ADVERTISEMENT

ದಿನದ ಸೂಕ್ತಿ| ಭಕ್ತಿಯ ಫಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 9 ಮಾರ್ಚ್ 2021, 1:12 IST
Last Updated 9 ಮಾರ್ಚ್ 2021, 1:12 IST
ಪ್ರಾರ್ಥನೆ
ಪ್ರಾರ್ಥನೆ   

ಮಮ ನ ಭಜನಶಕ್ತಿಃ ಪಾದಯೋಸ್ತೇ ನ ಭಕ್ತಿಃ

ನ ಚ ವಿಷಯವಿರಕ್ತಿರ್ಧ್ಯಾನಯೋಗೇ ನ ಸಕ್ತಿಃ ।

ಇತಿ ಮನಸಿ ಸದಾಹಂ ಚಿಂತಯನ್ನಾದ್ಯಶಕ್ತೇ

ADVERTISEMENT

ರುಚಿವಚನಪುಷ್ಪೈರರ್ಚನಂ ಸಂಚಿನೋಮಿ ।।

ಇದರ ತಾತ್ಪರ್ಯ ಹೀಗೆ:

‘ನನಗೆ ಭಕ್ತಿ ಮಾಡುವ ಶಕ್ತಿ ಇಲ್ಲ; ನಿನ್ನ ಪಾದಗಳಲ್ಲಿ ಭಕ್ತಿ ಇಲ್ಲ; ಇಂದ್ರಿಯ ಭೋಗಗಳಲ್ಲಿ ವೈರಾಗ್ಯ ಬಂದಿಲ್ಲ; ಧ್ಯಾನಯೋಗದಲ್ಲಿ ಆಸಕ್ತಿ ತೋರಲಿಲ್ಲ – ಹೀಗೆಂದು ಮನಸ್ಸಿನಲ್ಲಿ ಯಾವಾಗಲೂ ಕೊರಗುತ್ತ ಕೊರಗುತ್ತ, ಎಲೈ ಆದಿಶಕ್ತಿಯೇ, ಸುಂದರವಾದ ಮಾತುಗಳು ಎಂಬ ಹೂವುಗಳಿಂದ ನಿನ್ನ ಅರ್ಚನೆಯನ್ನು ಮಾಡುತ್ತಿರುವೆ.’

ಭಕ್ತಿಯ ನಿರೂಪಣೆಯನ್ನು ಮಾಡುತ್ತಿದೆ ಈ ಪದ್ಯ.

ಭಕ್ತಿ ಎಂಬುದು ಭಕ್ತನು ದೇವರೊಂದಿಗೆ ಸಾಧಿಸುವ ತಾದಾತ್ಮ್ಯ; ಇದನ್ನು ಪ್ರೀತಿ ಎಂದೂ ಕರೆಯಬಹುದು. ಇದು ತೋರಿಕೊಳ್ಳುವ ವಿಧಾನಗಳೂ ಹತ್ತಾರು. ಮೊದಲಿಗೆ ನಮ್ಮ ಇಂದ್ರಿಯ ಸುಖಗಳ ಬಗ್ಗೆ ಉದಾಸೀನತೆ ಬರಬೇಕು; ಲೌಕಿಕ ಸುಖದುಃಖಗಳಿಂದ ಮನಸ್ಸು ದೂರವಾಗಬೇಕು. ಭಗವಂತನ ಸಾಕ್ಷತ್ಕಾರವಾಗಬೇಕೆಂಬ ಉತ್ಕಟತೆ ಮೂಡಬೇಕು. ಎಲ್ಲೆಲ್ಲೂ ದೇವರನ್ನೇ ಕಾಣುವಂಥ ಭಾವ ಗಟ್ಟಿಯಾಗಬೇಕು.

ಆದರೆ ಇಂಥ ಸಿದ್ಧತೆಯನ್ನು ಗಳಿಸುವುದು ಸುಲಭವಲ್ಲ. ಆದರೆ ಇದಕ್ಕೊಂದು ಸುಲಭದ ದಾರಿಯೂ ಇದೆ. ನಮಗೆ ನಮ್ಮ ಅಶಕ್ತಿಯ ಬಗ್ಗೆ ತಿಳಿದಿರಬೇಕು. ಈ ಅಶಕ್ತಿಯನ್ನು ತುಂಬಿಕೊಳ್ಳಬೇಕೆಂಬ ಪ್ರಾಮಾಣಿಕ ಪ್ರಯತ್ನವೂ ನಡೆಯಬೇಕು. ಆರ್ತತೆಯಿಂದ ಭಗವಂತನ ನಾಮಸ್ಮರಣೆ ನಿರಂತರವಾಗಿ ನಡೆಯುತ್ತಿದ್ದರೆ ನಮ್ಮ ಮನಸ್ಸು ಪಾಕಗೊಳ್ಳುತ್ತದೆ. ಇದೇ ಪ್ರಾರ್ಥನೆ. ಇದು ನಮ್ಮಲ್ಲಿ ಭಕ್ತಿಯನ್ನು ನೆಲೆಗೊಳಿಸಲು ಸಹಕಾರಿಯಾಗುತ್ತದೆ. ಇದನ್ನೇ ಈ ಪದ್ಯ ಇಲ್ಲಿ ಹೇಳುತ್ತಿರುವುದು.

ನಮ್ಮಲ್ಲಿ ಭಕ್ತಿ ನೆಲೆಗೊಂಡಿದೆ ಎಂಬುದಕ್ಕೆ ನಿದರ್ಶನ ಏನು – ಎಂಬ ಪ್ರಶ್ನೆಗೆ ಉತ್ತರವೋ ಎಂಬಂತಿದೆ ಈ ಪದ್ಯ:

ಯತ್ರೈವ ಯತ್ರೈವ ಮನೋ ಮದೀಯಂ

ತತ್ರೈವ ತತ್ರೈವ ತವ ಸ್ವರೂಪಮ್‌ ।

ಯತ್ರೈವ ಯತ್ರೈವ ಶಿರೋ ಮದೀಯಮ್‌

ತ್ರತ್ರೈವ ತತ್ರೈವ ಪದದ್ವಯಂ ತೇ ।।

’ನನ್ನ ಮನಸ್ಸು ಎಲ್ಲೆಲ್ಲಿ ಸುಳಿದಾಡುವುದೋ ಅಲ್ಲೆಲ್ಲಾ ನಿನ್ನ ಸ್ವರೂಪವೇ ಕಂಡುಬರುತ್ತದೆ. ಎಲ್ಲೆಲ್ಲಿ ನನ್ನ ತಲೆಯನ್ನಿಡುವೆನೋ ನಿನ್ನ ಪದದ್ವಯವೇ ಇರುತ್ತದೆ‘ – ಎಂಬುದು ಇದರ ಭಾವ.

ನಮ್ಮ ನಡೆ–ನುಡಿಗಳಲ್ಲಿ ಭಕ್ತಿಭಾವವೇ ತುಂಬಿದ್ದರೆ ಆಗ ನಾವು ನೋಡುವುದೆಲ್ಲವೂ ದೇವರ ರೂಪವಾಗಿಯೇ ಕಾಣುತ್ತದೆ, ದೇವರನ್ನು ಹೊರತು ಪಡಿಸಿ ಇನ್ನೊಂದು ತತ್ತ್ವವೇ ಯಾವ ವಸ್ತುವಿನಲ್ಲೂ ನಮಗೆ ಕಾಣದು. ಇದೇ ಭಕ್ತಿಯ ಪರಾಕಾಷ್ಠೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.