ADVERTISEMENT

ದಿನದ ಸೂಕ್ತಿ: ಸಂತೋಷವೇ ಸುಖ

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಅಕ್ಟೋಬರ್ 2021, 6:09 IST
Last Updated 3 ಅಕ್ಟೋಬರ್ 2021, 6:09 IST
ಆರೋಗ್ಯ
ಆರೋಗ್ಯ   

ಶಾಂತಿತುಲ್ಯಂ ತಪೋ ನಾಸ್ತಿ ಸಂತೋಷಾನ್ನ ಸುಖಂ ಪರಮ್‌ ।
ನಾಸ್ತಿ ತೃಷ್ಣಾಸಮೋ ವ್ಯಾಧಿರ್ನ ಚ ಧರ್ಮೋ ದಯಾಪರಃ ।।

ಇದರ ತಾತ್ಪರ್ಯ ಹೀಗೆ:‘ಶಾಂತಿಗೆ ಸಮನಾದ ತಪಸ್ಸಿಲ್ಲ. ಸಂತೋಷಕ್ಕೆ ಸಮನಾದ ಸುಖವಿಲ್ಲ. ದುರಾಸೆಗೆ ಸಮನಾದ ರೋಗವಿಲ್ಲ. ದಯೆಗಿಂತ ದೊಡ್ಡದಾದ ಧರ್ಮವಿಲ್ಲ,’

ಜೀವನದಲ್ಲಿ ದಿಟವಾದ ಶಾಂತಿ, ಸುಖ ಯಾವುದರಲ್ಲಿದೆ ಎಂದು ಸುಭಾಷಿತ ಹೇಳುತ್ತಿದೆ.

ADVERTISEMENT

ನಮಗೆಲ್ಲ ತಪಸ್ಸಿನ ಬಗ್ಗೆ ಸೆಳೆತ ಇದೆ. ತಪಸ್ಸಿನ ಸಾಧನೆಯಿಂದ ಏನೇನೋ ಸಿದ್ಧಿಗಳನ್ನು ಸಂಪಾದಿಸಬಹುದೆಂಬ ನಿರೀಕ್ಷೆಗಳೂ ಇವೆ. ಸುಭಾಷಿತ ಹೇಳುತ್ತಿದೆ: ’ನೀವು ತಪಸ್ಸನ್ನು ಆಚರಿಸಲು ಎಲ್ಲೋ ಕಾಡಿಗೆ ಹೋಗಬೇಕಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ಇದೆ ಎಂದಾದರೆ ನಿಮಗೆ ತಪಸ್ಸಿನ ಫಲ ಒದಗಿದೆ ಎಂದೇ ಅರ್ಥ.’ ಎಂದರೆ ತಪಸ್ಸಿನ ನಿಜವಾದ ಫಲ ಶಾಂತಿ ಎಂದಾಯಿತು.

ಸುಖ ಎಂದರೆ ಏನು? ಯಾವಾಗಲೂ ಸಂತೋಷವಾಗಿರುವುದೇ ಸುಖ. ಸುಖವನ್ನು ನಾವು ವಸ್ತುಗಳಲ್ಲಿ ಹುಡುಕುವುದನ್ನು ಬಿಟ್ಟು ನಮ್ಮ ಮನಸ್ಸಿನಲ್ಲಿ ಅದನ್ನು ನೆಲೆಗೊಳಿಸಲು ಪ್ರಯತ್ನಿಸಬೇಕು.

ಆಸೆಗೆ ಕೊನೆ ಎಂಬುದೇ ಇರದು. ಹೀಗಾಗಿಯೇ ಸುಭಾಷಿತ ಅದನ್ನು ರೋಗಗಳ ಸಾಲಿಗೆ ಸೇರಿಸಿದೆ. ಈ ರೋಗ ನಮ್ಮನ್ನು ಬಾಧಿಸಬಾರದು ಎಂದರೆ ನಾವು ತೃಪ್ತಿ ಎಂಬ ಲಸಿಕೆಯನ್ನು ತೆಗೆದುಕೊಳ್ಳಬೇಕು.

ಧರ್ಮ ಎಂದರೆ ಅದು ಇದು – ಎಂದು ಏನೋನೂ ಸಾಧಿಸುತ್ತಿರುತ್ತೇವೆ. ಆದರೆ ಸುಭಾಷಿತ ಅದನ್ನು ಸುಲಭವಾಗಿ ವ್ಯಾಖ್ಯಾನಿಸಿದೆ: ‘ದಯೆಗಿಂತಲೂ ದೊಡ್ಡ ಧರ್ಮ ಇನ್ನೊಂದಿಲ್ಲ‘. ಜಗತ್ತಿನ ಎಲ್ಲ ಜೀವ–ಜಡ ವಸ್ತುಗಳ ಬಗ್ಗೆ ಇರುವ ಕಾಳಜಿಯೇ ದಯೆ ಎನಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.