ADVERTISEMENT

ಸಾಂಗತ್ಯದಲ್ಲಿ ಸಂಶಯಕ್ಕೆ ತಿಲಾಂಜಲಿ!

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 4:29 IST
Last Updated 27 ಜನವರಿ 2020, 4:29 IST
   

ಕೆಲವೊಂದು ಸಂಬಂಧಗಳು ವಾತ್ಸಲ್ಯ, ಅಕ್ಕರೆಯಿಂದ ಕೂಡಿರುತ್ತವೆ. ಅಲ್ಲೊಂದು ಮಧುರ ಬಾಂಧವ್ಯ ಬೆಸೆದಿರುತ್ತದೆ. ಅಂತಹ ಕಾಳಜಿ, ಗೌರವಕ್ಕೆ ಮತ್ತ್ಯಾವುದೋ ಲೇಬಲ್ ಹಚ್ಚಿದಾಗ ಉಸಿರಾಡುವ ಜೀವ ಕೊನೆಗೊಳಿಸುವಂತಹ ಅವಮಾನ. ಗಂಡು ಮತ್ತು ಹೆಣ್ಣಿನ ನಡುವೆ ಹುಟ್ಟುವ ಸಂಬಂಧಗಳು ಹತ್ತಾರು. ತಾಯಿಯಂತೆ, ಅಕ್ಕ– ತಂಗಿಯಂತೆ ಆರೈಕೆ ಮಾಡುವುದನ್ನೇ ತಪ್ಪಾಗಿ ಬಿಂಬಿಸಿದರೆ, ಅಪ್ಪನಂತೆ, ಅಣ್ಣ– ತಮ್ಮನಂತೆ ವಾತ್ಸಲ್ಯದಿಂದ ನಡೆಸಿಕೊಳ್ಳುವ ಪವಿತ್ರ ಬಾಂಧವ್ಯಕ್ಕೆ ಬಣ್ಣ ಹಚ್ಚಿ ಮಾತನಾಡಿದರೆ ಮನಸ್ಸು ಘಾಸಿಗೊಳ್ಳುತ್ತದೆ.

ಅನುಮಾನ, ಅಪನಂಬಿಕೆಯೆಂಬ ಚಕ್ರದ ಸುಳಿಯೊಳಗೆ ಸಿಲುಕಿ ಸಂಬಂಧಗಳು ಕಾಲ ಉರುಳಿದಂತೆ ಸವೆಯುತ್ತಾ ಬರುತ್ತವೆ. ಮುಂದೊಂದು ದಿನ ಸವೆದು ಮತ್ತ್ಯಾವುದೊ ಒತ್ತಡಕ್ಕೆ ಸತ್ತೇ ಹೋಗಬಹುದು! ಅಣ್ಣ– ತಂಗಿಯ ಅಕ್ಕರೆಯ ಅನುಬಂಧವನ್ನು ಅನಾಗರಿಕರಂತೆ ತಪ್ಪಾಗಿ ಅರ್ಥೈಸಿಕೊಂಡಾಗ ಸಂಬಂಧದ ಕೊಂಡಿ ಕಳಚಿ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ದಿಕ್ಕೆಟ್ಟು ಅಲೆಯುವಂತಾಗುತ್ತದೆ. ಯಾಂತ್ರಿಕ ಬದುಕಲ್ಲಿ ಭಾವನಾತ್ಮಕತೆಯೇ ಬರಿದಾಗಿ ತಮ್ಮ ಸ್ವಾರ್ಥದ ಬದುಕಲ್ಲಿ ಕಳೆದು ಹೋಗುತ್ತಿರುವಾಗ, ಸ್ನೇಹ, ಸಹೋದರತ್ವದ ಭಾವದೊಂದಿಗೆ ಒಬ್ಬರು ಮತ್ತೊಬ್ಬರೊಟ್ಟಿಗೆ ನೈತಿಕ ಬೆಂಬಲಕ್ಕೆ ಹೆಗಲು ಕೊಟ್ಟಾಗ ಆ ಸಂಬಂಧಕ್ಕೆ ಬಣ್ಣ ಹಚ್ಚಿ ರಾಡಿ ಎಬ್ಬಿಸುವವರೇ ಹೆಚ್ಚು! ಸಂಬಂಧದಲ್ಲಿ ವಿಶ್ವಾಸ, ಪ್ರೀತಿಯ ಕಳೆ ಕಳೆದುಹೋಗಿ ಅನುಮಾನದ ಕಲೆ ಒಮ್ಮೆ ಹುಟ್ಟಿದರೆ ತೆಗೆದಷ್ಟೂ ಮತ್ತೆ ಮತ್ತೆ ಚಿಗುರೊಡೆಯುತ್ತದೆ. ಒಮ್ಮೆ ಸಂಶಯದಿಂದ ಸರಿದು ಸಂಸಾರದ ಸಾರದ ಸವಿಯನ್ನು ಅನುಭವಿಸಿ ನೋಡಿ!

ದಾಂಪತ್ಯದಲ್ಲಿ ಸಂಶಯದ ಸುಳಿಗಾಳಿ ಎದ್ದಾಗ ಅದೆಂತಹ ಗಟ್ಟಿ ಸಂಬಂಧವೂ ಸವಕಲಾಗುತ್ತಾ ಬರುತ್ತದೆ. ಸಂಶಯವೆಂಬ ಗೆದ್ದಲು ಹುಳಕ್ಕೆ ಅದೆಂತಹ ಗಟ್ಟಿ ಮರವಾದರೂ ಆಹಾರವಾಗಿ ಬಿಡುತ್ತದೆ.

ADVERTISEMENT

ಸಂಬಂಧ ವಜ್ರದಂತಿರಲಿ

ಹಟ, ಕೋಪ, ತಿರಸ್ಕಾರವನ್ನು ಸರಿಸಿ ಒಮ್ಮೆ ನಿಮ್ಮ ಬಾಳಸಂಗಾತಿಯೊಟ್ಟಿಗೆ ಮನಸಾರೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಆಗ ಎದುರಾದ ತೊಡಕು ಕರ್ಪೂರದಂತೆ ಕರಗಿ ಹೋಗುತ್ತದೆ.

ನಿಮ್ಮ ಸಂಗಾತಿಯೊಟ್ಟಿಗೆ ಪ್ರೀತಿ, ಕಾಳಜಿ ಇರಲಿ, ನನ್ನನ್ನೇ ಪ್ರೀತಿಸಬೇಕೆಂಬ ಹಂಬಲ ತುಸು ಹೆಚ್ಚೇ ಇರಲಿ. ಆದರೆ ಅವರೊಟ್ಟಿಗಿನ ಬೇರೆ ಸಂಬಂಧಗಳನ್ನು ಗೌರವಿಸಿ. ಪ್ರೀತಿ ನಂಬಿಕೆಯೇ ಸತ್ತು ಹೋದ ಮೇಲೆ ಸಂಬಂಧ ಉಳಿಯುವುದಾದರೂ ಹೇಗೆ?

ಮತ್ತೊಂದು ಸಂಬಂಧದೊಟ್ಟಿಗೆ ಭಾವನಾತ್ಮಕವಾಗಿ ಸ್ಪಂದಿಸಿದಾಗ ಅದನ್ನು ಕೆಟ್ಟದೃಷ್ಟಿಯಿಂದ ನೋಡುವ ಬದಲು ತಂಗಿಯಿಲ್ಲದವರು ಆ ಸಂಬಂಧದಲ್ಲಿ ಅಕ್ಕರೆಯ ತಂಗಿಯನ್ನೋ, ತಾಯಿಯನ್ನೋ ನೋಡಬಹುದು. ಮೋಹಕವಾದ ಭಾವ ನೋಡಿದವರೊಟ್ಟಿಗೆಲ್ಲಾ, ಹರಟಿದವರೊಟ್ಟಿಗೆಲ್ಲಾ ಹುಟ್ಟುವುದಾದರೆ ಆ ಹುಟ್ಟು ವ್ಯರ್ಥ! ಹಾಗೆ ಹುಟ್ಟುತ್ತದೆ ಎಂದರೆ ಅವರ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದುಕೊಳ್ಳಿ.

ನಿಮ್ಮವರು ಮತ್ತೊಬ್ಬರೊಟ್ಟಿಗೆ ಆಪ್ತವಾಗಿ ಅಂಟಿಕೊಂಡಿದ್ದಾರೆಂದರೆ ಆ ಸಂಬಂಧವನ್ನು ಪ್ರಥಮವಾಗಿ ಅರ್ಥ ಮಾಡಿಕೊಳ್ಳಲೆತ್ನಿಸಿ. ಅವರು ತಪ್ಪು ಹಾದಿ ಹಿಡಿದಿದ್ದಾರೆಂದರೆ ಸೌಮ್ಯವಾಗಿ ಅವರೊಟ್ಟಿಗಿನ ಅನುರಾಗದ ಮಧುರ ಅನುಭಾವಗಳನ್ನು, ಬಚ್ಚಿಟ್ಟ ಒಲವನ್ನು ಮನಸಾರೆ ಬಿಚ್ಚಿಡಿ. ಪ್ರೀತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು!

ತಪ್ಪು ನಿಮ್ಮಿಂದಲೇ ಘಟಿಸಿದ್ದರೆ ಸಂಯಮದಿಂದ ಮುಕ್ತವಾಗಿ ಮಾತಾಡಿ. ಸೋತು ಒಲವು ಯಾಚಿಸುವಲ್ಲಿ ಬಿಗುಮಾನವೇಕೆ? ನಿಮ್ಮ ಅಹಂನ ಪರಿಧಿಯೊಳಗೆ ಸುತ್ತುವುದನ್ನು ಬಿಟ್ಟು ಹೊರಬನ್ನಿ.

ನಿಮ್ಮ ದಾಂಪತ್ಯ ದಾರಿ ತಪ್ಪಲು, ಒಡಕು ಬಿರುಕು ಮೂಡಲು ನೀವಿಬ್ಬರಷ್ಟೇ ಕಾರಣ. ಮತ್ತೊಬ್ಬರನ್ನು ದೂರುವುದು ತರವಲ್ಲ. ಜೀವನದಲ್ಲಿ ಕಷ್ಟ– ಸುಖಗಳು, ನೋವು– ನಲಿವುಗಳು ಸಾಮಾನ್ಯ. ಅದರಿಂದ ಸರಿಯಾದ ಪಾಠ ಕಲಿತು ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬೇಕು.

ಸಂಸಾರದಲ್ಲಿ ತಾಳ ತಪ್ಪಿ ಅಪಸ್ವರ ಹುಟ್ಟಿದಾಗ ನಿಮ್ಮ ತಪ್ಪುಗಳನ್ನು, ಮನಸ್ಸಿನ ಗೊಂದಲವನ್ನು ನಿವಾರಿಸಿಕೊಂಡು ನೀವೇ ಸೋತು ಸಹನೆಯಿಂದ ಕೂತು ಒಮ್ಮೆ ಮಾತಾಡಿ ನೋಡಿ. ಹುಟ್ಟಿದ ಸಂಶಯಕ್ಕೆ, ಮನದಾಳದ ನೋವಿನ ಪ್ರಶ್ನೆಗಳಿಗೆ ಹಟ, ಕೋಪದಿಂದ ಉತ್ತರಿಸದೆ ಉಪೇಕ್ಷೆ ಮಾಡಿದರೆ ನಿಮ್ಮ ಸಂಗಾತಿಯ ಮನಸಿನಲ್ಲಿ ಮತ್ತಷ್ಟು ಅನುಮಾನ, ಅಪನಂಬಿಕೆಯೆಂಬ ಬೀಜ ಅಂಕುರಿಸಿ ಹೆಮ್ಮರವಾಗಿ ಬೆಳೆದು ನಿಲ್ಲುವಂತಾಗುತ್ತದೆ. ನಿಮ್ಮ ಮನಸ್ಸು ಅವರೊಟ್ಟಿಗೆ ತೆರದ ಪುಸ್ತಕವಾಗಿದ್ದರೆ ಇಂತಹ ಅಸಂಬದ್ಧ ಪ್ರಶ್ನೆಗಳು ಹುಟ್ಟುವುದಿಲ್ಲ.

ಸಂಶಯದ ಹುಳವನ್ನು ಹುಟ್ಟುಹಾಕಿ ಅನುಮಾನದ ಹುತ್ತ ಬೆಳೆಯಲು ಬಿಡಬೇಡಿ. ಮದುವೆಯೊಂದು ಅನುರಾಗದ ಮಧುರ ಬಾಂಧವ್ಯ. ಒಬ್ಬರು ಮತ್ತೊಬ್ಬರಿಗಾಗಿ ಬದುಕುವ ಸುಮಧುರ ಸಂಧಾನ. ಸಾಂಗತ್ಯ ಉಸಿರು ಹೋಗುವವರೆಗೂ ಬಿಡದ ಭಾವನಾತ್ಮಕ ಸಾನಿಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.