ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಯುದ್ಧದ ಮಧ್ಯೆ ಉದ್ಭವಲಿಂಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 4 ಏಪ್ರಿಲ್ 2022, 19:30 IST
Last Updated 4 ಏಪ್ರಿಲ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಬ್ರಹ್ಮನಾದ ನನಗೆ ವಿಷ್ಣುವಿನ ಮಾತನ್ನು ಕೇಳಿ ಕೋಪ ಬಂದಿತು. ಶಿವಮಾಯೆಯಿಂದ ಮೋಹಿತನಾಗಿದ್ದ ನಾನು, ವಿಷ್ಣುವನ್ನು ‘ಸುಮ್ಮನೆ ಏತಕ್ಕಾಗಿ ಅನರ್ಥದ ಮಾತುಗಳನ್ನು ಹರಟುತ್ತೀಯೆ? ನೀನೇನು ಈಶ್ವರನೇ? ಪರಬ್ರಹ್ಮನೇ? ನಿನ್ನನ್ನೂ ಸೃಷ್ಟಿಸಿದವನು ಮತ್ತೊಬ್ಬನಿರಬೇಕಲ್ಲವೇ?’ ಎಂದು ಗದರಿಸಿ ಕೇಳಿದ್ದಲ್ಲದೆ, ಶ್ರೀಹರಿಯೊಡನೆ, ಬಹು ಭಯಂಕರವಾದ ಯುದ್ಧವನ್ನು ಮಾಡಿದೆ.

ಪ್ರಳಯಕಾಲದಲ್ಲಿ ತಾನೇ ತಾನಾಗಿ ವ್ಯಾಪಿಸಿದ್ದ ಆ ಮಹಾಸಾಗರದ ನಡುವೆ, ರಜೋಗಣಕ್ಕೆ ವಶರಾಗಿ, ಬಹುದ್ವೇಷದಿಂದ ಹೊಡೆದಾಡುತ್ತಿದ್ದ ನಮ್ಮೀರ್ವರಿಗೂ ಭಾರಿ ಯುದ್ಧವೇ ನಡೆಯಿತು. ಈ ಜಗಳವನ್ನು ಪರಿಹರಿ ಸಲೂ, ನಮ್ಮನ್ನು ಈ ಮಾಯೆಯಿಂದ ಎಚ್ಚರಿಸಲೂ, ನಮ್ಮೆದುರಿಗೆ ಲಿಂಗ ವೊಂದು ಆವಿರ್ಭವಿಸಿತು. ಆ ಲಿಂಗವು ಅಲೆಯಲೆಯಾಗಿ ಹೊರಡುತ್ತಿರು ವಾಗ ಸಹಸ್ರಾರು ಜ್ವಾಲೆಗಳನ್ನು ಚೆಲ್ಲುತ್ತಿತ್ತು. ಪ್ರಳಯಕಾಲಾಗ್ನಿಗಳು ನೂರಾರು ಸೇರಿದಂತೆ ಭಯಂಕರವಾಗಿ ಪ್ರಜ್ವಲಿಸುತ್ತಿತ್ತು. ಆದಿ-ಮಧ್ಯಾಂತರ ಗಳಿಲ್ಲದೆ, ಯಾವುದೊಂದರೊಡನೆಯೂ, ಹೋಲಿಸಲು ಅಸಾಧ್ಯವಾದುದಾಗಿತ್ತು.

ಲಿಂಗದ ಸೀಮಾತೀತವಾದ ಪ್ರಭೆಯಿಂದ ಮೋಹಿತನಾದ ವಿಷ್ಣುವು ನನಗೆ ಹೀಗೆ ಹೇಳಿದ. ‘ಇನ್ನೇತಕ್ಕೆ ನನ್ನೊಡನೆ ಸೆಣಸುವೆ? ಇಲ್ಲಿ ನೋಡು, ಮೂರನೆಯವನೊಬ್ಬ ಬಂದಿದ್ದಾನೆ. ನಮ್ಮಿಬ್ಬರಿಗೂ ಈ ಯುದ್ಧ ಸಾಕು. ನೀಳವಾದ ಜ್ವಾಲೆಗಳನ್ನು ಕಕ್ಕುತ್ತಿರುವ ಈ ಲಿಂಗವು ಇಲ್ಲಿ ಹೇಗೆ ಸಂಭವಿಸಿತು – ಎನ್ನುವುದನ್ನು ಪರೀಕ್ಷಿಸೋಣ. ಅಸದೃಶವಾದ ಈ ಅನಲಸ್ತಂಭದ ಕೆಳಗೆ ಪರೀಕ್ಷಿಸಲು ವಾಯುವೇಗದಿಂದ ಹೋಗುವೆ. ನೀನೂ ಹಾಗೆಯೇ ಪರೀಕ್ಷಿಸಲು ಮೇಲುಗಡೆ ಬೇಗನೆ ಹೋಗು’ ಎಂದ.

ADVERTISEMENT

ಆಗ ಹರಿಯು ಹಂದಿಯ ರೂಪವನ್ನು ತಾಳಿದ. ನಾನೂ ಹಂಸದ ಸ್ವರೂಪವನ್ನು ಧರಿಸಿದೆ. ಒಳ್ಳೆಯ ಶುಭ್ರವಾದ ಬಣ್ಣವನ್ನು ತಳೆದು, ಬೆಂಕಿ ಯಂತೆ ಬೆಳ ಗುತ್ತಾ, ದೊಡ್ಡ ರೆಕ್ಕೆಗಳೊಂದಿಗೆ ಹಾರುತ್ತಾ, ಮನೋವೇಗ ಕ್ಕಿಂತ ವೇಗವಾಗಿ ಮೇಲಕ್ಕೆ ಬಹುದೂರ ಹೋದೆ. ವರಾಹರೂಪಿ ಶ್ರೀಹರಿಯೂ ಬೆಳ್ಳಗೆ ಆಗಿ ಹೋದ. ಹರಿಯು ತಳೆದ ವರಾಹಕೃತಿಯ ಸ್ವರೂಪ ಎಷ್ಟು ದೊಡ್ಡದಿತ್ತು ಎಂದರೆ, ಅದರ ದೇಹದ ಅಗಲ ಹತ್ತು ಯೋಜನಗಳಷ್ಟು, ಉದ್ದ ನೂರು ಯೋಜನಗಳಷ್ಟು ಇತ್ತು. ಒಟ್ಟಾರೆ ದೇಹವು ಮೇರುಪರ್ವತವನ್ನು ಹೋಲುತ್ತಿತ್ತು. ಕೋರೆದಾಡೆಗಳು ಮೊನ ಚಾಗಿಯೂ ಭಯಂಕರವಾಗಿಯೂ ಇದ್ದುವು. ಮುಸುಡಿ ಉದ್ದವಾಗಿತ್ತು. ‘ಘುರು ಘುರು’ ಎಂದು ಬಹು ಗಟ್ಟಿಯಾಗಿ ಶಬ್ದ ಮಾಡುತ್ತಿತ್ತು. ಕಾಲುಗಳು ಗಿಡ್ಡಾಗಿದ್ದುವು, ಅವಯವಗಳೆಲ್ಲವೂ ವಿಚಿತ್ರವಾಗಿದ್ದವು. ವರಾಹವು ಮಹಾಬಲಶಾಲಿಯಾಗಿತ್ತು. ಅದರ ಕಾಂತಿಯು ಪ್ರಳಯ ಕಾಲದ ಸೂರ್ಯನನ್ನು ಹೋಲುತ್ತಿತ್ತು. ಇಂತಹ ವರಾಹಾಕೃತಿಯನ್ನು ತಳೆದು ಬೇಗನೇ, ಆ ಲಿಂಗದ ಬುಡವನ್ನು ಕಂಡುಹಿಡಿಯಲು ಹರಿಯು ಹೊರಟ.

ಈ ರೀತಿಯಾಗಿ ವಿಷ್ಣುವು ಒಂದು ಸಾವಿರ ವರ್ಷಗಳ ಕಾಲ ಸುತ್ತಾ ಡುತ್ತಾ ಲಿಂಗದ ಕೆಳಕ್ಕೆ ಹೋದ. ಅಂದಿನಿಂದ ಜಗತ್ತಿನಲ್ಲಿ ಆತನಿಗೆ ಶ್ವೇತ
ವರಾಹನೆಂಬ ಹೆಸರುಂಟಾಯಿತು. ‘ಶ್ವೇತವರಾಹಕಲ್ಪ’ವೆಂಬ ಕಾಲಮಾ ನವೂ ಉಂಟಾ ಯಿತು. ವರಾಹಮೂರ್ತಿಧಾರಿಯಾದ ವಿಷ್ಣುವಿಗೆ ಲಿಂಗದ ಬುಡವನ್ನು ಕಂಡುಹಿಡಿಯಲಾಗಲಿಲ್ಲ.

ಇತ್ತ ನಾನು ಸಹ ಬಹಳ ಹುಮ್ಮಸ್ಸಿನಿಂದ ಸಾವಿರ ವರ್ಷಗಳ ಕಾಲದವ ರೆಗೆ ಮೇಲೇರುತ್ತಿದ್ದೆ. ಆದರೆ ಲಿಂಗದ ತುದಿ ಕಾಣದಾದೆ. ಹೇಗಾದರೂ ಮಾಡಿ, ಸರ್ವಪ್ರಯತ್ನದಿಂದಲಾದರೂ, ಬೇಗನೆ ಲಿಂಗದ ತುದಿಯನ್ನು ಕಂಡುಹಿಡಿಯಬೇಕೆಂಬ ಆಸೆಯಿಂದ ಪ್ರಯತ್ನಿಸಿ ವಿಫಲನಾಗಿ ಕೆಳಗಿಳಿದು ಬಂದೆ. ಹಾಗೆಯೇ, ಪುಂಡರೀಕಾಕ್ಷನೂ ಕೆಳಗಡೆ ಕೊನೆಯನ್ನು ಕಂಡು ಹಿಡಿಯ ಲಾರದೆ ಬಳಲಿ ಮೇಲಕ್ಕೇರಿ ಬಂದ. ಆಗ ನಾನೂ ಮತ್ತು ಶ್ರೀಹರಿಯೂ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಲಿಂಗಕ್ಕೆ ನಮಸ್ಕಾರಮಾಡಿ, ‘ನಿನ್ನ ಸ್ವರೂಪವನ್ನು ನಮಗೆ ತೋರಿಸು ಎಂದು’ ಪ್ರಾರ್ಥಿಸಿದೆವು.

ಹೀಗೆ ಅಹಂಕಾರದಿಂದ ಮತ್ತರಾಗಿದ್ದ ನಾವಿಬ್ಬರೂ ನಮಸ್ಕಾರಗಳನ್ನು ಮಾಡುತ್ತಿರಲು ನೂರು ವರ್ಷಗಳೇ ಕಳೆದುಹೋದವು – ಅಂತ ಬ್ರಹ್ಮ ತನ್ನ ಹುಟ್ಟು ಮತ್ತು ವಿಷ್ಣುವಿನೊಂದಿಗೆ ಕಾದಾಡುವಾಗ, ಧುತ್ತೆಂದು ಬಂದ ಲಿಂಗದ ತಳ-ತಲೆ ಹುಡುಕಾಡಿ ಸೋತ ಕಥೆಯನ್ನು ನಾರದನಿಗೆ ಹೇಳುತ್ತಾನೆ. ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯ ಸಂಹಿತೆಯಾದ ರುದ್ರ ಸಂಹಿತೆಯಲ್ಲಿ ಮೊದಲನೆಯ ಖಂಡವಾದ ಸೃಷ್ಟಿಖಂಡದಲ್ಲಿ ಬರುವ ವಿಷ್ಣು-ಬ್ರಹ್ಮ ವಿವಾದ ವರ್ಣನ ಎಂಬ ಏಳನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.