ADVERTISEMENT

ಸೌಹಾರ್ದದ ಸವಿಯುಣಿಸುವ ಹಬ್ಬಗಳ ಔತಣ

ಎಸ್.ರಶ್ಮಿ
Published 29 ಮಾರ್ಚ್ 2025, 23:42 IST
Last Updated 29 ಮಾರ್ಚ್ 2025, 23:42 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

‘ಭೇಂವು ಕುಡಿಯಲು ಬನ್ನಿ ಅಂತ ಔತಣಕ್ಕೆ ಕರೆಯಲು ಹೊರಟಿರುವೆ. ಇವೊತ್ತು ಹಿಂಗ್ಮಾಡಿ, ನಮ್ಮನೇಲಿ ರೋಜಾ ಬಿಡಲು ಬನ್ನಿ, ನಾಳೆ ನಾನೂನು ಈದ್‌ನ ಔತಣಕ್ಕೆ ನಿಮ್ಮಲ್ಲಿಗೆ ಬರುವೆ’.

ಇಂಥ ಸೌಹಾರ್ದದ ಮಾತು ಕೇಳಿಬರುವುದು ಕಲ್ಯಾಣ ಕರ್ನಾಟಕದಲ್ಲಿ. ಅಲ್ಲಿನ ಇಂಥ ಸೌಹಾರ್ದ ಬದುಕಿನ ಹದವೇ ಆಗಿದೆ. ಬರಿಯ ಪದವಾಗಿ ಉಳಿದಿಲ್ಲವಿದು. ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ ಇದೇ ಮೊದಲ ಸಲ ಒಟ್ಟೊಟ್ಟಿಗೆ ಬಂದಿಲ್ಲ. ಹಲವು ಹಬ್ಬಗಳೊಂದಿಗೆ ರಂಜಾನ್‌ ಮಾಸಾಂತ್ಯವಾಗಿ ಒಟ್ಟೊಟ್ಟಿಗೆ ಈದ್‌ ಆಚರಿಸುವುದು ಹೊಸದೇನಲ್ಲ. ಆದರೆ ಎರಡು ವಿಭಿನ್ನ ನಂಬಿಕೆಗಳಿರುವ ಸಮುದಾಯಗಳು, ಮಾನವರಾಗಿ, ಹಂಚಿಕೊಂಡು ಉಣ್ಣುವ ಹಬ್ಬ ಆಚರಿಸುವುದೇ ವಿಭಿನ್ನ.

ಭೇಂವು ಅನ್ನೋದು ಬೇವು ಪದದ ಜನಪದೀಯ ರೂಪ. ಇಲ್ಲಿ ಜೀವನದ ಸಿಹಿಕಹಿಗಳನ್ನೆಲ್ಲ ಒಟ್ಟುಗೂಡಿಸಿ ಸೋಮರಸದಂಥ ಬೇವಿನ ಪಾನಕ ಮಾಡುತ್ತಾರೆ. ಬದುಕಿನಲ್ಲಿ ಯಾವುದೂ ದೊಡ್ಡದಲ್ಲ, ಯಾವುದೂ ಸಣ್ಣದಲ್ಲ ಎಂಬಂತೆ ಎಳ್ಳಿನಿಂದ ಕಲ್ಲಂಗಡಿಯವರೆಗೂ ಎಲ್ಲವನ್ನೂ ಹೆಚ್ಚಿಕೊಚ್ಚಿ ಪಾನಕ ಮಾಡಲಾಗುತ್ತದೆ. 

ADVERTISEMENT

ಇದಕ್ಕೂ ಒಂದು ಕ್ರಮ ಇದೆ. ಹಬ್ಬಕ್ಕೆ ಮೂರುದಿನ ಮೊದಲು ಹರವಿ ತಂದು, ತೊಳೆದು ನೀರು ತುಂಬಿಸಿ ಇಡುವುದು, ಪ್ರತಿದಿನವೂ ಬದಲಿಸುವುದು. ಮನೆಯಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಮಾವಿನ ಅಥವಾ ಬೇವಿನಮರದ ಕೆಳಗೆ ಮರಳಿನ ಗುಡ್ಡೆ ಹಾಕಿ, ಮಡಕೆ ಇಟ್ಟು ಕೆಂಪು ಅಂಗವಸ್ತ್ರ ಹೊದಿಸಿಡುತ್ತಾರೆ. ಇದು ಮೊದಲ ಹಂತ.

ಎಳ್ಳು, ಒಣಕೊಬ್ಬರಿ, ಉತ್ತುತ್ತಿ, ಬಾದಾಮಿ, ಗೋಡಂಬಿ, ಪಿಸ್ತಾ, ಕುಂಬಳ ಬೀಜ, ಕರಬೂಜಿನ ಬೀಜ, ಚಿರೊಂಜಿ, ಸೋಂಪು, ಗಸಗಸೆ ಹುರಿಗಡಲೆ ಇವೆಲ್ಲವನ್ನೂ ಹದವಾಗಿ ಹುರಿಯಬೇಕು. ಸಣ್ಣ ಉರಿಯಿಟ್ಟು, ಒಂದೊಂದಾಗಿ ಬಾಣಲೆಗೆ ಹಾಕಿ ಬಟ್ಟೆಯಿಂದ ಕೈ ಆಡಿಸುತ್ತ ಹುರಿಯಬೇಕು. ಪ್ರತಿಯೊಂದಕ್ಕೂ ಅದರದ್ದೇ ಬಿಸಿಬೇಕು. ಯಾವುದಕ್ಕೆ ಎಷ್ಟು ಬಿಸಿಬೇಕು ಅನ್ನುವುದೇ ಅನುಭವ. ಹೇಗೆ ಹುರಿಯಬೇಕು, ಘಮ್ಮನಿಸಬೇಕು ಎಂಬುದು ಅದರೊಳಗೇ ತನ್ಮಯರಾಗಿ ಮಾಡುವ ಕೆಲಸ. 

ಪೈನಾಪಲ್, ಬಾಳೆಹಣ್ಣು, ಸೇಬು, ಕಲ್ಲಂಗಡಿ, ಕರಬೂಜು, ದ್ರಾಕ್ಷಿ ಇವನ್ನೆಲ್ಲ ಸಣ್ಣದಾಗಿ ಕತ್ತರಿಸಬೇಕು. ದಾಳಿಂಬೆ ಕಾಳು ಹಾಕಬೇಕು. ಒಣಕೊಬ್ಬರಿ ಹೆರೆಯಬೇಕು. ಮಾವಿನಕಾಯಿ, ಸೌತೆಕಾಯಿಗಳನ್ನೂ ಹೆರೆದಿಡಬೇಕು. ಏಲಕ್ಕಿ, ಲವಂಗ, ದಾಲ್ಚಿನ್ನಿಗಳನ್ನು ಕುಟ್ಟಿ ಪುಡಿ ಮಾಡಿಕೊಂಡಿರಬೇಕು. ಹೊಸ ಹುಣಸೆಹಣ್ಣು ತಂದು ನೀರೊಳಗೆ ಹಾಕಿ ಕಿವುಚಿ ರಸ ಹಿಂಡಿ, ಹೊಸ ಹರವಿಯೊಳಗೆ ಆ ರಸವನ್ನು ಹಾಕಬೇಕು. ಮತ್ತೆ ಹೊಸ ಬೆಲ್ಲವನ್ನು ತಂದು ಮೆದುವಾಗಿ ಕುಟ್ಟಿ ಅಂಟಂಟೆನಿಸುವಾಗ ಅದನ್ನೂ ಹರವಿಗೆ ಹಾಕಿ ಕಲಕಬೇಕು. ಮುಂದೆ ತಣ್ಣೀರು ಹಾಕಿ. ಹೆಚ್ಚಿಟ್ಟ ಹಣ್ಣನ್ನೆಲ್ಲ ಅದರೊಳಗೆ ಕಲಸಬೇಕು. ಇವೆಲ್ಲ ತಣ್ಣೀರಿನೊಳಗ ತೇಲಾಡುಮುಂದ ಹುರಿಗಡಲೆ ಪುಡಿ ಮಾಡಿ, ಅದಕ್ಕ ಸಕ್ಕರೆ, ಒಣಕೊಬ್ಬರಿ, ಒಣಹಣ್ಣುಗಳನ್ನೆಲ್ಲ ಬೆರೆಸಿ, ಅವನ್ನೂ ಈ ಹರವಿಗೆ ಹಾಕಬೇಕು. ಎಳ್ಳು, ಗಸಗಸೆ ಎರಡೂ ಹೊಟ್ಟೆಯುಬ್ಬಿಸಿಕೊಂಡು ತೇಲಾಡುವಾಗ ಮನೆ ತುಂಬ ಕರಬೂಜು ಮತ್ತು ಸೋಂಪಿನ ಕಾಳುಗಳ ಘಮ ತೇಲಿಬರುತ್ತದೆ. ಇನ್ನು ಬೇವಿನ ಹೂವಿನ ಎಸಳುಗಳನ್ನೂ ಇದಕ್ಕೆ ಹಾಕಿದರೆ ಬೇವು ತಯಾರು. 

ಹುಣಸೆಹುಳಿ, ಹಣ್ಣುಗಳ ಮಾಧುರ್ಯ, ಒಣಹಣ್ಣುಗಳ ಮಂದರುಚಿ ಎಲ್ಲವೂ ಬದುಕನ್ನು ಸಮ್ಮಿಳಿಸಿದಂತಿರುತ್ತದೆ ಬೇವು. ಬೇವನ್ನು ಎಲ್ಲರೊಂದಿಗೆ ಹಂಚಿಕುಡಿಯುವ ಹಿಂದಿನ ತಾತ್ಪರ್ಯ ಇಷ್ಟೇನೆ, ಬದುಕಿನ ಎಲ್ಲ ಸುಖದುಃಖಗಳಲ್ಲಿಯೂ ಒಂದಾಗಿ ಬದುಕಬೇಕು. ಹುಳಿಯೊಗರು ಮಾಧುರ್ಯದ ಈ ಪಾನಕ ಕುಡಿಯಲು ಪ್ರತಿಯೊಬ್ಬರೂ ತಮ್ಮ ಬಂಧು ಬಳಗಕ್ಕೆ ಕರೆಯುತ್ತಾರೆ. ಕ್ಯಾನುಗಳಲ್ಲಿ ಹಂಚುತ್ತಾರೆ. ಜಾತಿಭೇದವಿಲ್ಲದೇ ಈ ವಿನಿಮಯ ನಡೆಯುತ್ತದೆ. ಪ್ರತಿಯೊಬ್ಬರ ಸುಖದುಃಖಗಳಲ್ಲಿಯೂ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಎಲ್ಲರಿಗೂ ಎಲ್ಲರ ಮನೆಗೆ ಹೋಗಲಾಗದು. ಆದರೆ ಮನೆಯಿಂದ ಒಬ್ಬೊಬ್ಬರು ಒಂದೊಂದು ಮನೆಯನ್ನು ಹಂಚಿಕೊಳ್ಳುತ್ತಾರೆ. ಕೆಲವರ ಮನೆಯ ಬೇವಿಗೆ ಹುಣಸೆಹಣ್ಣು ಮುಂದಾಗುತ್ತದೆ. ಇನ್ನೂ ಕೆಲವರ ಮನೆಯ ಬೇವಿಗೆ ಬೆಲ್ಲವೇ ಮೇಲುಗೈಯಾಗಿರುತ್ತದೆ. ಬೆಳಗಿನಿಂದ ಬೇವು ಕುಡಿಕುಡಿದು ಕಣ್ಮುಚ್ಚಿದರೆ ನಿದ್ದೆಗೊಂದು ನಿತ್ಯಮರಣದಂಥ ಅನುಭವ ದಕ್ಕುತ್ತದೆ. 

ಸಾಂದರ್ಭಿಕ ಚಿತ್ರ 

ಶೀರ್‌ ಖುರ್ಮಾ ಸವಿ

ಈ ಬೇವು ಕುಡಿಯುವ ಸಂಭ್ರಮಕ್ಕೆ ರಂಜಾನ್‌ ತಿಂಗಳಿನಲ್ಲಿ ಕಳೆ ಏರುತ್ತದೆ. ಇಫ್ತಾರ್‌ ಸಮಯದಲ್ಲಿ ತಮ್ಮ ಆತ್ಮೀಯರಿಗೆ ಕರೆದು ಔತಣ ನೀಡುತ್ತಾರೆ. ಬಿಳಿ ಶುಭ್ರ ಬಟ್ಟೆ ಧರಿಸಿ ಬರುವ ಮುಸ್ಲಿಂ ಬಾಂಧವರು ಬೇವನ್ನು ಸವಿಯುತ್ತಲೇ ತಮ್ಮ ಮನೆಗೆ ಶೀರ್‌ ಖುರ್ಮಾ ಸವಿಯಲು ಔತಣ ನೀಡುತ್ತಾರೆ.

ಔತಣವನ್ನು ದಾವತ್‌ ಎಂದು ಕರೆಯಲಾಗುತ್ತದೆ. ಹನ್ನೆರಡು ಜನಕ್ಕೂ ಮೀರಿದ ಬಂಧುಗಳೆಲ್ಲ ಒಟ್ಟುಗೂಡಿ ಊಟ ಮಾಡುವುದಕ್ಕೆ ದಾವತ್‌ ಎಂದು ಕರೆಯಲಾಗುತ್ತದೆ. ಯಾರಾದರೂ ದಾವತ್‌ಗೆ ನಡದೀವಿ ಅಂತ ಹೇಳಿದರೆ ಅಂದು ಅವರ ಮನೇಲಿ ಒಲೆ ಹಚ್ಚಿಲ್ಲ ಎಂದೇ ಅರ್ಥ. 

ಹೊಸಿಲಿಗೆ ದಾವತ್‌ ಅದ ಅಂದ್ರೆ ಮನೇಲಿರುವ ಎಲ್ಲರೂ ಊಟಕ್ಕೆ ಬರಬೇಕು. ಬರಲಾಗದ ಸ್ಥಿತಿಯಲ್ಲಿರುವ ಮುಪ್ಪಾವಸ್ಥೆಯ ಹಿರಿಯರಿದ್ದರೆ, ಬಾಣಂತಿಯರಿದ್ದರೆ ಅವರಿಗೆ ಊಟವನ್ನೂ ಕಟ್ಟಿಕೊಡುತ್ತಾರೆ. ಒಂದರ್ಥದಲ್ಲಿ ‘ನೊ ಕಿಚನ್‌ ಡೇ’ ಅವೊತ್ತು. 

ಇನ್ನು ಈದ್‌ ಉಲ್‌ ಫಿತ್ರ್‌ನ ದಾವತ್‌ಗಳ ಸ್ವರೂಪವೇ ಬೇರೆ. ಇಲ್ಲಿ ಸಸ್ಯಾಹಾರಿಗಳ ಮನೆಗೆ ಕಿಚ್ಡಿ (ಹೆಸರುಬೇಳೆ ಮಿಶ್ರಿತ ಅನ್ನ. ಅದು ಹೋಟೆಲ್‌ಗಳಲ್ಲಿರುವಂತೆ ತಿಳಿಯಾಗಿರುವುದಿಲ್ಲ. ಉದುರುದಾಗಿರುತ್ತದೆ.) ಮಿರ್ಚಿಕಾ ಸಾಲನ್‌ ಎಳ್ಳುತುಂಬಿದ ಹಸಿಮೆಣಸಿನ ಓಗರ ಮತ್ತು ಶೀರ್‌ ಖುರ್ಮಾದ ಬುತ್ತಿ ಬರುತ್ತದೆ. ಮೇಜುವಾನಿಯಲ್ಲಿ ಸಸ್ಯಾಹಾರ, ಮಾಂಸಾಹಾರಗಳೆರಡೂ ಇರುತ್ತವೆ. ಹಬ್ಬದ ನಮಾಜಿನ ನಂತರ ಬಂದು ಹಿರಿಯರ ಆಶೀರ್ವಾದ ಪಡೆದು, ಸಿಹಿ ಸವಿದರೆ ಈ ಹಂಚುವ ಕೆಲಸ ಆರಂಭವಾಗುತ್ತದೆ.  

ಇಲ್ಲಿಯೂ ಹಬ್ಬಕ್ಕೆ ಎರಡು ದಿನಗಳಿಗೆ ಮೊದಲೇ ಒಣಹಣ್ಣುಗಳನ್ನು ನೆನೆಸಿಟ್ಟು, ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಲಾಗುತ್ತದೆ. ಆಮೇಲೆ ಅವನ್ನೂ ಹದವಾಗಿ ಹುರಿಯಲಾಗುತ್ತದೆ. ಮಂದ ಉರಿಯಲ್ಲಿ ಹಾಲು ಕಾಯಿಸಲು ಇಟ್ಟು, ಖರ್ಜೂರವನ್ನು ಕುದಿಯಲು ಹಾಕಲಾಗುತ್ತದೆ. ಹಾಲು ಕಾದು, ಕುದಿಯುವಾಗ ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಒಂಚೂರು ಚಕ್ಕೆಯ ಪುಡಿಯನ್ನೂ ಹಾಕಲಾಗುತ್ತದೆ. ಒಂದನೆಯ ಕುದಿ ಬಂದ ನಂತರ ಅದಕ್ಕೆ ಒಣಕೊಬ್ಬರಿ, ಹುರಿದ ಗಸಗಸೆಯನ್ನು ಹಾಕಿ ಮತ್ತೊಂದು ಕುದಿ ಬರುವಂತೆ ಕುದಿಸಲಾಗುತ್ತದೆ. ಹಾಲು ಮಂದವಾಗಿ ಒಣ ಮಸಾಲೆಯ ಘಮ ಮಂದ್ರದಲ್ಲಿ ಮನೆ ತುಂಬ ಹಬ್ಬದ ಸಂಭ್ರಮದಂತೆ ಹರಡುವಾಗ ಒಲೆ ಆರಿಸಿ ಮೇಲೆ ಶ್ಯಾವಿಗೆಯನ್ನು ಹಾಕಿ ಮುಚ್ಚಿಡಲಾಗುತ್ತದೆ. ಹಾಲು ತಣಿದ ನಂತರವೇ ಸಕ್ಕರೆ ಬೆರೆಸುತ್ತಾರೆ. ಮೇಲೆ ಹುರಿದ ಒಣ ಹಣ್ಣುಗಳನ್ನು ಹಾಕಿ, ಶೀರ್‌ ಖುರ್ಮಾ ಕೊಡಲಾಗುತ್ತದೆ. ಶೀರ್‌ ಎಂಬುದು ಕ್ಷೀರದ ಅಪಭ್ರಂಶ. ಖುರ್ಮಾ ಎಂದರೆ ಈ ಎಲ್ಲ ಒಣಹಣ್ಣುಗಳ ಮಿಶ್ರಣ. ಹಾಲು ಮತ್ತು ಒಣಹಣ್ಣುಗಳ ಮಿಶ್ರಣದ ಶೀರ್‌ ಖುರ್ಮಾ, ಸುರಖುಂಬಾ ಎಂದು ಕರೆಯಲಾಗುವ ಈ ಖಾದ್ಯಕ್ಕೆ ಎಲ್ಲರೂ ಕಾಯುತ್ತಾರೆ.

ಈ ಹಂಚುವ, ಉಣ್ಣುವ, ತಿನ್ನುವ ವಿಷಯಗಳು ಒಂದು ಕಡೆಯಾದರೆ, ಇನ್ನೊಂದೆಡೆ ಇವುಗಳ ನಂತರ ಜನರು ಒಟ್ಟಾಗಿ ಬದುಕುವ ಸಂಭ್ರಮವೇ ಇನ್ನೊಂದು ತೆರನಾದುದು. ಬಂದ ಡಬ್ಬಿಗಳನ್ನು ಮರಳಿಸುವಾಗ ಖಾಲಿ ಕೊಡಬಾರದು. ಮತ್ತದೇ ಉಂಡೆ, ಚಕ್ಕುಲಿಗಳ ವಿನಿಮಯ. ತಿಂಡಿ ತಿನಿಸು ಮಾಡಲಾಗದಿದ್ದಲ್ಲಿ ‘ಸೀದಾ’ ಕೊಡುವುದು ಎಂಬ ಸಂಪ್ರದಾಯವೂ ಇದೆ. ಅಕ್ಕಿ, ಬೆಲ್ಲವನ್ನು ಹಾಕಿ ಕೊಡಲಾಗುತ್ತದೆ. 

ಉಣ್ಣುವಾಗ ಕೇವಲ ಆಹಾರ ಹೊಟ್ಟೆಗಿಳಿಯುವುದಿಲ್ಲ. ಅನ್ನದ ಋಣವೊಂದು ನಮ್ಮ ಮೇಲೆ ಇರುತ್ತದೆ ಎಂಬ ಪ್ರಜ್ಞೆ ಇಲ್ಲಿಯವರಿಗೆ ಸದಾ ಇರುತ್ತದೆ. ‘ಜಿಸ್‌ ದಾನೆ ಪೆ ಖಾನೆವಾಲೆ ಕಾ ನಮ್‌ ಹೈ, ದೇನೆ ವಾಲೆ ಕಾ ಭಿ ನಾಮ್‌ ಹೈ... ಖಾನೆವಾಲಾ ಇಜ್ಜತ್‌ ದೇನಿ ಚಾಹಿಯೆ, ದೇನೆವಾಲಾ ಪ್ಯಾರ್‌ ದೇನಿ ಚಾಹಿಯೆ’ ಅಂತ (ಯಾವ ಕಾಳಿನ ಮೇಲೆ ತಿನ್ನುವವರ ಹೆಸರಿದೆಯೋ, ಅದೇ ಕಾಳಿನ ಮೇಲೆ ಕೊಡುವವರ ಹೆಸರೂ ಇದೆ. ತಿನ್ನುವವರು ಗೌರವವನ್ನೂ, ಕೊಡುವವರು ಪ್ರೀತಿಯನ್ನೂ ಕೊಡಬೇಕು) ಎನ್ನುವುದು ಅಲ್ಲಿಯ ನಂಬಿಕೆ. ಅದನ್ನೇ ಪಾಲಿಸುತ್ತ ಬಂದಿರುವುದರಿಂದ ಸೌಹಾರ್ದವೆಂಬುದು ಅಲ್ಲಿ ಬರೀ ಪದವಲ್ಲ; ಬದುಕಿನ ಹದ.

ಸಾಂದರ್ಭಿಕ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.