ಗುವಾಹಟಿ: ವಿಷ್ಣುವಿನ ಸುದರ್ಶನ ಚಕ್ರಕ್ಕೆ ಛಿದ್ರಗೊಂಡ ಸತಿಯ ದೇಹದ 51 ಭಾಗಗಳಲ್ಲಿ ಅಸ್ಸಾಂನ ನೀಲಚಲ್ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಋತುಚಕ್ರದ ವಾರ್ಷಿಕ ಆಚರಣೆಯ ಅಂಬುಚಿಮೇಳ ನಡೆಯುತ್ತಿದ್ದು, ಇಲ್ಲಿ ದೇವಿಯ ಯೋನಿಗೆ ಪೂಜೆ ಸಲ್ಲಿಕೆಯಾಗುತ್ತಿದೆ. ಸತಿಯ ದೇಹದ ಉಳಿದ ಭಾಗಗಳಿಗೆ ಎಲ್ಲೆಲ್ಲಿ ಪೂಜೆ ಸಲ್ಲಿಕೆಯಾಗುತ್ತಿದೆ...?
ತಂದೆಯ ಅವಮಾನಕ್ಕೆ ನೊಂದ ಸತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತಿಯ ಮರಣದ ನಂತರ ಶಿವನ ಕೋಪಕ್ಕೆ ಇಡೀ ಜಗತ್ತೇ ಭಸ್ಮವಾಗುವ ಆತಂಕ ಎದುರಾಗುತ್ತದೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳಾಗಿ ಕತ್ತರಿಸುತ್ತಾನೆ. ಈ ಭಾಗಗಳು ಭೂಮಿಯ ಮೇಲೆ ಬಿದ್ದಿರುವ ಸ್ಥಳಗಳೇ ಇಂದು ಶಕ್ತಿಪೀಠಗಳಾಗಿವೆ ಎಂದು ಪುರಾಣ ಹೇಳುತ್ತದೆ. ಅದರಲ್ಲಿ ಅಸ್ಸಾಂನ ನೀಲಚಲ್ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯವೂ ಒಂದು.
ಸತಿಯ 51 ತುಂಡಾದ ದೇಹದ ಭಾಗಗಳಲ್ಲಿ ಇಲ್ಲಿ ಯೋನಿಯನ್ನು ಪೂಜಿಸಲಾಗುತ್ತದೆ. ದೇವಿಯ ಋತುಚಕ್ರದ ವಾರ್ಷಿಕ ಆಚರಣೆಯೇ ಅಂಬುಚಿಮೇಳವಾಗಿದೆ. ಸೂರ್ಯ ಮಿಥುನ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ನಡೆಯುವ ಈ ಉತ್ಸವ ಪ್ರತಿ ವರ್ಷ ಜೂನ್ ಅಂತ್ಯದಲ್ಲಿ ನಡೆಯುತ್ತದೆ. ಮುಂಗಾರು ಮಾರುತುಗಳು ಸುರಿದ ಬ್ರಹ್ಮಪುತ್ರ ನದಿ ಉಕ್ಕುವ ಸಮಯವಿದು. ಋತುಚಕ್ರ ಆರಂಭವಾಗುವ ಸಮಯದಲ್ಲಿ ಬ್ರಹ್ಮಪುತ್ರ ನದಿಯ ನೀರು ಕೆಂಪುಬಣ್ಣಕ್ಕೆ ತಿರುಗುತ್ತದೆ ಎಂಬ ನಂಬಿಕೆ ಇದೆ. ಈ ಅವಧಿಯಲ್ಲಿ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಸೋಮವಾರದಿಂದ ದೇವಾಲಯ ಬಾಗಿಲು ಸಾರ್ವಜನಿಕರಿಗೆ ತೆರೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೀಲಚಲ್ ಬೆಟ್ಟದತ್ತ ದೌಡಾಯಿಸುತ್ತಿದ್ದಾರೆ.
ಕಾಮಾಕ್ಯ ದೇವಾಲಯವನ್ನು ಕಂಪು ಬಣ್ಣದ ಹೂವು ಹಾಗೂ ವಸ್ತ್ರಗಳಿಂದ ಅಲಂಕರಿಸಲಾಗಿದೆ. ಫಲವಂತಿಕೆಯ ಹಬ್ಬವೆಂದೂ ಕರೆಯಲಾಗುವ ಅಂಬುಚಿ ಮೇಳದಲ್ಲಿ ಪಾಲ್ಗೊಂಡು ಭಕ್ತರು ಪುನೀತರಾಗುತ್ತಿದ್ದಾರೆ.
ಭರತ ಖಂಡದಲ್ಲಿವೆ 51 ಶಕ್ತಿಪೀಠಗಳು
ಸತಿಯ ತುಂಡಾದ ದೇಹ ಭೂಮಿಯ ಮೇಲೆ ಬಿದ್ದವುಗಳನ್ನು ರಕ್ಷಿಸಲು ಶಿವ ತನ್ನ ಅಂಶದಲ್ಲೇ ಭೈರವಂದಿರನ್ನು ಸೃಷ್ಟಿಸಿ ಆಯಾ ಸ್ಥಳಗಳಲ್ಲಿ ನೇಮಿಸಿದನು. ಈ ಶ್ರದ್ಧಾಕೇಂದ್ರಗಳು ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಟಿಬೆಟ್ ಮತ್ತು ಶ್ರೀಲಂಕಾದಲ್ಲೂ ಇವೆ. ಅವುಗಳಲ್ಲಿ ಹತ್ತು ಶಕ್ತಿಪೀಠಗಳ ಮಾಹಿತಿ ಇಲ್ಲಿದೆ.
ಮಹಾಮಾಯಾ ಶಕ್ತಿಪೀಠ
ಇದು ಜಮ್ಮು ಮತ್ತು ಕಾಶ್ಮೀರದ ಅಮರನಾಥದಲ್ಲಿದೆ. ಇಲ್ಲಿ ದೇವಿಯ ಗಂಟಲ ಭಾಗವಿದೆ ಎಂದು ನಂಬಲಾಗಿದ್ದು, ಇದನ್ನು ಮಹಾಮಾಯಾ ಎಂದು ಕರೆಯಲಾಗುತ್ತದೆ. ದೇವಿಯ ಗಂಟಲ ಭಾಗ ಕಾಯಲು ಶಿವನು ತ್ರಿಸಂಧ್ಯೇಶ್ವರನನ್ನು ನೇಮಿಸಿದ್ದಾನೆ. ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಕರ್ಮದೋಷಗಳು ಪರಿಹಾರ ಮತ್ತು ಮನಸ್ಸು ಶುದ್ಧಿಗೊಳ್ಳುವುದು ಎಂಬ ನಂಬಿಕೆ ಇದೆ.
ಶ್ರೀನಗರ ವಿಮಾನ ನಿಲ್ದಾಣದಿಂದ 72 ಕಿ.ಮೀ. ಜಮ್ಮು ತಾವಿ ರೈಲ್ವೇ ನಿಲ್ದಾಣದಿಂದ 176 ಕಿ.ಮೀ. ಹಾಗೂ ಬೈತಾಲ್ ಬಸ್ ನಿಲ್ದಾಣದಿಂದ ಈ ಕ್ಷೇತ್ರ ಸಮೀಪದಲ್ಲಿದೆ.
ಗಂಡಕಿದೇವಿ ಶಕ್ತಿಪೀಠ
ನೇಪಾಳದಲ್ಲಿ ಗಂಡಕಿ ಎಂಬ ನದಿಯ ತಟದಲ್ಲಿರುವ ಈ ತಾಣದಲ್ಲಿ ದೇವಿಯ ಬಲ ಕೆನ್ನೆಯನ್ನು ಪೂಜಿಸಲಾಗುತ್ತದೆ. ಹಿಮಾಲಯ ಪ್ರದೇಶಗಳಲ್ಲಿರುವ ಪಗೋಡಾ ಮಾದರಿಯಲ್ಲಿ ಇಲ್ಲಿನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ಕ್ಷೇತ್ರವನ್ನು ಚಕ್ರಧಾರಿಯಾದ ಶಿವನು ಚಕ್ರಪಾಣಿಯಾಗಿ ಕಾಯುತ್ತಿದ್ದಾನೆ. ಜೀವನದಲ್ಲಿ ಎದುರಾಗುವ ತೊಡಕುಗಳನ್ನು ಗಂಡಕಿ ನಿವಾರಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಕಠ್ಮಂಡು ವಿಮಾನ ನಿಲ್ದಾಣದಿಂದ ಈ ಪ್ರದೇಶ ಸಮೀಪ.
ಜ್ವಾಲಾ ಶಕ್ತಿಪೀಠ
ಹಿಮಾಚಲ ಪ್ರದೇಶದ ಕಂಗ್ರಾದಲ್ಲಿರುವ ಈ ದೇವಾಲಯದಲ್ಲಿ ನೈಸರ್ಗಿಕ ಅನಿಲದಿಂದ ದೀಪ ಬೆಳಗಲಾಗುತ್ತದೆ. ಕಾಪರ್ ಕೊಳವೆಯಿಂದ ನೀಲಿ ಜ್ವಾಲೆ ಹೊರಹೊಮ್ಮುವುದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಈ ಕ್ಷೇತ್ರವನ್ನು ಉನ್ಮತ್ತ ಭೈರವ ಕಾಯುತ್ತಿದ್ದಾನೆ. ಪ್ರೇಮದ ಯಶಸ್ಸಿಗೆ, ಗ್ರಹಣ ದೋಷ ಪರಿಹಾರಕ್ಕೆ ಹಾಗೂ ಸಂತಾನ ಪ್ರಾಪ್ತಿಗಾಗಿ ಇಲ್ಲಿ ಬಂದು ಭಕ್ತರು ಹರಕೆ ಹೊರುತ್ತಾರೆ. ಧರ್ಮಶಾಲಾ ವಿಮಾನ ನಿಲ್ದಾಣದಿಂದ ದೇವಾಲಯ 40 ಕಿ.ಮೀ. ಹಾಗೂ ಉನಾ ರೈಲ್ವೆ ನಿಲ್ದಾಣದಿಂದ 60 ಕಿ.ಮೀ. ದೂರದಲ್ಲಿದೆ.
ದಾಕ್ಷಾಯಿಣಿದೇವಿ ಶಕ್ತಿಪೀಠ
ಟಿಬೆಟ್‌ನ ಮಾನ್ಸಾದಲ್ಲಿರುವ ಈ ಕ್ಷೇತ್ರದಲ್ಲಿ ದೇವಿಯ ಬಲಗೈ ಪೂಜಿಸಲಾಗುತ್ತದೆ. ಮಾನಸ ಸರೋವರದ ದಡದಲ್ಲಿರುವ ದಾಕ್ಷಾಯಿಣಿದೇವಿಯ ಶಕ್ತಿಪೀಠವು ಶಿವಪಾರ್ವತಿಯರ ವಾಸಸ್ಥಾನ ಕೈಲಾಸ ಪರ್ವತಕ್ಕೆ ಹೆಬ್ಬಾಗಿಲು ಎಂದೇ ಕರೆಯಲಾಗುತ್ತದೆ. ಇದನ್ನು ಅಮರ್ ಕಾಯುತ್ತಿದ್ದಾನೆ ಎಂದು ಪುರಾಣ ಹೇಳುತ್ತದೆ. ಜಮ್ಮು ವಿಮಾನ ನಿಲ್ದಾಣ ಅತ್ಯಂತ ಸಮೀಪ. ರಸ್ತೆ ಮಾರ್ಗದಲ್ಲಿ ನಾಥು ಲಾ ಪಾಸ್, ಲಿಪುಲೇಖ್ ಪಾಸ್ ಸಮೀಪದ್ದು.
ಮಿಥಿಲಾ ಶಕ್ತಿಪೀಠ
ಬಿಹಾರದ ಮಿಥಿಲಾ ನಗರದಲ್ಲಿರುವ ಶಕ್ತಿಪೀಠದಲ್ಲಿ ದೇವಿಯ ಎಡಭುಜ ಪೂಜಿಸಲಾಗುತ್ತಿದೆ. ಈ ಶಕ್ತಿಪೀಠದಲ್ಲಿ ಉಮಾದೇವಿಯಾಗಿಯೂ ದೇವಿ ಪೂಜೆಗೊಳಪಡುತ್ತಿದ್ದಾಳೆ. ಇದರೊಂದಿಗೆ ಮದುರ್ಬನಿ ಜಿಲ್ಲೆಯ ವನದುರ್ಗೊ, ಸಮಷ್ಟಿಪುರದ ಜಯಮಂಗಲ ದೇವಿ ಮತ್ತು ಸಹರ್ಸದಲ್ಲಿ ಉಗ್ರತರ ಪೂಜೆಗೊಳ್ಳುತ್ತದೆ. ಇಲ್ಲಿ ದೇವಿಯ ಭಾಗವನ್ನು ಮಹೋದರ ಮತ್ತು ಮಹೇಶ್ವರರು ಕಾಯುತ್ತಿದ್ದಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪಟ್ನಾದಲ್ಲಿರುವ ವಿಮಾನ ನಿಲ್ದಾಣದಿಂದ ಮಿಥಿಲಾಗೆ 4 ಗಂಟೆಯ ಪ್ರಯಾಣ, ಜನಕ್‌ಪುರ ಹತ್ತಿರದ ರೈಲ್ವೆ ನಿಲ್ದಾಣ.
ಗುಹ್ಯೇಶ್ವರಿದೇವಿ ಶಕ್ತಿಪೀಠ
ನೇಪಾಳದ ಕಠ್ಮಂಡುನಲ್ಲಿರುವ ಗುಹ್ಯೇಶ್ವರಿ ದೇವಿಯ ಶಕ್ತಿಪೀಠದಲ್ಲಿ ದೇವಿಯ ಎರಡು ಕಾಲುಗಳ ಮಂಡಿಗಳಿವೆ. ಈ ಸನ್ನಿಧಿಯಲ್ಲಿ ಕಾಳಿಯನ್ನು ಪೂಜಿಸಲಾಗುತ್ತದೆ. ದೇವಾಲಯದಲ್ಲಿ ತಲೆಬುರುಡೆಯ ವಿಗ್ರಹವನ್ನು ಬಾಗಿಲಲ್ಲಿ ಇಡಲಾಗಿದೆ. ವಜ್ರಯೋಗಿನಿ ರೂಪದಲ್ಲಿರುವ ಕಾಳಿಗೆ ಇಲ್ಲಿ ಪೂಜಾಕಾರ್ಯ ನೆರವೇರಿಸಲಾಗುತ್ತದೆ. ಇದನ್ನು ಕಪಾಲಿ ಕಾಯುತ್ತಿದ್ದಾನೆ ಎಂದೆನ್ನಲಾಗುತ್ತದೆ. ದೆಹಲಿಯಿಂದ 20 ಗಂಟೆಯ ಪ್ರಯಾಣ ಈ ದೇವಾಲಯಕ್ಕೆ.
ದೇವಿ ವಾರಾಹಿ ಶಕ್ತಿಪೀಠ
ವಾರಾಣಸಿಯ ಪಂಚಸಾಗರ್‌ನಲ್ಲಿರುವ ಮನ್‌ಮಂದಿರ್ ಘಾಟ್‌ನಲ್ಲಿ ಈ ಶಕ್ತಿಪೀಠವಿದೆ. ಇಲ್ಲಿ ದೇವಿಯನ್ನು ನಾರಾಯಣಿ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಆಕೆಯ ಜೊತೆಗೆ ವಿಷ್ಣುವಿಗೂ ಪೂಜೆ ಸಲ್ಲುತ್ತದೆ. ಇಲ್ಲಿ ದೇವಿಯ ಕೆಳ ದವಡೆಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಕ್ಷೇತ್ರವನ್ನು ಸಂಹಾರ ಅಥವಾ ಮಹಾ ರುದ್ರ ಕಾಯುತ್ತಿದ್ದಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಲಲಿತಾ ದೇವಿಶಕ್ತಿಪೀಠ
ಉತ್ತರ ಪ್ರದೇಶದ ಸೀತಾಪುರದಲ್ಲಿರುವ ಲಲಿತಾದೇವಿ ಶಕ್ತಿಪೀಠದಲ್ಲಿ ದೇವಿಯ ಬೆರಳುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಧುಗಳು ಜ್ನಾನ, ಜ್ನಾನೋದಯಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಮೂವರೂ ಈ ಸ್ಥಳದಲ್ಲಿ ಪ್ರತ್ಯಕ್ಷರಾಗಿ ಈ ಪ್ರದೇಶದ ಶಕ್ತಿಯನ್ನು ಹೆಚ್ಚಿಸಿದರು ಎಂಬ ನಂಬಿಕೆ ಇದೆ. ಈ ಕ್ಷೇತ್ರವನ್ನು ಭವ ಕಾಯುತ್ತಿದ್ದಾನೆ. ಸೀತಾಪುರ ಲಖನೌ ರೈಲು ನಿಲ್ದಾಣದಿಂದ 107 ಕಿ.ಮೀ. ದೂರದಲ್ಲಿದೆ.
ಸಾವಿತ್ರಿದೇವಿ ಶಕ್ತಿಪೀಠ
ಹರಿಯಾಣದ ಕುರುಕ್ಷೇತ್ರ ಬಳಿಯ ಥಾನೇಶ್ವರದಲ್ಲಿರುವ ಸಾವಿತ್ರಿದೇವಿ ಶಕ್ತಿಪೀಠದಲ್ಲಿ ದೇವಿಯ ಹಿಮ್ಮಡಿಗೆ ಪೂಜೆ ಸಲ್ಲುತ್ತದೆ. ಇದನ್ನು ಕಾಳಿಕಾ ಶಕ್ತಿಪೀಠ ಎಂದೂ ಕರೆಯಲಾಗುತ್ತದೆ. ಇಲ್ಲಿನ ದೇವಿ ವಿಗ್ರಹದಲ್ಲಿ ನಾಲಗೆ ಕಾಳಿಯಂತೆಯೇ ಹೊರಚಾಚಿಕೊಂಡಿದೆ. ಕೃಷ್ಣ ಮತ್ತು ಬಲರಾಮರು ಮೊದಲು ಕ್ಷೌರ ಮಾಡಿಸಿಕೊಂಡಿದ್ದು ಇದೇ ಸ್ಥಳದಲ್ಲಿ ಎಂದು ಪುರಾಣಗಳು ಹೇಳುತ್ತವೆ. ಈ ಕ್ಷೇತ್ರವನ್ನು ಸ್ಥನು ಕಾಯುತ್ತಿದ್ದಾನೆ ಎಂಬ ನಂಬಿಕೆ ಇದೆ. ಥಾನೇಶ್ವರವು ಚಂಡೀಗಡದಿಂದ 98 ಕಿ.ಮೀ ದೂರದಲ್ಲಿದೆ.
ವಿಶಾಲಾಕ್ಷಿ ಶಕ್ತಿಪೀಠ
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ವಿಶಾಲಾಕ್ಷಿ ಶಕ್ತಿಪೀಠದಲ್ಲಿ ದೇವಿಯ ಕಿವಿಯೋಲೆಗೆ ಪೂಜೆ ಸಲ್ಲುತ್ತದೆ. ಅಗಲ ಕಣ್ಣಿನ ವಿಶಾಲಾಕ್ಷಿ ದೇವಿಯನ್ನು ಮಣಿಕರ್ಣಿಕಾ ಎಂದೂ ಕರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತಮಿಳುನಾಡಿನ ಶಾಕ್ತ ವಂಶಸ್ಥರು ಅಭಿವೃದ್ಧಿ ಪಡಿಸಿದರು. ಈ ಕ್ಷೇತ್ರವನ್ನು ಕಾಲಭೈರವ ಕಾಯುತ್ತಿದ್ದಾನೆ ಎಂಬ ನಂಬಿಕೆ ಇದೆ. ವಾರಣಾಸಿಯಲ್ಲಿ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣವಿದೆ.
ಮುಂದುವರಿಯಲಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.