ADVERTISEMENT

ದೀಪವೇ ಮನದ ಚೈತನ್ಯ: ಜೀವನ ಬೆಳಗುವ ದೀಪವೇ ನಿನಗೆ ನಮನ

ಉಮಾ ಅನಂತ್
Published 20 ಅಕ್ಟೋಬರ್ 2025, 10:26 IST
Last Updated 20 ಅಕ್ಟೋಬರ್ 2025, 10:26 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ದೀಪಾವಳಿ ಹಬ್ಬ ಆಚರಣೆ, ವೈವಿಧ್ಯತೆಯಲ್ಲಿ ಭಿನ್ನವಾಗಿದ್ದರೂ ಎಲ್ಲದರ ಹಿಂದಿನ ಉದ್ದೇಶ ಅಜ್ಞಾನ ಕಳೆದು ಜ್ಞಾನದ ಸೆರಗನ್ನು ಹೊದೆಯುವುದೇ ಆಗಿದೆ. ದೀಪಾವಳಿ ಎಂದರೇ ಪುಳಕ. ಹಬ್ಬದ ಆಚರಣೆಯ ಸುತ್ತ ಗಿರಕಿ ಹೊಡೆಯುವ ಈ ಬರಹ, ದೀಪಾವಳಿ ವೈಭವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದೆ.

ದೀಪಾವಳಿ.. ಎಲ್ಲೆಲ್ಲೂ ಬೆಳಕು, ಜ್ಞಾನದ ಹರಿವು, ಒಲವಿನ ಮೆರುಗು, ಮನೆಮಂದಿಯ ಸಮಾಗಮ, ಒಟ್ಟಿನಲ್ಲಿ ಸಂಭ್ರಮದ ಪರಾಕಾಷ್ಠೆ ಈ ಹಬ್ಬದ ವಿಶೇಷ. ‘ದೊಡ್ಡ ಹಬ್ಬ’ ಎಂದೇ ಖ್ಯಾತಿಯಾದ ಈ ಹಬ್ಬ ಎಲ್ಲರಿಗೂ ಪುಳಕ, ಸಂಭ್ರಮವೇ. ಕತ್ತಲೆ ಎಂಬ ಅಜ್ಞಾನವನ್ನು ಕಳೆದು ಜ್ಞಾನದ ಬೆಳಕನ್ನು ಬಿಂಬಿಸುವ ದೀಪಾವಳಿ ಕಾರ್ತೀಕ ಮಾಸದಲ್ಲಿ ಬರುತ್ತಿದ್ದು, ಸಡಗರ–ಸಂತಸದ ಸೆರಗು ಹೊದೆಸುತ್ತದೆ. ದೀಪಾವಳಿ ಹಬ್ಬ ಕುಟುಂಬ ಸೌಖ್ಯವನ್ನು ಬೆಸೆಯುವ ಸಮಯ. ದೂರದೂರಿಗೆ, ವಿದೇಶಗಳಿಗೆ, ಉದ್ಯೋಗ ನಿಮಿತ್ತ, ಓದುವ ಸಲುವಾಗಿ ಹೋಗಿರುವ ಮಕ್ಕಳು ಒಂದೆಡೆ ಸೇರಲು ದೊಡ್ಡ ಹಬ್ಬ ಒಂದು ನೆಪ. ಶುಭಾಶಯ ವಿನಿಮಯ, ಪ್ರೀತಿ–ವಾತ್ಸಲ್ಯದ ಪ್ರತೀಕವಾಗಿ ಸೀರೆ, ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಇದೇ ಹಬ್ಬದಲ್ಲಿ.

ADVERTISEMENT

ಪ್ರಜಾವಾಣಿ ಚಿತ್ರ

ಮೂರು ದಿನ ನಡೆಯುವ ಈ ಹಬ್ಬದಲ್ಲಿ ಇರುವಷ್ಟು ವೈವಿಧ್ಯ ಬಹುಶಃ ಬೇರೆ ಯಾವ ಹಬ್ಬಗಳಲ್ಲೂ ಕಾಣಸಿಗದು. ನರಕ ಚತುರ್ದಶಿಗೂ ಮುನ್ನ ಬರುವ ಧನ್‌ತೆರಾಸ್ ಎಂದರೆ ಚಿನ್ನ ಕೊಳ್ಳುವ ಹಬ್ಬ, ಅದಾಗಿ ಹಳ್ಳಿಗಳಲ್ಲಿ ಬಿಸಿನೀರಿನ ಹಂಡೆಗೆ ನೀರು ತುಂಬುವ ಸಂಭ್ರಮ. ಮರುದಿನ ಬೆಳಿಗ್ಗೆ ಎಂದರೆ ನರಕ ಚತುರ್ದಶಿ ದಿನ ಮುಂಜಾನೆ ಅಭ್ಯಂಜನ. ಇದನ್ನು ಕೆಲವು ಕಡೆಗಳಲ್ಲಿ ದೀಪಾವಳಿಯ ‘ಮಕ್ಕಳ ಹಬ್ಬ’ ಎಂದೂ ಆಚರಿಸುವುದಿದೆ. ಮುಂದೆ ಹಬ್ಬ ವೈವಿಧ್ಯಮಯವಾಗಿ ಸಾಗುತ್ತದೆ.

ಮನೆ ಮುಂದೆ ಹಣತೆಗಳ ಸಾಲು, ಆಕಾಶ ಬುಟ್ಟಿಯೊಳಗೆ ದೀಪ, ಮನೆಯೊಳಗೆ ದೀಪ ಜ್ಯೋತಿ ಬೆಳಗಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಎಣ್ಣೆ ದೀಪ ಹಚ್ಚಿದರೆ ಇನ್ನೂ ಕೆಲವರು ಕ್ಯಾಂಡಲ್ಸ್, ಅರೋಮಾ ಕ್ಯಾಂಡಲ್ಸ್, ಲಾಟೀನುಗಳಿಂದಲೂ ದೀಪ ಬೆಳಗುತ್ತಾರೆ. ಮನೆಯ ಮುಂದೆ ಸಾರಿಸಿ ರಂಗು ರಂಗಾದ ರಂಗೋಲಿ ಹಾಕಿ ಅದರ ಮೇಲೆ ದೀಪಗಳನ್ನು ಜೋಡಿಸಿದ ವಿನ್ಯಾಸ ನೋಡುವುದೇ ಕಣ್ಣುಗಳಿಗೆ ಹಬ್ಬ. ಮಧ್ಯಾಹ್ನ ಭರ್ಜರಿ ಸಿಹಿಯೂಟವಾದರೆ ಸಂಜೆಯ ವೇಳೆ ಪೂಜೆಯ ಬಳಿಕ ಪಟಾಕಿಗಳ ಸದ್ದು. ಇಡೀ ಹಬ್ಬದ ಸಂಭ್ರಮ ಅಡಗಿರುವುದು ಸಿಡಿಮದ್ದು, ಪಟಾಕಿಗಳೊಂದಿಗೇ. ಮಕ್ಕಳಿಗಂತೂ ಪಟಾಕಿ ಹಚ್ಚುವ ಖುಷಿಯೋ ಖುಷಿ.

ಪ್ರಜಾವಾಣಿ ಚಿತ್ರ

ಹಬ್ಬ ಒಂದು: ಆಚರಣೆ ಹಲವು

ದೀಪಾವಳಿಯನ್ನು ಪ್ರಾದೇಶಿಕವಾಗಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಕರಾವಳಿ, ಮಲೆನಾಡುಗಳಲ್ಲಿ ನರಕಚತುರ್ದಶಿ, ಗೋಪೂಜೆ, ಲಕ್ಷ್ಮೀಪೂಜೆ, ಅಂಗಡಿಪೂಜೆ, ಬಲಿವೇಂದ್ರಪೂಜೆಯನ್ನು ಮೂರು ದಿನಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವುದು ಪದ್ಧತಿ. ಉತ್ತರ ಕರ್ನಾಟಕ ಭಾಗದ ಆಚರಣೆ ಬೇರೆ ರೀತಿಯದು. ಶಿವಮೊಗ್ಗ ಕಡೆಗಳ ಹಳ್ಳಿಗಳಲ್ಲಿ ದೀಪಾವಳಿ ‘ಹಟ್ಟಿ ಹಬ್ಬ’ ಎಂದೇ ಖ್ಯಾತಿ. ಹಿಂದೂಗಳು ಈ ರೀತಿಯ ಆಚರಣೆಯಲ್ಲಿ ಸಂಭ್ರಮಿಸಿದರೆ, ಜೈನರು ದೀಪಾವಳಿಯನ್ನು ವಿಭಿನ್ನವಾಗಿಯೇ ಆಚರಿಸುವುದು ರೂಢಿಯಲ್ಲಿದೆ. ಇದು ಮಹಾವೀರನ ಅಂತಿಮ ವಿಮೋಚನೆಯನ್ನು ಸೂಚಿಸುತ್ತದೆ ಎನ್ನುತ್ತದೆ ಜೈನ ಸಂಸ್ಕೃತಿ. ಸಿಖ್‌ ಸಮುದಾಯದವರು ದೀಪಾವಳಿಯನ್ನು ಗುರು ಹರಗೋವಿಂದರನ್ನು ಮೊಘಲ್‌ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಗುರುತಿಸಲು ಮಾಡುವ ಆಚರಣೆ ಇದಾಗಿದೆ. ಇದನ್ನು ಅವರು ‘ಬಂಡಿ ಛೋರ್‌ ದಿವಸ್‘ ಎಂದು ಕರೆಯುವರು.

ಬೌದ್ಧರು ದೀಪಾವಳಿಯ ದಿನದಂದು ವಿಶೇಷವಾಗಿ ಲಕ್ಷ್ಮಿಪೂಜೆ ಮಾಡುತ್ತಾರೆ. ಇದನ್ನು ಬೌದ್ಧರು ‘ಸ್ವಾಂತಿ ಹಬ್ಬ’ ಎಂದು ಕರೆಯುತ್ತಾರೆ. ಬಾಂಗ್ಲಾದಲ್ಲಿರುವ ಹಿಂದೂ ಸಮುದಾಯದವರು ಕಾಳಿದೇವಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಸಂಭ್ರಮಿಸುತ್ತಾರೆ. ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರೂ ದೀಪಾವಳಿ ಹಬ್ಬವನ್ನು ಅವರವರ ಭಾವಕ್ಕೆ ಅನುಗುಣವಾಗಿ ಆಚರಿಸುವುದು ಇದೆ.

ಹಬ್ಬದ ದಿನಗಳಲ್ಲಿ ರಂಗೋಲಿ, ತೋರಣ, ಚಿನ್ನ ಖರೀದಿ, ಹೊಸ ಬಟ್ಟೆ, ಪೂಜೆ, ಸಿಹಿಯೂಟ, ಹಣತೆಗಳ ಸಾಲು, ಪಟಾಕಿ ಇಷ್ಟೆಲ್ಲ ಇದ್ದರೂ ಹಾಡಿನ ಮಧುರಾತಿಮಧುರ ಅನುಭೂತಿ ಇಲ್ಲದಿದ್ದರೆ ಹೇಗೆ? ಇದಕ್ಕಾಗಿ ಕವಿಗಳು, ವಾಗ್ಗೇಯಕಾರರು ದೀಪಾವಳಿ ಹಬ್ಬದ ಮೇಲೆಯೇ ಹಲವಾರು ಹಾಡುಗಳನ್ನು, ಕೀರ್ತನೆಗಳನ್ನು ಬರೆದಿದ್ದಾರೆ. ಹಬ್ಬದ ಸೊಬಗನ್ನು ವರ್ಣಿಸುವ ಹಾಡಿನಲ್ಲಿ ಸಂಭ್ರಮದ ಸಾರವೇ ಅಡಗಿದೆ. ಇದೇ ರೀತಿಯಲ್ಲಿ ಈ ದೀಪಾವಳಿ ಎಲ್ಲರ ಮನೆ ಮನ ಬೆಳಗಲಿ, ಬದುಕು ಬಂಗಾರವಾಗಲಿ ಎಂಬುದು ಎಲ್ಲರ ಹಾರೈಕೆಯೂ ಕೂಡ ಅಲ್ಲವೇ? ಹ್ಯಾಪಿ ಎನರ್ಜೆಟಿಕ್ ದೀಪಾವಳಿ ಟು ಯು ಆಲ್!