ADVERTISEMENT

ತ್ಯಾಗ ಬಲಿದಾನದ ಹಬ್ಬ ಬಕ್ರೀದ್

ಮಹಮ್ಮದ್ ನೂಮಾನ್
Published 12 ಆಗಸ್ಟ್ 2019, 3:50 IST
Last Updated 12 ಆಗಸ್ಟ್ 2019, 3:50 IST
.
.   

ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದೆನಿಸಿರುವ ‘ಈದ್‌ ಉಲ್‌ ಅದ್‌ಹಾ’ ಮತ್ತೆ ಬಂದಿದೆ. ಆಗಸ್ಟ್‌ 12ರಂದು ದೇಶದಾದ್ಯಂತ ಮುಸ್ಲಿಮರು ಈ ಹಬ್ಬ ಆಚರಿಸಲಿದ್ದಾರೆ. ತ್ಯಾಗ-ಬಲಿದಾನದ ಈ ಹಬ್ಬ ಭಾರತದಲ್ಲಿ ‘ಬಕ್ರೀದ್‌’ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.

ಮುಸ್ಲಿಮರು ‘ರಂಜಾನ್’ ತಿಂಗಳ ಉಪವಾಸದ ಬಳಿಕ ‘ಈದ್‌ ಉಲ್‌ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಆಚರಿಸಲಾಗುತ್ತದೆ. ಇಸ್ಲಾಮಿನ ರೋಚಕ ಇತಿಹಾಸವನ್ನು ಸ್ಮರಿಸುವ ಹಬ್ಬ ಇದಾಗಿದೆ. ಹಜ್‌ ಯಾತ್ರೆಗೆ ಸೌದಿ ಆರೇಬಿಯಾದ ಮಕ್ಕಾಕ್ಕೆ ತೆರಳಿದವರು ನಡೆಸುವ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಸುಮಾರು ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ‘ಬಕ್ರೀದ್’ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ.
ಹಬ್ಬದ ದಿನ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್‌ ಹಾಗೂ ಖುತ್ಬಾ (ಪ್ರವಚನ) ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಂಡು, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡಿ ಸೌಹಾರ್ದತೆ ಸಂದೇಶವನ್ನು ಸಾರುತ್ತಾರೆ.

ADVERTISEMENT

ಪವಿತ್ರ ಹಜ್‌: ಮುಸ್ಲಿಮರ ಪವಿತ್ರ ಹಜ್‌ ಯಾತ್ರೆಯ ಸಂದರ್ಭದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಮುಸ್ಲಿಮರು ಈ ಹಬ್ಬ ಆಚರಿಸುವ ಸಂದರ್ಭದಲ್ಲಿ ಮಕ್ಕಾದಲ್ಲಿ ಹಜ್‌ ಯಾತ್ರಿಕರು ವಿವಿಧ ಧಾರ್ಮಿಕ ವಿಧಿ–ವಿಧಾನಗಳನ್ನು ಪೂರೈಸುತ್ತಾರೆ. ‌

ಜೀವನದಲ್ಲಿ ಒಂದು ಬಾರಿಯಾದರೂ ಹಜ್‌ ಯಾತ್ರೆಯನ್ನು ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ದೇಶ, ಭಾಷೆ, ವರ್ಣ ಹಾಗೂ ಬಡವ–ಶ್ರೀಮಂತ ಎಂಬ ಭೇದಭಾವವಿಲ್ಲದೆ ಏಕರೂಪದ ಉಡುಪು ತೊಟ್ಟು, ಒಂದೇ ಉದ್ದೇಶವನ್ನು ಮುಂದಿಟ್ಟುಕೊಂಡು ಲಕ್ಷಾಂತರ ಮಂದಿ ಮಕ್ಕಾದಲ್ಲಿ ಒಟ್ಟು ಸೇರುತ್ತಾರೆ.

ಹಬ್ಬದ ಮುನ್ನಾದಿನ ಅಥವಾ ‘ದುಲ್‌ ಹಜ್ಜ್’ ತಿಂಗಳ 9ರಂದು ಹಜ್‌ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಯಾತ್ರಿಕರಿಗೆ ನೈತಿಕ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸ ಆಚರಿಸುತ್ತಾರೆ.

ಜಾನುವಾರು ಬಲಿ ಏಕೆ?: ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಪ್ರಾಣಿಬಲಿ ನೀಡಲಾಗುತ್ತದೆ. ಅಲ್ಲಾಹನ ಆದೇಶದಂತೆ ಇಬ್ರಾಹಿಂ ಅವರು ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುತ್ತಾರೆ.

ದೇವರ ಇಚ್ಛೆಯಂತೆ ತಮ್ಮ ಮಗನನ್ನೇ ಬಲಿದಾನ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸುತ್ತಾರೆ. ಇಬ್ರಾಹಿಂ ಅವರ ತ್ಯಾಗದ ಸ್ಮರಣಾರ್ಥ ಹಬ್ಬದ ದಿನ ಅಥವಾ ನಂತರದ ಮೂರು ದಿನಗಳಲ್ಲಿ ಜಾನುವಾರು ಬಲಿಯನ್ನು ಅರ್ಪಿಸಲಾಗುತ್ತದೆ.

ರಕ್ತ ಮತ್ತು ಮಾಂಸವನ್ನು ದೇವನಿಗೆ ಅರ್ಪಿಸುವುದು ಜಾನುವಾರು ಬಲಿಯ ಉದ್ದೇಶವಲ್ಲ. ತ್ಯಾಗದ ಸಂಕೇತವಾಗಿ ಬಲಿ ಅರ್ಪಿಸಲಾಗುತ್ತದೆ. ‘ಜಾನುವಾರಿನ ಮಾಂಸ, ರಕ್ತ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮ ಧರ್ಮನಿಷ್ಠೆ ತಲುಪುತ್ತದೆ’ ಎಂದು ಕುರ್‌ಆನ್‌ನಲ್ಲಿ ಹೇಳಲಾಗಿದೆ.

ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿಯನ್ನು ನೀಡಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಅಂಶವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು. ಹಬ್ಬದೂಟದಿಂದ ಯಾರೂ ವಂಚಿತರಾಗಬಾರದು ಎಂಬ ಮೂಲ ಉದ್ದೇಶ ಇದರಲ್ಲಿ ಅಡಗಿದೆ. ಬಡವರಿಗೂ ಹಬ್ಬ ಆಚರಿಸಲು ಅವಕಾಶ ಸಿಗುತ್ತದೆ.

ಹಬ್ಬದ ಸಂದೇಶ: ಪ್ರವಾದಿಗಳು ಸಾರಿರುವ ಏಕದೇವತ್ವದ ಸಂದೇಶಕ್ಕೆ ಬದ್ಧತೆ ತೋರುವುದು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಹೋದರತೆ ಬೆಳೆಸಿಕೊಳ್ಳುವುದು, ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವುದು – ಇಂಥ ಸಂದೇಶಗಳನ್ನು ಈ ಹಬ್ಬ ಸಾರುತ್ತದೆ. ವಿಶ್ವದಾದ್ಯಂತವಿರುವ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಂಭ್ರಮದಿಂದ ಬಕ್ರೀದ್‌ ಆಚರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.