್ದೇನು?

ಸುಧೀಂದ್ರ ಬುಧ್ಯ
Published 2 ಆಗಸ್ಟ್ 2020, 19:41 IST
Last Updated 2 ಆಗಸ್ಟ್ 2020, 19:41 IST
ತೈವಾನ್‌ ಪ್ರಜಾಪ್ರಭುತ್ವ–ಪ್ರಾತಿನಿಧಿಕ ಚಿತ್ರ
ತೈವಾನ್‌ ಪ್ರಜಾಪ್ರಭುತ್ವ–ಪ್ರಾತಿನಿಧಿಕ ಚಿತ್ರ   
""

ತೈವಾನ್ ಮಟ್ಟಿಗೆ ‘ಮಿಸ್ಟರ್ ಡೆಮಾಕ್ರಸಿ’ ಎಂದು ಕರೆಯಲಾಗುತ್ತಿದ್ದ 97 ವರ್ಷದ ಲೀ ಟೆಂಗ್ ಹೂ ಜುಲೈ 30ರಂದು ನಿಧನರಾದರು. ಚೀನಾ ಸರ್ಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ‘ಲೀ ಅವರ ಸಾವು ಚೀನಾದ ಮುಖ್ಯ ಭೂಭಾಗದಲ್ಲಿರುವ ಹೆಚ್ಚಿನ ಜನರಿಗೆ ದುಃಖಕರ ಸುದ್ದಿಯಲ್ಲ’ ಎಂದು ಬರೆಯಿತು. ಲೀ ತಮ್ಮ ಜೀವಿತ ಅವಧಿಯಲ್ಲಿ ಜಪಾನ್ ಮತ್ತು ಅಮೆರಿಕಕ್ಕೆ ಬೇಕಾದವರಾಗಿಯೂ ಮತ್ತು ಚೀನಾಕ್ಕೆ ಬೇಡದವರಾಗಿಯೂ ಇದ್ದರು. ಅದಕ್ಕೆ ಕಾರಣ, ಅವರು ಕಮ್ಯುನಿಸ್ಟ್ ಚೀನಾದ ಬಿಗಿಮುಷ್ಟಿಯಲ್ಲಿ ಬಂದಿಯಾಗಿರುವ ತೈವಾನ್‌ನಲ್ಲಿ ಪ್ರಜಾತಂತ್ರದ ಪತಾಕೆ ಹಾರಿಸಿದರು ಎನ್ನುವುದಾಗಿತ್ತು.

ಮೊದಲಿಗೆ ತೈವಾನ್ ಡಚ್ಚರ ವಸಾಹತು ಆಗಿತ್ತು. ನಂತರ ಜಪಾನ್ ಸುಪರ್ದಿಗೆ ಬಂತು. ಎರಡನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷ ‘ಕೊಮಿಂಟಾಂಗ್’ (ಕೆಎಂಟಿ) ಚೀನಾ ಆಡಳಿತದ ಚುಕ್ಕಾಣಿ ಹಿಡಿಯಿತು. ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೊ ಜಿಡಾಂಗ್ ನೇತೃತ್ವದ ಕಮ್ಯುನಿಸ್ಟ್ ಸೇನೆ, ಚಿಯಾಂಗ್ ಪಡೆಯನ್ನು ಚೀನಾದಿಂದ ಹೊರದಬ್ಬಿತು. ಚಿಯಾಂಗ್ ತಮ್ಮ ಬೆಂಬಲಿಗರೊಂದಿಗೆ ತೈವಾನ್ ಸೇರಿಕೊಂಡರು. ಮಾವೊ ವಶದಲ್ಲಿದ್ದ ಚೀನಾದ ಮುಖ್ಯ ಭೂಭಾಗ ಸಂಪೂರ್ಣ ಕೆಂಪುಹೊದ್ದು ‘ಪೀಪಲ್ಸ್‌ ರಿಪಬ್ಲಿಕ್ ಆಫ್ ಚೀನಾ’ (PRC) ಎಂದು ಕರೆಸಿಕೊಂಡರೆ, ತೈವಾನ್ ‘ರಿಪಬ್ಲಿಕ್ ಆಫ್ ಚೀನಾ’ (ROC) ಆಗಿ ಉಳಿಯಿತು. ನಂತರ ನಿರಂತರ ಘರ್ಷಣೆಗಳು ಚೀನಾ ಮತ್ತು ತೈವಾನ್ ನಡುವೆ ನಡೆದವು.

ತೈವಾನ್, ಜಪಾನಿನ ವಸಾಹತು ಆಗಿದ್ದ ಅವಧಿಯಲ್ಲಿ ಲೀ ಅವರ ತಂದೆ ಗುಪ್ತಚರ ಇಲಾಖೆಯಲ್ಲಿದ್ದರು. ತೈವಾನಿನಲ್ಲಿ ಜನಿಸಿದ್ದ ಲೀ, ಜಪಾನಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಎರಡನೇ ಮಹಾಯುದ್ಧದ ಬಳಿಕ ತೈವಾನಿಗೆ ವಾಪಸಾದರು. 1947ರ ಫೆಬ್ರುವರಿ 28ರಂದು ಚಿಯಾಂಗ್ ಸರ್ವಾಧಿಕಾರದ ವಿರುದ್ಧ ತೈವಾನ್ ಜನ ಬೀದಿಗಿಳಿದರು. 28 ಸಾವಿರ ಪ್ರತಿಭಟನಕಾರರನ್ನು ಚಿಯಾಂಗ್ ಪಡೆ ಹತ್ಯೆ ಮಾಡಿತು. ಸೇನಾ ಆಡಳಿತ ಜಾರಿಗೆ ಬಂತು. ಇದು ಸುಮಾರು 40 ವರ್ಷಗಳ ಕಾಲ, ಅಂದರೆ 1987ರವರೆಗೆ ಮುಂದುವರಿಯಿತು.

ADVERTISEMENT

ಅಮೆರಿಕದಲ್ಲಿಯೂ ಲೀ ಅಧ್ಯಯನ ಮಾಡಿದ್ದರು. 1953ರಲ್ಲಿ ಐಯೋವಾ ವಿಶ್ವವಿದ್ಯಾಲಯದಿಂದ ಕೃಷಿ ಆರ್ಥಿಕತೆ ವಿಷಯದಲ್ಲಿ ಸ್ನಾತಕೋತ್ತರ ಪದವಿ, 1968ರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ನಂತರ ತೈವಾನ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಚಿಯಾಂಗ್ ಕೈ-ಶೇಕ್ ಅವಧಿಯಲ್ಲಿ ಉಪಪ್ರಧಾನಿಯಾಗಿದ್ದ ಅವರ ಮಗ ಚಿಯಾಂಗ್ ಚಿಂಗ್-ಕೋ ಆಪ್ತವಲಯದಲ್ಲಿ ಲೀ ಗುರುತಿಸಿಕೊಂಡರು. ಮಗನ ಶಿಫಾರಸಿನ ಮೇಲೆ ಲೀ ಅವರನ್ನು ಚಿಯಾಂಗ್ ತಮ್ಮ ಸಂಪುಟಕ್ಕೆ ತೆಗೆದುಕೊಂಡರು. ಈ ಸಮಯ ವ್ಯರ್ಥ ಮಾಡದ ಲೀ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮತ್ತು ಕೃಷಿ ಆದಾಯ ವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿ ಗಮನ ಸೆಳೆದರು.

1978ರಲ್ಲಿ ತೈಪೆ ನಗರದ ಮೇಯರ್ ಆಗಿದ್ದ ಅವಧಿಯಲ್ಲಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿ ಹೆಸರು ಮಾಡಿದರು. 1981ರಿಂದ 84ರವರೆಗೆ ತೈವಾನ್ ಗವರ್ನರ್ ಆಗಿ ಕೆಲಸ ಮಾಡುವಾಗ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಸಮತೋಲಿತ ಬೆಳವಣಿಗೆ ಸಾಧಿಸುವಲ್ಲಿ ಲೀ ಯಶಸ್ವಿಯಾದರು. 1984ರಲ್ಲಿ ಚಿಯಾಂಗ್ ಚಿಂಗ್-ಕೋ ಅವಧಿಯಲ್ಲಿ ಉಪಾಧ್ಯಕ್ಷ ಹುದ್ದೆಗೆ ಏರಿದರು. ಸ್ಥಳೀಯ ತೈವಾನಿಗರು ಶೇಕಡ 85ರಷ್ಟಿದ್ದರೂ ಅದುವರೆಗೂ ಮುಖ್ಯ ಹುದ್ದೆಗಳಿಗೆ ‘ಮೆಯ್ನ್‌ ಲ್ಯಾಂಡ್’ ಮೂಲದವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ತೈವಾನ್ ಮೂಲದ ಲೀ ಉಪಾಧ್ಯಕ್ಷರಾದಾಗ ಅದನ್ನು ತೈವಾನಿಗರು ಅಚ್ಚರಿಯಿಂದ ನೋಡಿದ್ದರು. 1988ರಲ್ಲಿ ಚಿಯಾಂಗ್ ಚಿಂಗ್-ಕೋ ನಿಧನದ ಬಳಿಕ ಲೀ ಅಧ್ಯಕ್ಷರಾದರು. ತಮ್ಮ ಬುದ್ಧಿವಂತಿಕೆ ಹಾಗೂ ಕಾರ್ಯಕ್ಷಮತೆಯಿಂದ ಹಂತಹಂತವಾಗಿ ರಾಜಕೀಯವಾಗಿ ಬೆಳೆದ ಲೀ, ತೈವಾನಿನ ಮೊದಲ ಸ್ಥಳೀಯ ಅಧ್ಯಕ್ಷ ಎನಿಸಿಕೊಂಡರು.

ಲೀ ಅಧ್ಯಕ್ಷರಾಗುತ್ತಲೇ ಪ್ರಜಾಪ್ರಭುತ್ವ ಮಾದರಿ ಗರಿ ಬಿಚ್ಚಿತು. ಸೇನಾ ಆಡಳಿತವನ್ನು ಇಲ್ಲವಾಗಿಸಿದರು. ಚೀನಾದ ಮೆಯ್ನ್‌ ಲ್ಯಾಂಡಿನಲ್ಲಿರುವ ತಮ್ಮ ಬಳಗದ ಜೊತೆ ಸಂವಹನ ಇಟ್ಟುಕೊಳ್ಳಲು, ಅಲ್ಲಿಗೆ ಭೇಟಿ ಕೊಡಲು ಜನರಿಗೆ ಅವಕಾಶ ಕಲ್ಪಿಸಲಾಯಿತು. ಪ್ರತಿಭಟನೆ, ಚಳವಳಿಗಳಿಗೆ ಇದ್ದ ನಿರ್ಬಂಧವನ್ನು ಸಡಿಲಿಸಲಾಯಿತು. ಬಹುಪಕ್ಷೀಯ ವ್ಯವಸ್ಥೆಯನ್ನು ಉತ್ತೇಜಿಸಲಾಯಿತು. ಸಂಸತ್ತಿಗೆ ಮುಕ್ತ ಚುನಾವಣೆಗಳನ್ನು ಘೋಷಿಸಲಾಯಿತು. ಸರ್ವಾಧಿಕಾರ ಮಾದರಿಯನ್ನು ಕಳಚುತ್ತಾ ಬಂದ ಲೀ, ಮೆಯ್ನ್‌ ಲ್ಯಾಂಡ್ (ಚೀನಾ) ವಲಸಿಗರು ಮತ್ತು ತೈವಾನ್ ಮೂಲನಿವಾಸಿಗಳ ನಡುವೆ ಇದ್ದ ಹಗೆತನವನ್ನು ನಿವಾರಿಸಲು ಪ್ರಯತ್ನಪಟ್ಟರು. ‘ಹಿನ್ನೆಲೆ ಏನೇ ಇರಲಿ, ತೈವಾನನ್ನು ಇಷ್ಟಪಡುವ ಮತ್ತು ಈ ನಾಡನ್ನು ತನ್ನ ಮನೆ ಎಂದು ಭಾವಿಸುವ ಎಲ್ಲರೂ ತೈವಾನಿಗರು’ ಎಂದು ಕರೆದು ‘ನ್ಯೂ ತೈವಾನೀಸ್’ ಪರಿಕಲ್ಪನೆಯನ್ನು ಕೊಟ್ಟರು.

ಸುಧೀಂದ್ರ ಬುಧ್ಯ

ಚೀನಾ ಕುರಿತ ಅವರ ಧೋರಣೆಯಲ್ಲಿ ಅಸ್ಪಷ್ಟತೆ ಇತ್ತು ಮತ್ತು ಅದು ಉದ್ದೇಶಪೂರ್ವಕ ಅಸ್ಪಷ್ಟತೆಯಾಗಿತ್ತು. ಕೆಲವೊಮ್ಮೆ ಚೀನಾದೊಂದಿಗೆ ಕಾಠಿಣ್ಯದಿಂದ ವರ್ತಿಸಿದರು, ಅನಿವಾರ್ಯವಾದಾಗ ತಾತ್ಕಾಲಿಕ ರಾಜಿಗೆ ಮುಂದಾದರು, ನಂತರ ಚೀನಾವನ್ನು ಧಿಕ್ಕರಿಸಿ ಸ್ವತಂತ್ರ ನಿರ್ಧಾರಗಳನ್ನು ತಳೆಯಲು ಮುಂದಾದರು. ಚೀನಾದ ನಾಯಕರು ‘ಒಂದು ಚೀನಾ’ ಎಂದಾಗ, ಚೀನಾ ಪ್ರಜಾಪ್ರಭುತ್ವ ದೇಶವಾಗಿ ಬದಲಾದರೆ ತೈವಾನ್ ಯಾವುದೇ ಕರಾರು ಇಲ್ಲದೆ ಚೀನಾದೊಂದಿಗೆ ಒಂದಾಗಲಿದೆ ಎಂಬ ನಿಲುವು ಪ್ರಕಟಿಸಿದರು. ತೈವಾನ್ ಸಾರ್ವಭೌಮತ್ವವನ್ನು ಅವರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತೋರ್ಪಡಿಸಲು ಬಯಸಿದಾಗ ಸೇನಾ ಕಾರ್ಯಾಚರಣೆ ನಡೆಸುವ ಹಂತಕ್ಕೂ ಚೀನಾ ಸಿಟ್ಟಾಗಿತ್ತು. 1995ರಲ್ಲಿ ಲೀ ಅಮೆರಿಕಕ್ಕೆ ಭೇಟಿಯಿತ್ತಿದ್ದರು. ಹಳೆಯ ವಿದ್ಯಾರ್ಥಿಯಾಗಿ ಕಾರ್ನೆಲ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗಿಯಾಗಲು ಲೀ ಅಮೆರಿಕಕ್ಕೆ ತೆರಳಿದ್ದರಾದರೂ ಅಮೆರಿಕ- ತೈವಾನ್ ರಾಜತಾಂತ್ರಿಕ ಸಂಬಂಧ ಹೊಂದುವತ್ತ ಪ್ರಯತ್ನ ನಡೆಸಿವೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು. ಲೀ ಕುರಿತು ಚೀನಾ ಸಿಟ್ಟಾದಷ್ಟೂ ತೈವಾನಿನಲ್ಲಿ ಅವರ ಜನಪ್ರಿಯತೆ ಹೆಚ್ಚಿತು. ಚೀನಾದ ಸರ್ವಾಧಿಕಾರಿ ಧೋರಣೆಯಿಂದ ರೋಸಿಹೋಗಿದ್ದ ತೈವಾನಿಗರು ಲೀ ಅವರಲ್ಲಿ ಭರವಸೆ ಇಟ್ಟರು.

1996ರಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆದು, ಲೀ ಜನರಿಂದ ಆಯ್ಕೆಯಾದ ಮೊದಲ ಅಧ್ಯಕ್ಷ ಎನಿಸಿಕೊಂಡರು. ಹೀಗೆ ಪ್ರಜಾಪ್ರಭುತ್ವವನ್ನು ತೈವಾನ್ ಅಪ್ಪಿಕೊಂಡಾಗ ಚೀನಾ ಕೆರಳಿತು. ಚೀನಾ ಮತ್ತು ತೈವಾನ್ ಭೂಭಾಗವನ್ನು ಬೇರ್ಪಡಿಸುವ ಜಲಸಂಧಿಯನ್ನು ಗುರಿಯಾಗಿಸಿಕೊಂಡು ಚೀನಾದ ಸೇನೆ ಮಿಸೈಲ್ ದಾಳಿ ನಡೆಸಿತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ದಿಟ್ಟ ನಿಲುವು ತಳೆದು ಅಮೆರಿಕದ ಯುದ್ಧನೌಕೆಗಳನ್ನು ತೈವಾನ್‌ನತ್ತ ಕಳುಹಿಸಿದ್ದರು. ಬೀಜಿಂಗ್ ಸುಮ್ಮನಾಯಿತು.

ಲೀ ಅವರನ್ನು ‘ತೈವಾನ್ ಪ್ರತ್ಯೇಕತಾವಾದದ ಪಿತಾಮಹ’ ಎಂದು ಚೀನಾ ಕರೆಯಿತು. 1999ರಲ್ಲಿ ಜರ್ಮನಿಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತೈವಾನ್- ಚೀನಾದ ಸಂಬಂಧವನ್ನು ಎರಡು ರಾಷ್ಟ್ರಗಳ ನಡುವಿನ ಸಂಬಂಧ ಎಂದು ಲೀ ಬಣ್ಣಿಸಿದ್ದರು. ಆಗ ಚೀನಾದ ಸಿಟ್ಟು ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಪತ್ರಿಕೆಗಳಲ್ಲಿ ಜಾಹೀರಾಯಿತು. ‘ಚೀನಾ ವಿರೋಧಿ ಪಡೆಗಳ ರಾಜಕೀಯ ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತಿರುವ ವಿರೂಪಗೊಂಡ ಕೃತಕ ಭ್ರೂಣ’ ಎಂದು ಲೀ ಅವರನ್ನು ಕರೆಯಲಾಗಿತ್ತು. 2000ನೇ ಇಸವಿಯಲ್ಲಿ ಲೀ ಅಧಿಕಾರ ತ್ಯಜಿಸಿ ನಿವೃತ್ತರಾದರು.

ಒಟ್ಟಿನಲ್ಲಿ ಲೀ, ತೈವಾನ್ ಎಂಬ ದ್ವೀಪ ರಾಷ್ಟ್ರದಲ್ಲಿ ಸರ್ವಾಧಿಕಾರ ತೊಡೆದುಹಾಕಿ, ಪ್ರಜಾಪ್ರಭುತ್ವ ಮಾದರಿ ಆಡಳಿತ ವ್ಯವಸ್ಥೆ ಸ್ಥಾಪಿಸಿದರು. ಲೀ ಅವಧಿಯಲ್ಲಿ ತೈವಾನ್ ಆರ್ಥಿಕವಾಗಿಯೂ ಶಕ್ತವಾಯಿತು. ಚೀನಾದ ನೆರೆಮನೆಯಲ್ಲಿ ಪ್ರಜಾತಂತ್ರದ ಪತಾಕೆ ಹಾರಿಸುವುದು ಲೀ ಅವರಿಗೆ ಸುಲಭವೇನೂ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.