ADVERTISEMENT

ಸೀಮೋಲ್ಲಂಘನ | ಟರ್ಕಿ: ಎದುರಾಳಿಯನ್ನು ಜೈಲಿಗೆ ತುರುಕಿ

ಒಂದೊಮ್ಮೆ ಟರ್ಕಿ ಪೂರ್ಣ ನಿರಂಕುಶಾಧಿಕಾರಕ್ಕೆ ಜಾರಿ ದರೆ ಮತ್ತೆ ಹಿಂತಿರುಗುವುದು ಕಷ್ಟ. ಅಟಾಟರ್ಕ್ ಕೆಮಲ್ ಪಾಷ ಕಟ್ಟಿದ ಆಧುನಿಕ ಟರ್ಕಿ ಹೊರಳುದಾರಿಯಲ್ಲಿದೆ.

ಸುಧೀಂದ್ರ ಬುಧ್ಯ
Published 1 ಏಪ್ರಿಲ್ 2025, 22:51 IST
Last Updated 1 ಏಪ್ರಿಲ್ 2025, 22:51 IST
   

ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಪ್ಪತ್ತು ವರ್ಷಗಳಿಂದ ಟರ್ಕಿಯನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡಿರುವ ಎರ್ಡೊಗನ್ ವಿರುದ್ಧ ಇದೀಗ ಜನ ಸಿಟ್ಟಿಗೆದ್ದಂತೆ ಕಾಣುತ್ತಿದೆ. ಇಸ್ತಾನ್‌ಬುಲ್‌ನ ಜನಪ್ರಿಯ ಮೇಯರ್ ಎಕ್ರಾಂ ಇಮಾಮೊಗ್ಲು ಅವರ ಬಂಧನ ಖಂಡಿಸಿ ಜನ ಬೀದಿಗೆ ಇಳಿದಿದ್ದಾರೆ. ಇಸ್ತಾನ್‌ ಬುಲ್‌ನಲ್ಲಿ ಆರಂಭವಾದ ಪ್ರತಿಭಟನೆಯು ಟರ್ಕಿಯ ಬಹುತೇಕ ನಗರಗಳಿಗೆ ಹಬ್ಬಿದೆ. ಎರ್ಡೊಗನ್ ಯಥಾಪ್ರಕಾರ, ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮಕ್ಕೆ ಮುಂದಾಗಿ
ದ್ದಾರೆ. ಎರ್ಡೊಗನ್ ಜಾಗತಿಕ ಸಂದರ್ಭದ ಲಾಭ ಪಡೆದು, ತಾವು ಮತ್ತೊಬ್ಬ ಷಿ ಜಿನ್‌ಪಿಂಗ್‌ ಅಥವಾ ಪುಟಿನ್ ಆಗುವತ್ತ ಹೆಜ್ಜೆ ಇರಿಸಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಜಸ್ಟಿಸ್ ಆ್ಯಂಡ್ ಡೆವಲಪ್‌ಮೆಂಟ್ ಪಾರ್ಟಿ ಮೂಲಕ ಅಧಿಕಾರಕ್ಕೆ ಬಂದ ಎರ್ಡೊಗನ್, ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ವಿವಿಧ ತಂತ್ರಗಳನ್ನು ಹೂಡಿದವರು. ಮೊದಲಿಗೆ ಜನರ ಮತೀಯ ಭಾವನೆಗಳನ್ನು ಬಳಸಿಕೊಂಡರು. ನಂತರ ಅಭಿವೃದ್ಧಿಯ ಮಂತ್ರದಂಡ ಹಿಡಿದು ಜನರಿಗೆ ಕನಸು ತುಂಬಿದರು. ಟರ್ಕಿಯ ರಾಜಕೀಯ ವ್ಯವಸ್ಥೆಯನ್ನು ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾಯಿಸಿದರು. ಸೇನೆ ಮತ್ತು ನ್ಯಾಯಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಾಧ್ಯಮಗಳ ಒಡೆತನ ತಮ್ಮ ನಿಕಟವರ್ತಿಗಳ ಬಳಿಯೇ ಇರುವಂತೆ ನೋಡಿಕೊಂಡರು.

ಎರ್ಡೊಗನ್ ತಮಗೆ ಎದುರಾಳಿಯೇ ಇರಬಾರದು ಎಂಬಂತೆ ನಡೆದುಕೊಂಡರು. ವಿರೋಧ ಪಕ್ಷಗಳ ನಾಯಕರ ಮೇಲೆ ಮೊಕದ್ದಮೆಗಳು ದಾಖಲಾದವು. ಹಲವರು ಸೆರೆವಾಸ ಅನುಭವಿಸಬೇಕಾಯಿತು. ಈ ಇಪ್ಪತ್ತು ವರ್ಷಗಳಲ್ಲಿ ರಾಜಕೀಯವಾಗಿ ಎರ್ಡೊಗನ್ ಅವರ ಎದಿರು ಭುಜ ಸೆಟೆಸಿ ನಿಂತವರು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಎರ್ಡೊಗನ್ ಅವರನ್ನು ರಾಜಕೀಯವಾಗಿ ಪ್ರಶ್ನಿಸಿದವರು ಇಮಾಮೊಗ್ಲು.

ADVERTISEMENT

ಎರ್ಡೊಗನ್ ಅವರು ಇಸ್ತಾನ್‌ಬುಲ್ ಮೇಯರ್ ಆಗಿ ನಂತರ ರಾಜಕೀಯವಾಗಿ ಎತ್ತರಕ್ಕೆ ಏರಿದವರು. ಹಾಗಾಗಿ ಇಸ್ತಾನ್‌ಬುಲ್ ಕುರಿತು  ಅವರಿಗೆ ವಿಶೇಷ ಮಮಕಾರ. ಅಲ್ಲಿ ಆಡಳಿತ ಪಕ್ಷದ ಎರಡು ದಶಕಗಳ ಹಿಡಿತವನ್ನು ಕೊನೆಗೊಳಿಸಿ ಇಮಾಮೊಗ್ಲು 2019ರಲ್ಲಿ ಅಲ್ಲಿನ ಮೇಯರ್ ಆದರು. ಫಲಿತಾಂಶವನ್ನು ಸರ್ಕಾರ ಒಪ್ಪಿಕೊಳ್ಳಲಿಲ್ಲ. ಮತ್ತೊಮ್ಮೆ ಚುನಾವಣೆ ನಡೆಸಲಾಯಿತು. ಇಮಾಮೊಗ್ಲು ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಗೆದ್ದರು. ತಾವು ಬೆಂಬಲಿಸಿದ ಅಭ್ಯರ್ಥಿ ಸೋತಿದ್ದರಿಂದ ಎರ್ಡೊಗನ್ ಅವರಿಗೆ ಮುಖಭಂಗವಾಯಿತು. ಇಮಾಮೊಗ್ಲು ಅವರತ್ತ ವಿರೋಧ ಪಕ್ಷಗಳು ಕಣ್ಣು ನೆಟ್ಟವು.

ಎರ್ಡೊಗನ್ ಅವರನ್ನು 2023ರ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಿಸಲು ಇಮಾಮೊಗ್ಲು ಸಮರ್ಥ ಅಭ್ಯರ್ಥಿ ಎಂದು ವಿರೋಧ ಪಕ್ಷಗಳು ನಿರ್ಧರಿಸಿದವು. ಆದರೆ ಸಾರ್ವಜನಿಕ ಅಧಿಕಾರಿಯನ್ನು ಅವಮಾನಿಸಿದ ಆರೋಪದ ಮೇಲೆ 2022ರಲ್ಲಿ ಇಮಾಮೊಗ್ಲು ಜೈಲು ಸೇರಿದರು! ಹಾಗಾಗಿ 2023ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇಮಾಮೊಗ್ಲು ಸ್ಪರ್ಧಿಸಲಿಲ್ಲ. ಇಮಾಮೊಗ್ಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. 2024ರಲ್ಲಿ ಇಸ್ತಾನ್‌ಬುಲ್ ಮೇಯರ್ ಸ್ಥಾನಕ್ಕೆ ನಡೆದ ಚನಾವಣೆಯಲ್ಲಿ ಸ್ಪರ್ಧಿಸಿ ಮತ್ಮೊಮ್ಮೆ ಗೆದ್ದರು. ಎರ್ಡೊಗನ್ ಮೀಸೆ ಮಣ್ಣಾಯಿತು.

ಮತ್ಮೊಮ್ಮೆ ವಿರೋಧ ಪಕ್ಷಗಳು ಇಮಾಮೊಗ್ಲು ಅವರ ಸುತ್ತುವರಿದವು. 2028ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್ ವಿರುದ್ಧ ಇಮಾಮೊಗ್ಲು ಅವರನ್ನು ಕಣಕ್ಕೆ ಇಳಿಸಲು ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ತಯಾರಿ ನಡೆಸತೊಡಗಿತು. ಮಾರ್ಚ್ 23ರಂದು ಈ ಕುರಿತು ಅಧಿಕೃತ ಘೋಷಣೆಯಾಗುವುದಿತ್ತು, ಆದರೆ ಮಾರ್ಚ್ 19ರಂದು ಇಮಾಮೊಗ್ಲು ಮತ್ತೊಮ್ಮೆ ಬಂಧನಕ್ಕೆ ಒಳಗಾದರು! ಭ್ರಷ್ಟಾಚಾರ ಮತ್ತು ಭಯೋತ್ಪಾದಕ ಸಂಘಟನೆ ಜೊತೆಗಿನ ಸಂಪರ್ಕದ ವಿಷಯವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿ, ಬಂಧಿಸಲಾಯಿತು. ಜನ ಬೀದಿಗಿಳಿದರು.

ಎರ್ಡೊಗನ್ ಯಥಾಪ್ರಕಾರ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಕ್ರಮವನ್ನು ಜನರನ್ನು ದಂಗೆ ಎಬ್ಬಿಸಲು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ. ಆದರೆ ಪ್ರತಿಭಟನೆ, ಬಂಧನ ಮುಂದುವರಿದಿದೆ.

ಹಾಗಾದರೆ, ಎರ್ಡೊಗನ್ ತಾವು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಹೀಗೆ ರಾಜಕೀಯ ಸೇಡಿನ ಕ್ರಮಕ್ಕೆ ಮುಂದಾಗಿರಬಹುದೇ? ಎರ್ಡೊಗನ್ ಅವರ ಅಧ್ಯಕ್ಷೀಯ ಅವಧಿಯು 2028ರಲ್ಲಿ ಕೊನೆಗೊಳ್ಳುತ್ತದೆ.
ಟರ್ಕಿಯ ಸಂವಿಧಾನದ ಪ್ರಕಾರ ಐದು ವರ್ಷಗಳ ಎರಡು ಪೂರ್ಣ ಅವಧಿಗೆ ಮಾತ್ರ ಒಬ್ಬ ವ್ಯಕ್ತಿ ಅಧ್ಯಕ್ಷರಾಗ
ಬಹುದು. ಆದರೆ ಅಧಿಕಾರದ ಅವಧಿಯನ್ನು ವಿಸ್ತರಿಸಿಕೊಳ್ಳುವ ಒಂದು ಪಾರುಗಂಡಿ ಟರ್ಕಿಯ ಸಂವಿಧಾನದಲ್ಲಿ ಉಳಿದುಬಿಟ್ಟಿದೆ. ಆ ಪ್ರಕಾರ ಸಂಸತ್ತು ಅವಧಿಪೂರ್ವ ಚುನಾವಣೆ ಕರೆದರೆ, ಅಧ್ಯಕ್ಷರು ಕಾನೂನುಬದ್ಧವಾಗಿ ಮತ್ತೆ ಸ್ಪರ್ಧಿಸಬಹುದು. ಎರ್ಡೊಗನ್ ಈ ಪಾರುಗಂಡಿಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಒಂದೊಮ್ಮೆ ಅವಧಿಪೂರ್ವ ಚುನಾವಣೆ ಘೋಷಿಸಿದರೆ, 71 ವರ್ಷದ ಎರ್ಡೋಗನ್ 54 ವರ್ಷದ ಇಮಾ ಮೊಗ್ಲು ವಿರುದ್ಧ ಸೆಣಸಬೇಕಾಗುತ್ತದೆ. ಇಮಾಮೊಗ್ಲು ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಎರ್ಡೊಗನ್ ಅವರ ಜನಪ್ರಿಯತೆ ಮುಕ್ಕಾಗುತ್ತಿದೆ. ಎರ್ಡೊಗನ್ ಅವರ ಅವಧಿಯಲ್ಲಿ ಟರ್ಕಿ ಅಸಾಧಾರಣ ಬೆಳವಣಿಗೆಯನ್ನೇನೂ ಕಂಡಿಲ್ಲ. 2018ರಿಂದ ಹಣದುಬ್ಬರ ಮತ್ತು ಆರ್ಥಿಕ ಕುಸಿತವನ್ನು ಟರ್ಕಿ ಎದುರಿಸುತ್ತಿದೆ. ನಿರುದ್ಯೋಗ ಸಮಸ್ಯೆಯು ಟರ್ಕಿಯನ್ನು ಈಗಲೂ ಕಾಡುತ್ತಿದೆ. ಎರ್ಡೊಗನ್ ನೇತೃತ್ವದ ಸರ್ಕಾರದ ಆರ್ಥಿಕ ನೀತಿಯನ್ನು ಟರ್ಕಿಯ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಬಹಿರಂಗವಾಗಿ ಟೀಕಿಸಿದೆ.

ಟರ್ಕಿಯ ಬೆಳವಣಿಗೆಗೆ ಎರ್ಡೊಗನ್ ಅವರ ಸರ್ವಾಧಿಕಾರಿ ಧೋರಣೆಗಳು ಅಡ್ಡಿಬರುತ್ತಿವೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ನೀತಿಯನ್ನು ಟೀಕಿಸಿದವರನ್ನು ವಿವಿಧ ರೀತಿಯಲ್ಲಿ ಬಗ್ಗುಬಡಿಯುವ ಕೆಲಸವೂ ನಡೆಯುತ್ತಿದೆ. ಲಕ್ಷಾಂತರ ಸಿರಿಯನ್ ನಿರಾಶ್ರಿತರಿಗೆ ಟರ್ಕಿಯಲ್ಲಿ ವಾಸಿಸಲು ಅವಕಾಶ ನೀಡುವ ಸರ್ಕಾರದ ಕ್ರಮದ ವಿರುದ್ಧ ರಾಷ್ಟ್ರೀಯತಾವಾದಿ ಆಂದೋಲನ ಪ್ರಾರಂಭವಾಗಿದೆ. 2024ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಎರ್ಡೊಗನ್ ತಮ್ಮ ಪಕ್ಷದ ಗೆಲುವಿಗಾಗಿ ತಮ್ಮ ಎಲ್ಲ ಅಧಿಕಾರವನ್ನು ಬಳಸಿದರೂ ಆಡಳಿತ ಪಕ್ಷ ದೊಡ್ಡಮಟ್ಟದ ಸೋಲು ಕಂಡಿದೆ. ಈ ಎಲ್ಲ ಕಾರಣಗಳಿಂದ ಇಮಾಮೊಗ್ಲು ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಿಸುವುದು ಎರ್ಡೊಗನ್ ಅವರಿಗೆ ಸುಲಭವಲ್ಲ.

ಈ ಬಾರಿ ಇಮಾಮೊಗ್ಲು ಅವರ ವಿರುದ್ಧ ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಲಾಗಿದೆ. ಜೊತೆಗೆ ಇಸ್ತಾನ್‌ಬುಲ್ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಮಂಡಳಿಯ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಇಮಾಮೊಗ್ಲು ಅವರ ಡಿಪ್ಲೊಮಾವನ್ನು ರದ್ದುಗೊಳಿಸಿದೆ. ಟರ್ಕಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು ವಿಶ್ವವಿದ್ಯಾಲಯದ ಪದವಿ ಹೊಂದಿರಬೇಕು ಎಂಬ ನಿಯಮವಿದೆ. ಇಮಾಮೊಗ್ಲು ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಅನರ್ಹಗೊಳಿಸಿ, ಟರ್ಕಿಯ ಅತಿದೊಡ್ಡ ನಗರ ಮತ್ತು ಆರ್ಥಿಕ ಶಕ್ತಿ ಕೇಂದ್ರದ ಮೇಯರ್ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ ತಮ್ಮ ಆತಂಕ ದೂರವಾಗಬಹುದು ಎಂದು ಎರ್ಡೊಗನ್ ನಿರ್ಧರಿಸಿರಬಹುದು.

ಇತ್ತ ಜಾಗತಿಕ ಸಂದರ್ಭವೂ ಬದಲಾಗಿದೆ. ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದಾರೆ. ‘ಜಗತ್ತಿನ ಉಸಾಬರಿ ನಮಗೆ ಬೇಡ’ ಎಂಬ ನಿಲುವಿನ ಟ್ರಂಪ್, ನ್ಯಾಟೊ ಭಾಗವಾಗಿರುವ ಟರ್ಕಿ, ನಿರಂಕುಶ ಪ್ರಭುತ್ವದತ್ತ
ಹೊರಳಿದರೆ ಕಿವಿಹಿಂಡುವ ಪ್ರಯತ್ನ ಮಾಡಲಾರರು. ರಷ್ಯಾ ಮತ್ತು ಚೀನಾದ ಅಧ್ಯಕ್ಷರು, ಸಾಂವಿಧಾನಿಕ ತೊಡಕುಗಳನ್ನು ಕಿತ್ತೊಗೆದು ತಮ್ಮ ಅಧಿಕಾರ ಅವಧಿಯನ್ನು ವಿಸ್ತರಿಸಿಕೊಂಡಿದ್ದಾರೆ. ಇದನ್ನು ಕಂಡಿರುವ ಎರ್ಡೊಗನ್ ತಾವೂ ಪುಟಿನ್ ಆಗಬೇಕು ಎಂದು ಬಯಸಿದ್ದರೆ ಅಚ್ಚರಿಯಿಲ್ಲ.

ಆದರೆ ಟರ್ಕಿ ರಷ್ಯಾ ಅಲ್ಲ. ನೈಸರ್ಗಿಕ ಸಂಪನ್ಮೂಲದಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ರಷ್ಯಾಕ್ಕಿಂತ ಭಿನ್ನವಾಗಿ, ಟರ್ಕಿಯ ಆರ್ಥಿಕತೆ ವಿದೇಶಿ ಹೂಡಿಕೆ ಮೇಲೆ ಅವಲಂಬಿ ತವಾಗಿದೆ. ಎರ್ಡೊಗನ್ ಹೆಚ್ಚು ಸರ್ವಾಧಿಕಾರಿಯಾಗುತ್ತಿದ್ದಂತೆ ಹೂಡಿಕೆದಾರರು ಪಲಾಯನ ಮಾಡುತ್ತಿದ್ದಾರೆ. ಒಂದೊಮ್ಮೆ ಟರ್ಕಿ ಪೂರ್ಣ ನಿರಂಕುಶಾಧಿಕಾರಕ್ಕೆ ಜಾರಿ ದರೆ ಮತ್ತೆ ಹಿಂತಿರುಗುವುದು ಕಷ್ಟ. ಅಟಾಟರ್ಕ್ ಕೆಮಲ್ ಪಾಷ ಕಟ್ಟಿದ ಆಧುನಿಕ ಟರ್ಕಿ ಹೊರಳುದಾರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.