ಅಚ್ಚರಿಯ ವಾಗ್ವಾದ, ಮುಗಿದೀತೆ ಯುದ್ಧ?!
ಉಕ್ರೇನ್ ಯುದ್ಧಕ್ಕೆ ಮೂರು ವರ್ಷ ತುಂಬಿದೆ. ಶ್ವೇತಭವನಕ್ಕೆ ನೂತನ ಅಧ್ಯಕ್ಷರ ಪ್ರವೇಶವಾಗಿದೆ. ಉಕ್ರೇನ್ ಯುದ್ಧದ ನೇರ ಮತ್ತು ಪರೋಕ್ಷ ಪಾತ್ರಧಾರಿಗಳಿಗೆ ಇದೀಗ ಯುದ್ಧ ಮುಗಿಯುವುದು ಬೇಕಿದೆ. ಹಾಗಂತ ಮುಖ ಉಳಿಸಿಕೊಳ್ಳುವ ಮಾರ್ಗ ಹುಡುಕದೇ ಯುದ್ಧಕ್ಕೆ ಅಂತ್ಯ ಹಾಡುವುದು ಸಾಧ್ಯವಿಲ್ಲ. ಅಂತಹದ್ದೊಂದು ಮಾರ್ಗ ಹುಡುಕುವ ಪ್ರಯತ್ನ ಇದೀಗ ನಡೆಯುತ್ತಿರಬಹುದೇ? ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಆ ಪ್ರಶ್ನೆಯ ನೆರಳಲ್ಲೇ ನೋಡಬೇಕು.
ಹೋದ ವಾರ ಡೊನಾಲ್ಡ್ ಟ್ರಂಪ್ ಮತ್ತು ವೊಲೊಡಿಮಿರ್ ಝೆಲೆನ್‌ಸ್ಕಿ ಭೇಟಿಯ ವೇಳೆ ನಡೆದ ಮಾತಿನ ಚಕಮಕಿ, ಜಗತ್ತಿನಾದ್ಯಂತ ಪ್ರಮುಖ ಸುದ್ದಿಯಾಗಿ ಬಿತ್ತರವಾಯಿತು. ಶ್ವೇತಭವನದ ಅಧ್ಯಕ್ಷರ ಕೊಠಡಿಯಲ್ಲಿ, ಮಾಧ್ಯಮಗಳ ಎದುರು ನಡೆದ ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರ ನಡುವಿನ ವಾಕ್ಸಮರ ಒಂದು ಪ್ರಮುಖ ವಿದ್ಯಮಾನ ಎಂಬುದು ಖರೆಯಾದರೂ ಅನಿರೀಕ್ಷಿತವಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ತಮ್ಮ ಪ್ರಚಾರ ಸಭೆಗಳಲ್ಲಿ ‘ನಾನು ಅಧ್ಯಕ್ಷನಾದ ಬಳಿಕ ಉಕ್ರೇನ್ ಯುದ್ಧವನ್ನು 24 ಗಂಟೆಗಳಲ್ಲಿ ಕೊನೆಗೊಳಿಸುತ್ತೇನೆ’ ಎಂಬ ಮಾತನ್ನು ಟ್ರಂಪ್ ಆಡುತ್ತಿದ್ದರು. ‘ಯುದ್ಧ ಇಷ್ಟು ಕಾಲ ಮುಂದುವರಿದಿದೆ ಎಂದರೆ ಅದಕ್ಕೆ ಬೈಡನ್ ಅವರಂತಹ ದುರ್ಬಲ ಅಧ್ಯಕ್ಷರನ್ನು ಅಮೆರಿಕ ಹೊಂದಿರುವುದೇ ಕಾರಣ’ ಎಂದೂ ಕುಟುಕುತ್ತಿದ್ದರು. ಝೆಲೆನ್‌ಸ್ಕಿ ಅವರ ಎದುರು ಇದೀಗ ಟ್ರಂಪ್ ತಾನು ‘ಪ್ರಬಲ ಅಧ್ಯಕ್ಷ’ ಎಂದು ತೋರಿಸಿಕೊಂಡಿದ್ದಾರೆ! ಝೆಲೆನ್‌ಸ್ಕಿ ಅವರ ಉಡುಗೆಯ ಕುರಿತ ಪ್ರಶ್ನೆಯಿಂದ ಆರಂಭವಾದ, ಅವರನ್ನು ಮುಜುಗರಕ್ಕೆ ಈಡು ಮಾಡುವ ಪ್ರಕ್ರಿಯೆ, ಅವರು ಹೊರನಡೆದು ಹೋಗುವ ತನಕ ಮುಂದುವರಿಯಿತು.
ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರ ನಡುವಿನ ವಾಕ್ಸಮರಕ್ಕೆ ಪೀಠಿಕೆಯಂತೆ ಕೆಲವು ವಿದ್ಯಮಾನಗಳು ಜರುಗಿದ್ದವು. ಉಕ್ರೇನ್ ಯುದ್ಧದ ಕುರಿತು ಚರ್ಚಿಸಲು ರಿಯಾದ್ ಮತ್ತು ಪ್ಯಾರಿಸ್‌ನಲ್ಲಿ ಎರಡು ಪ್ರತ್ಯೇಕ ಸಭೆಗಳು ನಡೆದವು. ಅಮೆರಿಕ ಮತ್ತು ರಷ್ಯಾದ ವಿದೇಶಾಂಗ ಸಚಿವರ ನೇತೃತ್ವದ ನಿಯೋಗ ರಿಯಾದ್‌ನಲ್ಲಿ ಸಭೆ ಸೇರಿ ಚರ್ಚಿಸಿದರೆ, ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ನೇತೃತ್ವದಲ್ಲಿ ಐರೋಪ್ಯ ರಾಷ್ಟ್ರಗಳ ಮುಖಂಡರು ತುರ್ತು ಸಭೆ ನಡೆಸಿದರು. ಅಮೆರಿಕ ಮತ್ತು ರಷ್ಯಾದ ನಿಯೋಗವು ಯುದ್ಧವನ್ನು ಕೊನೆಗೊಳಿಸುವ ಮಾರ್ಗದ ಕುರಿತು ಚರ್ಚಿಸಿದರೆ, ಪ್ಯಾರಿಸ್ ಸಭೆಯಲ್ಲಿ ಉಕ್ರೇನ್ ಯುದ್ಧ ಕುರಿತ ಮಾತುಕತೆಯಿಂದ ಐರೋಪ್ಯ ರಾಷ್ಟ್ರಗಳನ್ನು, ಮುಖ್ಯವಾಗಿ ಉಕ್ರೇನನ್ನು ಹೊರಗಿಟ್ಟಿದ್ದರ ಕುರಿತು ಚರ್ಚಿಸಲಾಯಿತು.
ಉಕ್ರೇನ್ ಯುದ್ಧದ ಕುರಿತು ಚರ್ಚಿಸುವಾಗ ಝೆಲೆನ್‌ಸ್ಕಿ ಅವರನ್ನು ಮಾತುಕತೆಯಿಂದ ಹೊರಗಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಟ್ರಂಪ್, ಈ ಮಾತುಕತೆಯಲ್ಲಿ ಅವರು ಯಾವುದೇ ಪ್ರಮುಖ ಪಾತ್ರ ವಹಿಸುವುದಿಲ್ಲ ಎಂದಿದ್ದರು! ಅದೇ ಮಾತನ್ನು ಇದೀಗ ಝೆಲೆನ್‌ಸ್ಕಿ ಅವರ ಎದುರೇ ಆಡಿದ್ದಾರೆ. ಬಹುಶಃ ಉಕ್ರೇನ್ ಮತ್ತು ರಷ್ಯಾವನ್ನು ಒಂದೇ ಮೇಜಿನಲ್ಲಿ ಕೂರಿಸಿ ಸಂಧಾನಕ್ಕೆ ಪ್ರಯತ್ನಿಸಿದರೆ ಆ ಪ್ರಯತ್ನಕ್ಕೆ ಯಶ ಸಿಗಲಾರದು ಎಂಬುದು ಟ್ರಂಪ್ ಅವರಿಗೆ ಮನವರಿಕೆಯಾಗಿರಬೇಕು.
ಜೊತೆಗೆ, ರಷ್ಯಾದ ಕ್ರಮಗಳನ್ನು ಖಂಡಿಸುವ ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುವ ಯುರೋಪಿಯನ್ ಕರಡು ನಿರ್ಣಯವನ್ನು ಅಮೆರಿಕವು ವಿಶ್ವಸಂಸ್ಥೆಯಲ್ಲಿ ವಿರೋಧಿಸಿತು. ಆ ಮೂಲಕ ರಷ್ಯಾ, ಉತ್ತರ ಕೊರಿಯಾ ಮತ್ತು ಬೆಲಾರಸ್ ದೇಶಗಳಂತೆಯೇ ಮತ ಚಲಾಯಿಸಿತು! ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡಿದ ನಿರ್ಣಯವನ್ನು ಮಂಡಿಸಿ ಮತಕ್ಕೆ ಹಾಕಿದ ಅಮೆರಿಕ, ಆ ನಿರ್ಣಯದಲ್ಲಿ ರಷ್ಯಾದ ಬಗ್ಗೆ ಯಾವುದೇ ಟೀಕೆ ಇರದಂತೆ ನೋಡಿಕೊಂಡಿತು. ಅಮೆರಿಕದ ಮಿತ್ರರಾಷ್ಟ್ರಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್, ನಿರ್ಣಯವನ್ನು ಬೆಂಬಲಿಸದೇ ಹೊರಗುಳಿದವು.
ಈ ಬೆಳವಣಿಗೆಗಳಿಂದ ಯುರೋಪ್ ಗಲಿಬಿಲಿಗೊಂಡಿತು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅಮೆರಿಕಕ್ಕೆ ತೆರಳಿ ಟ್ರಂಪ್ ಅವರನ್ನು ಭೇಟಿ ಮಾಡಿದರು. ಆ ಬಳಿಕವಷ್ಟೇ ಟ್ರಂಪ್ ಮತ್ತು ಝೆಲೆನ್‌ಸ್ಕಿ ಅವರ ಭೇಟಿ ನಡೆದದ್ದು ಮತ್ತು ಮಾಧ್ಯಮಗಳ ಎದುರು ಈ ವಾಕ್ಸಮರದ ವಿಶಿಷ್ಟ ಪ್ರಸಂಗ ಜರುಗಿದ್ದು!
ಉಕ್ರೇನ್ ಯುದ್ಧದ ಕುರಿತು ಐರೋಪ್ಯ ರಾಷ್ಟ್ರಗಳ ನಿಲುವು ಏನಿದೆ ಎಂದು ನೋಡಿದರೆ, ಸದ್ಯದ ಮಟ್ಟಿಗೆ ಅವು ಉಕ್ರೇನನ್ನು ಬೆಂಬಲಿಸುವ ಮಾತನಾಡಿವೆ. ಲಂಡನ್‌ನಲ್ಲಿ ಝೆಲೆನ್‌ಸ್ಕಿ ಅವರ ಜೊತೆ ಸಭೆ ನಡೆಸಿವೆ. ಆದರೆ ರಷ್ಯಾ ಎದುರು ಉಕ್ರೇನ್ ದೇಶವನ್ನು ದೀರ್ಘ ಅವಧಿಗೆ ಬೆಂಬಲಿಸುವ ಆರ್ಥಿಕ ಅಥವಾ ಸಾಮರಿಕ ಶಕ್ತಿ ಐರೋಪ್ಯ ರಾಷ್ಟ್ರಗಳ ಬಳಿ ಇಲ್ಲ. ಹಿಂದಿನ 80 ವರ್ಷಗಳಿಂದಲೂ ಯುರೋಪ್ ತನ್ನ ಭದ್ರತೆಗೆ ಅಮೆರಿಕವನ್ನು ನೆಚ್ಚಿಕೊಂಡಿದೆ. ತನ್ನ ಮತ್ತು ರಷ್ಯಾ ನಡುವೆ ಒಂದು ತಡೆಗೋಡೆಯ ಮಾದರಿಯಲ್ಲಿ ಉಕ್ರೇನ್ ಇರಲಿ ಎಂಬ ಕಾರಣದಿಂದಷ್ಟೇ ಐರೋಪ್ಯ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಂತಿವೆ. ಎರಡನೇ ಮಹಾಯುದ್ಧದ ವೇಳೆ ಗಟ್ಟಿಗೊಂಡ ಅಮೆರಿಕ ಮತ್ತು ಯುರೋಪ್ ನಡುವಿನ ಬಾಂಧವ್ಯ, ಟ್ರಂಪ್ ಅವರ ಅವಧಿಯಲ್ಲಿ ಕುಸಿದುಬೀಳುವಷ್ಟು ತೆಳುವಾದಂತೆ ಕಾಣುತ್ತಿದೆ. ಆ ಬಾಂಧವ್ಯ ಕಾಯ್ದುಕೊಳ್ಳಬೇಕಾದರೆ, ಅಮೆರಿಕದ ಆಣತಿಯಂತೆ ಪಾತ್ರಧಾರಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲೇಬೇಕು. ಝೆಲೆನ್‌ಸ್ಕಿ ಅವರನ್ನು ಒಪ್ಪಿಸಿ ಸಂಧಾನದ ಮೇಜಿಗೆ ಕರೆತರಬೇಕು. ಆ ಪ್ರಯತ್ನ ಲಂಡನ್ನಿನಲ್ಲಿ ನಡೆದಿದೆ.
ಹಾಗಾದರೆ, ನಿಜಕ್ಕೂ ಟ್ರಂಪ್ ಏನನ್ನು ಸಾಧಿಸಹೊರಟಿದ್ದಾರೆ? ಉಕ್ರೇನ್ ಯುದ್ಧದಲ್ಲಿ ಸೋಲು– ಗೆಲುವು ಎಂಬ ನಿಖರ ಫಲಿತಾಂಶ ಇರುವುದಿಲ್ಲ ಎಂಬುದು ಈಗಾಗಲೇ ಯುದ್ಧದ ಪಾತ್ರಧಾರಿಗಳಿಗೆ ಮನವರಿಕೆಯಾಗಿದೆ. ಹಾಗಾಗಿ, ಸಂಧಾನದ ಮೂಲಕವೇ ಯುದ್ಧಕ್ಕೆ ಅಂತ್ಯ ಹಾಡಬೇಕು. ಅದು ಅಮೆರಿಕದ ಮೂಲಕವೇ ಆದರೆ ಪರಿಣಾಮಕಾರಿ ಎಂದು ರಷ್ಯಾ ಬಯಸುತ್ತಿದೆ ಮತ್ತು ಟ್ರಂಪ್ ಅವರಿಗೂ ಅದು ಕಾಲರ್ ಏರಿಸಿಕೊಳ್ಳುವ ಅವಕಾಶ. ಆದರೆ ಅಂತಹದ್ದೊಂದು ಸಂಧಾನಕ್ಕೆ ಅಡ್ಡಗಾಲಾಗಿರುವುದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ. 2014ರಿಂದ ಈಚೆಗೆ ಕ್ರಿಮಿಯಾ ಸೇರಿದಂತೆ ರಷ್ಯಾ ವಶಪಡಿಸಿಕೊಂಡಿರುವ ಅಷ್ಟೂ ಭೂಭಾಗವನ್ನು ಸಂಪೂರ್ಣವಾಗಿ ಬಿಟ್ಟುಕೊಡಬೇಕು ಎಂದು ಝೆಲೆನ್‌ಸ್ಕಿ ಪಟ್ಟು ಹಿಡಿದಿದ್ದಾರೆ. ಆದರೆ ತನ್ನ ವಶದಲ್ಲಿರುವ ಕ್ರಿಮಿಯಾ ಮತ್ತು 2022ರ ಬಳಿಕ ವಶ ಮಾಡಿಕೊಂಡ ಪ್ರದೇಶಗಳನ್ನು ಸಂಧಾನದ ಮೂಲಕ ಬಿಟ್ಟುಕೊಟ್ಟರೆ ಅದು ಸೋಲು ಎಂದು ರಷ್ಯಾ ಭಾವಿಸಿದೆ. ಪುಟಿನ್ ಅದಕ್ಕೆ ಸಿದ್ಧರಿಲ್ಲ.
ಉಕ್ರೇನ್ ಜನತೆ ಝೆಲೆನ್‌ಸ್ಕಿ ಅವರ ಬೆನ್ನಿಗೆ ನಿಂತಿರುವುದರಿಂದ ಅವರನ್ನು ಬದಲಿಸುವ ಆಯ್ಕೆ ಅಮೆರಿಕದ ಬಳಿ ಇಲ್ಲ. ಹಾಗಾಗಿ, ಬೆದರಿಸುವ ಮಾರ್ಗವನ್ನು ಅಮೆರಿಕ ತುಳಿದಿದೆ. ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ನಿಲ್ಲಿಸುವ ಮಾತನಾಡಿದೆ. ರಷ್ಯಾವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು, ಟ್ರಂಪ್- ಝೆಲೆನ್‌ಸ್ಕಿ ನಡುವಿನ ವಾಕ್ಸಮರ ಮಾಧ್ಯಮಗಳ ಎದುರು ನಡೆದಿದೆ.
ಟ್ರಂಪ್ ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮ. ಹಿಂದಿನ ಅವಧಿಯಲ್ಲಿ ಉತ್ತರ ಕೊರಿಯಾವು ದೂರಗಾಮಿ ಅಣ್ವಸ್ತ್ರ ಕ್ಷಿಪಣಿಗಳನ್ನು ಪರೀಕ್ಷಿಸಿ, ಅಮೆರಿಕದ ಯಾವುದೇ ಮೂಲೆಯನ್ನು ನಾವು ತಲುಪಬಲ್ಲೆವು ಎಂದು ಧಮಕಿ ಹಾಕಿತ್ತು. ಆ ಬೆದರಿಕೆಯನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸಿದ ಟ್ರಂಪ್, ಉತ್ತರ ಕೊರಿಯಾದ ಅಧ್ಯಕ್ಷರ ಜೊತೆಗೆ ಕೈ ಹಿಡಿದು ಅವರ ದೇಶದ ಗಡಿಯನ್ನು ಪ್ರವೇಶಿಸಿ ಜಗತ್ತನ್ನು ಅಚ್ಚರಿಗೆ ದೂಡಿದ್ದರು.
ಇದೀಗ ಮತ್ತೊಮ್ಮೆ ಟ್ರಂಪ್ ಅಚ್ಚರಿಯ ಹೆಜ್ಜೆ ಇಡುತ್ತಿದ್ದಾರೆ. ಉಕ್ರೇನ್ ಯುದ್ಧ ಹೆಚ್ಚು ಕಾಲ ಮುಂದುವರಿಯಲಾರದು. ಮುಖಭಂಗವಾಗದಂತೆ ಯುದ್ಧ ಅಂತ್ಯಗೊಳ್ಳುವುದಾದರೆ, ಟ್ರಂಪ್ ಅವರೊಂದಿಗೆ ಸಹಕರಿಸಲು ರಷ್ಯಾ ಸಿದ್ಧವಿದೆ. ಝೆಲೆನ್‌ಸ್ಕಿ ಮತ್ತು ಉಕ್ರೇನಿಗೆ ಅಮೆರಿಕದೊಂದಿಗೆ ಸಹಕರಿಸದೇ ಬೇರೆ ಆಯ್ಕೆ ಇದ್ದಂತಿಲ್ಲ. ನ್ಯಾಟೊ ಭಾಗವಾಗಬೇಕು ಎಂಬ ಕನಸನ್ನು ಬಿಟ್ಟುಕೊಟ್ಟು, ಕ್ರಿಮಿಯಾವನ್ನು ಮರುಪಡೆದುಕೊಳ್ಳುವ ಇಂಗಿತ ತೊರೆದು, ಅಮೆರಿಕದಿಂದ ಭದ್ರತೆಯ ಅಭಯ ಪಡೆದು, ತಮಗೆ ಬೇಕಾದ್ದನ್ನು ಸಾಧ್ಯವಾದಷ್ಟರ ಮಟ್ಟಿಗೆ ಮಾತುಕತೆಯ ಮೂಲಕ ಪಡೆದುಕೊಳ್ಳುವುದು ಚಾಣಾಕ್ಷ ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.