ADVERTISEMENT

Mysuru Dasara | ಸ್ವಚ್ಛತೆ: ಬದಲಾವಣೆ ತಂದ ತಲೆನೋವು!

ಮಹಾನಗರ ಪಾಲಿಕೆಯಿಂದ 500 ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿ ನೇಮಕ

ಶಿವಪ್ರಸಾದ್ ರೈ
Published 27 ಸೆಪ್ಟೆಂಬರ್ 2024, 5:36 IST
Last Updated 27 ಸೆಪ್ಟೆಂಬರ್ 2024, 5:36 IST
<div class="paragraphs"><p>ನಗರದ ಚಿಕ್ಕ ಗಡಿಯಾರದ ಬಳಿ ಸಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು</p></div>

ನಗರದ ಚಿಕ್ಕ ಗಡಿಯಾರದ ಬಳಿ ಸಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು

   

(ಸಂಗ್ರಹ ಚಿತ್ರ)

ಮೈಸೂರು: ಅದ್ದೂರಿ ದಸರಾ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಈ ಬಾರಿ ಕೊನೆಯ ಕ್ಷಣದಲ್ಲಿ ವಿವಿಧ ಕಾರ್ಯಕ್ರಮಗಳ ಸ್ಥಳವನ್ನು ಬದಲಾಯಿಸಿರುವುದರಿಂದ ಸ್ವಚ್ಛತಾ ಸಿಬ್ಬಂದಿ ಕೊರತೆ ಉಂಟಾಗುವ ಸಾಧ್ಯತೆ ಇದೆ.

ADVERTISEMENT

ಪ್ರತಿ ವರ್ಷದಂತೆ ಪಾಲಿಕೆಯು 500 ಸ್ವಚ್ಛತಾ ಸಿಬ್ಬಂದಿಯನ್ನು ದಸರಾ ಕಾರ್ಯಕ್ರಮಗಳ ಸ್ವಚ್ಛತೆಗಾಗಿ ನಿಯೋಜಿಸಿಕೊಂಡಿತ್ತು. ಆದರೆ, ಯುವ ದಸರೆಯನ್ನು ನಗರದಿಂದಾಚೆ ಅಂದರೆ ಉತ್ತನಹಳ್ಳಿ ಬಳಿ ನಡೆಸಲು ನಿರ್ಧರಿಸಿದ್ದು, ಆಹಾರ ಮೇಳವು ಮಹಾರಾಜ ಮೈದಾನ ಮತ್ತು ಪುಸ್ತಕ ಮೇಳ ಸ್ಕೌಟ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯಲಿದೆ. ಈ ಬದಲಾವಣೆಯಿಂದಾಗಿ ಹಿಂದಿಗಿಂತ ಹೆಚ್ಚಿನ ಜನರನ್ನು ಸ್ವಚ್ಛತೆಗೆ ನಿಯೋಜಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಸಾಧ್ಯವಾಗದಿದ್ದರೆ ಇರುವ ಸಿಬ್ಬಂದಿಗೆ ‘ಕಾರ್ಯಭಾರ’ ಜಾಸ್ತಿಯಾಗಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ದಸರೆಯ ಸಮಯದಲ್ಲಿ ಸ್ವಚ್ಛತಾ ಸಮಿತಿಯು ದಿನದ 24 ಗಂಟೆಯೂ ಎರಡು ಪಾಳಿಯಲ್ಲಿ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸುತ್ತದೆ. ಪಾಲಿಕೆಯಲ್ಲಿ ಈಗಾಗಲೇ ಇರುವ 1,980 ಪೌರಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನು  ಮಾಡುತ್ತಾರೆ. ಅದರೊಂದಿಗೆ ದಿನಗೂಲಿ ಆಧಾರದಲ್ಲಿ ನೇಮಿಸಿಕೊಂಡಿರುವ 500 ಜನ ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಸ್ಚಚ್ಛತೆಯಲ್ಲಿ ತೊಡಗುತ್ತಾರೆ. ಏಳು ಪರಿಸರ ಎಂಜಿನಿಯರ್ ಹಾಗೂ 27 ಪಾಲಿಕೆ ಆರೋಗ್ಯಾಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ.

ಆಹಾರ ಮೇಳದಲ್ಲಿ ಸ್ವಚ್ಛತಾ ಸಿಬ್ಬಂದಿ ಕೆಲಸ ಇತರೆಡೆಗಳಿಗಿಂತ ಹೆಚ್ಚಿದೆ. ಕಳೆದ ಬಾರಿ ಸ್ಕೌಟ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆದಿದ್ದ ಆಹಾರ ಮೇಳಕ್ಕೆ ಒಂದು ಪಾಳಿಯಲ್ಲಿ 50 ಜನ ಕೆಲಸ ಮಾಡಿದ್ದರು. ಆದರೆ, ಈ ಬಾರಿ ಮಹಾರಾಜ ಮೈದಾನದಲ್ಲಿ ಜಾಗ ಹೆಚ್ಚಿರುವುದರಿಂದ ಮಳಿಗೆಗಳ ಸಂಖ್ಯೆಯೂ ಹೆಚ್ಚಲಿದೆ. ಇದರಿಂದ ಸಹಜವಾಗಿಯೇ ಸಿಬ್ಬಂದಿ ಹೆಚ್ಚಿಸಬೇಕಾಗಿದೆ.

‘ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಹಾಗೂ ದೀಪಾಲಂಕಾರ ಮಾಡಲಾಗುವ ರಸ್ತೆಯಲ್ಲಿ ಹೆಚ್ಚು ಕೆಲಸ ಇರುತ್ತದೆ. ಅಲ್ಲೇ ಇದ್ದು ಕಸ ಸಂಗ್ರಹಿಸಬೇಕಾಗುತ್ತದೆ. ಆಗಾಗ್ಗೆ ಸಾಗಿಸಬೇಕಾಗುತ್ತದೆ. ಕಾರ್ಯಕ್ರಮ ಮುಗಿದು, ಜನರ ಓಡಾಟ ಕಡಿಮೆಯಾದ ಬಳಿಕ ರಾತ್ರಿ 11ರಿಂದ ಸ್ವಚ್ಛತೆ ಆರಂಭಿಸಿದರೆ ತಡರಾತ್ರಿ 3 ಗಂಟೆಯವರೆಗೆ ಮುಂದುವರಿಯುತ್ತದೆ. ಮುಂಜಾನೆ ಮತ್ತೊಂದು ಬಾರಿ ಸ್ವಚ್ಛತೆ ಮಾಡಲಾಗುತ್ತದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಅಧಿಕಾರಿಗಳ ಸಹಕಾರ ಇದ್ದರೆ ಸ್ವಚ್ಛತೆ ಕಾಪಾಡಲು ಸಾಧ್ಯ. ಫಲಪುಷ್ಪ ಪ್ರದರ್ಶನದ ಉದ್ಯಾನಗಳಲ್ಲಿ ರಾತ್ರಿ ಕೆಲಸ ಮಾಡಲು ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಜಂಬೂಸವಾರಿಯಲ್ಲಿ ಸಿಬ್ಬಂದಿಯು ಪೊಲೀಸರನ್ನು ಒಪ್ಪಿಸಿ ಒಳಗೆ ಕಳಿಸಲು ಹರಸಾಹಸ ಪಡಬೇಕಾಗುತ್ತದೆ. ಸ್ವಚ್ಛತೆಯು ಪಾಲಿಕೆ ನಿಯೋಜಿಸಿರುವ ಸಿಬ್ಬಂದಿಯ ಕೆಲಸವಷ್ಟೇ ಅಲ್ಲ ಎಲ್ಲರ ಕರ್ತವ್ಯ ಎಂದು ಅರಿಯಬೇಕು’ ಎಂದು ಹೇಳಿದರು.

‘ಟ್ರಾಫಿಕ್‌ ಸಮಸ್ಯೆಯನ್ನಷ್ಟೇ ಗಮನದಲ್ಲಿಟ್ಟು ಜಿಲ್ಲಾಡಳಿತ ಏಕಾಏಕಿ ಕಾರ್ಯಕ್ರಮಗಳ ಸ್ಥಳ ಬದಲಾಯಿಸಿರುವಂತಿದೆ. ಅದರ ಹಿಂದೆ ಇರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ತಕ್ಷಣ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಿ’ ಎಂದು ಸ್ವಚ್ಛತಾ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಪಾಲಿಕೆ ಆಯುಕ್ತ ಅಶಾದ್‌ ಉರ್ ರೆಹಮಾನ್ ಶರೀಫ್ ಲಭ್ಯವಾಗಲಿಲ್ಲ.

ಹೆಚ್ಚು ಸ್ವಚ್ಛತಾ ಸಿಬ್ಬಂದಿ ನಿಯೋಜನೆಗೆ ಆಗ್ರಹ ದಿನದ 24 ಗಂಟೆಯೂ 2 ಪಾಳಿಯಲ್ಲಿ ಸ್ವಚ್ಛತೆ ಸ್ವಚ್ಛತೆಗೆ ಎಲ್ಲರ ಸಹಕಾರವೂ ಅಗತ್ಯ
ಯುವ ದಸರಾ ನಡೆಯುವ ಸ್ಥಳ ಪರಿಶೀಲಿಸಿದ್ದೇವೆ. ದಸರಾ ಕಾರ್ಯಕ್ರಮ ನಡೆಯುವಲ್ಲಿ ಸ್ವಚ್ಛತೆಗೆ ಅರ್ಜಿಗಳು ಬಂದಿದ್ದು ಅಲ್ಲಿಗೆ ಸಿಬ್ಬಂದಿ ನೇಮಿಸಲು ಸಭೆ ನಡೆಸಿ ಕ್ರಮವಹಿಸಲಾಗುವುದು
ವೆಂಕಟೇಶ್‌ ಪಾಲಿಕೆ ಆರೋಗ್ಯಾಧಿಕಾರಿ

‘ಜಂಬೂಸವಾರಿ ವೀಕ್ಷಿಸಲು ಸ್ಥಳ ನೀಡಿ’

‘ಪೌರಕಾರ್ಮಿಕರು ದಸರೆಯ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರಿಗಷ್ಟೇ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಪುರಭವನ ಆವರಣದ ಬಳಿಯ ಟೆಂಟ್‌ನಲ್ಲಿ ಸಾರ್ವಜನಿಕರೊಂದಿಗೆ ನಮಗೆ ಜಾಗ ನಿಗದಿ‍ಪಡಿಸಲಾಗುತ್ತದೆ. ಸಾರ್ವಜನಿಕರೇ ಆ ಸ್ಥಳ ಆಕ್ರಮಿಸಿಕೊಳ್ಳುತ್ತಿದ್ದಾರೆ. ಪೌರಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಜಂಬೂಸವಾರಿ ವೀಕ್ಷಣೆಗೆ ಅವಕಾಶ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ’ ಎಂದು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಚಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.