ADVERTISEMENT

ಲಾಕ್‌ಡೌನ್ ಸಮಯದಲ್ಲಿ ಸಹೋದ್ಯೋಗಿಗಳ ಜೊತೆಯಿರಲಿ ಸಂವಹನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 6:05 IST
Last Updated 16 ಜುಲೈ 2020, 6:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಾಕ್‌ಡೌನ್‌ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಅನೇಕರು ಆಫೀಸ್‌ ಕಡೆ ಮುಖ ಮಾಡಿಲ್ಲ. ಪ್ರತಿನಿತ್ಯ ಕಚೇರಿಗೆ ಹೋಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸಹೋದ್ಯೋಗಿಗಳ ನಡುವೆ ಇರುತ್ತಿದ್ದವರು ಈಗ ಒಂಟಿಯಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೆಲಸ ಮಾಡುವಂತಾಗಿದೆ.

ಅಲ್ಲದೇ ಸದಾ ನಗುತ್ತಾ, ಲವಲವಿಕೆಯಿಂದ ಸಹೋದ್ಯೋಗಿಗಳ ಜೊತೆ ಕುಳಿತು ಇನ್ಯಾವಾಗ ಕೆಲಸ ಮಾಡುತ್ತಿವೋ ಎಂಬ ಭಾವನೆ ಮೂಡುತ್ತಿದೆ. ಆದರೆ ಮನೆಯಲ್ಲೇ ಕುಳಿತೂ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಬಹುದು. ಆ ಮೂಲಕ ಹಿಂದಿನ ಖುಷಿಯನ್ನು ಮರಳಿ ಪಡೆಯಬಹುದು.

ಕಾಫಿ ಸಮಯವನ್ನು ಹಂಚಿಕೊಳ್ಳಿ

ADVERTISEMENT

ಕಚೇರಿಯಲ್ಲಿ ಇರುವಂತೆ ಮನೆಯಲ್ಲೂ ಕಾಫಿ ಕುಡಿಯುವ ಸಮಯದಲ್ಲಿ ಸ್ಕೈಪ್‌ ಅಥವಾ ಮೊಬೈಲ್‌ನಲ್ಲಿ ಸಹೋದ್ಯೋಗಿಗಳಿಗೆ ಕರೆ ಮಾಡಿ ಮಾತನಾಡಿ. ಆ ಸಮಯದಲ್ಲಿ ಕಚೇರಿಯ ವಿಷಯ ಬಿಟ್ಟು ವೈಯಕ್ತಿಕ ವಿಷಯಗಳನ್ನಷ್ಟೇ ಮಾಡಿ. ಜೊತೆಗೆ ಪ್ರಸ್ತುತ ಪರಿಸ್ಥಿತಿಯ ಆಗುಹೋಗುಗಳ ಬಗ್ಗೆ ಚರ್ಚಿಸಿ. ತೀರಾ ಆತ್ಮೀಯರಾಗಿದ್ದರೆ ಮನೆ ಹಾಗೂ ಕುಟುಂಬದ ಕುರಿತೂ ಮಾತನಾಡಿ. ಕಚೇರಿಯಲ್ಲಿ ಇದ್ದಾಗ ಮಾಡುತ್ತಿದ್ದ ತಮಾಷೆ ಘಟನೆಗಳನ್ನು ನೆನಪಿಸಿಕೊಳ್ಳಿ. ಒಟ್ಟಾರೆ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಫಿ ಸಮಯವನ್ನು ಎಂಜಾಯ್ ಮಾಡಿ. ಇದರಿಂದ ಸಹೋದ್ಯೋಗಿಗಳ ಜೊತೆ ಮಾತನಾಡಿದಂತಾಗುತ್ತದೆ. ಜೊತೆಗೆ ಮನಸ್ಸು ಲವಲವಿಕೆಯಿಂದಿರುತ್ತದೆ.

ವಿಡಿಯೊ ಕರೆ ಮೀಟಿಂಗ್ ಮಾಡಿ

ಈ ಲಾಕ್‌ಡೌನ್ ಅವಧಿಯಲ್ಲಿ ವಿಡಿಯೊ ಕರೆಯ ತಂತ್ರಜ್ಞಾನ ನಿಜಕ್ಕೂ ವರವೇ ಎನ್ನಬಹುದು. ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವ ನಮಗೆ ವಿಡಿಯೊ ಕರೆಗಳ ಮೂಲಕ ಮಾತನಾಡುವ ಅವಕಾಶ ಲಭಿಸಿರುವುದು ನಿಜಕ್ಕೂ ಅದೃಷ್ಟ. ಅಷ್ಟೇ ಅಲ್ಲದೇ ಗೂಗಲ್‌ ಮೀಟ್‌, ಜೂಮ್‌ ಕರೆ ಮುಂತಾದವುಗಳಿಂದ ಗುಂಪು ವಿಡಿಯೊ ಕರೆಗಳನ್ನು ಮಾಡಬಹುದು. ಆಗಾಗ ವಿಡಿಯೊ ಕರೆ ಮಾಡಿ ಸಹೋದ್ಯೋಗಿಗಳ ಜೊತೆ ಮಾತನಾಡುವುದರಿಂದ ಸೌಹಾರ್ದತೆ ಹೆಚ್ಚುತ್ತದೆ. ವಿಡಿಯೊ ಕರೆಯಲ್ಲಿ ಮೀಟಿಂಗ್ ಮಾಡುವುದರಿಂದ ಸಹೋದ್ಯೋಗಿಗಳೆಲ್ಲಾ ಒಂದು ಕಡೆ ಸೇರಿದಂತಾಗುತ್ತದೆ. ಕಚೇರಿಯ ವಿಷಯವೆಲ್ಲಾ ಮಾತನಾಡಿದ ಬಳಿಕ ಕೆಲವು ನಿಮಿಷಗಳ ಕಾಲ ಬೇರೆ ವಿಷಯಗಳನ್ನೂ ಚರ್ಚಿಸಿ. ಇದರಿಂದ ನಿಮ್ಮ ನಡುವಿನ ಬಾಂಧವ್ಯ ವೃದ್ಧಿಸುತ್ತದೆ. ಅಲ್ಲದೇ ಮೊದಲಿನಂತೆ ಕಚೇರಿಯಲ್ಲಿ ಕೆಲಸ ಮಾಡಿದ ಭಾವನೆಯೇ ಮೂಡುತ್ತದೆ.

ಡಿಜಿಟಲ್ ಸಂದೇಶಗಳ ಮೂಲಕ ಸಂಪರ್ಕದಲ್ಲಿರಿ

ಡಿಜಿಟಲ್ ಸಂದೇಶಗಳ ಮೂಲಕ ಗುಂಪಿನ ಸಾಧನೆಗಳನ್ನು ಹಂಚಿಕೊಳ್ಳಿ. ನಿಮ್ಮ ತಂಡದ ಸದಸ್ಯರಿಗೆ ಹುಟ್ಟುಹಬ್ಬದ ಶುಭಾಶಯಗಳು ತಲುಪುವಂತೆ ಮಾಡಿ. ಗುಂಪಿನಲ್ಲಿ ಯಾರಾದರೂ ವಿಶೇಷ ಸಾಧನೆ ಮಾಡಿದವರಿದ್ದರೆ ಅವರನ್ನು ಅಭಿನಂದಿಸಿ. ಹೀಗೆ ಡಿಜಿಟಲ್ ಸಂದೇಶವು ನಿಮ್ಮ ಸಂವಹನದ ಕೊಂಡಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.