ADVERTISEMENT

ವೇದವ್ಯಾಸರ ಶಿವಪುರಾಣಸಾರ: ತಣಿಯದ ಪಾರ್ವತಿಯ ದುಃಖ

ಭಾಗ – 222

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಸೆಪ್ಟೆಂಬರ್ 2022, 19:30 IST
Last Updated 11 ಸೆಪ್ಟೆಂಬರ್ 2022, 19:30 IST
   

ನಾರದ ಬ್ರಹ್ಮನನ್ನು ‘ಜಗತ್ಕರ್ತ! ಶಂಕರನ ಫಾಲನೇತ್ರದಿಂದ ಮನ್ಮಥ ದಗ್ಧನಾದ ಮೇಲೆ ಆ ಕ್ರೋಧಾಗ್ನಿಯು ವಡವಾಗ್ನಿಯಾಗಿ ಸಮುದ್ರವನ್ನು ಪ್ರವೇಶಿಸಿತೆಂದು ಹೇಳಿದೆ. ಮುಂದೆ ಏನಾಯಿತು? ಪಾರ್ವತಿ ಏನು ಮಾಡಿದಳು?’ ಎಂದು ಉತ್ಸುಕನಾಗಿ ಕೇಳುತ್ತಾನೆ.

ಆಗ ಬ್ರಹ್ಮ ‘ಮಹಾಪ್ರಾಜ್ಞನಾದ ಎಲೈ ನಾರದನೆ! ಚಂದ್ರಶೇಖರನ ಚರಿತವನ್ನು ಕೇಳಲು ನಿನಗಿರುವ ಕೌತುಕವನ್ನು ನೋಡಿ ನನಗೆ ಸಂತೋಷ ವಾಗುತ್ತಿದೆ. ಆದ್ದರಿಂದ ಮಹಾಮಹಿಮನೂ, ನನಗೆ ಒಡೆಯನೂ ಆದ ಶಿವನ ಕಥೆಯನ್ನು ಅವಶ್ಯವಾಗಿ ಹೇಳುವೆನು ಕೇಳು’ ಎಂದು ಶಿವಪುರಾಣ ಪ್ರವಚನ ಮುಂದುವರೆಸುತ್ತಾನೆ.

ಶಂಕರನ ಫಾಲಾಗ್ನಿಯಿಂದ ಮನ್ಮಥ ಭಸ್ಮವಾದೊಡನೆ ಮಹಾಶಬ್ದವಾ ಯಿತು. ಅದರಿಂದ ಆಕಾಶವೆಲ್ಲವೂ ತುಂಬಿಹೋಯಿತು. ಮಹಾಶಬ್ದವನ್ನು ಕೇಳಿ ಮತ್ತು ಮನ್ಮಥ ಭಸ್ಮವಾದುದನ್ನು ನೋಡಿದ ಪಾರ್ವತಿ ಭಯಭೀತಳಾದಳು. ಮನ್ಮಥನು ದುರಂತ ಅಂತ್ಯ ಕಂಡಿದ್ದು ಪಾರ್ವತಿಗೂ ಬಹಳ ದುಃಖವಾಯಿತು. ಈ ಘಟನೆ ನಂತರ ಪಾರ್ವತಿ ದುಗುಡ ಮನಃಸ್ಥಿತಿಯಲ್ಲೇ ತನ್ನ ಸಖಿಯರೊಡನೆ ಮನೆಗೆ ಹೊರಟಳು.

ADVERTISEMENT

ಇತ್ತ ಅರಮನೆಯಲ್ಲಿದ್ದ ಪರ್ವತರಾಜ ಮತ್ತವನ ಪರಿವಾರಕ್ಕೂ ದೊಡ್ಡ ಸ್ಫೋಟದ ಶಬ್ದವನ್ನು ಕೇಳಿ ಆಶ್ಚರ್ಯ ಹಾಗೂ ಆತಂಕವಾಯಿತು. ಇದೇನೆಂದು ಯೋಚನೆಗೀಡಾದರು. ಮಗಳು ಪಾರ್ವತಿ ಶಿವನ ಬಳಿಗೆ ಹೋಗಿರುವುದನ್ನು ಪರ್ವತರಾಜ ನೆನಸಿಕೊಂಡು ತುಂಬಾ ಭಯಗೊಂಡ. ಅಷ್ಟರಲ್ಲಿ ಮಗಳು ಮನೆಗೆ ಬಂದಿದ್ದು ನೋಡಿ ಪರ್ವತರಾಜನಿಗೆ ಸಮಾಧಾನವಾಯಿತು. ಆದರೆ ಅವಳ ಮುಖದಲ್ಲಿದ್ದ ಭಯ ಮತ್ತು ದುಃಖವನ್ನು ನೋಡಿ ಆತಂಕವೂ ಆಯಿತು. ಶಂಕರನ ವಿರಹದಿಂದ ದುಃಖಿಸುತ್ತಿದ್ದ ಪಾರ್ವತಿಗೆ ತಂದೆ ಹಿಮವಂತನನ್ನು ನೋಡಿ ಮತ್ತಷ್ಟು ದುಃಖ ಉಮ್ಮಳಿಸಿ, ಓಡಿ ಬಂದು ಅವನ ಎದೆಗೆ ಮುಖವಿಟ್ಟು ಬಿಕ್ಕಳಿಸಿ ಅಳತೊಡಗಿದಳು.

ಮಗಳು ಪಾರ್ವತಿ ತುಂಬಾ ದುಃಖದಿಂದ ಅಳುತ್ತಿರುವುದನ್ನು ನೋಡಿ ಪರ್ವತರಾಜನಿಗೆ ಏನೋ ಮಹಾ ಅನಾಹುತವೇ ಆಗಿರಬೇಕೆಂದು ಭಾವಿಸಿದ. ತನ್ನ ಎದೆಗೊರಗಿ ಅಳುತ್ತಿದ್ದ ಮಗಳ ತಲೆ ನೇವರಿಸುತ್ತಾ, ಕೈಯಿಂದ ಅವಳ ಕಣ್ಣುಗಳನ್ನು ಒರೆಸುತ್ತಾ ಹೇಳಿದ, ‘ಪಾರ್ವತಿ, ಅಳಬೇಡ. ಯಾವುದಕ್ಕೂ ನೀನು ಹೆದರಬೇಡ. ನಾನಿದ್ದೇನೆ, ನಿನ್ನೆಲ್ಲಾ ಕಷ್ಟಗಳನ್ನು ನಿವಾರಿಸುತ್ತೇನೆ. ನಿನಗೇನಾಯಿತು ಹೇಳು?’ ಎಂದು ಅವಳನ್ನು ಪ್ರೀತಿಯಿಂದ ಸಮಾಧಾನಗೊಳಿಸಿದ.

ತಂದೆಯ ಮಾತು ಕೇಳಿ ಪಾರ್ವತಿ ಸಮಾಧಾನವಾಗುವ ಬದಲು ಮತ್ತಷ್ಟು ದುಃಖದಿಂದ ಬಿಕ್ಕಳಿಸಿ ಅಳತೊಡಗಿದಳು. ಆಗ ಪಾರ್ವತಿಯ ಸಖಿಯರಿಂದ ವಿಷಯ ತಿಳಿದುಕೊಂಡ ಪರ್ವತರಾಜನಿಗೂ ಬಹಳ ದುಃಖವಾಯಿತು. ಮುಂದೇನು ಮಾಡುವುದೆಂದು ಚಿಂತೆಗೀಡಾದ. ಅಷ್ಟರಲ್ಲಿ ಅಲ್ಲಿಗೆ ಬಂದ ಮೇನಾದೇವಿ ದುಃಖಿಸುತ್ತಿರುವ ಪತಿ ಮತ್ತು ಮಗಳನ್ನು ನೋಡಿ ಭಯವಿಹ್ವಲಳಾದಳು. ನಡೆದ ವಿಷಯ ತಿಳಿದು, ಮಗಳನ್ನು ಸಮಾಧಾನಿಸಿದಳು.

ತಾಯಿ ಮೇನಾದೇವಿಯ ಮಡಿಲಲ್ಲಿ ತಲೆಯಇಟ್ಟು ಮಲಗಿದಾಗ ಗಿರಿಜೆಗೆ ಮನಸ್ಸು ಹಗುರವಾದಂತಾಯಿತು. ಆದರೆ ಇದು ಕ್ಷಣ ಮಾತ್ರ ಮನಸ್ಸು ನಿರಾಳವೆನಿಸಿತು. ಮತ್ತೆ ಅವಳ ಮನದ ದುಗುಡ ಕಾಣಿಸಿಕೊಂಡು ವ್ಯಥಿಸಿದಳು. ತಾಯಿ ಮತ್ತು ಸಖಿಯರು ಎಷ್ಟು ಹೇಳಿದರೂ ಅವಳು ಸಮಾಧಾನಗೊಳ್ಳಲಿಲ್ಲ. ನಿದ್ರೆಯಲ್ಲಿ, ಪಾನಭೋಜನಗಳಲ್ಲಿ, ಸ್ನಾನ-ಶೃಂಗಾರಗಳಲ್ಲಿ ನಿರಾಸಕ್ತಳಾದಳು. ಮನ್ಮಥನನ್ನು ಭಸ್ಮಮಾಡಿ ಹರ ಅಂತರ್ಧಾನನಾದ ದೃಶ್ಯವನ್ನೇ ಪಾರ್ವತಿ ನೆನೆದು, ತುಂಬಾ ಖಿನ್ನಳಾಗುತ್ತಿದ್ದಳು. ಅವಳಿಗೆ ಎಲ್ಲಿಯೂ ಸುಖವಿಲ್ಲದಂತೆ ಭಾಸವಾಗಿ ಕ್ಷೋಭೆಗೊಳಗಾಗುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.