ADVERTISEMENT

ದತ್ತ: ಲೋಕಾತೀತ ಲೋಕಗುರು- ಇಂದು ದತ್ತ ಜಯಂತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 13 ಡಿಸೆಂಬರ್ 2024, 21:06 IST
Last Updated 13 ಡಿಸೆಂಬರ್ 2024, 21:06 IST
<div class="paragraphs"><p>ದತ್ತ ಜಯಂತಿ</p></div>

ದತ್ತ ಜಯಂತಿ

   

ಭಾರತೀಯ ದರ್ಶನ ಪರಂಪರೆಯಲ್ಲಿ ಹತ್ತುಹಲವು ವೈಶಿಷ್ಟ್ಯಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಒಂದು: ಅವಧೂತತತ್ತ್ವದ ಕಲ್ಪನೆ.

‘ಅವಧೂತ’ – ಎಂದರೆ ಯಾವುದರ ಬಗ್ಗೆಯೂ ಮೋಹವನ್ನಾಲೀ ಅಹಂಕಾರವನ್ನಾಗಲೀ ಇಟ್ಟುಕೊಳ್ಳದ ಜ್ಞಾನಿ; ಎಲ್ಲ ರೀತಿಯ ರಾಗ–ದ್ವೇಷಗಳಿಂದ ದೂರವಾಗಿರುವ, ಸದಾ ಆನಂದದಲ್ಲಿಯೇ ನೆಲೆಯನ್ನು ಕಂಡುಕೊಂಡಿರುವ ಲೋಕಗುರು – ಎಂದು ಸರಳವಾಗಿ ಹೇಳಬಹುದು.

ADVERTISEMENT

ಯಾವುದೇ ತತ್ತ್ವದ ಅನುಸಂಧಾನವೂ, ಆಚರಣೆಯ ವಿಧಾನವೂ ಕಾಲಕ್ರಮದಲ್ಲಿ ತನ್ನ ದಿಟವಾದ ಕಾವನ್ನು ಕಳೆದುಕೊಳ್ಳುವುದು ಸ್ವಾಭಾವಿಕ. ಹೀಗಾದಾಗ ನಮ್ಮ ತಿಳಿವಳಿಕೆಯ ದಾರಿಯೂ, ಕರ್ಮಗಳ ನೆಲೆಯೂ ಯಾಂತ್ರಿಕವಾಗುತ್ತದೆ. ಉದಾಹರಣೆಗೆ, ಗುರುತತ್ತ್ವವನ್ನೇ ನೋಡಬಹುದು. ‘ಗುರು’ ಯಾರು ಎಂಬ ಪ್ರಶ್ನೆಗೆ ಪರಂಪರೆಯು ಆಳವಾದ ಜಿಜ್ಞಾಸೆಯನ್ನು ನಡೆಸಿ, ಉತ್ತರವನ್ನು ಕಾಣಿಸಿದೆ. ಈ ಉತ್ತರದಿಂದ ನಮ್ಮ ಸಂದೇಹಗಳು ಪರಿಹರವಾಗುತ್ತದೆ, ದಿಟ. ಆದರೆ ಈ ‘ಸಿದ್ಧ’ ಉತ್ತರ ನಮ್ಮ ಅನ್ವೇಷಣೆಯ ತೀವ್ರತೆಯನ್ನು ಕಡಿಮೆಗೊಳಿಸೀತು; ಮಾತ್ರವಲ್ಲ, ಈ ಉತ್ತರದಂತೆ ಕಾಣಬಲ್ಲ ವೇಷವನ್ನು ಧರಿಸಿದವರು ಗುರುಗಳಾಗಿ ಮೆರೆಯಬಹುದು; ಎಂದರೆ ಗುರುವಲ್ಲದವನು ಗುರುವಾಗಿ ನಟಿಸಬಹುದು. ಹೀಗೆ ಜಡ್ಡು ಹಿಡಿದಿರುವ ನಮ್ಮ ಆಚಾರ–ವಿಚಾರಗಳಿಗೆ ಮತ್ತೆ ಕಾಂತಿಯನ್ನು ತುಂಬಬಲ್ಲ ತತ್ತ್ವವಾಗಿ ಪರಂಪರೆಯಲ್ಲಿ ತೋರಿಕೊಂಡ ಮಹಾತತ್ತ್ವವೇ ಅವಧೂತನ ಕಲ್ಪನೆ.

ಅವಧೂತನಾದವನು ಈಗಾಗಲೇ ಲೋಕದಲ್ಲಿ ಸಿದ್ಧವಾಗಿರುವ ದಾರಿಯಲ್ಲಿ ತನ್ನ ಹೆಜ್ಜೆಗಳನ್ನು ಹಾಕುವ ಉತ್ಸಾಹವನ್ನು ತೋರಲಾರ. ಗುರುವಾದವನು ಯಾವುದೋ ಮಠದಲ್ಲಿ ಇರುತ್ತಾನೆ; ಇಂಥದೇ ವೇಷಭೂಷಣಗಳನ್ನು ಧರಿಸಿರಿತ್ತಾನೆ; ಇಂಥ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಮಾಡುತ್ತಿರುತ್ತಾನೆ – ಹೀಗೆ ಏನೇನೋ ಸಿದ್ಧಮಾದರಿಗಳಲ್ಲಿ ನಾವು ಗುರುವನ್ನು ಹುಡುಕುತ್ತಿರುತ್ತೇವೆ. ಆದರೆ ಅವಧೂತ ನಮ್ಮ ದೃಷ್ಟಿಯನ್ನೇ ಬದಲಾಯಿಸಿಬಿಡುತ್ತಾನೆ; ಹೊರಗಣ್ಣಿನ ನಮ್ಮ ನೋಟಕ್ಕೆ ಒಳಗಣ್ಣಿನ ಅರಿವನ್ನು ಒದಗಿಸುತ್ತಾನೆ. ನಮ್ಮ ಇದುವರೆಗಿನ ಎಲ್ಲ ಎಣಿಕೆಗಳನ್ನು ಮೀರಿದ ರೂಪದಲ್ಲೂ ತತ್ತ್ವದಲ್ಲೂ ಅವನು ಪ್ರಕಟಗೊಳ್ಳಬಲ್ಲವನಾಗಿರುತ್ತಾನೆ, ಅವಧೂತ. ಅವನು ಮಗುವಿನಂತೆ ಕಾಣಿಸಿಕೊಳ್ಳಬಹುದು, ಹುಚ್ಚನಂತೆ ಕಾಣಿಸಿಕೊಳ್ಳಬಹುದು; ಭೂತದಂತೆಯೂ ಕಾಣಿಸಿಕೊಳ್ಳಬಹುದು. ಎಂದರೆ ಅವನು ಹೇಗೆ ಕಾಣಿಸಿಕೊಳ್ಳುತ್ತಾನೆ – ಎಂಬುದು ನಮ್ಮ ಭಾವಕ್ಕೂ ಬುದ್ಧಿಗೂ ಎಟುಕದ ವಿವರ ಎಂದು ಇದರ ತಾತ್ಪರ್ಯ. 

ಅವಧೂತತತ್ತ್ವದ ಮೂಲಸ್ವರೂಪವೇ ದತ್ತಾತ್ರೇಯ ಮಹಾಗುರು; ಇವನು ಹಿಂದಿನ, ಇಂದಿನ ಮತ್ತು ಮುಂದಿನ ಎಲ್ಲ ಅವಧೂತರಿಗೂ ಗುರು. ನಾವು ಸುಖ ಎಂದರೆ ಇದು ಎಂದೂ, ದುಃಖ ಎಂದರೆ ಇದು ಎಂದೂ ಈಗಾಗಲೇ ಸಿದ್ಧವಾಗಿರುವ, ಆದರೆ ನಮ್ಮ ಅರಿವಿಗೂ ಅನುಭವಕ್ಕೂ ದಕ್ಕದ ವಿವರಗಳನ್ನು ನಂಬಿಕೊಂಡು ಸುಖ–ದುಃಖಗಳ ಜಾಲದಲ್ಲಿ ಒದ್ದಾಡುತ್ತಿರುತ್ತೇವೆ. ಈ ಬಂಧನದಿಂದ ನಮ್ಮನ್ನು ಬಿಡಿಸಿ, ನಮಗೆ ದಿಟವಾದ ಆನಂದವನ್ನು ಉಣಬಡಿಸುವವನೇ ಅವಧೂತಗುರು ದತ್ತಾತ್ರೇಯ.  

‘ಅವಧೂತ’ ಎಂಬ ಕಲ್ಪನೆಯೇ ಗಹನವಾದುದು. ಇಂದು ಅಪಮೌಲ್ಯವಾಗಿರುವ ಹಲವು ಪದಗಳಲ್ಲಿ, ಪದವಿಗಳಲ್ಲಿ ಅವಧೂತ ಎಂಬುದು ಕೂಡ ಒಂದಾಗಿರುವುದು ಶೋಚನೀಯ. ‘ಅವಧೂತ’ ಎಂಬುದು ನಮಗೆ ನಾವೇ ಧರಿಸಿಕೊಳ್ಳುವ ಅಲಂಕಾರದ ಕಿರೀಟವಲ್ಲ; ಅದು ಜೀವನ್ಮುಕ್ತರ ಲೋಕೋತ್ತರ ಸ್ಥಿತಿಯ ಅನಿರ್ವಚನೀಯತೆಗೆ ಸುಸಂಸ್ಕೃತಸಮಾಜವು ಠಂಕಿಸಿದ ಬೀಜಾಕ್ಷರಮಂತ್ರ. ಈ ಪದದ ಒಂದೊಂದು ಅಕ್ಷರದಲ್ಲೂ ಕ್ಷರವಾಗದ ತತ್ತ್ವಗಳೇ ಅಡಗಿವೆ.

ದತ್ತಜಯಂತಿಯ ಇಂದಿನ ಆಚರಣೆಯು ನಮ್ಮ ಲೋಕದೃಷ್ಟಿಗೆ ದಿಟವಾದ ಆನಂದದ ನೆಲೆಯ ದರ್ಶನವನ್ನು ಒದಗಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.