ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅಗ್ನಿಪ್ರವೇಶ

ಭಾಗ 234

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 25 ಸೆಪ್ಟೆಂಬರ್ 2022, 19:30 IST
Last Updated 25 ಸೆಪ್ಟೆಂಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಸಪ್ತರ್ಷಿಗಳು ಪಾರ್ವತಿಯ ತಪೋನಿಷ್ಠೆಯನ್ನು ಪರೀಕ್ಷಿಸಿ ತೆರಳಿದಮೇಲೆ, ಪಾರ್ವತಿಯ ತಪಸ್ಸನ್ನು ತಾನೇ ಪರೀಕ್ಷೆಮಾಡಲು ಶಂಕರ ನಿರ್ಧರಿಸಿದ. ವೃದ್ಧಬ್ರಹ್ಮಚಾರಿಯ ವೇಷವನ್ನು ಧರಿಸಿ ತಪೋವನಕ್ಕೆ ತೆರಳಿದ. ತಪೋವೇದಿಕೆಯಲ್ಲಿ ಕುಳಿತಿದ್ದ ಪಾರ್ವತಿ ಅತ್ಯಂತ ನಯನಮನೋಹರವಾಗಿ ಕಾಣಿಸುತ್ತಿದ್ದಳು. ದೀರ್ಘಕಾಲದ ತಪಸ್ಸಿನಿಂದ ಆಕೆಯ ಶರೀರ ಕೃಶವಾಗಿದ್ದರೂ, ಬಿದಿಗೆಯ ಚಂದ್ರನಂತೆ ಅವಳ ಶರೀರವು ಹೊಳೆಯುತ್ತಿತ್ತು. ನಾರುಮಡಿ ಉಟ್ಟಿದ್ದರೂ ಪಾರ್ವತಿ ಸೌಂದರ್ಯವತಿಯಾಗಿ ಶೋಭಿಸುತ್ತಿದ್ದಳು. ವೃದ್ಧ ವೇಷಧಾರಿ ಶಿವ ಅವಳ ಬಳಿಗೆ ಹೋದ. ಆತನ ಶರೀರ ಮಹಾತೇಜಸ್ಸಿನಿಂದ ಹೊಳೆಯುತ್ತಿದ್ದುದನ್ನು ಪಾರ್ವತಿ ಗಮನಿಸಿದಳು. ಈತ ಸಾಮಾನ್ಯ ವೃದ್ಧನಲ್ಲ ಎಂಬುದನ್ನು ಊಹಿಸಿದಳು. ಆತನನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಪೂಜಿಸಿದಳು.

ಪೂಜೋಪಚಾರಗಳಿಂದ ವೃದ್ಧನನ್ನು ಸತ್ಕರಿಸಿದ ಮೇಲೆ, ‘ಹಿರಿಯರೇ, ನೀವು ಸಾಮಾನ್ಯರಲ್ಲ. ನಿಮ್ಮ ಬ್ರಹ್ಮಚರ್ಯದಿಂದ ಈ ವನವು ಪ್ರಕಾಶಿಸುತ್ತಿದೆ. ವೇದಾಧ್ಯಯನಸಂಪನ್ನನಾಗಿರುವ ನೀವು ಯಾರು? ಎಲ್ಲಿಂದ ಬಂದಿರಿ?’ ಎಂದು ಕೇಳಿದಳು.

‘ನಾನು ಬ್ರಹ್ಮಸ್ವರೂಪಿ. ಈ ಜಗತ್ತನ್ನು ಚೆನ್ನಾಗಿ ತಿಳಿದವನು. ಪರರಿಗೆ ಉಪಕಾರ ಮಾಡುವುದೇ ನನ್ನ ಧ್ಯೇಯ. ಎಲೈ ತಪಸ್ವಿನಿ, ನಿನ್ನ ಹೆಸರೇನು? ಯಾರ ಮಗಳು? ಈ ನಿರ್ಜನವಾದ ಅರಣ್ಯದಲ್ಲಿ ಮಹಾಮುನಿಗಳೂ ಮಾಡದಂತಹ ಘೋರ ತಪಸ್ಸನ್ನೇಕೆ ಮಾಡುತ್ತಿರುವೆ?
ನಿನ್ನ ನೋಡಿದರೆ ತರುಣಿಯಾಗಿ ಕಾಣುವೆ. ಇಷ್ಟರಲ್ಲಾಗಲೇ ನಿನಗೆ ಮದುವೆಯೂ ಆಗಿರಬೇಕು. ಹೀಗಿದ್ದೂ ಪತಿಯನ್ನು ಬಿಟ್ಟು ಈ ವನದಲ್ಲಿ ಘೋರವಾಗಿ ತಪಸ್ಸನ್ನೇಕೆ ಆಚರಿಸುತ್ತಿರುವೆ? ನೀನು ತಪಸ್ವಿಯ ಮಡದಿಯೇ? ಆ ತಪಸ್ವಿಯು ನಿನ್ನನ್ನು ಸಲಹದೇ ತಪಸ್ಸಿಗಾಗಿ ಬೇರೆಡೆಗೆ ಹೋಗಿರುವನೇ? ನೀನು ಯಾವ ಕುಲದಲ್ಲಿ ಜನಿಸಿರುವೆ? ನಿನ್ನ ತಂದೆ ಯಾರು? ಎಲೈ ಭದ್ರೇ, ನಿನ್ನ ಅವಸ್ಥೆ ಏಕೆ ಹೀಗಾಗಿದೆ? ನಿನ್ನನ್ನು ನೋಡಿದರೆ ಮಹಾಭಾಗ್ಯವತಿಯಾಗಿ ಕಾಣುವೆ. ಸೌಭಾಗ್ಯವತಿಯಾದ ನೀನು ತಪಸ್ಸು ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ತ್ರಿಲೋಕಸುಂದರಿಯಂತೆ ರಾರಾಜಿಸುತ್ತಿರುವ ನೀನು ವೇದಮಾತೆಯೇ? ಲಕ್ಷ್ಮೀದೇವಿಯೇ? ಇಲ್ಲವೇ ಸರಸ್ವತೀದೇವಿಯೇ? ಈ ತ್ರಿದೇವಿ ಸುಂದರಿಯರ ಮಧ್ಯದಲ್ಲೂ ನಕ್ಷತ್ರದಂತೆ ಹೊಳೆಯುತ್ತಿರುವ ನೀನಾರು? ಮುದುಕನಾದ ನನಗೆ ಊಹಿಸಲೂ ಆಗುತ್ತಿಲ್ಲ. ನೀನೇ ವಿವರವಾಗಿ ಹೇಳು’ ಎಂದ.

ADVERTISEMENT

‘ಹಿರಿಯರೇ, ನಾನು ವೇದಮಾತೆಯೂ ಅಲ್ಲ. ಲಕ್ಷ್ಮೀ-ಸರಸ್ವತಿಯೂ ಅಲ್ಲ. ಹಿಮವಂತನ ಪುತ್ರಿ ಪಾರ್ವತೀ. ಹಿಂದಿನ ಜನ್ಮದಲ್ಲಿ ನಾನು ದಕ್ಷಪುತ್ರಿಯಾಗಿ ಜನಿಸಿದ್ದೆ. ಸತೀದೇವಿಯಾಗಿ ನಾಮಾಂಕಿತಳಾಗಿದ್ದ ನಾನು ಶಿವನನ್ನು ಪತಿಯಾಗಿ ಪಡೆದಿದ್ದೆ. ಮಹಾತ್ಮನಾದ ನನ್ನ ಪತಿಯನ್ನು ನನ್ನ ತಂದೆಯೇ ನಿಂದಿಸಿದ್ದರಿಂದ ನೊಂದು, ಯೋಗದಿಂದ ಶರೀರವನ್ನು ತ್ಯಜಿಸಿದ್ದೆ. ಈ ಜನ್ಮದಲ್ಲಿ ಮತ್ತೆ ಶಿವನ ಸೇವೆ ಮಾಡುವ ಸೌಭಾಗ್ಯ ಲಭಿಸಿತ್ತು. ಅಷ್ಟರಲ್ಲಿಯೇ ಶಿವ ತಪೋಭಂಗ ಮಾಡಿದನೆಂದು ಮನ್ಮಥನನ್ನು ಭಸ್ಮಮಾಡಿ ನನ್ನನ್ನು ಬಿಟ್ಟು ಹೋದ.

‘ಶಂಕರ ಹೋದ ನಂತರ ನನಗೆ ತುಂಬಾ ದುಃಖವಾಯಿತು. ತಂದೆ ಮನೆಯಿಂದ ಹೊರ ಬಂದು ಗಂಗಾದಡದಲ್ಲಿ ತಪಸ್ಸು ಮಾಡುತ್ತಿರುವೆ. ಬಹಳ ಕಾಲದಿಂದ ಕಠೋರ ತಪಸ್ಸು ಮಾಡಿದರೂ ಶಿವ ನನಗೆ ಪ್ರಸನ್ನನಾಗಲಿಲ್ಲ. ಆದಕಾರಣ ಅಗ್ನಿಪ್ರವೇಶ ಮಾಡಬೇಕೆಂದಿದ್ದೇನೆ, ನೀವಿನ್ನು ಹೊರಡಿ’ ಎಂದ ಪಾರ್ವತಿ ಅಗ್ನಿಪ್ರವೇಶ ಮಾಡಿದಳು. ಪಾರ್ವತಿಯನ್ನು ತಡೆಯುವ ವೃದ್ಧವೇಷಧಾರಿ ಶಿವನ ಪ್ರಯತ್ನ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.