ADVERTISEMENT

Eid Ul Fitr 2025: ಪ್ರೀತಿ, ಕರುಣೆಗಳ ಈದ್‌ ಉಲ್ ಫಿತ್ರ್‌

ಅಬ್ದುಲ್ ರಹಿಮಾನ್
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
ಈದ್
ಈದ್   

‘ಇಬ್ಬರು ಪರಸ್ಪರ ಹಸ್ತಲಾಘವ ಮಾಡಿದಾಗ ಮರದಿಂದ ಎಲೆಗಳು ಉದುರಿದಂತೆ ಪಾಪಗಳು ಕಳೆಯುತ್ತವೆ’ ಎನ್ನುವ ಪ್ರವಾದಿ ಮುಹಮ್ಮದರ ಮಾತು ‘ಈದ್‌ ಉಲ್ ಫಿತ್ರ್’ ಆಚರಣೆ ಹಿಂದಿನ ಉದ್ದೇಶವನ್ನು ಸಾರುತ್ತದೆ. ಸಹೋದರತೆ, ಉದಾರತೆ, ಮಾನವೀಯತೆ, ಸಮರ್ಪಣಾ ಮನೋಭಾವ ಮುಂತಾವುದಗಳೇ ಈ ಹಬ್ಬದ ರಂಗುಗಳು.

ಮಸೀದಿ, ಈದ್ಗಾಗಳಲ್ಲಿ ಯಾವುದೇ ತಾರತಮ್ಯ ಇಲ್ಲದೆ ಭುಜಕ್ಕೆ ಭುಜಕೊಟ್ಟು ನಿಂತು ಪ್ರಾರ್ಥಿಸುವುದು ಸಹೋದರತ್ವ ಹಾಗೂ ಏಕತೆಯ ಪ್ರತೀಕ. ಕೈ–ಮೈ ಜೋಡಿಸಿ ಶುಭಾಶಯ ವಿನಿಮಯ ಮಾಡಿಕೊಂಡು ಸ್ನೇಹವನ್ನು ‍ಪ್ರಕಟಿಸುವುದು ಹಬ್ಬದ ವಿಶೇಷ. ದ್ವೇಷ, ಅಸೂಯೆಗಳನ್ನು ಮರೆತು ಪರಸ್ಪರ ಕ್ಷಮಾಪಣೆ ನೀಡುವುದು, ಕೌಟುಂಬಿಕ ಸಂಬಂಧವನ್ನು ಗಟ್ಟಿಗೊಳಿಸುವುದು ಈ ಹಬ್ಬ ನೀಡುವ ಪ್ರಮುಖ ಸಂದೇಶ. ‘ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವವನು ಜನರಲ್ಲಿ ಉತ್ತಮನು’ ಎನ್ನುವುದು ಪ್ರವಾದಿಯವರು ಹೇಳಿಕೊಟ್ಟ ಪಾಠ. ಹಳೆಯ ವೈಷಮ್ಯಗಳನ್ನು ಮರೆತು, ಒಗ್ಗಟ್ಟನ್ನು ಬಲಪಡಿಸಲು ಪ್ರೇರೇಪಿಸುವ ಹಬ್ಬವೂ ಹೌದು.

ಪ್ರಾರ್ಥನೆಗೆ ಒಟ್ಟಾಗಿ ತೆರಳುವುದು, ಖುಷಿಯನ್ನು ಹಂಚಿಕೊಳ್ಳುವುದು, ದಾನ–ಧರ್ಮಗಳ ಮೂಲಕ ಬಡವರಿಗೆ ನೆರವಾಗುವುದು, ಅಬಲರಿಗೆ ಅನುಕಂಪ ತೋರುವುದು, ಅನಾಥರು, ವೃದ್ಧರು, ಅಶಕ್ತರ ಬಗ್ಗೆ ದಯಾಶೀಲರಾಗುವುದು – ಇವು ಈದ್ ಕಲಿಸಿಕೊಡುವ ಪಾಠಗಳು. ‘ನೆರೆಹೊರೆಯವರು ಹಸಿದಿರುವಾಗ ಹಬ್ಬ ಆಚರಿಸುವವನು ನನ್ನವನಲ್ಲ’ ಎನ್ನುವ ಪ್ರವಾದಿಯವರ ಮಾತಿನ ಹಿಂದೆ ಸಾಮಾಜಿಕ ಕಳಕಳಿಯ ಪಾಠ ಇದೆ. ಹಬ್ಬದ ದಿನ ಖುದ್ದು ಪ್ರವಾದಿಯವರು, ಮದೀನಾದ ಬೀದಿಗಳಲ್ಲಿ ತೆರಳಿ ಹಣ, ಬಟ್ಟೆಗಳನ್ನು ದಾನ ಮಾಡುತ್ತಿದ್ದರು. ನಿರ್ಲಕ್ಷಿತರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದರು. ಉಡುಗೊರೆ ನೀಡಿ ಸಂಬಂಧಗಳನ್ನು ಗಟ್ಟಿಗೊಳಿಸಿ ಎಂದು ಪ್ರವಾದಿಯವರು ಹೇಳಿದ್ದಾರೆ.

ADVERTISEMENT

ಒಂದು ಈದ್‌ನ ದಿನ ಬೆಳಿಗ್ಗೆ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ ಪ್ರವಾದಿಯವರ ಕಣ್ಣಿಗೆ ದುಃಖದಿಂದ ನಿಂತಿದ್ದ ಬಡವನೊಬ್ಬ ಕಣ್ಣಿಗೆ ಬಿದ್ದ. ವಿಚಾರಿಸಿದಾಗ, ಧರಿಸಲು ಬಟ್ಟೆಯಿಲ್ಲವೆಂದೂ, ಕುಟುಂಬಕ್ಕೆ ಆಹಾರವಿಲ್ಲವೆಂದೂ ಹೇಳಿದ. ಕೂಡಲೇ ಪ್ರವಾದಿಯವರು ಅವನಿಗೆ ಮೇಲಂಗಿಯನ್ನು ತೆಗೆದು ಕೊಟ್ಟರಲ್ಲದೆ, ಆಹಾರ–ಹಣದ ವ್ಯವಸ್ಥೆಯನ್ನೂ ಮಾಡಿ, ಅವನನ್ನು ಪ್ರಾರ್ಥನೆಗೂ ಕರೆದೊಯ್ದರು. ಆ ಮೂಲಕ ಹಬ್ಬದ ಸಂಭ್ರಮದಲ್ಲಿ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಬೇಕು; ಹೊಸ ಬಟ್ಟೆ, ಊಟ ಮಾತ್ರ ಹಬ್ಬದ ಸಂಭ್ರಮವಲ್ಲ; ಪ್ರೀತಿ, ಕರುಣೆಗಳು ಹಬ್ಬದ ಆಚರಣೆಯ ಉದ್ದೇಶ ಎನ್ನುವುದನ್ನು ತಿಳಿಸಿಕೊಟ್ಟರು. ಈದ್, ಪರಸ್ಪರ ಸಹಕಾರ, ಸಹಾನುಭೂತಿ ಪ್ರಕಟಣೆಯ ದಿನ ಕೂಡ.

‌‘ಉಪವಾಸವನ್ನು ಅಂತ್ಯಗೊಳಿಸುವ ಹಬ್ಬ’ ಎನ್ನುವುದು ಈದ್ ಉಲ್ ಫಿತ್ರ್‌ನ ಶಬ್ದಾರ್ಥ. ಈ ಹಬ್ಬ ಮುಸ್ಲಿಮರು ಅನುಭವಿಸಿದ ಆಧ್ಯಾತ್ಮಿಕ ಶುದ್ಧೀಕರಣದ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಒಂದು ತಿಂಗಳು ಉಪವಾಸ ಇದ್ದು, ಎಲ್ಲಾ ದುರ್ನಡತೆಗಳಿಂದ ದೇಹ ಹಾಗೂ ಆತ್ಮವನ್ನು ಶುಚಿಗೊಳಿಸಿದ ವ್ಯಕ್ತಿಯು ಆ ಹುರುಪನ್ನು ಮುಂದುವರಿಸಲು ಸಂಕಲ್ಪ ಮಾಡುವ, ಉಪವಾಸದಿಂದ ದಕ್ಕಿಸಿಕೊಂಡ ಆಧ್ಯಾತ್ಮಿಕ ಚೈತನ್ಯವನ್ನು ಸಂಭ್ರಮಿಸುವ ದಿನ. ಸ್ವೇಚ್ಛೆಯಿಂದ ದೂರ ಉಳಿದು, ಸ್ವಯಂ ಶುದ್ಧೀಕರಣ ಹಾಗೂ ಆತ್ಮವನ್ನು ಪಳಗಿಸಲು ರಂಜಾನ್ ತಿಂಗಳು ನೀಡಿದ ಪ್ರೇರಣೆಯನ್ನು ಜೀವನಪೂರ್ತಿ ಅಳವಡಿಸಿಕೊಳ್ಳಲು ನಿರ್ಣಯ ಕೈಗೊಳ್ಳುವ ಹಬ್ಬ. ಹಸಿವಿನಿಂದ ಕಲಿತ ಪಾಠವನ್ನು ಸಮಾಜಸೇವೆಯ ಮೂಲಕ ಧನ್ಯಗೊಳಿಸುವ ಸಂದರ್ಭವೂ ಹೌದು. ಭ್ರಾತೃತ್ವ, ಸಹಬಾಳ್ವೆಯ ಸಂದೇಶವೂ ಈದ್‌ನಲ್ಲಿದೆ.

ಆ ದಿನ ಶಕ್ತ ಪ್ರತಿಯೊಬ್ಬರೂ ಬಡವರಿಗೆ ಧಾನ್ಯಗಳನ್ನು ದಾನ ನೀಡುವುದು ಕಡ್ಡಾಯ. ಊರಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಧಾನ್ಯಗಳನ್ನು ಮನೆಯ ಪ್ರತಿ ಸದಸ್ಯನ ಹೆಸರಿನಲ್ಲಿ, ತಲಾ 2600 ಗ್ರಾಂನಷ್ಟು ದಾನ ನೀಡಬೇಕು. ಇದನ್ನು ‘ಫಿತ್ರ್ ಝಕಾತ್’ ಎನ್ನಲಾಗುತ್ತದೆ. ಆ ದಿನ ಯಾರೂ ಹಸಿವಿನಿಂದ ಇರಬಾರದು. ಎಲ್ಲರೊಂದಿಗೆ ಹಂಚಿತಿಂದು ಹಬ್ಬದ ಖುಷಿ ಕಾಣಬೇಕು. ಸಂಭ್ರಮ ನನ್ನದು ಮಾತ್ರವಾಗದೇ, ನಮ್ಮೆಲ್ಲರದೂ ಆಗಬೇಕು ಎನ್ನುವುದನ್ನು ಈ ಹಬ್ಬದ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.