ADVERTISEMENT

ಜಂಬೂಸವಾರಿಗೆ ನಡಿಗೆ ತಾಲೀಮು ಶುರು: ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಹೆಜ್ಜೆ

ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದಲ್ಲಿ ಗಜಪಡೆ ಹೆಜ್ಜೆ l ಕಂಜನ್‌ಗೆ ವಿಶ್ರಾಂತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 14:34 IST
Last Updated 25 ಆಗಸ್ಟ್ 2024, 14:34 IST
‘ಜಂಬೂಸವಾರಿ’ ಸಿದ್ಧತೆಗಾಗಿ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ಗಜಪಡೆಯು ಮೈಸೂರಿನ ಅರಮನೆ ಆವರಣದಿಂದ ಬನ್ನಿಮಂಟಪಕ್ಕೆ ಭಾನುವಾರ ನಡಿಗೆ ತಾಲೀಮು ನಡೆಸಿತು – ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
‘ಜಂಬೂಸವಾರಿ’ ಸಿದ್ಧತೆಗಾಗಿ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ಗಜಪಡೆಯು ಮೈಸೂರಿನ ಅರಮನೆ ಆವರಣದಿಂದ ಬನ್ನಿಮಂಟಪಕ್ಕೆ ಭಾನುವಾರ ನಡಿಗೆ ತಾಲೀಮು ನಡೆಸಿತು – ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.   

ಮೈಸೂರು: ದಸರಾ ‘ಜಂಬೂಸವಾರಿ’ಗೆ 48 ದಿನಗಳಷ್ಟೇ ಬಾಕಿ ಇದ್ದು, ಅರಮನೆ ಆವರಣದಲ್ಲಿ ಬಿಡಾರ ಹೂಡಿದ್ದ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ 8 ಆನೆಗಳಿಗೆ ರಾಜಬೀದಿಯಲ್ಲಿ ತಾಲೀಮು ಭಾನುವಾರ ಆರಂಭವಾಯಿತು.

ಕಳೆದೆರಡು ದಿನದಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ತಾಲೀಮು, ಅರಮನೆಯಾಚೆಗೆ ನಡೆಯಿತು. ಮೊದಲ ದಿನವೇ ಜಂಬೂಸವಾರಿ ಮಾರ್ಗದ ಬನ್ನಿಮಂಟಪದವರೆಗೂ ಪೂರ್ಣ ಪ್ರಮಾಣದಲ್ಲಿ ಆನೆಗಳು ನಡೆದವು. ಕಾಲು ನೋವಿನಿಂದಾಗಿ ‘ಕಂಜನ್‌’ಗೆ ವಿಶ್ರಾಂತಿ ನೀಡಲಾಯಿತು.

ಸಾಮಾನ್ಯವಾಗಿ ದಿನದಿನಕ್ಕೆ ನಡಿಗೆಯ ದೂರವನ್ನು ಹೆಚ್ಚಿಸಲಾಗುತ್ತದೆ. ಶನಿವಾರ 2 ಕಿ.ಮೀ ದೂರದ ಧನ್ವಂತರಿ ರಸ್ತೆಗೆ ಹೆಜ್ಜೆಹಾಕಿದ್ದ ಆನೆಗಳು, ನಡಿಗೆ ತಾಲೀಮಿನ ಮೊದಲ ದಿನವೇ 4.5 ಕಿ.ಮೀ ದೂರ ನಡೆದವು.

ADVERTISEMENT

ಗಜಗಳ ವೀಕ್ಷಣೆ: ಜಂಬೂಸವಾರಿ ಪಥವಾದ ಆಲ್ಪರ್ಟ್‌ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆಯುದ್ದಕ್ಕೂ ಜನರು ಆನೆಗಳನ್ನು ನೋಡಿ ಕೈಮುಗಿದರು. ಹೂ ವ್ಯಾಪಾರಿಗಳು ಮಾಲೆ ಎಸೆದು ಧನ್ಯತೆ ಮೆರೆದರು. ಮಕ್ಕಳು ಪೋಷಕರ ಹೆಗಲ ಮೇಲೆ ಕುಳಿತು ಚಪ್ಪಾಳೆ ತಟ್ಟುತ್ತಿದ್ದ ದೃಶ್ಯ ಸಂತಸವನ್ನು ಉಕ್ಕಿಸಿದವು. ಫೋಟೊ ತೆಗೆಯಲು ಜನರು ಮುಗಿಬಿದ್ದರು.

ಅರಮನೆಯ ಬಲರಾಮ ದ್ವಾರದಿಂದ ಬೆಳಿಗ್ಗೆ 7ಕ್ಕೆ ಹೊರಟು ಕೆ.ಆರ್‌.ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್‌.ಆಸ್ಪತ್ರೆ, ಬಂಬೂಬಜಾರ್‌, ಹೈವೇ ವೃತ್ತದ ಮೂಲಕ ಸಾಗಿ 8.25ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. 9.49ಕ್ಕೆ ಅಲ್ಲಿಂದ ವಾಪಸಾದವು.

‘ಅಭಿಮನ್ಯು’ ಹಿಂದೆ ವರಲಕ್ಷ್ಮಿ, ಏಕಲವ್ಯ, ಭೀಮ, ಲಕ್ಷ್ಮಿ, ಧನಂಜಯ, ಗೋಪಿ, ರೋಹಿತ್‌ ಹೆಜ್ಜೆ ಹಾಕಿದರು. ಮಧ್ಯೆ ಮಧ್ಯದಲ್ಲಿ ಆನೆಗಳು ನಿಂತಾಗ ಮುನ್ನಡೆಯುತ್ತಿದ್ದ ಅಭಿಮನ್ಯು ನಿಂತು ಕಾಯುತ್ತಿದ್ದನು. ಮೂರು ಕಡೆ ಲದ್ದಿ ಹಾಕಲು ಒಂದೆರಡು ನಿಮಿಷ ವಿರಮಿಸಿದ ಆನೆಗಳು, ನಂತರ ಯಾವುದೇ ಅಳುಕಿಲ್ಲದೆ ಸರಾಗವಾಗಿ ತಾಲೀಮು ಪೂರ್ಣಗೊಳಿಸಿದವು.

ಗಜಪಡೆಗಳ ಸಾಲಿನ ನಡುವೆ ಅಂತರ ಹೆಚ್ಚಾದಾಗ ಅಭಿಮನ್ಯು, ಗೋಪಿ, ಭೀಮ ವೇಗ ಕಡಿಮೆಗೊಳಿಸುವುದು, ನಿಲ್ಲುವುದು ಮಾಡುತ್ತಿದ್ದವು. ಬೇರೆ ಕಾಡಿನ ಶಿಬಿರಗಳಿಂದ ಬಂದರೂ ‘ನಾವೆಲ್ಲ ಒಂದೇ’ ಎನ್ನುವ ಭಾವ ಮೂಡಿಸಿದ್ದವು. 10.4 ಕಿ.ಮೀ ಮೊದಲ ದಿನದ ನಡಿಗೆ ತಾಲೀಮನ್ನು ಪೂರ್ಣಗೊಳಿಸಿದವು. ಗಂಟೆಗೆ ಸರಾಸರಿ 3.9 ಕಿ.ಮೀ ವೇಗದಲ್ಲಿ ನಡೆದಿವೆ.

ಕಂಜನ್ ಆನೆಗೆ ವಿಶ್ರಾಂತಿ: ಅನಾರೋಗ್ಯದಿಂದ ಕಾಲು ನೋವಿಗೆ ಒಳಗಾಗಿರುವ ಕಂಜನ್ ಆನೆಗೆ ವಿಶ್ರಾಂತಿ ನೀಡಲಾಗಿತ್ತು. ಶನಿವಾರ ತೂಕ ಮಾಡಿಸಲು ಕರೆದೊಯ್ಯುವಾಗ ಕಂಜನ್ ಆನೆ ಕುಂಟಲಾರಂಭಿಸಿತ್ತು. ಆನೆ ಹೊಟ್ಟೆಯಲ್ಲಿ ಸಮಸ್ಯೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶ್ರಾಂತಿ ನೀಡಲಾಗಿತ್ತು.

ಪೊಲೀಸ್ ಭದ್ರತೆ: ‌ಗಜ ಪಡೆ ಸಾಗುತ್ತಿದ್ದರೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಆನೆಗಳ ಮುಂದೆ ರಸ್ತೆಯಲ್ಲಿ ಬಿದ್ದಿರುವ ವಾಹನಗಳ ಮೊಳೆ, ಕಬ್ಬಿಣದ ಚೂರುಗಳು ಆನೆಗಳ ಪಾದಗಳಿಗೆ ಚುಚ್ಚದಿರಲು ಆಯಸ್ಕಾಂತದ ಸರಳಿನ ಬಂಡಿಯನ್ನು ಜೀಪ್‌ ಹಿಂದೆ ಹಾಕಲಾಗಿತ್ತು. ಆನೆಗಳ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ಡಿಸಿಎಫ್‌ ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ಸಂತೋಷ್ ಹೂಗಾರ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್, ಸಹಾಯಕರಾದ ಅಕ್ರಮ್ ಹಾಜರಿದ್ದರು.

‘ರೋಹಿತ್‌ ಏಕಲವ್ಯ ಭರವಸೆ’

‘ದಸರಾ ಗಜಪಡೆಯ ಮೊದಲ ತಂಡದ 9 ಆನೆಗಳಲ್ಲಿ ಕಂಜನ್ ಹೊರತುಪಡಿಸಿ ಉಳಿದವುಗಳಿಗೆ ನಡಿಗೆ ತಾಲೀಮು ಯಶಸ್ವಿಯಾಗಿ ನಡೆಸಲಾಗಿದೆ. ಹೊಸ ಆನೆಗಳಾದ ಏಕಲವ್ಯ ರೋಹಿತ್‌ ಆನೆಯ ವರ್ತನೆಗಳು ಭರವಸೆ ಮೂಡಿಸಿವೆ’ ಎಂದು ಡಿಸಿಎಫ್‌ ಐ.ಬಿ.ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೊಸ ಆನೆಗಳು ಪ್ರಬುದ್ಧವಾಗಿ ವರ್ತಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ಗಜಪಡೆಯ ಆರೋಗ್ಯ ಕುರಿತು ಹೆಚ್ಚಿನ ಗಮನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭಿಸಲಾಗುತ್ತದೆ’ ಎಂದರು.

ಗಜಪಡೆಗೆ ಪೌಷ್ಟಿಕ ಆಹಾರ, ಸ್ನಾನ

ದಸರಾ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದ್ದು ಶನಿವಾರ ರಾತ್ರಿಯಿಂದ ಗೋಣಿ– ಆಲದ ಸೊಪ್ಪು ಭತ್ತದ ಹುಲ್ಲು ಕಬ್ಬಿನೊಂದಿಗೆ ಅಕ್ಕಿ ಭತ್ತ ಬೆಲ್ಲ ಉದ್ದಿನ ಕಾಳು ಹಸಿರು ಕಾಳು ಗೋದಿ ತುಪ್ಪ ತರಕಾರಿಯಿಂದ ಮಾಡಿದ ಆಹಾರ ನೀಡಲಾಯಿತು. ಮಾವುತರು ಹಾಗೂ ಕಾವಾಡಿಗರ ಮಕ್ಕಳು ಮುದ್ದಿನ ಆನೆಗಳಿಗೆ ಆಹಾರವನ್ನು ನೀಡಿ ಸಂತಸ ಪಟ್ಟರು. ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ದಣಿದಿದ್ದ ಆನೆಗಳಿಗೆ ಸ್ನಾನದ ತೊಟ್ಟಿಗೆ ಒಂದೊಂದಾಗಿ ಕರೆದೊಯ್ದು ಮಜ್ಜನ ಮಾಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.