ADVERTISEMENT

ದಿನದ ಸೂಕ್ತಿ | ನಿಮಗೆ ನೀವೇ ಮಿತ್ರ, ಶತ್ರು ಕೂಡ ನೀವೆ!

ಎಸ್.ಸೂರ್ಯಪ್ರಕಾಶ ಪಂಡಿತ್
Published 24 ಅಕ್ಟೋಬರ್ 2020, 17:12 IST
Last Updated 24 ಅಕ್ಟೋಬರ್ 2020, 17:12 IST
   

ಭದ್ರಂ ಭದ್ರಮಿತಿ ಬ್ರೂಯಾದ್‌‌ ಭದ್ರಮಿತ್ಯವೇವ ವಾ ವದೇತ್‌ ।
ಶುಷ್ಕವೈರಂ ವಿವಾದಂ ಚ ನ ಕುರ್ಯಾತ್‌ ಕೇನಚಿತ್‌ ಸಹ ।।

ಇದರ ತಾತ್ಪರ್ಯ ಹೀಗೆ:

‘ಒಳ್ಳೆಯದಾದಲಿ, ಶುಭವಾಗಲಿ ಎಂದೇ ಯಾವಾಗಲೂ ಎಲ್ಲ ಸಂದರ್ಭದಲ್ಲಿಯೂ ಹೇಳುತ್ತಿರಬೇಕು. ಕಾರಣವಿಲ್ಲದೆ ವೈರವನ್ನೂ ಕೆಲಸಕ್ಕೆ ಬಾರದ ಚರ್ಚೆಯನ್ನೂ ಯಾರೊಂದಿಗೂ ಮಾಡಬಾರದು.’

ADVERTISEMENT

ನಮ್ಮಲ್ಲಿ ಒಂದು ಕಲ್ಪನೆಯುಂಟು. ದೇವತೆಗಳಲ್ಲಿ ಅಸ್ತುದೇವತೆಗಳು ಎಂಬ ವರ್ಗವೊಂದಿದೆ. ಅವರ ಕೆಲಸ ಏನೆಂದರೆ ನಾವು ಏನನ್ನಾದರೂ ಹೇಳುತ್ತಿದ್ದರೆ ಅದಕ್ಕೆ ಅವರು ‘ಅಸ್ತು’ ಎನ್ನುವುದು. ಅಸ್ತು – ಎಂದರೆ ಆಗಬಹುದು, ನೀವು ಅಂದುಕೊಂಡದ್ದು ನಡೆಯಲಿ ಎಂದು ತಾತ್ಪರ್ಯ.

ಅಂದರೆ ನಾವು ಒಳ್ಳೆಯದು ಆಗಬೇಕು ಎಂದು ಹೇಳಿದರೆ ಅದಕ್ಕೂ ಅಸ್ತುದೇವತೆಗಳು ’ಆಗಲಿ’ ಎನ್ನುತ್ತಾರೆ, ಕೆಟ್ಟದ್ದು ಆಗಬೇಕು ಎಂದು ಹೇಳಿದರೆ ಅದಕ್ಕೂ ಅಸ್ತುದೇವತೆಗೆಳು ‘ಅಗಲಿ’ ಎನ್ನುತ್ತಾರೆ. ಹಾಗಾದರೆ ನಮ್ಮ ಒಳಿತು–ಕೆಡಕುಗಳಿಗೆ ಯಾರು ಹೊಣೆ ಎಂದಾಯಿತು? ನಾವೇ ಅಲ್ಲವೆ? ಇದನ್ನೇ ಸುಭಾಷಿತ ಹೇಳುತ್ತಿರುವುದು.

ದೇವತೆಗಳು ಅಸ್ತು ಎನ್ನುತ್ತಾರೋ ಇಲ್ಲವೋ – ಇಲ್ಲಿ ಈ ಚರ್ಚೆ ಮುಖ್ಯವಲ್ಲ. ನಾವು ಯಾವಾಗಲೂ ಒಳ್ಳೆಯದರ ಬಗ್ಗೆ ಆಲೋಚಿಸಬೇಕು, ಒಳ್ಳೆಯದನ್ನೇ ಬಯಸಸಬೇಕು – ಎಂಬುದು ಇಲ್ಲಿಯ ಆಶಯ. ಸಕಾರಾತ್ಮಕ ಮನೋಧರ್ಮದಿಂದ ನಮ್ಮಲ್ಲೂ ಚೈತನ್ಯ ಉದ್ದೀಪನವಾಗುತ್ತದೆ; ಮಾತ್ರವಲ್ಲ, ನಮ್ಮ ಸಂಗಡಿಗರಲ್ಲೂ ಆ ಚೈತನ್ಯದ ವಿನಿಮಯವಾಗುತ್ತದೆ. ಆಗ ಇಡಿಯ ಪರಿಸರ ನಮಗೆ ಪೂರಕವಾದ ಉತ್ಸಾಹವನ್ನೂ ಧೈರ್ಯವನ್ನೂ ಒದಗಿಸುತ್ತದೆ.

ಸುಭಾಷಿತ ಇಲ್ಲಿ ಇನ್ನೊಂದು ಎಚ್ಚರಿಕೆಯನ್ನೂ ಕೊಟ್ಟಿದೆ: ಅನಗತ್ಯವಾದ ಹಗೆತನವನ್ನು ಯಾರೊಂದಿಗೆ ಮಾಡಿಕೊಳ್ಳಬಾರದು. ಹೀಗೆಯೇ ಅನಗತ್ಯ ವಾದ–ವಿವಾದಗಳಲ್ಲೂ ತೊಡಗಬಾರದು. ಇಂದಿನ ಸಾಮಾಜಿಕ ಜಾಲತಾಣಗಳನ್ನು ನೋಡಿದರೆ ಈ ಮಾತಿನ ಮರ್ಮ ತಿಳಿಯುತ್ತದೆ. ಯಾರದೋ ಪೋಸ್ಟ್‌ಗೆ ಇನ್ನಾರೋ ಕಾಮೇಂಟ್‌ ಮಾಡಿ, ಕೊನೆಗೆ ಇನ್ಯಾರೋ ಪರಸ್ಪರ ಶತ್ರುಗಳಾಗುತ್ತಿರುತ್ತಾರೆ! ಎರಡು ರಾಜಕೀಯ ಪಕ್ಷಗಳ ಬೆಂಬಲಿಗರಲ್ಲೂ ಇಂಥ ಪ್ರವೃತ್ತಿಯನ್ನು ಕಾಣಬಹುದು. ಆ ಎರಡು ಪಕ್ಷಗಳ ನಾಯಕರು ಪರಸ್ಪರ ಚೆನ್ನಾಗಿಯೇ ಇರುತ್ತಾರೆ; ಒಂದೇ ಎಲೆಯಲ್ಲಿ ಊಟಮಾಡುವಷ್ಟು ಅನ್ಯೋನ್ಯವಾಗಿರುತ್ತಾರೆ; ಒಂದಾಗಿಯೇ ಭ್ರಷ್ಟಾಚಾರಗಳಲ್ಲೂ ತೊಡಗಿಕೊಂಡಿರುತ್ತಾರೆ; ಮೇಲ್ನೋಟಕ್ಕೆ ಮಾತ್ರ ವಿರೋಧಿಗಳಂತೆ ಕಾಣಿಸಿಕೊಳ್ಳುತ್ತಿರುತ್ತಾರೆ! ಆದರೆ ಅವರ ಹಿಂಬಾಲಕರು ಮಾತ್ರ ಪಾಪ, ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆಯ ಪಾಲೋ ಜೈಲಿನ ಪಾಲೋ ಆಗುತ್ತಿರುತ್ತಾರೆ. ಸುಭಾಷಿತ ಇಂಥ ವಿದ್ಯಮಾನಗಳ ಬಗ್ಗೆ ಎಚ್ಚರಿಸುತ್ತಿದೆ.

ನಮಗೆ ಸಮಸ್ಯೆಗಳನ್ನು ಉಂಟುಮಾಡುವಂಥವರು ಎಲ್ಲೋ ಹೊರಗಡೆ ಇರುವುದಿಲ್ಲ; ನಮ್ಮ ಸಮಸ್ಯೆಗಳಿಗೆ ನಾವೇ ಕಾರಣ ಎಂದು ಹೇಳುತ್ತಿದೆ ಸುಭಾಷಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.