ADVERTISEMENT

ದಿನದ ಸೂಕ್ತಿ| ಮಾತೆಂಬ ಕಾಮಧೇನು

ಎಸ್.ಸೂರ್ಯಪ್ರಕಾಶ ಪಂಡಿತ್
Published 21 ನವೆಂಬರ್ 2020, 1:23 IST
Last Updated 21 ನವೆಂಬರ್ 2020, 1:23 IST
festivity
festivity   

ಕಾಮಂ ದುಗ್ಧೇ ವಿಪ್ರಕರ್ಷತ್ಯಲಕ್ಷ್ಮೀಂ

ಕೀರ್ತಿಂ ಸೂತೇ ದುರ್ಹೃದೋ ನಿಷ್ಪ್ರಲಾಂತಿ ।

ಶುದ್ಧಾಂ ಶಾಂತಾಂ ಮಾತರಂ ಮಂಗಲಾನಾಂ

ADVERTISEMENT

ಧೇನುಂ ಧೀರಾಃ ಸೂನೃತಾಂ ವಾಚಮಾಹುಃ ।।

ಇದರ ತಾತ್ಪರ್ಯ ಹೀಗೆ:

‘ಒಳ್ಳೆಯ ಮಾತು ಇಷ್ಟಾರ್ಥವನ್ನು ಕೊಡುತ್ತದೆ; ಅಮಂಗಳವನ್ನು ಹೋಗಲಾಡಿಸುತ್ತದೆ; ಕೀರ್ತಿಯನ್ನು ಉಂಟುಮಾಡುತ್ತದೆ; ಶತ್ರುಗಳನ್ನು ನಾಶಮಾಡುತ್ತದೆ; ಸ್ವಚ್ಛವಾದ, ಮಂಗಳಕ್ಕೆ ತೌರು ಎನಿಸಿರುವ ಒಳ್ಳೆಯ ಮಾತನ್ನು ಕಾಮಧೇನು ಎಂದು ಕರೆಯುತ್ತಾರೆ.’

ಮಾತಿನ ಶಕ್ತಿಯ ಬಗ್ಗೆ ಈ ಸುಭಾಷಿತ ಸೊಗಸಾಗಿ ಮಾತನಾಡಿದೆ.

ಈ ಮೊದಲು ಕೂಡ ನಾವು ನೋಡಿದ ಹಲವು ಸುಭಾಷಿತಗಳು ಮಾತಿನ ಶಕ್ತಿಯ ಬಗ್ಗೆ ನಿರೂಪಣೆ ಮಾಡಿವೆ; ಸುಭಾಷಿತ – ಎಂಬುದರ ಅರ್ಥವೇ ಒಳ್ಳೆಯ ಮಾತು, ಚೆನ್ನಾಗಿ ಆಡಿದ ಮಾತು ಎಂದು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮಾತನಾಡುವ ಶಕ್ತಿ ನಮಗೆ ಸಹಜವಾಗಿಯೇ ದಕ್ಕಿದೆ. ಬಹುಶಃ ಈ ಕಾರಣದಿಂದಲೇ ನಮಗೆ ಅದರ ಬೆಲೆ ಗೊತ್ತಾಗುತ್ತಿಲ್ಲ ಎಂದೆನಿಸುತ್ತದೆ. ಅದನ್ನು ಹೇಗೆಂದರೆ ಹಾಗೆ ಉಪಯೋಗಿಸಿಕೊಂಡು ಅಪವಿತ್ರ ಮಾಡುತ್ತಿದ್ದೇವೆ. ಈ ಅಪವಿತ್ರದ ಪರಾಕಾಷ್ಠೆಯನ್ನು ಇಂದಿನ ಸಮಾಜದಲ್ಲಿ ಧಾರಾಳವಾಗಿಯೇ ನೋಡಬಹುದಾಗಿದೆ. ಮನೆಗಳಲ್ಲಿ, ಕಚೇರಿಗಳಲ್ಲಿ, ರಸ್ತೆಗಳಲ್ಲಿ, ಪೂಜಾಸ್ಥಳಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಶಾಸನಸಭೆಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ – ಹೀಗೆ ಎಲ್ಲೆಲ್ಲಿ ಮಾತಿನ ಬಳಕೆ ಇರುತ್ತದೆಯೋ ಅಲ್ಲೆಲ್ಲಾ ಮಾತಿನ ಅಪಮಾನ ನಿರಂತವಾಗಿ ನಡೆಯುತ್ತಲೇ ಇರುತ್ತದೆ. ಏಕೆಂದರೆ ನಮಗೆಲ್ಲರಿಗೂ ಮಾತು ಸುಲಭವಾಗಿ ಸಿಕ್ಕಿರುವುದರಿಂದ ಅದರ ಬೆಲೆ ಏನು ಎಂಬುದು ನಮ್ಮ ಗಮನಕ್ಕೆ ಬಾರದಂತಾಗಿದೆ.

ಮಾತಿನ ಶಕ್ತಿ ಎಂಥದ್ದು ಎಂಬುದನ್ನು ಸುಭಾಷಿತ ಮತ್ತೊಮ್ಮೆ ನಮ್ಮ ಸ್ಮರಣೆಗೆ ತರುತ್ತಿದೆ: ’ಒಳ್ಳೆಯ ಮಾತು ಇಷ್ಟಾರ್ಥವನ್ನು ಕೊಡುತ್ತದೆ; ಅಮಂಗಳವನ್ನು ಹೋಗಲಾಡಿಸುತ್ತದೆ; ಕೀರ್ತಿಯನ್ನು ಉಂಟುಮಾಡುತ್ತದೆ; ಶತ್ರುಗಳನ್ನು ನಾಶಮಾಡುತ್ತದೆ.’ಇಂಥ ಮಾತನ್ನು ಸುಭಾಷಿತ ಕೊನೆಯಲ್ಲಿ ಕಾಮಧೇನು ಎಂದಿದೆ. ಕಾಮಧೇನು ನಾವು ಏನನ್ನು ಕೇಳಿದರೂ ಕೊಡಬಲ್ಲ ದೇವಲೋಕದ ಹಸು. ಎಂದರೆ ನಮಗೆ ಬೇಕಾದ ಎಲ್ಲವನ್ನೂ ನಾವು ನಮ್ಮಮಾತಿನ ಮೂಲಕವೇ ಪಡೆದುಕೊಳ್ಳಬಹುದು ಎಂಬುದು ಇಲ್ಲಿರುವ ಧ್ವನಿ. ಈ ಕಾಮಧೇನುವನ್ನು ಹೇಗೆ ಉಪಚರಿಸಬೇಕು ಎಂಬುದನ್ನೂ ಸುಭಾಷಿತವೇ ಹೇಳಿದೆ; ಎಂದರೆ ನಮ್ಮ ಮಾತು ಹೇಗಿರಬೇಕು ಎಂದರೆ – ಅದು ಸ್ವಚ್ಛವಾಗಿರಬೇಕು, ಶಾಂತವಾಗಿರಬೇಕು, ಒಳ್ಳೆಯದಾಗಿರಬೇಕು. ಮಾತು ಇಂಥ ಗುಣಗಳಿಂದ ಪುಷ್ಟವಾಗಿದ್ದರೆ ಆಗ ಅದು ನಮಗೆ ಬೇಕಾದುದೆಲ್ಲವನ್ನೂ ಕೊಡುವುದುರಲ್ಲಿ ಅಚ್ಚರಿಯೇನಿದೆ, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.