ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಯಜ್ಞಕ್ಕೆ ರುದ್ರನನ್ನು ಕರೆಯದ ದಕ್ಷ

ಬಾಗ 171

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 12 ಜುಲೈ 2022, 19:30 IST
Last Updated 12 ಜುಲೈ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

‘ಎಲೈ ನಾರದ! ಪ್ರಯಾಗದ ಯಜ್ಞಕಾರ್ಯದಲ್ಲಿ ಶಿವನನ್ನು ನಿಂದಿಸಿದ್ದ ದಕ್ಷಬ್ರಹ್ಮ, ಮುಂದೆ ಮಹಾಯಜ್ಞವೊಂದನ್ನು ಆಯೋಜಿದ. ಆ ಯಜ್ಞಕ್ಕೆ ದೇವಋಷಿಗಳಾದ ಅಗಸ್ತ್ಯ, ಕಶ್ಯಪ, ಅತ್ರಿ, ವಾಮದೇವ, ಭೃಗು, ದಧೀಚಿ, ವ್ಯಾಸ, ಭಾರದ್ವಾಜ, ಗೌತಮ, ಪೈಲಮುನಿ, ಪರಾಶರ, ಗರ್ಗಮುನಿ, ಭಾರ್ಗವ, ಕಕುಪ, ಸಿತಮುನಿ, ಸುಮಂತುಮುನಿ, ತ್ರಿಕಮುನಿ, ಕಂಕಮುನಿ, ವೈಶಂಪಾಯನಮುನಿ ಮುಂತಾದ ಅನೇಕ ಮಹರ್ಷಿಗಳನ್ನು ಆಹ್ವಾನಿಸಿದ್ದ’ ಎಂದು ಮುಂದುವರೆಸಿದ ಬ್ರಹ್ಮ.

‘ಲೋಕಪಾಲಕರು, ಗಂಧರ್ವರು, ವಿದ್ಯಾಧರರು, ಸಿದ್ಧರು, ದ್ವಾದಶಾದಿತ್ಯರು, ನಾಗಪುರುಷರು, ಕಿನ್ನರರು, ಕಿಂಪುರುಷ ಮೊದಲಾದ ದೇವಜಾತಿಯವರೂ ಆಗಮಿಸಿದ್ದರು. ಸತ್ಯಲೋಕದಿಂದ ಬ್ರಹ್ಮ ತನ್ನ ಪರಿವಾರದೊಂದಿಗೆ ವೇದಪುರುಷರು, ಸನಕಾದಿಗಳೊಡನೆ ಬಂದ. ವಿಷ್ಣು ಸಹ ದಕ್ಷನಿಂದ ಆಹ್ವಾನಿತನಾಗಿ ಆ ಯಾಗಕ್ಕೆ ಬಂದಿದ್ದ. ಸತೀ ಹೊರತು ದಕ್ಷನ ತನ್ನ ಎಲ್ಲಾ ಪುತ್ರಿಯರಿಗೂ ಆಹ್ವಾನವಿತ್ತಿದ್ದ. ಆದರೆ ಅಕ್ಕರೆಯ ಮಗಳಾದ ಸತೀ ಮತ್ತು ಅಳಿಯನಾದ ಶಿವನನ್ನು ಕರೆಯಲಿಲ್ಲ. ಕನಖಲವೆಂಬ ತೀರ್ಥಕ್ಷೇತ್ರದಲ್ಲಿ ನಡೆಯುವ ಯಜ್ಞಕ್ಕಾಗಿ ದೇವಶಿಲ್ಪಿಯಾದ ತ್ವಷ್ಟ್ರಬ್ರಹ್ಮ ಸುಂದರವಾದ ಮಹಾಭವನವನ್ನ ನಿರ್ಮಿಸಿದ್ದ. ಅಲ್ಲಿ ದಕ್ಷಬ್ರಹ್ಮ ಅತಿಥಿಗಳ ವಾಸಕ್ಕೆ ವ್ಯವಸ್ಥೆ ಮಾಡಿದ್ದ. ಯಜ್ಞಕ್ಕೆ ಭೃಗುಮುನಿ ಮೊದಲಾದ ತಪೋಧನರನ್ನು ಋತ್ವಿಜರನ್ನಾಗಿ ನೇಮಕ ಮಾಡಿದ್ದ. ವಿಷ್ಣುವನ್ನು ಯಜ್ಞಕ್ಕೆ ಸರ್ವಾಧ್ಯಕ್ಷನಾಗಿಸಿದ್ದ. ವೇದತ್ರಯಗಳ ವಿಧಿಯನ್ನು ಬ್ರಹ್ಮ ನಿರ್ದೇಶಿಸುವವನಾಗಿದ್ದ. ದಿಕ್ಪಾಲಕರು ದ್ವಾರಪಾಲಕರಾಗಿ, ಯಾಗವನ್ನು ರಕ್ಷಿಸುವವರಾಗಿದ್ದರು.

‘ಯಜ್ಞದಲ್ಲಿ ಯಜ್ಞಪುರುಷನು ಸುಂದರವಾದ ರೂಪವನ್ನು ಧರಿಸಿ ಸನ್ನಿಹಿತನಾದ. ಮಹಾಮುನಿಗಳೆಲ್ಲರೂ ವೇದಘೋಷವನ್ನು ಮಾಡಿದರು. ಅಗ್ನಿಯು ಯಾಗದಲ್ಲಿ ಅನೇಕ ರೂಪದ ಜ್ವಾಲೆಗಳನ್ನು ಪ್ರಕಟಿಸಿ, ಹವಿಸ್ಸನ್ನು ಸ್ವೀಕರಿಸತೊಡಗಿದ. ಎಂಬತ್ತೆಂಟು ಸಾವಿರ ಋತ್ವಿಜರು ಹೋಮವನ್ನು ಮಾಡುತ್ತಲಿದ್ದರು. ಅರವತ್ತನಾಲ್ಕುಸಾವಿರ ದೇವಮುನಿಗಳು ಸಾಮಗಾನವನ್ನು ಮಾಡುತ್ತಲಿದ್ದರು. ಅಧ್ವರ್ಯುಗಳು ಮತ್ತು ಹೋತೃಗಳು ಅರವತ್ತುನಾಲ್ಕುಸಾವಿರದಷ್ಟಿದ್ದರು. ನಾರದಮುನಿ ಮೊದಲಾದ ಋಷಿಗಳು ಆಖ್ಯಾನಗಳನ್ನು ಹೇಳುತ್ತಲಿದ್ದರು.

ADVERTISEMENT

‘ದಕ್ಷ ತನ್ನ ಪತ್ನಿಯೊಡನೆ ಯಜ್ಞದೀಕ್ಷೆಯನ್ನು ಕೈಗೊಂಡ. ದಧೀಚಿಯು ‘ಶಂಕರನು ಯಜ್ಞಮಹೋತ್ಸವಕ್ಕೆ ಏಕೆ ಬರಲಿಲ್ಲ? ಶಿವನು ಅನುಗ್ರಹಿಸಿದರೆ ಅಮಂಗಳಗಳೂ ಮಂಗಳಕರವಾಗುವುವು. ಎಲೈ ದಕ್ಷನೆ, ಶಿವನನ್ನು ಕರೆದುಕೊಂಡು ಬಂದರೆ ಯಜ್ಞವು ಸಾಂಗವಾಗಿ ನೆರವೇರುವುದು‘ ಎಂದ.

‘ದಧೀಚಿಯ ಮಾತುಗಳನ್ನು ಕೇಳಿ ಮೂರ್ಖನಾದ ದಕ್ಷ ‘ಎಲೈ ದಧೀಚಿ, ವಿಷ್ಣುವು ದೇವತೆಗಳಿಗೆ ಆದಿಕಾರಣನು. ವೇದಗಳು, ಯಜ್ಞಗಳು, ಎಲ್ಲಾ ವೈದಿಕ ಲೌಕಿಕರ್ಮಗಳು ನೆಲಸಿರುವಂತಹ ವಿಷ್ಣು ಬಂದಿದ್ದಾನೆ. ಜಗತ್ಪಿತಾಮಹನಾದ ಬ್ರಹ್ಮನೂ ಯಜ್ಞಕ್ಕೆ ಬಂದಿರುವಾಗ, ಸ್ಮಶಾನವಾಸಿ ರುದ್ರನಿಂದ ಆಗಬೇಕಾದುದೇನೂ ಇಲ್ಲ’ ಎಂದ. ‘ಎಲೈ ದಕ್ಷನೇ, ಶಿವನು ಇಲ್ಲದ ಈ ಯಜ್ಞವು ಯಜ್ಞವಲ್ಲ‘ ಎಂದು ಹೇಳಿ ದಧೀಚಿಯು ಹೊರಟುಹೋದ. ಶಿವಭಕ್ತ ತಪಸ್ವಿಗಳೂ ದಕ್ಷನಿಗೆ ಶಾಪವನ್ನು ಕೊಟ್ಟುಹೋದರು. ವಿಚಲಿತನಾಗದ ದಕ್ಷಬ್ರಹ್ಮ, ಉಳಿದವರನ್ನುದ್ದೇಶಿಸಿ ‘ಎಲೈ ತಪೋಧನರೆ, ನೀವೆಲ್ಲರೂ ವಿಷ್ಣುಭಕ್ತರಾಗಿದ್ದು, ವೇದವಿದ್ವಾಂಸರಾಗಿರುವಿರಿ. ನೀವೆಲ್ಲಾ ಯಜ್ಞ ಸಫಲವಾಗುವಂತೆ ಮಾಡಿರಿ‘ ಎಂದು ಕೋರಿದ. ದೇವಮುನಿಗಳು ಯಜ್ಞವನ್ನು ಪ್ರಾರಂಭಿಸಿದರು. ‘ಎಲೈ ನಾರದ, ಯಜ್ಞ ಧ್ವಂಸವಾದ ವಿವರ ಹೇಳುತ್ತೇನೆ ಕೇಳು‘ ಎಂದು ಬ್ರಹ್ಮ ಹೇಳುವಲ್ಲಿಗೆ ಸತೀಖಂಡದ ಇಪ್ಪತ್ತೇಳನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.