ನಾಗರಿಕ ಸಮಾಜದಲ್ಲಿ ಬದುಕಬೇಕಾದರೆ ಕೆಲವು ಕಟ್ಳಳೆಗಳನ್ನು ಅನುಸರಿಸಬೇಕು – ಎಂದು ಯೆಹೂದ್ಯರಿಗೆ ಹೇಳಿದ ದೇವರು ಅವರಿಗೆ ಅಂಥ ಹತ್ತು ಕಟ್ಟಳೆಗಳನ್ನು ನೀಡಿದರು. ‘ಕಳಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ’ ಮುಂತಾದ ಮೂಲಭೂತ ಕಟ್ಟಳೆಗಳವು. ಈ ಕಟ್ಟಳೆಗಳನ್ನು ಕಲ್ಲಿನ ಫಲಕಗಳ ಮೇಲೆ ಕೆತ್ತಿಕೊಂಡ ಯೆಹೂದ್ಯರು ಅವನ್ನು ಪವಿತ್ರ ಮಂಜೂಷದಲ್ಲಿಟ್ಟು ಗೌರವ ಸಲ್ಲಿಸಿದರು; ದೈವಪ್ರೇರಣೆಯಲ್ಲಿ ಅವನ್ನು ವ್ಯಾಖ್ಯಾನಿಸತೊಡಗಿದರು. ಕಾಲಕ್ರಮದಲ್ಲಿ ವ್ಯಾಖ್ಯಾನಿಸುವವರ ಸಂಖ್ಯೆಯೂ ಬೆಳೆಯಿತು. ಅವರನ್ನು ‘ಫರಿಸಾಯರು’, ಎಂದರೆ ‘ಧರ್ಮಸಂಹಿತೆಗಳ ಪಾರಂಗತರು’ ಎಂದು ಬಣ್ಣಿಸಲಾಯಿತು.
ಕಾಲದಿಂದ ಕಾಲಕ್ಕೆ ಹತ್ತು ಕಟ್ಟಳೆಗಳಿಗೆ ಇನ್ನೊಂದಿಷ್ಟು ಮತ್ತೊಂದಿಷ್ಟು ಉಪಕಾನೂನುಗಳನ್ನು ಸೇರಿಸಿಕೊಂಡು ಬಂದ ಫರಿಸಾಯರು ಯೇಸುಕ್ರಿಸ್ತರ ಕಾಲಕ್ಕೆ ಅವನ್ನು ಆರುನೂರು ಮೀರುವಂತೆ ಮಾಡಿಬಿಟ್ಟಿದ್ದರು. ಈ ಕಠಿಣ ಕಾನೂನುಗಳಿಂದ ಬಡಪಾಯಿ ಜನ ಬಾಗಿ ಬಸವಳಿದು ಹೋಗಿದ್ದರು. ಒಂದೆಡೆ ರೋಮನ್ ಚಕ್ರಾಧಿಪತ್ಯದ ಕಂದಾಯ ವಸೂಲಿಗಾರರ ದಬ್ಬಾಳಿಕೆ, ಇನ್ನೊಂದೆಡೆ ಹಾದಿಬೀದಿಯಲ್ಲೆಲ್ಲಾ ಕಾಡುವ ಧರ್ಮರಕ್ಷಕರ ಉಪಟಳ. ಇವನ್ನು ಕಂಡ ಯೇಸು ನಾಡಿನಲ್ಲೆಲ್ಲ ಸುತ್ತಾಡಿ ಫರಿಸಾಯರನ್ನು ಖಂಡಿಸಿದರು. ಅವರ ಡಂಭಾಚಾರ ಮತ್ತು ಕೊಳಕು ಮನಸ್ಸುಗಳನ್ನು ರಸ್ತೆಯ ಚೌಕಗಳಲ್ಲಿ ತೊಳೆದರು; ಜನರ ಮನಸ್ಸುಗಳಲ್ಲಿ ಪ್ರೀತಿಯ ಸುಧೆ ಹರಿಸಿದರು. ‘ಪ್ರೀತಿಯಲ್ಲೇ ಮಾನವನ ವಿಮೋಚನೆ ಅಡಗಿದೆ’ ಎಂದು ಸಾರಿದರು.
ಫರಿಸಾಯರು ಸುಮ್ಮನೆ ಬಿಟ್ಟಾರೆಯೇ? ‘ನಮ್ಮನ್ನೆಲ್ಲ ಪ್ರಶ್ನಿಸಲು ನಿನಗೇನು ಅಧಿಕಾರ?’ ಎಂದು ಜಂಕಿಸಿದರವರು. ಅದಕ್ಕೆ ಯೇಸುವಿನ ಉತ್ತರ: ‘ದೇವರಾತ್ಮ ನನ್ನಲ್ಲಿದೆ, ನಿಮ್ಮಲ್ಲಿ ಒಳ್ಳೆಯ ಮನಸ್ಸಿದ್ದರೆ ಸರ್ವಶಕ್ತ ದೇವರ ಬಲಪಾರ್ಶ್ವದಲ್ಲಿ ನಾನು ಕುಳಿತಿರುವುದನ್ನು ಕಾಣಬಲ್ಲಿರಿ’. ಪದೇ ಪದೇ ದೇವರ ಹೆಸರು ಎತ್ತಿ ಅದನ್ನು ಸವಕಲುಗೊಳಿಸುವುದು, ಮತ್ತು ತನ್ನನ್ನು ತಾನೇ ದೇವರಿಗೆ ಸರಿಸಮನಾಗಿ ಹೋಲಿಸಿಕೊಳ್ಳುವುದು ದೇವರ ಮೊತ್ತಮೊದಲ ಕಟ್ಟಳೆಗೆ ವಿರುದ್ಧವಾದುದು ಎಂದು ಹರಿಹಾಯ್ದ ಫರಿಸಾಯರು ಯೇಸುವಿಗೆ ‘ಮರಣವೇ ಶಿಕ್ಷೆ’ ಎಂದು ತೀರ್ಪಿತ್ತರು.
ಯೆಹೂದ್ಯರ ಪ್ರಕಾರ, ದೇವರ ಕಟ್ಟಳೆ ಮೀರಿದವರನ್ನು ಮೂರು ದಾರಿಗಳು ಕೂಡುವೆಡೆಯಲ್ಲಿ ನಿಲ್ಲಿಸಿ ಆಳಿಗೊಂದು ಕಲ್ಲನ್ನು ಬೀಸಿ ಕೊಲ್ಲಲಾಗುತ್ತಿತ್ತು. ರೋಮನ್ ಸಮಾಜದಲ್ಲಿ ಮರಣದಂಡನೆಯ ಶಿಕ್ಷೆಯೇ ಬೇರೆ. ಮರದ ತೊಲೆಗಳನ್ನು ಶಿಲುಬೆಯಾಗಿ ಮಾಡಿ ಅದರ ಮೇಲೆ ಶಿಕ್ಷಿತನನ್ನು ಅಂಗಾತ ಮಲಗಿಸಿ ಕೈಕಾಲುಗಳಿಗೆ ದೊಡ್ಡ ಕಬ್ಬಿಣದ ಮೊಳೆಗಳನ್ನು ಜಡಿದು ಶಿಲುಬೆಯನ್ನು ನೇರ ನಿಲ್ಲಿಸಿಬಿಡುವುದು. ಅದಕ್ಕೂ ಮುನ್ನ ಅಪರಾಧಿಯನ್ನು ಹೊಡೆದು ಬಡಿದು ಉಪವಾಸ ಕೆಡವಿ ನಿತ್ರಾಣಗೊಳಿಸಿರುತ್ತಾರೆ. ನ್ಯಾಯದ ಕಟಕಟೆಯಿಂದ ವಧಾಸ್ಥಾನದವರೆಗೆ ಅಪರಾಧಿಯೇ ಬಲುಭಾರದ ಶಿಲುಬೆಯನ್ನು ಹೊತ್ತು ತಂದಿರುತ್ತಾನೆ. ಶಿಲುಬೆಗೇರಿಸಿದ ಒಂದೆರಡು ಗಂಟೆಗಳಲ್ಲಿ ಆತ ಸಾಯದಿದ್ದರೆ ಎದೆಭಾಗಕ್ಕೆ ಈಟಿಯಿಂದ ತಿವಿದು ಕೊನೆಯ ರಕ್ತವನ್ನು ಬಸಿಯಲಾಗುತ್ತಿತ್ತು.
ಯೆಹೂದ್ಯರಿಗೆ ಪವಿತ್ರವಾದ ಪಾಸ್ಕ ಹಬ್ಬ ಸಮೀಪಿಸುತ್ತಿದಂತೆ ಯೇಸುವು ಜರು ಜಲೀಂ ಪಟ್ಟಣವನ್ನು ಪ್ರವೇಶಿಸಿದ. ವಿವಿಧ ದೇಶ ಪ್ರದೇಶಗಳಿಂದ ಆಗಮಿಸಿದ್ದ ಜನರು ಯೇಸುವನ್ನು ಕಂಡು ಸಂಭ್ರಮಿಸಿ, ‘ಅವನೇ ನಮ್ಮ ರಾಜ’ – ಎಂದು ಘೋಷಿಸಿದರು. ಆ ಕ್ಷಣವೇ ಫರಿಸಾಯರು ಒಂದು ಪ್ರತಿತಂತ್ರ ಹೂಡಿದರು. ಯೇಸುವಿನ ಶಿಷ್ಯರಲ್ಲೊಬ್ಬನಾದ ಜುದಾಸನಿಗೆ ಲಂಚಕೊಟ್ಟು ಯೇಸುವನ್ನು ರಾತ್ರಿಯಲ್ಲಿ ಬಂಧಿಸಿದರು. ರಾತ್ರಿಯೆಲ್ಲ ಕಪಟ ವಿಚಾರಣೆಯನ್ನು ನಡೆಸಿ, ಮರುದಿನ ಶುಕ್ರವಾರ ಕಲ್ವಾರಿ ಬೆಟ್ಟದಡೆಗೆ ಯೇಸುವನ್ನು ಎಳೆತಂದು, ಶಿಲುಬೆಗೇರಿಸಿ ಕ್ರೂರವಾಗಿ ಕೊಂದರು.
ಶಿಲುಬೆಯೇರಿದ ಯೇಸುಕ್ರಿಸ್ತ ಆಡಿದ ಕೊನೆಯ ಮಾತು: ‘ದೇವರೇ ಇವರನ್ನು ಕ್ಷಮಿಸು’. ಅದೇ ವೇಳೆ ಯೇಸುವನ್ನು ಬಹುವಾಗಿ ಹಿಂಸಿಸಿದ್ದ ರೋಮನ್ ಸೈನಿಕನಿಗೆ ಅನ್ನಿಸಿದ್ದು: ‘ನಿಜವಾಗಿಯೂ ಈತ ಒಳ್ಳೆಯವ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.