ಇತಿಹಾಸಕಾರ ಹಾಗೂ ವಿದ್ವಾಂಸ ರವಿ ಕೆ. ಮಿಶ್ರಾ ಅವರು 150 ವರ್ಷಗಳಲ್ಲಿ ಭಾರತದ ಜನಸಂಖ್ಯೆ ಬೆಳೆದ ಬಗೆಯ ಕುರಿತು ಪ್ರಮುಖವಾದ ಒಂದು ಸಂಶೋಧನೆ ನಡೆಸಿದ್ದಾರೆ. ಸಂಸತ್ತಿನ ಎರಡೂ ಸದನಗಳ ಹಾಗೂ ರಾಜ್ಯ ವಿಧಾನಸಭೆಗಳ ಸಂಖ್ಯಾಬಲವನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಅನ್ವಯಿಸಬೇಕಾದ ಸೂತ್ರದ ಕುರಿತು ಈಗ ನಡೆಯುತ್ತಿರುವ ವಾಗ್ವಾದಕ್ಕೆ ಈ ಸಂಶೋಧನೆಯು ಹೊಸ ಆಯಾಮವನ್ನು ಒದಗಿಸಿದೆ.
ರಾಜ್ಯಗಳ ವಿಧಾನಸಭೆಗಳ ಹಾಗೂ ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲವನ್ನು ಪ್ರತಿ ಹತ್ತು ವರ್ಷಕ್ಕೆ ಒಮ್ಮೆ ನಡೆಯುವ ಜನಗಣತಿಯ ನಂತರದಲ್ಲಿ ಪರಿಷ್ಕರಿಸಲು ಅವಕಾಶವಿದೆ. ಆದರೆ ಪರಿಷ್ಕರಣೆಯು ಎಲ್ಲ ಬಾರಿಯೂ ನಡೆದಿಲ್ಲ. ಕಡೆಯ ಬಾರಿ ಪರಿಷ್ಕರಣೆ ಆಗಿರುವುದು 1971ರ ಜನಗಣತಿಯ ನಂತರ. 1976ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಸಂಖ್ಯಾಬಲವನ್ನು 1971ರ ಮಟ್ಟದಲ್ಲಿಯೇ ಇರಿಸಲು ತೀರ್ಮಾನಿಸಿತು. ನಂತರದಲ್ಲಿ, 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ವಿಷಯವನ್ನು ಬಿಜೆಪಿಯ ಮುಖಂಡ ಮದನ್‌ಲಾಲ್ ಖುರಾನಾ ಅವರು ಮತ್ತೆ ಮುನ್ನೆಲೆಗೆ ತಂದಿದ್ದರು. 2001ರ ಜನಗಣತಿಯ ಅಂಕಿ–ಅಂಶಗಳನ್ನು ಇರಿಸಿಕೊಂಡು ಲೋಕಸಭೆಯ ಸಂಖ್ಯಾಬಲವನ್ನು ಹೆಚ್ಚಿಸಬೇಕು ಎಂದು ಖುರಾನಾ ಒತ್ತಾಯಿಸಿದ್ದರು. ಇದನ್ನು ದಕ್ಷಿಣದ ಡಿಎಂಕೆ, ಟಿಡಿಪಿ ಸೇರಿದಂತೆ ಹಲವು ಪಕ್ಷಗಳು ವಿರೋಧಿಸಿದ್ದವು.
ಹಿಂದಿನ ದಶಕಗಳಲ್ಲಿ ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಬಹಳ ಯಶಸ್ವಿಯಾಗಿ ಜಾರಿಗೆ ತರುವಲ್ಲಿ ದಕ್ಷಿಣದ ರಾಜ್ಯಗಳು ತೋರಿದ ಸಾಧನೆಯನ್ನು ಪರಿಗಣಿಸುವ ಹೊಸ ಸೂತ್ರವನ್ನು ರೂಪಿಸುವವರೆಗೆ ಸೀಟುಗಳ ಸಂಖ್ಯೆಯನ್ನು ಹೆಚ್ಚು ಮಾಡಬಾರದು ಎಂದು ಒತ್ತಾಯಿಸಿ ಟಿಡಿಪಿಯು ಪ್ರಧಾನಿಯವರ ಬಳಿಗೆ ಸಂಸದರ ನಿಯೋಗ ಕಳುಹಿಸಿತ್ತು. ಜನಸಂಖ್ಯೆಯನ್ನು ಮಾತ್ರವೇ ಆಧರಿಸಿ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ನಿರ್ಣಯಿಸಿದರೆ, ಉತ್ತರ ಭಾರತದ ಹಾಗೂ ಮಧ್ಯ ಭಾರತದ ರಾಜ್ಯಗಳು ಹೊಂದುವ ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ದಕ್ಷಿಣದ ರಾಜ್ಯಗಳು ಪಡೆಯುತ್ತವೆ. ಏಕೆಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಬಹಳ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿವೆ ಎಂದು ನಿಯೋಗವು ವಾದಿಸಿತ್ತು. ಅಂದರೆ, ಜನಸಂಖ್ಯೆಯನ್ನು ಮಾತ್ರವೇ ಆಧರಿಸಿದರೆ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ ಕೊಟ್ಟಂತಾಗುತ್ತದೆ.
ಆ ಸಂದರ್ಭದಲ್ಲಿ ಲಭ್ಯವಿದ್ದ ದತ್ತಾಂಶಗಳನ್ನು ಆಧರಿಸಿ, ಅಂದರೆ ಸರಿಸುಮಾರು 25 ವರ್ಷಗಳ ಹಿಂದೆ, 1981–91ರ ದಶಕದಲ್ಲಿ ಜನಸಂಖ್ಯಾ ಏರಿಕೆಯ ಶೇಕಡಾವಾರು ಪ್ರಮಾಣವು ಬಿಹಾರದಲ್ಲಿ 23.54ರಷ್ಟು, ಮಧ್ಯಪ್ರದೇಶದಲ್ಲಿ 26.84ರಷ್ಟು, ರಾಜಸ್ಥಾನದಲ್ಲಿ 28.84ರಷ್ಟು, ಉತ್ತರಪ್ರದೇಶದಲ್ಲಿ 25.48ರಷ್ಟು ಇತ್ತು ಎಂದು ದಕ್ಷಿಣದ ಸಂಸದರು ಹೇಳಿದ್ದರು. ಏರಿಕೆಯ ಶೇಕಡಾವಾರು ಪ್ರಮಾಣವು ಕೇರಳದಲ್ಲಿ 14.32ರಷ್ಟು, ತಮಿಳುನಾಡಿನಲ್ಲಿ 15.39ರಷ್ಟು, ಕರ್ನಾಟಕದಲ್ಲಿ 21.26ರಷ್ಟು, ಆಂಧ್ರಪ್ರದೇಶದಲ್ಲಿ 24.20ರಷ್ಟು ಮತ್ತು ಗೋವಾದಲ್ಲಿ 16.08ರಷ್ಟು ಇತ್ತು. 2001ರ ನಂತರದಲ್ಲಿಯೂ ಬೆಳವಣಿಗೆಯ ಪ್ರಮಾಣವು ಸರಿಸುಮಾರು ಇದೇ ಆಗಿದೆ. ಹೀಗಿರುವಾಗ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಜನಸಂಖ್ಯೆಯನ್ನು ಮಾತ್ರವೇ ಆಧರಿಸಿ ಹೇಗೆ ಪರಿಷ್ಕರಣೆ ಮಾಡುವುದು? ದಕ್ಷಿಣದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ತೋರಿರುವ ಸಾಧನೆಯನ್ನು ಪರಿಗಣಿಸಿ ಹೊಸ ಸೂತ್ರವೊಂದನ್ನು ಕಂಡುಕೊಳ್ಳಬೇಕಾಗುತ್ತದೆ.
ವಿಷಯವನ್ನು ಇನ್ನಷ್ಟು ಮುಂದುವರಿಸುವುದು ಬೇಡ ಎಂದು ತೀರ್ಮಾನಿಸಿದ ವಾಜಪೇಯಿ ನೇತೃತ್ವದ ಮೈತ್ರಿಕೂಟ ಸರ್ಕಾರವು ಸಂವಿಧಾನದ 82ನೇ ವಿಧಿಗೆ ತಿದ್ದುಪಡಿಯೊಂದನ್ನು ತಂದಿತು. ಆ ತಿದ್ದುಪಡಿಯು ‘2026ರ ನಂತರದ ಮೊದಲ ಜನಗಣತಿಯ ಅಂಕಿ–ಅಂಶಗಳು ಪ್ರಕಟವಾಗುವವರೆಗೆ ಲೋಕಸಭೆಯಲ್ಲಿನ ರಾಜ್ಯಗಳ ಸೀಟುಗಳನ್ನು ಮರುಹೊಂದಾಣಿಕೆ ಮಾಡುವ ಅಗತ್ಯ ಇಲ್ಲ’ ಎಂದು ಹೇಳಿತು. ಈಗ 2026ನೇ ಇಸವಿ ಹತ್ತಿರವಾಗುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ದಕ್ಷಿಣದ ಇತರ ನಾಯಕರು ಲೋಕಸಭಾ ಸ್ಥಾನಗಳ ಮರುವಿಂಗಡಣೆಯ ಚರ್ಚೆಯನ್ನು ಮತ್ತೆ ಮುಂದಕ್ಕೆ ತಂದಿದ್ದಾರೆ.
ವಿದ್ವಾಂಸರಾದ ರವಿ ಕೆ. ಮಿಶ್ರಾ ಅವರು ಆಧುನಿಕ ಭಾರತದ ರಾಜಕೀಯ ಮತ್ತು ಬೌದ್ಧಿಕ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿದ್ದಾರೆ, ಬರಹಗಳನ್ನು ಪ್ರಕಟಿಸಿದ್ದಾರೆ. ಅವರು ಈಗ ನವದೆಹಲಿಯಲ್ಲಿರುವ
‘ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ’ದ (ಪಿಎಂಎಂಎಲ್) ಜಂಟಿ ನಿರ್ದೇಶಕ
ರಾಗಿದ್ದಾರೆ. ‘ಡೆಮಾಗ್ರಫಿ, ಡಿಲಿಮಿಟೇಷನ್, ರೆಪ್ರೆಸೆಂಟೇಷನ್ – ದಿ ನಾರ್ತ್–ಸೌತ್ ಡಿವೈಡ್ ಇನ್ ಇಂಡಿಯಾ’ ಹೆಸರಿನ ಪುಸ್ತಕದಲ್ಲಿ ಅವರು ಹೊಸ ದತ್ತಾಂಶಗಳನ್ನು ಒದಗಿಸಿದ್ದಾರೆ. 1872ರ ನಂತರದ 150 ವರ್ಷಗಳ ಅವಧಿಯಲ್ಲಿ ನಡೆದ ಎಲ್ಲ ದಶವಾರ್ಷಿಕ ಜನಗಣತಿಗಳ ಸಮಗ್ರ ಅಧ್ಯಯನವು ಇದಕ್ಕೆ ಆಧಾರ. ಜಿಲ್ಲಾ ಗೆಜೆಟಿಯರ್, ಗಡಿ ಆಯೋಗದ ವರದಿಗಳು, ಬೇರೆ ಬೇರೆ ರಾಜ್ಯಗಳ ಮರುವಿಂಗಡಣೆ ಕಾಯ್ದೆಗಳು ಮತ್ತು ಕೆಲವು ಸಂಬಂಧಪಟ್ಟ ಸಮೀಕ್ಷೆಗಳಿಂದಲೂ ಮಾಹಿತಿಯನ್ನು ಕಲೆಹಾಕಲಾಗಿದೆ.
ಒಂದೂವರೆ ಶತಮಾನದ ಅವಧಿಯಲ್ಲಿ ಆಗಿರುವ ಜನಸಂಖ್ಯೆಯ ಸ್ವರೂಪದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ ಉತ್ತರ ಭಾರತದ, ಅಂದರೆ ಇಡೀ ಹಿಂದಿ ಭಾಷಿಕ ಪ್ರದೇಶದ ಜನಸಂಖ್ಯೆಯು ದೇಶದ ಇತರ ಪ್ರದೇಶಗಳ ಜನಸಂಖ್ಯೆಗಿಂತ ತೀರಾ ಅಸಮಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲ ಎಂದು ಮಿಶ್ರಾ ಅವರು ಪ್ರತಿಪಾದಿಸಿದ್ದಾರೆ. ಉತ್ತರ ಭಾರತದ ಜನಸಂಖ್ಯೆಯ ಪಾಲು 1881ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಇದ್ದಿದ್ದು 1951ರಲ್ಲಿ ಶೇ 45ಕ್ಕೆ ಬಂದಿದೆ. ದೇಶದ ಒಟ್ಟು ಜನಸಂಖ್ಯೆ ಯಲ್ಲಿ ದಕ್ಷಿಣದ ರಾಜ್ಯಗಳ ಜನಸಂಖ್ಯೆಯ ಪಾಲು 1881ರಲ್ಲಿ ಶೇ 22ರಷ್ಟು ಇದ್ದಿದ್ದು 1951ರಲ್ಲಿ ಶೇ 26ಕ್ಕೆ ಏರಿಕೆ ಆಗಿದೆ ಎಂದು ಅವರು ಹೇಳುತ್ತಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣದ ರಾಜ್ಯಗಳ ಪಾಲು 1951ರ ನಂತರದಲ್ಲಿ ಕಡಿಮೆ ಆಗುತ್ತಾ ಬಂದಿದ್ದು, 2011ರಲ್ಲಿ ಶೇ 20.75ಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ. 1971ರ ನಂತರದ ಅವಧಿಯ ಜನಸಂಖ್ಯಾ ದತ್ತಾಂಶವನ್ನು ಮಾತ್ರ ಗಮನಿಸಿದಾಗ, ಗ್ರಹಿಕೆಯು
ವಿರೂಪಗೊಳ್ಳುತ್ತದೆ ಎಂಬುದು ಅವರ ಅಂಬೋಣ.
ಉತ್ತರದ ರಾಜ್ಯಗಳು ಈಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕೂಡ ಮುಂದಕ್ಕೆ ಬರುತ್ತಿವೆ, ಈ ರಾಜ್ಯಗಳನ್ನು ‘ಬಿಮಾರು’ ಎಂದು ತುಚ್ಛವಾಗಿ ಕರೆಯುವುದು ಈಗ ಸರಿಯಾಗುವುದಿಲ್ಲ ಎಂದು ಮಿಶ್ರಾ ಹೇಳುತ್ತಾರೆ. ಇವೆಲ್ಲವೂ ನಮ್ಮನ್ನು ಒಂದು ಪ್ರಶ್ನೆಯ ಬುಡಕ್ಕೆ ತಂದು ನಿಲ್ಲಿಸುತ್ತವೆ. ಪ್ರತಿ ರಾಜ್ಯದಲ್ಲಿ 1951ರಿಂದ ಆಗಿರುವ ಜನಸಂಖ್ಯೆಯ ಬದಲಾವಣೆಯನ್ನು ಮಾತ್ರವೇ ಪರಿಗಣಿಸಬೇಕೇ ಅಥವಾ ಭಾರತದಲ್ಲಿ ದಶವಾರ್ಷಿಕ ಜನಗಣತಿಯನ್ನು ಶುರುಮಾಡಿದಾಗಿನಿಂದ ಅಂದರೆ ಒಂದು ಶತಮಾನ ಅಥವಾ ಅದಕ್ಕೂ ಹೆಚ್ಚಿನ ಅವಧಿಯಿಂದ ಆಗಿರುವ ಬದಲಾವಣೆಗಳನ್ನು ಪರಿಗಣಿಸಬೇಕೇ ಎಂಬುದು ಆ ಪ್ರಶ್ನೆ.
ಮಿಶ್ರಾ ಅವರ ಸಂಶೋಧನೆಯು ಒದಗಿಸುವ ದತ್ತಾಂಶವು 1951ಕ್ಕೆ ಮೊದಲು ದಕ್ಷಿಣದ ರಾಜ್ಯಗಳ ಜನ ಸಂಖ್ಯೆಯ ಏರಿಕೆಯು ಉತ್ತರದ ರಾಜ್ಯಗಳ ಜನಸಂಖ್ಯೆಯ ಹೆಚ್ಚಳಕ್ಕಿಂತ ಜಾಸ್ತಿ ಇತ್ತು ಎಂದು ಹೇಳುತ್ತದೆ. ಇದನ್ನು ಪರಿಗಣಿಸಿದರೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಚರ್ಚೆಯು ಇನ್ನಷ್ಟು ತೀವ್ರತೆ ಪಡೆಯುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ವೈವಿಧ್ಯವನ್ನು ಗಮನಿಸಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನ್ಯಾಯಸಮ್ಮತವಾದ ಸೂತ್ರವೊಂದನ್ನು ರೂಪಿಸಬೇಕಾಗು ತ್ತದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಜಿಎಸ್‌ಟಿ ವ್ಯವಸ್ಥೆಯನ್ನು ರೂಪಿಸಬಹುದು ಎಂದಾದರೆ, ಈ ಕೆಲಸ ಕೂಡ ಸಾಧ್ಯ ಎಂದಾಗುತ್ತದೆ. ಆದರೆ, ಹೀಗೆ ಸೂತ್ರ ರೂಪಿಸುವಾಗ ‘ರಾಜಕೀಯ’ ಇರಬಾರದು, ‘ನ್ಯಾಯ’ಕ್ಕೆ ಹೆಚ್ಚಿನ ಬೆಲೆ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.