ADVERTISEMENT

ವೇದವ್ಯಾಸರ ಶಿವಪುರಾಣಸಾರ: ನಾರದ ಬೋಧಿಸಿದ ಪಂಚಾಕ್ಷರೀ

ಭಾಗ – 223

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST
   

ಶಂಕರನ ವಿರಹದಿಂದ ದುಃಖಿತೆಯಾದ ಪಾರ್ವತಿ, ಎಂತಹ ಶ್ರೇಷ್ಠ ಮಾತಾಪಿತೃಗಳಲ್ಲಿ ಜನಿಸಿದರೇನು? ಎಂಥ ಸೌಂದರ್ಯ ಇದ್ದರೇನು? ಬಯಸಿದ ಪತಿ ಸಿಗದಿದ್ದರೆ ಪ್ರಯೋಜನವೇನು? – ಎಂದು ತನ್ನನ್ನು ಸದಾ ನಿಂದಿಸಿಕೊಳ್ಳುತ್ತಾ ವ್ಯಥಿಸುತ್ತಿದ್ದಳು. ಶಿವನಿಲ್ಲದೆ ತನಗೆ ಬದುಕಿಲ್ಲ ಎಂದು ಸದಾ ಶಿವನನ್ನೇ ಕನವರಿಸುತ್ತಿದ್ದಳು. ಶಿವ ತಪಸ್ಸು ಮಾಡುತ್ತಿದ್ದಾಗ ತಾನು ನಿಷ್ಠೆಯಿಂದ ಸೇವೆ ಮಾಡಿದ್ದನ್ನು ಸ್ಮರಿಸುತ್ತಾ, ಆಗಾಗ್ಗೆ ‘ಶಿವ ಶಿವ’ ಎಂದು ಉಚ್ಚರಿಸುತ್ತಿದ್ದಳು. ಆಹಾರ-ನಿದ್ರೆ ಇಲ್ಲದೆ ಸದಾ ಶಿವನ ಕನವರಿಸುತ್ತಾ ಅಳುತ್ತಿದ್ದ ಪಾರ್ವತಿ ಸುಸ್ತಾಗಿ ಎಚ್ಚರತಪ್ಪಿ ಬೀಳುತ್ತಿದ್ದಳು. ತಂದೆ ಹಿಮವಂತ, ತಾಯಿ ಮೇನಾದೇವಿ ಮತ್ತು ಮೈನಾಕ ಮೊದಲಾದ ಸೋದರರೆಲ್ಲರೂ ಗಿರಿಜೆಗೆ ಎಷ್ಟೇ ಸಾಂತ್ವನ ಮಾಡಿದರೂ, ಪಾರ್ವತಿಯ ದುಃಖ ಶಮನವಾಗಲಿಲ್ಲ.

ಈವಿಷಯ ತಿಳಿದ ದೇವೇಂದ್ರನು ನಾರದನ ಮೊರೆಹೋದ. ದೇವೇಂದ್ರನ ಕೋರಿಕೆ ಮೇರೆಗೆ ಹಿಮವಂತನ ಮನೆಗೆ ಬಂದ ನಾರದ, ‘ನಿನ್ನೆಲ್ಲಾ ಸಮಸ್ಯೆ ಪರಿಹಾರಕ್ಕೆ ಶಿವನನ್ನು ಸ್ಮರಿಸು’ ಎಂದು ಸಾಂತ್ವನ ಹೇಳಿದ. ನಾರದನನ್ನು ನೋಡಿ ಪಾರ್ವತಿಗೆ ದುಃಖ ಕಡಿಮೆ ಆದಂತಾಯಿತು. ನಾರದ, ‘ಎಲೈ ಗಿರಿಜೆ, ಸತ್ಯವಾದ ಮಾತನ್ನು ಹೇಳುತ್ತೇನೆ. ಅದರಂತೆ ನಡೆದರೆ ನಿನ್ನ ಇಷ್ಟಾರ್ಥವು ಸಿದ್ಧಿಸುವುದು. ಮಹಾದೇವನನ್ನು ನೀನು ಸೇವಿಸಿರುವೆ. ಆದರೆ ತಪಸ್ಸನ್ನು ಮಾಡಿ ಸೇವಿಸಲಿಲ್ಲ. ಸೌಂದರ್ಯಗರ್ವದಿಂದ ಶಿವನ ಸೇವೆ ಮಾಡಿದೆ. ಆ ಗರ್ವವನ್ನು ಶಿವನು ಮನ್ಮಥನ ದಹನಮಾಡಿ ನಾಶಮಾಡಿದ. ನಿನ್ನ ಸ್ವಾಮಿಯಾದ ಮಹೇಶ್ವರ ಮಹಾ ವಿರಕ್ತ, ಮಹಾ ಹಠಯೋಗಿ. ಅ ಶಿವನು ಭಕ್ತವತ್ಸಲ. ನೀನು ತಪಸ್ಸಿನಿಂದ ಅವನನ್ನು ಭಕ್ತಿಯಿಂದ ಆರಾಧಿಸು. ನೀನು ತಪಸ್ಸಿನಿಂದ ಪರಿಶುದ್ಧಳಾದರೆ ಶಿವ ನಿನ್ನ ಮದುವೆಯಾಗುತ್ತಾನೆ’ ಎಂದ. ಗಿರಿಜೆಗೆ ಸ್ವಲ್ಪ ಸಮಾಧಾನವಾಯಿತು. ಆಗ ಪಾರ್ವತಿ ‘ನಾರದಮುನಿ, ರುದ್ರನನ್ನಾಧರಿಸಲು ಮಂತ್ರವೊಂದನ್ನು ನನಗೆ ಉಪದೇಶಿಸು’ ಎಂದು ಪ್ರಾರ್ಥಿಸಿದಳು.

ಆಗ ನಾರದ ಶಿವಪಂಚಾಕ್ಷರೀ (ನಮಃ ಶಿವಾಯ) ಮಂತ್ರವನ್ನು ವಿಧಿವತ್ತಾಗಿ ಪಾರ್ವತಿಗೆ ಉಪದೇಶಿಸಿದ. ಶಿವಪಂಚಾಕ್ಷರೀ ಮಂತ್ರದ ಮಹತ್ವವನ್ನೂ ಹೇಳಿದ. ‘ಎಲೈ ಗಿರಿಜೆ, ಈ ಮಂತ್ರದ ಅದ್ಭುತವಾದ ಮಹಿಮೆಯನ್ನು ಹೇಳುವೆನು ಕೇಳು. ಇದನ್ನು ಕೇಳಿದ ಮಾತ್ರದಿಂದಲೇ ಶಿವ ಪ್ರಸನ್ನನಾಗುವನು. ಈ ಪಂಚಾಕ್ಷರೀಮಂತ್ರವು ಎಲ್ಲಾ ಮಂತ್ರಗಳಿಗೂ ಶ್ರೇಷ್ಠವಾದುದು. ಇದು ಇಷ್ಟಾರ್ಥಗಳನ್ನೂ ಭೋಗ-ಮೋಕ್ಷಗಳನ್ನೂ ಕೊಡುವುದು. ಈ ಮಂತ್ರವನ್ನು ವಿಧಿವತ್ತಾಗಿ ಜಪಿಸಿ ಶಂಕರನನ್ನು ಆರಾಧಿಸಿದರೆ ಪ್ರತ್ಯಕ್ಷನಾಗುವನು. ನೀನು ತಪೋನಿಯಮದಿಂದಿದ್ದು, ಶಂಕರನ ರೂಪವನ್ನು ಧ್ಯಾನಿಸುತ್ತಾ ಪಂಚಾಕ್ಷರೀಮಂತ್ರವನ್ನು ಜಪಿಸು. ಶಿವನು ಶೀಘ್ರದಲ್ಲಿಯೇ ಪ್ರತ್ಯಕ್ಷನಾಗುವನು. ನಿನ್ನೆಲ್ಲಾ ಇಷ್ಟಾರ್ಥಗಳು ಈಡೇರುವುವು. ಮಹಾಯೋಗಿಯಾದ ಶಿವನನ್ನು ತಪಸ್ಸಿನಿಂದ ಪಡೆಯಬಹುದೇ ಹೊರತು, ಯಾವುದೇ ಸೌಂದರ್ಯದ ಪ್ರದರ್ಶನದಿಂದ ಮತ್ತು ಬಲವಂತದಿಂದ ಅವನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಯೋಗಗುರುವಾದ ಮಹಾಶಿವನನ್ನು ತಪಸ್ಸಿನಿಂದ ಒಲಿಸಿಕೊಂಡರೆ, ನಿನ್ನ ಎಲ್ಲಾ ಅಭೀಷ್ಠೆಯೂ ನೆರವೇರುವುದು’ ಎಂದು ಹೇಳಿದ ನಾರದ ಅಲ್ಲಿಂದ ಸ್ವರ್ಗಕ್ಕೆ ತೆರಳಿದ.

ADVERTISEMENT

ನಾರದನ ಹಿತವಾದ ಮಾತು ಕೇಳಿ ಉಲ್ಲಸಿತಳಾದ ಪಾರ್ವತಿ, ಸಂತೋಷದಿಂದ ಹಿಗ್ಗಿದಳು. ನಾರದ ಉಪದೇಶಿಸಿದಂತೆ ಪಂಚಾಕ್ಷರೀಮಂತ್ರವನ್ನ ಜಪಿಸುತ್ತಾ ತಪಸ್ಸು ಮಾಡಲು ಹೊರಟಳು ಎಂಬಲ್ಲಿಗೆ ಪಾರ್ವತೀಖಂಡದ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.