ADVERTISEMENT

Datta Jayanti 2025 | ದತ್ತಾತ್ರೇಯ: ಜ್ಞಾನ ಭಕ್ತಿಗಳ ಸಂಗಮ

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
   

ನಮ್ಮ ಸಂಸ್ಕೃತಿಯಲ್ಲಿ ಅವತಾರದ ಕಲ್ಪನೆ ತುಂಬ ವಿಶಿಷ್ಟವಾಗಿದೆ. ಧರ್ಮಕ್ಕೆ ತೊಂದರೆ ಎದುರಾದಾಗ ದೇವರೇ ಸ್ವತಃ ಅದರ ರಕ್ಷಣೆಗೆ ಧಾವಿಸಿ ಬರುತ್ತಾನೆ ಎಂಬ ನಂಬಿಕೆಯೇ ಅವತಾರಕಲ್ಪನೆಯ ಅಡಿಪಾಯ. ದೇವರೇ ‘ಮೇಲಿಂದ’ ಇಳಿದು ಬರುವುದೇ ಅವತಾರ. ಹೀಗೆ ತೋರಿಕೊಂಡ ಅವತಾರಗಳಲ್ಲಿ ದತ್ತಾತ್ರೇಯ ಕೂಡ ಒಬ್ಬ. ಆದರೆ ಈ ಅವತಾರದಲ್ಲಿ ಒಂದು ಸ್ವಾರಸ್ಯವೂ ಸೇರಿಕೊಂಡಿದೆ. ದತ್ತಾತ್ರೇಯ ಕೇವಲ ಒಬ್ಬ ದೇವರ ಅವತಾರ ಅಲ್ಲ; ಅವನು ತ್ರಿಮೂರ್ತಿಸ್ವರೂಪ. ಎಂದರೆ ಮೂವರು ದೇವತೆಗಳ ಸ್ವರೂಪ. ಇನ್ನೂ ಒಂದು ಸ್ವಾರಸ್ಯ ಉಂಟು; ದತ್ತಾತ್ರೇಯ ಗುರುರೂಪದಲ್ಲಿ ಒದಗಿದವನು; ಅದೂ ಅವಧೂತಗುರುವಾಗಿ.

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ – ಈ ಮೂವರು ದೇವತಾಶಕ್ತಿಗಳ ಸಂಗಮಸ್ಥಾನವೇ ದತ್ತಾತ್ರೇಯ. ಈ ಮೂವರು ದೇವತೆಗಳಿಗೂ ನಿರ್ದಿಷ್ಟವಾದ ‘ಕರ್ತವ್ಯ’ಗಳಿವೆಯಷ್ಟೆ. ಬ್ರಹ್ಮನು ಸೃಷ್ಟಿಗೂ, ವಿಷ್ಣುವು ಸ್ಥಿತಿಗೂ, ಮಹೇಶ್ವರನು ಪ್ರಳಯಕ್ಕೂ ಮೂಲಕಾರಣರು. ಈ ಮೂವರ ಅಂಶವಾಗಿರುವ ದತ್ತಾತ್ರೇಯ ಮಹಾಗುರು ಈ ಮೂರೂ ಶಕ್ತಿಗಳ ಮೂರ್ತರೂಪವೇ ಆಗಿದ್ದಾನೆ. ಗುರುವಾದವನು ನಮ್ಮ ಜೀವನವನ್ನು ಈ ಮೂರು ‘ರೂಪ’ಗಳಲ್ಲಿ ರೂಪಿಸಬಲ್ಲವನು ಎಂಬುದನ್ನು ಗಮನದಲ್ಲಿಟ್ಟುಕೊಂಡರೆ, ಆಗ ಗುರು ದತ್ತಾತ್ರೇಯನ ಕಾಣ್ಕೆಯ ಹಿಂದಿರುವ ವೈಶಾಲ್ಯವೂ ಸ್ಫುಟವಾಗುತ್ತದೆ.

‘ಅವಧೂತ’ – ಎಂದರೆ ಯಾವುದರ ಬಗ್ಗೆಯೂ ಮೋಹವನ್ನಾಗಲೀ ಅಹಂಕಾರವನ್ನಾಗಲೀ ಹೊಂದಿರದ ಜ್ಞಾನಿ; ಎಲ್ಲ ರೀತಿಯ ರಾಗ–ದ್ವೇಷಗಳಿಂದ ದೂರವಾಗಿರುವ, ಸದಾ ಆನಂದದಲ್ಲಿಯೇ ನೆಲೆಯನ್ನು ಕಂಡುಕೊಂಡಿರುವ ಲೋಕಗುರು. ದಿಟವಾದ ಶಿಕ್ಷಣ ನಮ್ಮಲ್ಲಿ ಸ್ಥಿರವಾಗಿಸಬೇಕಾದ ಮೌಲ್ಯವೇ ರಾಗ–ದ್ವೇಷಗಳ ನಿರಾಕರಣೆ. ಇಂಥದೊಂದು ಮನಃಸ್ಥಿತಿಯಿದ್ದವನಿಗೆ ಎಲ್ಲೆಲ್ಲೂ ಆನಂದವೇ ಅನುಭವಕ್ಕೆ ಬರುತ್ತಿರುತ್ತದೆ. ಈ ಉಪದೇಶ ದತ್ತಾತ್ರೇಯನ ಕಲ್ಪನೆಯಲ್ಲಿ ಸ್ಪಷ್ಟವಾಗಿ ಹರಳುಗಟ್ಟಿದೆ. ಅವಧೂತನಾದವನಿಗೆ ಯಾವುದರ ಬಗ್ಗೆ ದ್ವೇಷವೂ ಇರದು, ಪ್ರೀತಿಯೂ ಇರದು. ಇಂಥ ಜ್ಞಾನಿಯೇ ನಮಗೂ ನಮ್ಮ ಜೀವನಕ್ಕೂ ದಿಟವಾದ ಬೆಳಕನ್ನು ಕಾಣಿಸಬಲ್ಲ. 

ADVERTISEMENT

ಅವಧೂತ ದತ್ತಾತ್ರೇಯ ಎತ್ತಿಹಿಡಿಯುವ ಜ್ಞಾನದ ಸ್ವರೂಪವೂ ವಿಶಿಷ್ಟವಾದುದು; ಈ ಜ್ಞಾನಕ್ಕೆ ಯಾವುದೇ ಜಾತಿ, ದೇಶ, ಕಾಲ, ಆಶ್ರಮ, ಕುಲಗಳ ಹಂಗು ಇರದು. ಇದನ್ನು ‘ಅವಧೂತಗೀತೆ’ಯಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಇಂಥ ಜ್ಞಾನವೇ ಬ್ರಹ್ಮಜ್ಞಾನ; ಇದೇ ಅಖಂಡವಾದ ಆನಂದಸ್ವರೂಪ. ಈ ಆನಂದವೇ ದತ್ತಾತ್ರೇಯನ ಶಾಶ್ವತಸ್ಥಿತಿ.

ಭಾರತೀಯ ದರ್ಶನ ಪರಂಪರೆಯಲ್ಲಿ ಹತ್ತುಹಲವು ಧಾರೆಗಳಿವೆ; ಪರತತ್ತ್ವವನ್ನು ಒಪ್ಪದ, ಕೇವಲ ಪ್ರತ್ಯಕ್ಷ ಪ್ರಪಂಚವನ್ನಷ್ಟೆ ಒಪ್ಪುವ ಚಾರ್ವಾಕ ದರ್ಶನದಿಂದ ಮೊದಲಾಗಿ, ಪ್ರತ್ಯಕ್ಷವಾಗಿ ಕಾಣುವ ಜಗತ್ತನ್ನೇ ‘ತೋರಿಕೆ’ ಎಂದು ಸಾರುವ ವೇದಾಂತ ದರ್ಶನದ ತನಕ ಭಾರತೀಯ ತಾತ್ತ್ತಿಕತೆ ಅರಳಿದೆ. ಈ ಎಲ್ಲ ಧಾರೆಗಳ ನಡುವೆ ಕಾಣಿಸಿಕೊಂಡಿರುವ ಅವಧೂತತತ್ತ್ವಕ್ಕೆ ಹತ್ತುಹಲವು ವಿಶೇಷತೆಗಳಿವೆ. ಭಕ್ತಿಯನ್ನೂ ಜ್ಞಾನವನ್ನೂ ಎತ್ತಿಹಿಡಿಯುವ ಈ ತಾತ್ತ್ವಿಕತೆಯ ಅನುಸಂಧಾನ ಸುಲಭ ಎಂದರೆ ಸುಲಭ, ಕಠಿಣ ಎಂದರೆ ಕಠಿಣ! ಭಜನೆ, ಜಪ, ಧ್ಯಾನಗಳಿಗೂ ಈ ಮಾರ್ಗದಲ್ಲಿ ಅವಕಾಶಗಳುಂಟು; ಕೇವಲ ಜ್ಞಾನಮಾರ್ಗದಲ್ಲಿಯೂ ಮುಂದುವರೆಯಬಹುದು. ಸಗುಣೋಪಾಸನೆ ಮತ್ತು ನಿರ್ಗುಣೋಪಾಸನೆ – ಎರಡರ ಸಮನ್ವಯವನ್ನು ಅವಧೂತ ಪರಂಪರೆಯಲ್ಲಿ ಕಾಣಬಹುದು.