
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವ ಜಪಾನ್‌ನಲ್ಲಿ ಪ್ರಧಾನಿಯಾಗಿ ತಕೈಚಿ ಅವರ ಆಯ್ಕೆ ಒಂದು ಮೈಲಿಗಲ್ಲು. ಪ್ರಧಾನಿಯಾದ ಬಳಿಕ ತಕೈಚಿ, ‘ಎಲ್ಲರ ಭಾಗವಹಿಸುವಿಕೆ ಹಾಗೂ ಕೆಲಸದಿಂದ ಮಾತ್ರ ಆರ್ಥಿಕ ಪುನಶ್ಚೇತನ ಸಾಧ್ಯ. ಶಿಸ್ತು-ಕಠಿಣ ಪರಿಶ್ರಮದ ಮೂಲಕ ಪ್ರಗತಿ ಸಾಧ್ಯ’ ಎಂದು ದೇಶದ ಜನರನ್ನು ಹುರಿದುಂಬಿಸುವ ಮಾತನ್ನಾಡಿದ್ದಾರೆ.
ಜಪಾನ್ ಎಂದಕೂಡಲೇ ಅಲ್ಲಿನ ವಿಶಿಷ್ಟ ಸಂಪ್ರದಾಯ, ಎರಡನೇ ಮಹಾಯುದ್ಧ, ಹಿರೋಶಿಮಾ ಮತ್ತು ನಾಗಸಾಕಿ ನಗರಗಳು, ಆ ಬಳಿಕದ ರಾಷ್ಟ್ರ ನಿರ್ಮಾಣ, ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರ, ಪ್ರಕೃತಿ ವಿಕೋಪ, ಜನರನ್ನು ಕಾಡುತ್ತಿರುವ ಒಂಟಿತನ, ಹೀಗೆ ಹಲವು ಸಂಗತಿಗಳ ಜೊತೆಗೆ ಅಲ್ಲಿನ ಜನರ ದಣಿವರಿಯದ ದುಡಿಮೆ ನೆನಪಿಗೆ ಬರುತ್ತದೆ. ಎಲ್ಲ ದೃಷ್ಟಿಯಿಂದಲೂ ಹೊರಳು ದಾರಿ ಕ್ರಮಿಸಿ ಬಂದ ಜಪಾನ್, ಇದೀಗ ಮತ್ತೊಂದು ಮಹತ್ವದ ತಿರುವಿಗೆ ಬಂದು ನಿಂತಿದೆ.
ಜಗತ್ತಿನ ಐದು ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುವ ಜಪಾನ್‌ನ ಆರ್ಥಿಕತೆ ಪ್ರಸ್ತುತ ಮಂದಗತಿಯಲ್ಲಿದೆ. ಹಣದುಬ್ಬರ, ವೃದ್ಧರ ಸಂಖ್ಯೆಯಲ್ಲಿ ಏರಿಕೆ, ದುಡಿಯುವ ವರ್ಗದ ಸಂಖ್ಯೆಯ ಇಳಿಕೆ, ಅತಿಯಾದ ದುಡಿಮೆ ಹಾಗೂ ಒಂಟಿತನ, ಅಲ್ಲಿನ ಜನರ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಕೆಲಸ ಹಾಗೂ ಜೀವನದ ನಡುವೆ ಸಮತೋಲನ ಸಾಧಿಸಲು ಜಪಾನೀಯರು ಹೆಣಗುತ್ತಿದ್ದಾರೆ. ವಿದೇಶಿ ಪ್ರವಾಸಿಗರು ಹಾಗೂ ಕಾರ್ಮಿಕರು ಹೆಚ್ಚುತ್ತಿರುವ ಕುರಿತು ಕಳವಳಗೊಂಡಿದ್ದಾರೆ. ರಾಷ್ಟ್ರದ ಆರ್ಥಿಕತೆಗೆ ಚೈತನ್ಯ ತುಂಬಬಲ್ಲ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಗಟ್ಟಿಯಾದ ನಾಯಕತ್ವಕ್ಕೆ ಎದುರು ನೋಡುತ್ತಿದ್ದಾರೆ.
ಕಳೆದ 70 ವರ್ಷಗಳಲ್ಲಿ, ಹೆಚ್ಚಿನ ಅವಧಿಗೆ ಅಧಿಕಾರವನ್ನು ನಡೆಸಿದ್ದ ಲಿಬರಲ್ ಡೆಮಾಕ್ರಟಿಕ್ ಪಕ್ಷ ಇತ್ತೀಚಿನ ಚುನಾವಣೆಗಳಲ್ಲಿ ಸೋಲು ಕಂಡಿದೆ. ಶಿಗೇರು ಇಶಿಬಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಳೆದ ಐದು ವರ್ಷಗಳಲ್ಲಿ ಜಪಾನ್ ನಾಲ್ಕು ಪ್ರಧಾನಿಗಳನ್ನು ಕಂಡಿದೆ. ಬಹುಮತವಿಲ್ಲದ ಸರ್ಕಾರವನ್ನು ನಿಭಾಯಿಸುತ್ತಲೇ, ಜಪಾನ್ ಎದುರಿಸುತ್ತಿರುವ ಸವಾಲುಗಳಿಗೆ ತಕೈಚಿ ಪರಿಹಾರ ಹುಡುಕಬೇಕಿದೆ.
ಸಂಪ್ರದಾಯವಾದಿ ನಿಲುವಿನ 64 ವರ್ಷದ ತಕೈಚಿ, 1993ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ನಂತರದ ದಶಕದಲ್ಲಿ ಶಿಂಜೊ ಅಬೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡರು. 2011ರ ಭೀಕರ ಸುನಾಮಿ ಹಾಗೂ ಭೂಕಂಪದ ನಂತರ ಜಪಾನ್ ಆರ್ಥಿಕತೆ ಕಂಪನವನ್ನು ಕಂಡಿತು. 2012ರಲ್ಲಿ ಜಪಾನ್ ಪ್ರಧಾನಿಯಾದ ಶಿಂಜೊ ಅಬೆ, ಜಪಾನ್ ಆರ್ಥಿಕತೆಗೆ ಕಸುವು ತುಂಬಲು ಹಲವು ಯೋಜನೆಗಳನ್ನು ರೂಪಿಸಿದರು. ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಜಪಾನ್‌ನ ಸಂಬಂಧ ಬಲಪಡಿಸುವತ್ತ ಹೆಜ್ಜೆ ಇಟ್ಟರು. ಅಬೆ ಅವರು ರೂಪಿಸಿದ ಆರ್ಥಿಕತೆಯ ಮಾದರಿಯನ್ನು ‘ಅಬೆನಾಮಿಕ್ಸ್’ ಎಂದು ವಿಶ್ಲೇಷಿಸಲಾಯಿತು. ಆ ಯೋಜನೆಗಳಿಂದ ಕೊಂಚ ಮಟ್ಟಿಗೆ ಜಪಾನ್ ಆರ್ಥಿಕತೆಗೆ ಬಲಬಂತು.
2016ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾದಾಗ, ಅವರಿಗೆ ಜಾಗತಿಕ ವೇದಿಕೆಯಲ್ಲಿ ಹೆಚ್ಚಿನ ಬೆಂಬಲವಿರಲಿಲ್ಲ. ಶಿಂಜೊ ಅಬೆ, ಅಮೆರಿಕ ಹಾಗೂ ಜಪಾನ್ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದರು. ಟ್ರಂಪ್ ಆಪ್ತವಲಯದಲ್ಲಿ ಒಬ್ಬರಾದರು. ಹೂಡಿಕೆಯನ್ನು ಆಕರ್ಷಿಸಲು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡರು. ಚೀನಾದ ಆಕ್ರಮಣಶೀಲತೆಗೆ ಗುರಾಣಿ ಹಿಡಿಯಲು, ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದರು. ಚೀನಾದ ಓಘಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಚನೆಯಾದ, ಅಮೆರಿಕ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ಒಳಗೊಂಡ ‘ಕ್ವಾಡ್’ ಸ್ಥಾಪನೆಯ ಹಿಂದೆಯೂ ಶಿಂಜೊ ಅವರ ಒತ್ತಾಸೆಯಿತ್ತು.
2012ರಿಂದ 2020ರವರೆಗೆ ಜಪಾನ್ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ಶಿಂಜೊ ಅಬೆ, ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚಿನ ಅವಧಿಗೆ ಜಪಾನ್ ಪ್ರಧಾನಿ ಸ್ಥಾನ ಅಲಂಕರಿಸಿದ್ದ ನಾಯಕ ಎನಿಸಿಕೊಂಡರು. 2020ರಲ್ಲಿ ಅನಾರೋಗ್ಯದ ಕಾರಣದಿಂದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2022ರಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ನಿರ್ದಿಷ್ಟ ಧಾರ್ಮಿಕ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ಕಾರಣಕ್ಕೆ ಅವರ ಕೊಲೆ ನಡೆದಿದೆ ಎನ್ನಲಾಗಿದೆ.
ತಕೈಚಿ ಅವರ ರಾಜಕೀಯ ಮಾರ್ಗದರ್ಶಕರಾಗಿದ್ದ ಅಬೆ, ತಮ್ಮ ಅವಧಿಯಲ್ಲಿ ತಕೈಚಿ ಅವರನ್ನು ಪ್ರಮುಖ ಸಚಿವ ಸ್ಥಾನಗಳಿಗೆ ನೇಮಿಸಿದ್ದರು. ಆಂತರಿಕ ವ್ಯವಹಾರ ಮತ್ತು ಸಂವಹನ, ಲಿಂಗ ಸಮಾನತೆ ಹಾಗೂ ಸಾಮಾಜಿಕ ವ್ಯವಹಾರಗಳ ಖಾತೆ, ವಿಜ್ಞಾನ ಹಾಗೂ ತಂತ್ರಜ್ಞಾನದ ರಾಜ್ಯ ಸಚಿವ ಸ್ಥಾನ, ಹೀಗೆ ಕೆಲವು ನಿರ್ಣಾಯಕ ಜವಾಬ್ದಾರಿಗಳನ್ನು ತಕೈಚಿ ನಿರ್ವಹಿಸಿದ್ದರು. 2021ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಅಧ್ಯಕ್ಷ ಸ್ಥಾನಕ್ಕೆ ತಕೈಚಿ ಸ್ಪರ್ಧಿಸಿದಾಗ, ಅಬೆ ಬೆಂಬಲಿಸಿದ್ದರು. ಹಾಗಾಗಿ ಎರಡನೆಯ ಸಾಲಿನ ನಾಯಕರಾಗಿದ್ದ ತಕೈಚಿ, ಅಬೆ ಅವರ ಬೆಂಬಲದಿಂದಾಗಿ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟರು.
ಸೈದ್ಧಾಂತಿಕ ಬದ್ಧತೆ, ಸೇನೆ, ಆರ್ಥಿಕತೆ ಹಾಗೂ ವಿದೇಶಾಂಗ ನೀತಿ ಕುರಿತ ಧೋರಣೆಯಲ್ಲಿ ಅಬೆ ಹಾಗೂ ತಕೈಚಿ ಅವರ ನಡುವೆ ಹೆಚ್ಚು ವ್ಯತ್ಯಾಸಗಳಿಲ್ಲ. ಅಬೆ ಅವರಂತೆಯೇ ತಕೈಚಿ ಕೂಡ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ದೌರ್ಜನ್ಯಗಳನ್ನು ಉತ್ಪ್ರೇಕ್ಷಿಸಲಾಗಿದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿ ಮಡಿದವರ ಗೌರವಾರ್ಥ ಟೋಕಿಯೊದಲ್ಲಿ ಸ್ಥಾಪಿಸಿರುವ ‘ಯಾಸುಕುನಿ’ ಸ್ಮಾರಕಕ್ಕೆ ಅವರು ನಿಯಮಿತವಾಗಿ ಭೇಟಿ ನೀಡುತ್ತಾರೆ. ಚೀನಾದ ಆಕ್ರಮಣಶೀಲತೆಯನ್ನು ವಿರೋಧಿಸುವ, ತೈವಾನ್ ಕುರಿತು ಸಹಾನುಭೂತಿ ಹೊಂದಿರುವ ತಕೈಚಿ, ಜಪಾನ್ ಸಶಕ್ತ ಸೇನೆಯನ್ನು ಹೊಂದಬೇಕು ಎಂಬ ನಿಲುವು ಹೊಂದಿದ್ದಾರೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಹಾಗೂ ಆರೋಗ್ಯ ಭದ್ರತೆ ವಿಸ್ತರಿಸುವ ನಿಟ್ಟಿನಲ್ಲಿ ತಕೈಚಿ ಒಂದು ಹೆಜ್ಜೆ ಮುಂದಿರಿಸಬಹುದು ಎನ್ನಲಾಗುತ್ತಿದೆ. ಮಹಿಳೆಯೊಬ್ಬರು ಉನ್ನತ ಹುದ್ದೆಗೆ ಏರಿದಾಗ, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಹಿಳೆಯರಿಗಾಗಿ ಅವರು ಏನೆಲ್ಲಾ ಯೋಜನೆ ರೂಪಿಸಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಇರುತ್ತದೆ.
ತಕೈಚಿ ಅವರ ಅವಧಿಯಲ್ಲಿ ಅಮೆರಿಕದೊಂದಿಗಿನ ಜಪಾನ್ ಸಂಬಂಧ ಹೇಗಿರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಟ್ರಂಪ್ ಅವರ ತೆರಿಗೆ ನೀತಿ, ‘ಅಮೆರಿಕ ಮೊದಲು’ ಧೋರಣೆಯಿಂದಾಗಿ, ಹಲವು ದೇಶಗಳ ಜೊತೆಗಿನ ಅಮೆರಿಕದ ದ್ವಿಪಕ್ಷೀಯ ಸಂಬಂಧದಲ್ಲಿ ವ್ಯತ್ಯಾಸ ಉಂಟಾಗಿದೆ. ಕಳೆದ ವಾರ ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಟ್ರಂಪ್, ಜಪಾನಿಗೆ ಕೂಡ ಭೇಟಿಯಿತ್ತಿದ್ದಾರೆ. ಆ ಭೇಟಿಯ ವೇಳೆ ತಕೈಚಿ ಅವರ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವ ಟ್ರಂಪ್, ಉಭಯ ದೇಶಗಳ ನಡುವಿನ ಸಂಬಂಧ ಮುಂದಿನ ಹಂತಕ್ಕೆ ಹೋಗಲಿದೆ ಎಂದಿದ್ದಾರೆ. ಆಧುನಿಕ ತಂತ್ರಜ್ಞಾನಕ್ಕೆ ನಿರ್ಣಾಯಕ ಎನಿಸಿರುವ, ಕಾಂತೀಯ ಹಾಗೂ ವೇಗವರ್ಧಕ ಗುಣವುಳ್ಳ ವಿರಳ ಖನಿಜಗಳ ಮೇಲಿನ ಚೀನಾದ ಏಕಸ್ವಾಮ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಜಪಾನ್ ಹಾಗೂ ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಜಪಾನ್ ಹಿತಾಸಕ್ತಿಯ ದೃಷ್ಟಿಯಿಂದ ಇದೊಂದು ಪ್ರಮುಖ ಹೆಜ್ಜೆ.
ಟ್ರಂಪ್ ಅವರ ಇತ್ತೀಚಿನ ಏಷ್ಯಾ ಪ್ರವಾಸದ ವೇಳೆ ಮಲೇಷ್ಯಾ, ಬ್ರೆಜಿಲ್, ಥಾಯ್ಲೆಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ದೇಶಗಳ ಜೊತೆಗೆ ಅಮೆರಿಕ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಲು ದಕ್ಷಿಣ ಕೊರಿಯಾಕ್ಕೆ ಅಮೆರಿಕ ಅನುಮತಿ ನೀಡಿದೆ. ದಕ್ಷಿಣ ಕೊರಿಯಾದಲ್ಲಿ ಷಿ ಜಿನ್ಪಿಂಗ್ ಅವರನ್ನು ಮುಖಾಮುಖಿಯಾದ ಟ್ರಂಪ್, ಅಮೆರಿಕದಲ್ಲಿ ಸಂಶ್ಲೇಷಿತ ಒಪಿಯಾಯ್ಡ್ ಫೆಂಟನಿಲ್ ಕಳ್ಳಸಾಗಣೆಯನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಚೀನಾ ಹೇಳಿರುವುದರಿಂದ, ಚೀನಾದ ಸರಕುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಮಾತನ್ನಾಡಿದ್ದಾರೆ. ಈ ಎಲ್ಲ ಒಪ್ಪಂದಗಳು ಅಮೆರಿಕದಲ್ಲಿ ಹೆಚ್ಚಿನ ಹೂಡಿಕೆ, ಅಮೆರಿಕದ ಸರಕುಗಳ ಬಳಕೆಯ ಷರತ್ತುಗಳ ಮೇಲೆ ನಡೆದಿವೆ.
ಅಮೆರಿಕ, ಭಾರತ ಹಾಗೂ ಜಪಾನ್ ನಡುವಿನ ತ್ರಿಕೋನ ಸಂಬಂಧ ‘ಚೀನಾ ಸಮಾನ ಶತ್ರು’ ಎಂಬ ಅಂಶದ ಮೇಲೆ ನಿಂತಿದೆ. ಟ್ರಂಪ್ ಅವರ ನೀತಿಯಿಂದಾಗಿ ಚೀನಾ ಕುರಿತ ಅಮೆರಿಕದ ಧೋರಣೆ ಬದಲಾದರೆ, ಈ ತ್ರಿಕೋನ ಸಂಬಂಧದಲ್ಲಿ ವ್ಯತ್ಯಾಸವಾಗಬಹುದು. ಕ್ವಾಡ್ ಕೆಲಸಕ್ಕೆ ಬಾರದೇ ಉಳಿಯಬಹುದು. ಈ ತ್ರಿಕೋನ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವುದು ಜಪಾನ್‌ಗೆ ಅನಿವಾರ್ಯ. ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರ ಜೊತೆಗೆ ದೂರವಾಣಿ ಮಾತುಕತೆ ನಡೆಸಿರುವ ತಕೈಚಿ, ದ್ವಿಪಕ್ಷೀಯ ಸಂಬಂಧದ ಸುವರ್ಣ ಅಧ್ಯಾಯ ಆರಂಭವಾಗಿದೆ ಎಂದಿದ್ದಾರೆ. ಮೋದಿ ಹಾಗೂ ಟ್ರಂಪ್ ಅವರ ನಡುವೆ ತಕೈಚಿ ಸೇತುವೆಯಾಗಬಹುದೇ? ಅಬೆ ಅವರ ಛಾಯೆಯನ್ನು ಮೀರಿ ತಕೈಚಿ, ಜಪಾನ್‌ಗೆ ಕಸುವು ತುಂಬುವರೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.