ADVERTISEMENT

ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 6:49 IST
Last Updated 21 ಆಗಸ್ಟ್ 2024, 6:49 IST
<div class="paragraphs"><p>ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಬುಧವಾರ ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು  ನೇತೃತ್ವದ 9 ಆನೆಗಳ ‘ಗಜಪಯಣ’  ಪ್ರಜಾವಾಣಿ ಚಿತ್ರ/&nbsp;ಅನೂಪ್&nbsp;ರಾಘ.ಟಿ.</p></div>

ಮೈಸೂರಿನ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಬುಧವಾರ ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ‘ಗಜಪಯಣ’ ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

   

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಬುಧವಾರ ದಸರೆಯ ಸಂಭ್ರಮಕ್ಕೆ ‘ಗಜ ಪಯಣ’ವು ಮುನ್ನುಡಿ ಬರೆಯಿತು.

ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಬೆಳಿಗ್ಗೆ 10.40ಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಿದರು.

ADVERTISEMENT

ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಏಕಲವ್ಯ , ರಾಂಪುರ ಆನೆ ಶಿಬಿರದ ರೋಹಿತ್, ದೊಡ್ಡಹರವೆ ಆನೆ ಶಿಬಿರದ ಲಕ್ಷ್ಮಿ, ವರಲಕ್ಷ್ಮಿ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ‘ಧನಂಜಯ’, ‘ಗೋಪಿ’, ‘ಕಂಜನ್’ ಆನೆಗಳನ್ನು ಬಣ್ಣ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು. ಈ ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿದ್ದವು.

ಅರಮನೆ ಪುರೋಹಿತ ಪ್ರಹ್ಲಾದ್‌ ರಾವ್ ನೇತೃತ್ವದಲ್ಲಿ ಪೂಜಾ ಕಾರ್ಯ ಕ್ರಮ ನಡೆಯಿತು. ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ ಮಾಡಲಾಯಿತು. ಗಣಪತಿ ಅರ್ಚನೆ ಜೊತೆ ವನದೇವತೆ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಪೂಜೆ ನಂತರ ಕೆಲವು ದೂರದವರೆಗೆ ಆನೆಗಳನ್ನು ನಡೆಸಿಕೊಂಡು ಬರಲಾಯಿತು. ಕಂಸಾಳೆ, ಪಟಕುಣಿತ, ಪೂಜಾಕುಣಿತ, ಚಂಡೆಮೇಳ, ತಮಟೆ, ನಾದಸ್ವರ, ಡೊಳ್ಳು ಕುಣಿತ ಕಲಾವಿದರು ಹೆಜ್ಜೆ ಹಾಕಿದರು.

ಶಾಸಕರಾದ ಜಿ.ಡಿ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮುಡಾ ಅಧ್ಯಕ್ಷ ಮರೀಗೌಡ, ಐಜಿಪಿ ಬೋರಲಿಂಗಯ್ಯ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್ ಗಳಾದ ಐ.ಬಿ.ಪ್ರಭುಗೌಡ, ಕೆ.ಎನ್‌.ಬಸವರಾಜು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಡಿಸಿಪಿ ಎಂ.ಮುತ್ತುರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.