ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ದ್ವೇಷದ ಮೂಲ ಕೆಟ್ಟ ಮನಸ್ಸು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 20:00 IST
Last Updated 3 ಜುಲೈ 2020, 20:00 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಜಗತ್ತಿನ ಸಕಲ ಜೀವರಾಶಿಯನ್ನು ಸೃಷ್ಟಿಸಿದ ದೇವರು ಮನುಷ್ಯನಿಗೊಬ್ಬನಿಗೆ ಮಾತ್ರ ಬುದ್ಧಿ-ಮನಸ್ಸುಗಳನ್ನು ಕೊಟ್ಟ. ಮಾನವ ತನ್ನ ಬುದ್ಧಿಗೆ ದುರಹಂಕಾರವನ್ನು ಮೆತ್ತಿಕೊಂಡು ಅವಿವೇಕಿಯಾದ.

ಮಾನವನ ಅವಿವೇಕದ ಪರಮಾವಧಿಯೇ ಸೃಷ್ಟಿಯ ತಲ್ಲಣಗಳಿಗೆ ಕಾರಣವಾಗಿದೆ. ಮನಸ್ಸೆಂಬುದು ಆಸೆಗಳ ರಾಕೆಟ್. ಅದರಲ್ಲಿ ಯಾವ ವಿಷಯ ಬಿಟ್ಟರೂ ಛಂಗನೆ ಆಕಾಶಕ್ಕೆ ಚಿಮ್ಮುತ್ತದೆ. ಅಂದರೆ ಮನಸಿನ ವೇಗೋತ್ಕರ್ಷ ಅತ್ಯದ್ಭುತ. ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನೇ ಸುತ್ತಿ ಬರುತ್ತದೆ. ಈ ವೇಗದ ಆಸೆಗೆ ನಿಯಂತ್ರಣ ಹಾಕುವ ಬ್ರೇಕ್ ನಮ್ಮಲ್ಲಿಲ್ಲದಿದ್ದರೆ ಅನಾಹುತ ಖಚಿತ.

ಮನಸ್ಸಿನ ಮಂಥನವನ್ನು ಸಮುದ್ರಮಂಥನಕ್ಕೆ ಹೋಲಿಸಲಾಗುತ್ತೆ. ದೇವ-ದಾನವರು ಸಮುದ್ರವನ್ನು ಕಡೆದಾಗ ಅಮೃತವೂ ಬಂತೂ, ವಿಷವೂ ಬಂತೂ. ಹಾಗೇ ಮನಸ್ಸನ್ನು ಮಂಥಿಸಿದರೆ ಅದರಲ್ಲೂ ಒಳ್ಳೆಯದೂ ಬರುತ್ತೆ, ಕೆಟ್ಟದ್ದೂ ಬರುತ್ತೆ. ಅದಕ್ಕಾಗಿ ನಾವು ಆಗಾಗ್ಗೆ ಮನಸ್ಸನ್ನು ಜ್ಞಾನದ ಕಡೆಗೋಲಿನಿಂದ ಕಡೆಯುತ್ತಿರಬೇಕು. ಇದರಲ್ಲಿ ಉಕ್ಕಿ ಬರುವ ಒಳ್ಳೆಯದು-ಕೆಟ್ಟದ್ದು – ಎರಡನ್ನು ಸೋಸಿ ಒಳ್ಳೆಯದನ್ನು ಮನಸ್ಸಿನೊಳಗೆ ಇಟ್ಟುಕೊಂಡು, ಕೆಟ್ಟದ್ದನ್ನು ಹೊರಗೆಸೆಯಬೇಕು. ಮನಸ್ಸಿನ ಕಶ್ಮಲವನ್ನು ತೆಗೆದಷ್ಟೂ ಮನಸ್ಸು ಪರಿಶುದ್ಧವಾಗುತ್ತದೆ; ಪ್ರಶಾಂತವಾಗಿರುತ್ತದೆ. ಕೆಟ್ಟ ಮನಸ್ಸು ಯಾವಾಗಲೂ ಕುದಿಯುತ್ತಿರುತ್ತದೆ. ಈ ಕುಲುಮೆಯಲ್ಲಿ ಬರುವ ಹೊಗೆಯ ಹೆಸರೇ ಹಗೆ.

ADVERTISEMENT

ದುರಂತ ಎಂದರೆ, ಮನಸ್ಸಿನ ಮಂಥನಕ್ಕೆ ಬೇಕಾದ ಒಳ್ಳೆಯ ಜ್ಞಾನದ ಕಡೆಗೋಲೇ ನಮ್ಮಲ್ಲಿಲ್ಲ. ಮನಸ್ಸನ್ನು ಕಡೆದು ಕಶ್ಮಲವನ್ನು ತೆಗೆಯುವ ವಿಧಾನವೇ ನಮಗೆ ಗೊತ್ತಿಲ್ಲ. ಇದರಿಂದಾಗಿ ಜನರ ಮನಸ್ಸುಗಳು ಪಾಪಕೂಪದಲ್ಲಿ ಮುಳುಗಿರುತ್ತವೆ. ಮನಸ್ಸಿನಲ್ಲಿ ಹುಟ್ಟುವ ಎಲ್ಲ ಕೆಟ್ಟ ವಿಚಾರಗಳು ವೈರಸ್‍ಗಳಂತೆ ಬಹುಬೇಗ ಅಂಟಿಕೊಳ್ಳುತ್ತವೆ.

ಮನಸ್ಸನ್ನು ಕೆಡಿಸುವ ಕೆಟ್ಟ ವಿಚಾರಗಳ ಕ್ರಿಮಿಗಳು ಹೆಚ್ಚು ಕಾಲ ಇದ್ದಷ್ಟೂ ಮನಸ್ಸು ರೋಗಗ್ರಸ್ತವಾಗುತ್ತದೆ. ಇದರಿಂದಾಗಿ ಮನಸ್ಸಿನ ಮೇಲೆ ಬೀರುವ ಸಣ್ಣ ದ್ವೇಷದ ವಿಚಾರಗಳೂ ವಿಕಾರರೂಪವನ್ನು ತಾಳುತ್ತವೆ. ಹೀಗಾಗಿಯೇ ಜಾತಿ-ಧರ್ಮದ ವಿದ್ವೇಷಗಳು, ದುರಹಂಕಾರ, ಹಿಂಸೆ–ಕ್ರೌರ್ಯಗಳು, ಸ್ವಾರ್ಥಪರ ವಿಚಾರಗಳು ಜಗತ್ತಿನಲ್ಲಿ ವಿಜೃಂಭಿಸುತ್ತಿವೆ. ಇಂಥ ಕೆಟ್ಟು ಹೋದ ಮನಸ್ಸುಗಳಿಗೆ ಸದ್ವಿಚಾರಗಳಾಗಲಿ, ಸತ್ಯಸಂದೇಶಗಳಾಗಲಿ ಹೊಂದುವುದಿಲ್ಲ. ಏಕೆಂದರೆ ಕೆಟ್ಟ ವಿಚಾರಗಳು ಮನಸ್ಸನ್ನು ಆ ಮಟ್ಟಿಗೆ ಹಾಳು ಮಾಡಿರುತ್ತವೆ. ಇಂಥ ಕೊಳೆತ ಮನಸ್ಸುಗಳಿಂದ ಹುಟ್ಟುವ ಅಪಾಯಕಾರಿ ಕ್ರಿಮಿಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕ್ರಿಮಿಗಳು ಹೌದು.

ಒಬ್ಬ ಮನುಷ್ಯನನ್ನು ಅಸಹ್ಯಿಸುವ-ದ್ವೇಷಿಸುವ-ಅಸೂಯಿಸುವ ಮನಃಸ್ಥಿತಿ ಬಂದಿದೆ ಎಂದರೆ, ಆ ಮನಸ್ಸು ರೋಗಪೀಡಿತವಾಗಿದೆ ಎಂದೇ ಅರ್ಥ. ಇಂಥವರಿಂದ ದೂರ ಇದ್ದಷ್ಟು ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ. ಮನಸ್ಸಿನ ವಿಕೃತಿಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರಿತ ಋಷಿಮುನಿಗಳು ಅದರ ನಿಗ್ರಹಕ್ಕೆ ಯೋಗ–ಧ್ಯಾನದ ಮೊರೆಹೋದರು.

ಮನುಷ್ಯ ಎಷ್ಟೇ ಆಧುನಿಕವಾಗಿ ಬೆಳೆದರೂ ಅವನ ಕಲಹ–ದ್ವೇಷಬುದ್ಧಿಗಳು ದೇಶ-ದೇಶಗಳ ನಡುವೆ ವಿದ್ವೇಷವನ್ನು ಸೃಷ್ಟಿಸಿ, ಉನ್ಮತ್ತಗೊಳಿಸಿ ಹೊಡೆದಾಡಿಸುತ್ತಿವೆ. ಏಕೆಂದರೆ, ರೋಗಗ್ರಸ್ತ ಮನಸ್ಸಿನ ಕ್ರಿಯೆಯೇ ದ್ವೇಷ. ಇದಕ್ಕಾಗಿಯೇ ಶ್ರೀದತ್ತಪ್ರಭು, ಪ್ರತಿಯೊಬ್ಬರು ‘ಸಚ್ಚಿದಾನಂದ’ರಾಗಿರಲು ಹೇಳಿದ್ದಾರೆ. ‘ಸತ್’ ಒಳ್ಳೆಯ, ‘ಚಿತ್’ ಮನಸ್ಸು ಇದ್ದರೆ, ಅಲ್ಲಿ ‘ಆನಂದ’ವಿರುತ್ತದೆ. ಆನಂದ ಇದ್ದೆಡೆ ಸುಖ-ಶಾಂತಿ ನೆಲೆಸಿರುತ್ತದೆ ಎನ್ನುವುದು ಸೂರ್ಯನಷ್ಟೆ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.