ADVERTISEMENT

ದಸರಾ ಗೊಂಬೆಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:45 IST
Last Updated 1 ಅಕ್ಟೋಬರ್ 2019, 19:45 IST
ಸುಮಾ ಶಿವಕುಮಾರ್‌
ಸುಮಾ ಶಿವಕುಮಾರ್‌   

ದಸರಾ ಸಂದರ್ಭದಲ್ಲಿ ಮನೆಗಳಲ್ಲಿ ಗೊಂಬೆ ಇಡುವುದು ಸಂಪ್ರದಾಯ. ಇದರಲ್ಲಿ ಪಟ್ಟದ ಗೊಂಬೆಗಳಿಗೆ ವಿಶೇಷ ಪ್ರಾಶಸ್ತ್ಯ. ಹಲವರು ಪ್ರತಿವರ್ಷ ಒಂದೊಂದು ಥೀಮ್‌ ಪ್ರಕಾರ ಗೊಂಬೆಗಳನ್ನು ಇಡುತ್ತಾರೆ. ನವರಾತ್ರಿಗೆ ಎರಡು ವಾರಗಳ ಮೊದಲೇ ಗೊಂಬೆಗಳ ಪ್ರದರ್ಶನಕ್ಕೆ ತಯಾರಿ ಆರಂಭವಾಗುತ್ತದೆ. ಗೊಂಬೆ ಕೂರಿಸುವ ಪದ್ಧತಿಯಲ್ಲಿ ಪ್ರತಿವರ್ಷ ಹೊಸತನ ಕಾಪಾಡಿಕೊಳ್ಳುತ್ತಾರೆ ವಿಜಯನಗರದ ಆರ್‌ಪಿಸಿ ಲೇಔಟ್‌ ನಿವಾಸಿ ಸುಮಾ ಶಿವಶಂಕರ್‌ ಹಾಗೂ ಸಂಜಯನಗರದ ಡಿ.ಯಶೋಧಾ.

ಪರಿಸರ ಸ್ನೇಹಿ

ಮಹಾಭಾರತ, ರಾಮಾಯಣದ ಕತೆ ಹೇಳುವ ಗೊಂಬೆಗಳ ಜೊತೆಗೆ ಬೇರೆ ಬೇರೆ ದೇಶದ ಬುದ್ಧನ ಮೂರ್ತಿಗಳು, ಪ್ರಸಿದ್ಧ ದೇವಸ್ಥಾನ, ಸ್ಮಾರಕಗಳ ಮಾಹಿತಿ ನೀಡುವ ಗೊಂಬೆಗಳ ಪ್ರದರ್ಶನವನ್ನು ಮನೆಯಲ್ಲಿ ಇಟ್ಟಿದ್ದಾರೆ ಸುಮಾ ಶಿವಕುಮಾರ್‌.

ADVERTISEMENT

ಸುಮಾ ಶಿವಶಂಕರ್‌ ಅವರು ಕಳೆದ 30 ವರ್ಷಗಳಿಂದ ಗೊಂಬೆಗಳನ್ನು ಇಡುತ್ತಿದ್ದಾರೆ. ಸಣ್ಣವಯಸ್ಸಿನಿಂದ ಗೊಂಬೆಗಳ ಸಂಗ್ರಹ ಮಾಡುತ್ತಿದ್ದ ಇವರ ಬಳಿ ಈಗ ಮೂರು ಸಾವಿರಕ್ಕೂ ಹೆಚ್ಚು ಗೊಂಬೆಗಳಿವೆ.

ಇವರ ಗೊಂಬೆ ಸಂಗ್ರಹ ವಿಶೇಷವೆಂದರೆ ಬುದ್ಧನ ಮೂರ್ತಿಗಳ ವಿಶೇಷ ಸಂಗ್ರಹ. ಇವರ ಬಳಿ ರಾಜಕುಮಾರ ಸಿದ್ಧಾರ್ಥನ ವಿಶೇಷ ಮೂರ್ತಿ ಇದೆ. ಇದಲ್ಲದೇ ನೇಪಾಳ, ಚೀನಾ, ಇಂಡೊನೇಷ್ಯಾ, ಶ್ರೀಲಂಕಾ, ವಿಯೆಟ್ನಾಂಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಬುದ್ಧನ ವಿಗ್ರಹಗಳನ್ನು ಸಂಪಾದಿಸಿದ್ದಾರೆ. ಆ ಮೂರ್ತಿಗಳ ಜೊತೆಯಲ್ಲಿಯೇ ಗೊಂಬೆಗಳ ಮೂಲಕ ಆಯಾ ಪ್ರದೇಶದ ಜೀವನ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಸುಮಾ ಶಿವಕುಮಾರ್‌ ಅವರ ಬಳಿ ಇರುವ ಎಲ್ಲಾ ಗೊಂಬೆಗಳು ಮಣ್ಣಿನವು ಎಂಬುದು ವಿಶೇಷ. ಗೊಂಬೆಗಳು ಪರಿಸರ ಸ್ನೇಹಿಯಾಗಿರಬೇಕು ಎಂಬುದು ಅವರ ಉದ್ದೇಶ.

ಗ್ರಾಮೀಣ ಸೊಗಡು ಅನಾವರಣ

ಗ್ರಾಮೀಣ ಸೊಗಡನ್ನು ಗೊಂಬೆಗಳ ಮೂಲಕ ಹೇಳಿದ್ದಾರೆ ಸಂಜಯನಗರದ ಡಿ. ಯಶೋಧ. ಕಳೆದ 14 ವರ್ಷಗಳಿಂದ ದಸರಾ ಹಬ್ಬದಲ್ಲಿ ಇವರು ಗೊಂಬೆಗಳನ್ನು ಇಡುತ್ತಿದ್ದಾರೆ.

‘ಮದುವೆ ಸಮಯದಲ್ಲಿ ಹೆಣ್ಣುಮಕ್ಕಳಿಗೆ ತವರು ಮನೆಯಿಂದಪಟ್ಟದ ಗೊಂಬೆಗಳನ್ನು ಉಡುಗೊರೆ ನೀಡುವುದು ಸಂಪ್ರದಾಯ. ಪಟ್ಟದ ಗೊಂಬೆ ಸೇರಿದಂತೆ ಪ್ರತಿವರ್ಷ ಹಬ್ಬಕ್ಕೆ ಹೊಸ ಬಗೆಯ ಗೊಂಬೆಗಳನ್ನು ಸಂಗ್ರಹ ಮಾಡಿ ಮನೆಯಲ್ಲಿ ಪ್ರದರ್ಶನ ಮಾಡುತ್ತೇನೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಸಂಗ್ರಹ ಹೆಚ್ಚುತ್ತಾ ಹೋಗುತ್ತದೆ’ ಎಂದು ಹೇಳುತ್ತಾರೆ ಯಶೋಧ.

ಪ್ರತಿವರ್ಷ ಭಿನ್ನ ಭಿನ್ನವಾಗಿ ಗೊಂಬೆಗಳನ್ನು ಜೋಡಿಸಿಡುವುದು ಯಶೋಧ ಹವ್ಯಾಸ. ಈ ಬಾರಿ ಗ್ರಾಮೀಣ ಬದುಕನ್ನು ಗೊಂಬೆಗಳ ಮೂಲಕ ತೆರೆದಿಟ್ಟಿದ್ದಾರೆ. ರೈತರ ಸಂತೆ, ಮಕ್ಕಳ ಗುಂಪು ಆಟ, ಗದ್ದೆಯಲ್ಲಿ ನಾಟಿ,ರಾಗಿ ಕಣ, ಮದುವೆ ಮನೆ ಹೀಗೆ ಗ್ರಾಮೀಣ ಹಾಗೂ ವರ್ತಮಾನ ಬದುಕನ್ನು ಸಾರುವಂತಹ ಗೊಂಬೆಗಳು ಇವರ ಸಂಗ್ರಹದಲ್ಲಿವೆ. ಇವರ ಗೊಂಬೆಗಳ ಜೋಡಣೆಯಲ್ಲಿ ಹಾಸ್ಯ ಮನೋಭಾವವನ್ನೂ ಕಾಣಬಹುದು. ಶೆಟ್ಟರ ಹೆಂಡ್ತಿ ವ್ಯಾಪಾರ, ಕೀಲು ಕುದುರೆಗಳ ಗೊಂಬೆಗಳು ನಗು ಉಕ್ಕಿಸುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.