ADVERTISEMENT

ಮೈಸೂರು ದಸರಾ ಜಂಬೂ ಸವಾರಿಗೆ 42 ಸ್ತಬ್ಧಚಿತ್ರ ಸಿದ್ಧ

ನವೀನ ತಂತ್ರಜ್ಞಾನ, ಪರಿಸರ ಪ್ರಿಯ ಸಾಮಗ್ರಿಗಳಿಂದ ರಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:16 IST
Last Updated 16 ಅಕ್ಟೋಬರ್ 2018, 12:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಮೆರವಣಿಗೆ ಸಾಗಲು 42 ಚಿತ್ತಾಕರ್ಷಕ ಸ್ತಬ್ಧಚಿತ್ರಗಳು ತಯಾರಾಗಿವೆ.

ವಿವಿಧ ಜಿಲ್ಲೆಗಳ, ವಿವಿಧ ಇಲಾಖೆಗಳ ಜನಪರ ಮಾಹಿತಿ ನೀಡುವ ಈ ಸ್ತಬ್ಧಚಿತ್ರಗಳು ಕೊನೆಯ ಹಂತದ ಸಿದ್ಧತೆಗೆ ಸಜ್ಜಾಗಿವೆ. ಮೆರವಣಿಗೆಗೆ ಹಿಂದಿನ ದಿನ ಬಣ್ಣ ತೀಡಿಕೊಂಡು ರಸ್ತೆಗಿಳಿಯಲಿವೆ ಎಂದು ಸ್ತಬ್ಧಚಿತ್ರ ಉಪಸಮಿತಿಯ ಉಪ ವಿಶೇಷಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

30 ಜಿಲ್ಲೆಗಳಿಂದ ಪ್ರತ್ಯೇಕ ಪರಿಕಲ್ಪನೆಗಳಲ್ಲಿ ಸ್ತಬ್ಧಚಿತ್ರಗಳನ್ನು ರಚಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣವಾಗಿದೆ. ಕಲೆ– ಸಂಸ್ಕೃತಿ, ಹಬ್ಬ– ಹರಿದಿನ, ಪರಿಸರ ಹಾಗೂ ಜಿಲ್ಲಾಮಟ್ಟದ ಯಶೋಗಾಧೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. 11 ಇಲಾಖೆ, ಸಂಸ್ಥೆಗಳಿಂದಲೂ ವಿವಿಧ ಪರಿಕಲ್ಪನೆಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಬಳಸಿದ್ದ ಪರಿಕಲ್ಪನೆಗಳನ್ನು ಮರುಬಳಕೆ ಮಾಡದಂತೆ ಎಚ್ಚರವಹಿಸಲಾಗಿದೆ ಎಂದು ಹೇಳಿದರು.

ADVERTISEMENT

ಹಲವು ಮೊದಲುಗಳು

ಇದೇ ಮೊದಲ ಬಾರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸ್ತಬ್ಧಚಿತ್ರ ರಚಿಸಿದೆ. ಬಡವರೂ ಸೇರಿದಂತೆ ಎಲ್ಲರಿಗೂ ಕಾನೂನಿನ ಅರಿವು ಮೂಡಿಸುವುದು ಆಶಯವಾಗಿದೆ. ಅಂತೆಯೇ, ಜಿಲ್ಲಾ ಸ್ವೀಪ್‌ ಸಮಿತಿಯು ಮತದಾನ ಜಾಗೃತಿ ಕುರಿತು, ಸೈನ್ಯದ ಪರಿಕಲ್ಪನೆಯನ್ನು ಇರಿಸಿಕೊಂಡು ಎನ್‌ಸಿಸಿ, ಶಿಕ್ಷಣ ಅರಿವು ಪರಿಕಲ್ಪನೆಯಿಂದ ಉನ್ನತ ಶಿಕ್ಷಣ ಇಲಾಖೆ ಸ್ತಬ್ಧಚಿತ್ರ ರಚಿಸಿವೆ. ಇದೇ ಮೊದಲ ಬಾರಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಇವು ಭಾಗಿಯಾಗಿವೆ ಎಂದರು.

ಜಿಲ್ಲಾ ಪಂಚಾಯಿತಿಯು ಈ ವರ್ಷ ವಿಶೇಷತೆ ತೋರಿದೆ. ಪಿರಿಯಾಪಟ್ಟಣದ ಬೈಲುಕುಪ್ಪೆಯ ‘ಗೋಲ್ಡನ್‌ ಟೆಂಪಲ್‌’ ಪ್ರತಿಕೃತಿಯನ್ನು ರಚಿಸಿದೆ ಎಂದು ಮಾಹಿತಿ ನೀಡಿದರು.

ವಿಜಯದಶಮಿಯ ದಿನದಂದೇ ಸ್ತಬ್ಧಚಿತ್ರಗಳಿಗೆ ಬಹುಮಾನ ನೀಡಲಾಗುತ್ತದೆ. ಮೊದಲ ಬಹುಮಾನವಾಗಿ ₹ 30 ಸಾವಿರ, ದ್ವಿತೀಯ ಬಹುಮಾನವಾಗಿ ₹ 20 ಸಾವಿರ, ₹ 10 ಸಾವಿರ ನೀಡಲಾಗುವುದು. ಇದಕ್ಕಾಗಿ ಮೂವರು ತೀರ್ಪುದಾರರನ್ನು ಆಯ್ಕೆ ಮಾಡಲಾಗಿದೆ.

ಉ‍ಪಸಮಿತಿಯ ಕಾರ್ಯಾಧ್ಯಕ್ಷ ಡಿ.ಕೆ.ಲಿಂಗರಾಜು, ಸದಸ್ಯ ಕಾರ್ಯದರ್ಶಿ ರಮೇಶ ಮೂರ್ತಿ ಭಾಗವಹಿಸಿದ್ದರು.

ಪರಿಸರ ಪ್ರಿಯ ಸಾಮಗ್ರಿ

ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ಪರಿಸರ ಪ್ರಿಯ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಅಂತೆಯೇ, ನವೀನ ತಂತ್ರಜ್ಞಾನಗಳನ್ನೂ ಬಳಸಿಕೊಂಡಿರುವುದು ವಿಶೇಷವಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಸ್ತಬ್ಧಚಿತ್ರಕ್ಕೆ ಎಲ್‌ಇಡಿ ಪರದೆಗಳನ್ನು ಬಳಸಿಕೊಳ್ಳಲಾಗಿದೆ. ಈ ಪರದೆಯಲ್ಲಿ ಇಲಾಖೆಯ ಸಾಧನೆ, ಉದ್ದೇಶಗಳ ಮಾಹಿತಿ ಬರುತ್ತಿರುತ್ತದೆ. ಸ್ತಬ್ಧಚಿತ್ರಗಳನ್ನು ಜನಪರವೂ ಪರಿಸರ ಪ್ರಿಯವೂ ಆಗುವಂತೆ ನೋಡಿಕೊಳ್ಳುವುದು ಆಶಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.