ADVERTISEMENT

ಸೀಮೋಲ್ಲಂಘನ | ಅತಂತ್ರ ಪಾಕ್‌: ಶಾಹಬಾಝ್ ಆಸರೆಯೇ?

ದೇಶವನ್ನು ಆರ್ಥಿಕ ಆಘಾತದಿಂದ ಪಾರು ಮಾಡಬೇಕಿರುವ ಅತಿದೊಡ್ಡ ಸವಾಲು ಅವರ ಮುಂದಿದೆ

ಸುಧೀಂದ್ರ ಬುಧ್ಯ
Published 1 ಮೇ 2022, 19:31 IST
Last Updated 1 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಕಿಸ್ತಾನದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಷರೀಫ್, ಭುಟ್ಟೊ ಮತ್ತು ಸೇನೆ ಎಂಬ ತ್ರಿಕೋನ ಬಿಂದುಗಳ ಮಧ್ಯೆ ಇದ್ದ ಪಾಕಿಸ್ತಾನದ ಅಧಿಕಾರ ಕೇಂದ್ರವನ್ನು ಆ ತ್ರಿಕೋನದಿಂದ ಆಚೆ ಎಳೆದು ಅಧಿಕಾರಕ್ಕೆ ಬಂದಿದ್ದ ಇಮ್ರಾನ್ ಖಾನ್ ಅವರು ಅವಧಿ ಮುಗಿಸದೇ ಅಧಿಕಾರ ಕೇಂದ್ರದಿಂದ ಹೊರನಡೆದಿದ್ದಾಗಿದೆ. ಆರ್ಥಿಕವಾಗಿ ಕುಗ್ಗಿರುವ, ಮುಸ್ಲಿಂ ಜಗತ್ತಿಗೆ ಬೇಡವಾದ, ಅಮೆರಿಕದ ಅಸಡ್ಡೆ ನೋಟಕ್ಕೆ ಗುರಿಯಾಗಿರುವ ಪಾಕಿಸ್ತಾನದ ಚುಕ್ಕಾಣಿ ಮತ್ತೊಮ್ಮೆ ಷರೀಫ್ ಕುಟುಂಬದ ಕೈಗೆ ಬಂದಿದೆ.

ಪಾಕಿಸ್ತಾನದ ವಿಷಯದಲ್ಲಿ ಅಮೆರಿಕ ಮತ್ತು ಆರ್ಮಿಯ ಮರ್ಜಿಗೆ ಬೀಳದೆ ಯಾವುದೇ ರಾಜಕೀಯ ಪಕ್ಷ ಅಧಿಕಾರ ನಡೆಸಲು ಸಾಧ್ಯವಿಲ್ಲ. ಷರೀಫ್ ಕುಟುಂಬಕ್ಕೆ ಈ ಸತ್ಯ ಬಹುಬೇಗ ಅರ್ಥವಾಗಿತ್ತು. ತಮ್ಮ ಉದ್ಯಮ ವಿಸ್ತರಣೆಗೆ ಇದ್ದ ತೊಡಕುಗಳನ್ನು ರಾಜಕೀಯವಾಗಿ ನಿವಾರಿಸಿಕೊಳ್ಳಲು ಷರೀಫ್ ಕುಟುಂಬವು ನವಾಜ್ ಷರೀಫ್ ಅವರನ್ನು ರಾಜಕೀಯಕ್ಕೆ ಕಳುಹಿಸಿತ್ತು. 1988ರಲ್ಲಿ ನವಾಜ್ ಷರೀಫ್ ಪಾಕಿಸ್ತಾನದ ಪಂಜಾಬ್ ವಿಧಾನಸಭೆ ಪ್ರವೇಶಿಸಿದರು. ನಂತರ ಮುಖ್ಯಮಂತ್ರಿಯಾದರು. ‘ಪಾಕಿಸ್ತಾನದ ಕಾನೂನು ವ್ಯವಸ್ಥೆಯನ್ನು ಷರಿಯಾದ ಅನ್ವಯ ಮರುರೂಪಿಸುತ್ತೇನೆ, ಇಸ್ಲಾಂ ಆಶಯಗಳನ್ನು ಶಿಕ್ಷಣ ಮತ್ತು ಆರ್ಥಿಕ ರಂಗದಲ್ಲಿ ತರುತ್ತೇನೆ’ ಎಂಬುವು ಅವರ ಆಶ್ವಾಸನೆಗಳಾಗಿದ್ದವು. ಸೇನೆಯ ಉನ್ನತ ಅಧಿಕಾರಿಗಳಿಗೆ ದುಬಾರಿ ಕಾರುಗಳ ಉಡುಗೊರೆ ನೀಡಿ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ನವಾಜ್ ಪ್ರಯತ್ನಿಸಿದರು. ಅಮೆರಿಕದ ಪ್ರೀತಿಗೆ ಪಾತ್ರರಾಗುವಂತೆ ನಡೆದುಕೊಂಡರು. ಪಾಕಿಸ್ತಾನದ ಪ್ರಧಾನಿಯಾಗುವುದು ಅವರಿಗೆ ಸುಲಭವಾಯಿತು. ಇದೇವೇಳೆ ಸಹೋದರನ ಹಾದಿಯನ್ನೇ ಹಿಡಿದ ಶಾಹಬಾಝ್ ಷರೀಫ್ ರಾಜಕೀಯವಾಗಿ ಮುನ್ನೆಲೆಗೆ ಬಂದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾದರು.

ನವಾಜ್ ಷರೀಫ್ ಅವರಿಗೆ ಪ್ರಧಾನಿಯಾಗಿ ಆ ಹುದ್ದೆಯಲ್ಲಿ ಕೂತು ಕಾರ್ಯನಿರ್ವಹಿಸುವುದು ಕಠಿಣವಾಗತೊಡಗಿತು. ಪಾಕಿಸ್ತಾನದ ಗುಪ್ತಚರ ಇಲಾಖೆಯ ಮುಖ್ಯಸ್ಥರ ಆಯ್ಕೆ ವಿಷಯದಲ್ಲಿ ನವಾಜ್ ಷರೀಫ್ ಮತ್ತು ಸೇನೆಯ ನಡುವೆ ಭಿನ್ನಾಭಿಪ್ರಾಯ ಮೊಳೆಯಿತು. ಈ ಕಂದಕ ಹಿರಿದಾಗಿ ನವಾಜ್ ಷರೀಫ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ನಂತರ ಮತ್ತೊಮ್ಮೆ ಅವರು ಅಧಿಕಾರ ಕೇಂದ್ರಕ್ಕೆ ಬಂದಾಗಲೂ ಈ ವಿಷಯವೇ ಅವರ ಹುದ್ದೆಯನ್ನು ಅಲುಗಾಡಿಸಿತ್ತು.

ADVERTISEMENT

1998ರಲ್ಲಿ ತಮಗೆ ತೊಡಕಾಗಿದ್ದ ಸೇನಾ ವರಿಷ್ಠರನ್ನು ಬದಲಿಸಿ, ಪರ್ವೇಜ್ ಮುಷರಫ್ ಅವರನ್ನು ಸೇನೆಯ ವರಿಷ್ಠರನ್ನಾಗಿ ನವಾಜ್ ನೇಮಿಸಿದರು. ಆದರೆ ನವಾಜ್ ಷರೀಫರ ವಿರುದ್ಧವೇ ಮುಷರಫ್ ತಿರುಗಿಬಿದ್ದರು. ಆಡಳಿತವನ್ನು ತೆಕ್ಕೆಗೆ ತೆಗೆದುಕೊಂಡು ಷರೀಫ್ ಸಹೋದರರನ್ನು ಗಡಿಪಾರು ಮಾಡಿದರು. ಮುಖ್ಯ ಹುದ್ದೆಗಳನ್ನು ಅಲಂಕರಿಸಿದ್ದರೂ ನವಾಜ್ ಮತ್ತು ಶಾಹಬಾಝ್ ಪಾಕಿಸ್ತಾನ ತೊರೆದು ಸೌದಿ ಅರೇಬಿಯಾದಲ್ಲಿ ಆಶ್ರಯ ಪಡೆಯಬೇಕಾಯಿತು.

10 ವರ್ಷಗಳ ಅಜ್ಞಾತವಾಸದ ಬಳಿಕ ಪಾಕಿಸ್ತಾನಕ್ಕೆ ಮರಳಿದ ನವಾಜ್ ಮತ್ತೊಮ್ಮೆ ಪ್ರಧಾನಿಯಾದರು. ಆದರೆ ಆಡಳಿತದ ವ್ಯಾಪಕ ಭ್ರಷ್ಟಾಚಾರ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿತು. ಇತ್ತ ಶಾಹಬಾಝ್ 2008ರ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಪಂಜಾಬ್ ಮುಖ್ಯಮಂತ್ರಿಯಾದರು. ನವಾಜ್ ತೆರೆಮರೆಗೆ ಸರಿಯುವ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಇಮ್ರಾನ್ ಖಾನ್ ಮುಖ್ಯಭೂಮಿಕೆಗೆ ಬಂದರು. ತಾನು ಕಟ್ಟಾ ಇಸ್ಲಾಮ್ ಅನುಯಾಯಿ ಎಂಬಂತೆ ಬಿಂಬಿಸಿಕೊಂಡರು. ಅವಕಾಶವಾದಿ ರಾಜಕಾರಣದ ಎಲ್ಲ ಪಟ್ಟುಗಳೂ ಅವರಿಗೆ ತಿಳಿದಿ
ದ್ದವು. ಪಾಕಿಸ್ತಾನದ ದುಃಸ್ಥಿತಿಗೆ ಏನು ಕಾರಣ ಎಂದು ವಿಶ್ಲೇಷಿಸುವಾಗ, ಸೇನೆಯ ರಾಜಕೀಯ ಹಸ್ತಕ್ಷೇಪ ಕಾರಣ ಎಂದು ನೆಪಮಾತ್ರಕ್ಕೂ ಅವರು ಹೇಳಲಿಲ್ಲ. ಅಮೆರಿಕವನ್ನು ಮೆಚ್ಚಿಸುವ ಮಾತನ್ನು ಆಡಿದರು. ಪ್ರಧಾನಿ ಪಟ್ಟ ಇಮ್ರಾನ್ಕೈಗೆಟುಕಿತು. ಆದರೆ ಅವರು ಬಯಸಿದ ಬದಲಾವಣೆ ಸಾಧ್ಯವಾಗಲಿಲ್ಲ. ಆರ್ಥಿಕತೆ ಮತ್ತಷ್ಟು ಕೃಶಗೊಂಡಿತು. ಬೆಲೆ ಏರಿಕೆಯ ಸಮಸ್ಯೆ ಜನರನ್ನು ಹಿಪ್ಪೆ ಮಾಡಿತು. ಅಮೆರಿಕದ ದಕ್ಷಿಣ ಏಷ್ಯಾ ನೀತಿಯಲ್ಲಿ ಪಾಕಿಸ್ತಾನಕ್ಕೆ ಪ್ರಾಮುಖ್ಯತೆ ಇಲ್ಲವಾಯಿತು. ರಷ್ಯಾ ಮತ್ತು ಚೀನಾದೊಂದಿಗೆ ನಿಕಟ ಸಂಬಂಧ ಸಾಧಿಸಲು ಇಮ್ರಾನ್ ಪ್ರಯತ್ನಿಸಿದರು. ಆದರೆ ಲಾಭವಾಗಲಿಲ್ಲ. ಐಎಸ್ಐ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆ
ಯಲ್ಲಿ ಸೇನೆಯನ್ನು ನಿರ್ಲಕ್ಷಿಸಿದ್ದು ನೆಪವಾಗಿ, ಅವರನ್ನು ಪದಚ್ಯುತಿಗೊಳಿಸುವ ಪ್ರಯತ್ನ ಆರಂಭವಾಯಿತು. ಅವಿಶ್ವಾಸ ಗೊತ್ತುವಳಿಯು ಹುದ್ದೆ ಕಸಿಯಿತು.

ಹಾಗಂತ ನೂತನ ಪ್ರಧಾನಿ ಶಾಹಬಾಝ್ ಷರೀಫರ ಹಾದಿ ಸುಗಮವೇ? ಅವರಿಗೆ ಅಧಿಕಾರದಲ್ಲಿ ಉಳಿಯಲು ಏನು ಮಾಡಬೇಕು ಎಂಬುದು ತಿಳಿದಿದೆ. ಆಡಳಿತದ ಅನುಭವವಿದೆ. ಆದರೆ ಸಮಸ್ಯೆಗಳ ಬುಗುಟೆಗಳನ್ನು ದಾಟಿಯೇ ಅವರು ನಡೆಯಬೇಕಿದೆ. ಆಂತರಿಕ ರಾಜಕೀಯ ಮತ್ತು ವಿದೇಶಾಂಗ ನೀತಿಯ ಕುರಿತು ಶಾಹಬಾಝ್ ಸ್ಪಷ್ಟ ನಿಲುವು ತಳೆಯಬೇಕಿದೆ. ಸದ್ಯದ ಮಟ್ಟಿಗೆ ಸರ್ಕಾರಕ್ಕೆ ಬೆಂಬಲ ನೀಡಿರುವ ಭುಟ್ಟೊ-ಜರ್ದಾರಿಗಳ ಪಿಪಿಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಶಾಹಬಾಝ್ ಷರೀಫ್ ನೇತೃತ್ವದ ಪಿಎಂಎಲ್(ಎನ್) ಪಕ್ಷ
ವನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಹಾಗಾಗಿ ಶಾಹಬಾಝ್ ನೇತೃತ್ವದ ಸರ್ಕಾರಕ್ಕೆ ಎಷ್ಟರಮಟ್ಟಿಗಿನ ಸಹಕಾರ ಸಿಗುತ್ತದೆ ಎಂದು ಕಾದು ನೋಡಬೇಕು.

ಶಾಹಬಾಝ್ ಎದುರಿಗಿರುವ ದೊಡ್ಡ ಸವಾಲು ಆರ್ಥಿಕತೆಯದ್ದು. ಪಾಕಿಸ್ತಾನ ತೀವ್ರ ಆರ್ಥಿಕ ಹಿಂಜರಿಕೆ ಅನುಭವಿಸುತ್ತಿದೆ. ಅತಿ ದೊಡ್ಡ ಸಾಲಗಾರ ರಾಷ್ಟ್ರವಾಗಿ ಮಾರ್ಪಟ್ಟಿದೆ. ವಿದೇಶಿ ವಿನಿಮಯದ ದಾಸ್ತಾನು ಬರಿದಾಗುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್, ಅಮೆರಿಕ ಮತ್ತು ಚೀನಾದಿಂದ ಬರುತ್ತಿರುವ ಪಾರು ಕಾಣಿಕೆಯು ಪಾಕಿಸ್ತಾನದ ಆರ್ಥಿಕತೆಯನ್ನು ಹಿಡಿದು ನಿಲ್ಲಿಸಿದೆ. ಐಎಂಎಫ್ ಜೊತೆಗೆ ಮಾತುಕತೆ ನಡೆಸಿ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯವಾದರೆ ಮಾತ್ರ ಹಣದುಬ್ಬರ ನಿರ್ವಹಿಸಲು ಸಾಧ್ಯ. ವರ್ಷದ ಆಸುಪಾಸಿನಲ್ಲಿ ಮುಂದಿನ ಚುನಾವಣೆ ಇರುವುದರಿಂದ, ಜನಪ್ರಿಯ ಯೋಜನೆ ಮತ್ತು ಕಠಿಣ ಆರ್ಥಿಕ ನೀತಿಯನ್ನು ಏಕಕಾಲದಲ್ಲಿ ನಿರ್ವಹಿಸುವುದು ಸುಲಭವಾಗಲಿಕ್ಕಿಲ್ಲ. ಇಮ್ರಾನ್ ತಾವು ಅಧಿಕಾರ ಕಳೆದುಕೊಳ್ಳಲು ಮುಖ್ಯ ಕಾರಣ ವಿದೇಶಿ ಶಕ್ತಿಗಳ ಕೈವಾಡ ಎಂದಿದ್ದರು. ಮುಖ್ಯವಾಗಿ, ಅಮೆರಿಕದ ತಾಳಕ್ಕೆ ಪ್ರತಿಪಕ್ಷದ ನಾಯಕರು ಹೆಜ್ಜೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಾದವನ್ನು ತನಿಖೆಯ ಮೂಲಕವೇ ಶಾಹಬಾಝ್ತಳ್ಳಿಹಾಕಬೇಕಿದೆ.

ಇನ್ನು, ವಿದೇಶಾಂಗ ನೀತಿಯ ಕುರಿತು ನೋಡುವುದಾದರೆ, ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇಂಗ್ಲೆಂಡ್ ಜೊತೆಗೆ ಉತ್ತಮ ಬಾಂಧವ್ಯ ಹೊಂದುವುದಾಗಿ ಶಾಹಬಾಝ್ ಘೋಷಿಸಿದ್ದಾರೆ. ಆದರೆ ಹೇಗೆ ಎಂದು ವಿವರಿಸಿಲ್ಲ. ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನಕ್ಕೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಿ ವರ್ಷಗಳು ಕಳೆದಿವೆ. ಅಬುಧಾಬಿಯಲ್ಲಿ ನಡೆದ ಐಒಸಿ ಸಮಾವೇಶದಲ್ಲಿ ಭಾರತ ಪಾಲ್ಗೊಂಡರೆ ತಾನು ಸಮಾವೇಶ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಎಚ್ಚರಿಸಿತ್ತು. ಆದರೆ ಅರಬ್ ರಾಷ್ಟ್ರಗಳು ಪಾಕಿಸ್ತಾನದ ಮುನಿಸಿಗೆ ಸೊಪ್ಪುಹಾಕಲಿಲ್ಲ. ಪಾಕಿಸ್ತಾನವು ಇಸ್ಲಾಂ ರಾಷ್ಟ್ರಗಳ ಸಮಾವೇಶದಿಂದ ಹೊರಗುಳಿಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಕೈಬಿಟ್ಟಾಗ, ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನದ ಬಗಲಿಗೆ ನಿಲ್ಲದೆ, ಅದು ಭಾರತದ ಆಂತರಿಕ ವಿಷಯ ಎಂದು ಸುಮ್ಮನಾಗಿದ್ದವು. ಹಾಗಾಗಿ ಶಾಹಬಾಝ್ ಇಸ್ಲಾಮಿಕ್ ರಾಷ್ಟ್ರಗಳನ್ನು ಒಲಿಸಿಕೊಳ್ಳುವ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.

ಸುಧೀಂದ್ರ ಬುಧ್ಯ

ಮುಖ್ಯವಾಗಿ ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧವಿರುವುದಾಗಿ ಶಾಹಬಾಝ್ ಹೇಳಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ಚಾಲ್ತಿಯಲ್ಲಿರುವ ಈ ಹಂತದಲ್ಲಿ ಭಾರತದ ಸಖ್ಯವನ್ನು ಚೀನಾ ಕೂಡ ಬಯಸುತ್ತಿದೆ. ಅಮೆರಿಕ ಇಲ್ಲವೇ ಚೀನಾದ ಬೆಂಬಲದ ಹೊರತಾಗಿ ಭಾರತದೊಂದಿಗೆ ಏಕಾಂಗಿಯಾಗಿ ಸೆಣಸುವ ಶಕ್ತಿ ಪಾಕಿಸ್ತಾನಕ್ಕೆ ಇಲ್ಲವಾದ್ದರಿಂದ ಶಾಂತಿಯ ಮಾತು ಅನಿವಾರ್ಯ. ಆದರೆ ಭಾರತದೊಂದಿಗಿನ ಯಾವುದೇ ಬೆಳವಣಿಗೆ ಅಲ್ಲಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ಆ ಕುರಿತು ಆತುರದ ಹೆಜ್ಜೆಯನ್ನು ಷರೀಫ್ ಇಡುವುದು ಅನುಮಾನ.

ಒಟ್ಟಿನಲ್ಲಿ, ನಾಟಕೀಯ ಬೆಳವಣಿಗೆಗಳ ನಡುವೆ ಅಧಿಕಾರದ ಗದ್ದುಗೆ ಏರಿರುವ ಶಾಹಬಾಝ್ ಷರೀಫ್, ಭ್ರಷ್ಟ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಆರ್ಥಿಕ ಆಘಾತದಿಂದ ಪಾಕಿಸ್ತಾನವನ್ನು ಪಾರುಮಾಡಿ ಶಹಬಾಸ್ ಎನ್ನಿಸಿಕೊಳ್ಳುವರೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.