ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥ ವಿವರಣೆ ಮತ್ತು ವಚನ ಗಾಯನ ಸರಣಿ–10

ಡಾ.ಬಸವರಾಜ ಸಾದರ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣ್ಯವ ಮಾಡಬೇಕೆಂದು ಮರುಗಬೇಡ,
ಪಾಪವ ಮಾಡದಿದ್ದಡೆ ಪುಣ್ಯ ದಿಟ.
ಬೇರೆ ತೀರ್ಥ ಬೇಡ,
ಸತ್ಯ ನುಡಿವಲ್ಲಿ ಸಂದಿಲ್ಲದಿಹನು.
ಕಪಿಲಸಿದ್ಧಮಲ್ಲಿಕಾರ್ಜುನ ಹುಸಿಗೆ ಹರುಡಿಗನು.
– ಸಿದ್ಧರಾಮೇಶ್ವರ

ಪುರಾತನ ಕಾಲದಿಂದ ಮನುಷ್ಯನು ಪುಣ್ಯ ಸಂಪಾದನೆಗೆಂದು ಏನೆಲ್ಲ ಕೆಲಸ-ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾನೆ. ಇವನ್ನೆಲ್ಲ ತೂರಿ-ಕೇರಿ ಹಸನು ಮಾಡಿ ನೋಡಿದರೆ, ಸಾಚಾ ಕೆಲಸಗಳಿಗಿಂತ ಕೋಟಾ ಕಾರ್ಯಗಳೇ ಹೆಚ್ಚೆಂಬುದು ಗಮನಕ್ಕೆ ಬರುತ್ತದೆ. ಜೀವನವಿಡೀ ಕಳ್ಳದಂಧೆ ಮಾಡಿದವರು ದೊಡ್ಡ ದೇವರುಗಳಿಗೆ ಹೋಗಿ ಬಂಗಾರ, ಬೆಳ್ಳಿಯ ಕಿರೀಟ ಅರ್ಪಿಸಿದ್ದು ಮತ್ತು ಕೋಟಿಗಟ್ಟಲೇ ಹಣ ದಾನ ಮಾಡಿದ್ದು ಅಂಥ ಕೆಲವು ಉದಾಹರಣೆಗಳಾದರೆ, ಪುಣ್ಯಕ್ಷೇತ್ರಗಳ ತೀರ್ಥದಲ್ಲಿ ಮಿಂದು, ಪಾಪ ಕಳೆದುಕೊಂಡು ಪುಣ್ಯವಂತರಾದೆವೆಂದು ಹೇಳಿಕೊಳ್ಳುವ ಕೆಲಸಗಳು ಮತ್ತೆ ಕೆಲವು. ಇದಕ್ಕೆ ಇನ್ನೂ ಹಲವು ನಮೂನೆಯ ಉದಾಹರಣೆಗಳಿರಬಹುದು. ಈ ವಾಸ್ತವಗಳನ್ನೇ ಪ್ರಸ್ತುತ ವಚನದಲ್ಲಿ ಧ್ವನಿಪೂರ್ಣವಾಗಿ ವ್ಯಂಗಿಸುತ್ತ, ನಿಜವಾದ ಪುಣ್ಯಸಂಪಾದನೆ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಅರಿವು ಮೂಡಿಸುತ್ತಾನೆ ಸಿದ್ಧರಾಮೇಶ್ವರ.

‘ಪುಣ್ಯವ ಮಾಡಬೇಕೆಂದು ಮರುಗಬೇಡ’ ಎಂಬ ವಚನದ ಮೊದಲ ಪಂಕ್ತಿಯಲ್ಲಿಯೇ ಸೂಕ್ಷ್ಮ ವ್ಯಂಗ್ಯವಿದೆ. ಅದು ವಚನದ ಎರಡನೆಯ ಪಂಕ್ತಿಯಲ್ಲಿರುವ ‘ಪಾಪವ ಮಾಡದಿದ್ದಡೆ ಪುಣ್ಯ ದಿಟ’ ಎಂಬ ಮಾತಿನಲ್ಲಿ ಸ್ಪಷ್ಟವಾಗಿ ಧ್ವನಿತವಾಗುತ್ತದೆ. ಮುಂದುವರೆದು, ‘ಬೇರೆ ತೀರ್ಥ ಬೇಡ’ ಎನ್ನುವ ಮಾತುಗಳಲ್ಲಿಯೂ ಅದು ನೇರವಾಗಿ ವ್ಯಕ್ತವಾಗುತ್ತದೆ. ಮಹಾಕಾರ್ಯಗಳನ್ನು ಮಾಡಿಯೇ ಪುಣ್ಯ ಸಂಪಾದಿಸುವ ಅಗತ್ಯವಿಲ್ಲ; ಅದಕ್ಕೆ ಬದಲಾಗಿ ಪಾಪ ಮಾಡದಿದ್ದರೆ ಸಾಕು-ಎಂದು ಹೇಳುವ ಸಿದ್ಧರಾಮನು ಪುಣ್ಯಸಂಪಾದನಾರ್ಥಿ ಪಾತ್ರಧಾರಿಗಳನ್ನು ಮೃದುವಾಗಿಯೇ ತಿವಿಯುತ್ತಾನೆ. ಹೀಗೆ ಏನಕೇನ ಪ್ರಕಾರದ ಅಪಮಾರ್ಗ ಹಿಡಿಯುವ ಜನರು ತಮ್ಮ ಪಾಪಕೃತ್ಯಗಳನ್ನು ಮುಚ್ಚಿಕೊಳ್ಳಲು ಪುಣ್ಯಸಂಪಾದನೆಯ ನಾಟಕ ಆಡುತ್ತಾರೆ. ಅಂಥಲ್ಲಿ ಪುಣ್ಯ ಸಿಗುವುದಾದರೂ ಹೇಗೆ? ಇದನ್ನೇ ಸೂಕ್ಷ್ಮವಾಗಿ ನುಡಿಯುವ ವಚನವು, ಅಂಥ ಕೆಲಸಗಳಿಂದ ಪುಣ್ಯ ಸಿಗದಿದ್ದರೆ ಮರುಗುವುದು ಬೇಡ ಎನ್ನುತ್ತದೆ. ಇದರರ್ಥ, ನೀವು ಮಾಡುತ್ತಿರುವುದು ಪಾಪವೇ ಎಂದು ಹೇಳಿದಂತೆ. ಇಂಥ ಪಾಪಗಳನ್ನು ಮಾಡದಿದ್ದರೆ ಸಾಕು, ಅದೇ ಖಂಡಿತವಾಗಿ ಪುಣ್ಯಸಂಪಾದನೆಯಾತ್ತದೆ ಎಂಬುದು ಸಿದ್ಧರಾಮೇಶ್ವರನ ಸ್ಪಷ್ಟ ಅಭಿಮತ.

ADVERTISEMENT

ಪುಣ್ಯಸಂಪಾದನೆಗೆಂದು ತೀರ್ಥಕ್ಷೇತ್ರಗಳಿಗೆ ಅಲೆಯುವ ಅಗತ್ಯವೂ ಇಲ್ಲ, ಕೇವಲ ಸತ್ಯ ನುಡಿಯುವುದರಿಂದಲೇ ಅಂಥ ಪುಣ್ಯ ದೊರೆಯುತ್ತದೆ ಎಂಬ ವಚನಕಾರನ ಮಾತಿನಲ್ಲಿ, ನೀವು ಮಹಾ ಸುಳ್ಳುಗಾರರಾಗಿದ್ದೀರಿ, ಅದನ್ನು ಮೊದಲು ಬಿಟ್ಟುಬಿಡಿ ಎಂಬ ಸೂಚನೆಯೂ ಇದೆ. ದೇವರು ಸತ್ಯ ನುಡಿವವರನ್ನು ತನ್ನ ಸಮಾನವಾಗಿ ಕಾಣುತ್ತಾನೆ, ಆದರೆ ಸುಳ್ಳು ಹೇಳುವ ಮೋಸಗಾರರನ್ನು ಆತ ಎಂದೂ ಸಹಿಸಲಾರ ಎನ್ನುವ ಮಾತುಗಳಲ್ಲಿ, ಪಾಪ ಮಾಡದಿರುವ ಹಾಗೂ ಸುಳ್ಳು ಹೇಳದಿರುವ ಕ್ರಿಯೆಗಳಲ್ಲೇ ಪುಣ್ಯ ಸಂಪಾದನೆ ಸಾಧ್ಯವೆಂಬುದರ ಖಚಿತ ಪ್ರತಿಪಾದನೆ ಇದೆ.

ಸತ್ಯ ಮತ್ತು ಸದಾಚಾರದ ಮಾರ್ಗದಲ್ಲಿ ತಾವು ಮೊದಲು ನಡೆದ ಶರಣರು, ಅದೇ ಪುಣ್ಯಸಂಪಾದನೆಯ ಮಾರ್ಗ ಎಂಬುದನ್ನು ಸಾಕ್ಷಿಭೂತವಾಗಿ ತೋರಿಸಿದರು. ಅಂಥ ಸ್ವಾನುಭವದ ಪರಿಪಾಕ ಸಿದ್ಧರಾಮೇಶ್ವರನ ಈ ವಚನ. ಸತ್ಯ ನುಡಿವುದು ಮತ್ತು ಪಾಪಕೃತ್ಯಗಳಿಂದ ದೂರವಿರುವುದೇ ಪುಣ್ಯಸಂಪಾದನೆಯ ಮಾರ್ಗವಲ್ಲವೆ? ಇದನ್ನುಳಿದು ಅನ್ಯ ಮಾರ್ಗ ಇನ್ನಾವುದಿದೆ?

ಸರಣಿಯ ಹಿಂದಿನ ಲೇಖನಗಳನ್ನು ಓದಲು / ಪಾಡ್‌ಕಾಸ್ಟ್ ಕೇಳಲುಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/vachana-vani

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.