ADVERTISEMENT

ಭಗವದ್ಗೀತೆ ಎಂಬ ಅಮೃತ

ಪುಷ್ಪಾ ಮೋಹನ ಮುದಕವಿ
Published 6 ಡಿಸೆಂಬರ್ 2019, 20:00 IST
Last Updated 6 ಡಿಸೆಂಬರ್ 2019, 20:00 IST
ಭಗವದ್ಗೀತೆಯ ಹಳೆಯ ಪುಸ್ತಕವೊಂದರ ಚಿತ್ರ
ಭಗವದ್ಗೀತೆಯ ಹಳೆಯ ಪುಸ್ತಕವೊಂದರ ಚಿತ್ರ   

ಮಾನವಕೋಟಿಯ ಮೇಲೆ ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಮಾನವ ಬದುಕಿಗೆ ಅವಶ್ಯಕವೆನಿಸುವ ತತ್ವವನ್ನು ಸಾಮಾನ್ಯನೂ ತಿಳಿದುಕೊಳ್ಳಬಲ್ಲಂಥ ತಿಳಿಯಾದ ಭಾಷೆಯಲ್ಲಿ ಭಗವದ್ಗೀತೆಯ ರೂಪದಲ್ಲಿ ಅಮೃತಧಾರೆಯಾಗಿ ಸುರಿಸಿರುವನು. ಇದು ಎಲ್ಲ ಉಪನಿಷತ್ತುಗಳ ಸಾರ.

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ /
ಪಾರ್ಥಫ ವತ್ಸಃ ಸುಧೀರ‍್ಭೋಕ್ತಾ ದುಗ್ಧಂ ಗೀತಾsಮೃತಂ ಮಹತ್ //

‘ಉಪನಿಷತ್ತುಗಳೇ ಗೋವುಗಳು, ಅವನ್ನು ಕರೆದವನು ಶ್ರೀಕೃಷ್ಣ; ಹೀಗೆ ಕರೆದ ಹಾಲು ಗೀತೆ. ಶ್ರೀಕೃಷ್ಣ ಪರಮಾತ್ಮನು ಅರ್ಜುನನನ್ನು ನಿಮಿತ್ತ ಮಾಡಿ ಅದನ್ನು ಜಗತ್ತಿಗೇ ಉಣಬಡಿಸಿರುವನು’ – ಇದು ಈ ಶ್ಲೋಕದ ತಾತ್ಪರ್ಯ.

ADVERTISEMENT

ಮಾರ್ಗಶಿರ ಮಾಸದ ಶುಕ್ಲಪಕ್ಷ ಏಕಾದಶಿಯಂದು ಗೀತಾ ಜಯಂತಿ. ಭಗವದ್ಗೀತೆ ಭಾರತೀಯರಿಗೆ ಪವಿತ್ರ ಗ್ರಂಥ. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನಿಂದ ಅರ್ಜುನನು ಪಡೆದ ಉಪದೇಶಾಮೃತವಿದು. ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದಲ್ಲಿ ಬರುವ 700 ಶ್ಲೋಕಗಳೇ ಈ ಭಗವದ್ಗೀತೆ. ಇದು ಧರ್ಮ ಮತ್ತು ತತ್ವಶಾಸ್ತ್ರದ ಸಾರ. ಮಧ್ವಾಚಾರ್ಯರು ‘ಮಹಾಭಾರತವೆಂಬ ಪಾರಿಜಾತ ಪುಷ್ಪದ ಮಧುವೇ ಭಗವದ್ಗೀತೆ’ಎಂದು ಗೀತೆಯ ಹಿರಿಮೆಯನ್ನು ಸಾರಿದ್ದಾರೆ. ಉಪದೇಶ ರತ್ನಗಳಿಂದ ಯುಕ್ತವಾದ ದಿವ್ಯಮಾಲೆಯಿದು.

ಮಹಾಭಾರತಯುದ್ಧ ಆರಂಭವಾಗುವ ಮುನ್ನ ಕುರುಕ್ಷೇತ್ರ ರಣರಂಗದಲ್ಲಿ ಕೌರವಸೇನೆಯ ತನ್ನ ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಖಿನ್ನನಾಗಿ, ಏನು ಮಾಡಲೂ ತೋಚದೆ ಮೂಢನಾಗಿ ತನ್ನ ಧನುರ್ಬಾಣಗಳನ್ನು ವಿಸರ್ಜಿಸುತ್ತಾನೆ; ಆಗ ಶ್ರೀಕೃಷ್ಣನು ಅವನಿಗೆ ಕರ್ತವ್ಯದ ಪಥವನ್ನು ತೋರಿ ಅವನ ಹೃದಯದ ದೌರ್ಬಲ್ಯವನ್ನು ಕಳೆದು ಯುದ್ಧಕ್ಕೆ ಸಿದ್ಧಗೊಳಿಸುತ್ತಾನೆ. ಆತ್ಮದ ಅಮರತ್ವದ ಬಗ್ಗೆ ತಿಳಿಸಿಕೊಡುತ್ತ, ಭಕ್ತಿ, ಧ್ಯಾನ, ಜ್ಞಾನಮಾರ್ಗಗಳನ್ನು ವಿವರಿಸುತ್ತಾನೆ. ವಿಶ್ವರೂಪದರ್ಶನವನ್ನೂ ಕಾಣಿಸುತ್ತಾನೆ.

ಹದಿನೆಂಟು ಪರ್ವಗಳ ಮಹಾಭಾರತದ ಸಾರವಾಗಿ ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿದ್ದು ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ ಮಾನವನ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೈಗನ್ನಡಿ. ಒಂದು ಜಾತಿ ಅಥವಾ ಮತಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಜನಾಂಗಕ್ಕೇ ಇದು ದಾರಿದೀಪವಾಗಿದೆ. ಅದ್ಭುತ ಶಕ್ತಿಯುಳ್ಳ ಪ್ರತಿ ಶ್ಲೋಕವೂ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದಿವ್ಯ ಪ್ರಭೆಯಾಗಿದೆ. ಸತ್ಯದ ಪೂರ್ಣದೃಷ್ಟಿ ಇಲ್ಲಿದೆ. ಭಗವದ್ಗೀತೆಯ ತತ್ವಜಿಜ್ಞಾಸೆ ಆಗಸದಷ್ಟು ವಿಶಾಲ, ಕಡಲಿನಷ್ಟು ಆಳ. ತನ್ನೆಡೆಗೆ ಬಂದ ಯಾರನ್ನೂ ಗೀತೆ ನಿರಾಸೆಯಿಂದ ಹಿಂದಕ್ಕೆ ಕಳಿಸುವುದಿಲ್ಲ, ಅವರವರ ಯೋಗ್ಯತೆಗೆ ತಕ್ಕಂತೆ ಮಾರ್ಗದರ್ಶನವನ್ನು ನೀಡುತ್ತದೆ.

ಗೀತೆಯಲ್ಲಿ ಕರ್ಮಯೋಗದ ಸೊಗಸಾಗಿ ತಿಳಿಸುತ್ತಾನೆ, ಶ್ರೀಕೃಷ್ಣ.

‘ಕರ್ಮ ಮಾಡುವುದಕ್ಕೆ ಮಾತ್ರ ನಿನಗೆ ಅಧಿಕಾರ. ಫಲದಲ್ಲಿ ಅಪೇಕ್ಷೆ ಸಲ್ಲದು. ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ; ಕರ್ಮ ಮಾಡದೆಯೂ ಇರಬೇಡ. ಸೋಲು–ಗೆಲವುಗಳನ್ನು ಸಮಾನಭಾವದಿಂದ ಸ್ವೀಕರಿಸು. ನಿನ್ನ ಕರ್ತವ್ಯವನ್ನು ನೀನು ಮಾಡು.’ ಇದೇ ಗೀತೆಯ ಕರ್ಮಯೋಗದ ತಾತ್ಪರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.