ADVERTISEMENT

ದೀಪಾವಳಿ: ಎಮ್ಮೆಯೇ ನಮ್ಮನೆ ದೇವರು...

ನಾಗರಾಜ್ ಬಿ.ಎನ್‌.
Published 10 ನವೆಂಬರ್ 2023, 23:31 IST
Last Updated 10 ನವೆಂಬರ್ 2023, 23:31 IST
<div class="paragraphs"><p>ಹುಬ್ಬಳ್ಳಿಯಲ್ಲಿ ದೀಪಾವಳಿ ಹಬ್ಬದಂದು ಸಿಂಗರಿಸಿದ ಎಮ್ಮೆಗಳ ಜೊತೆ ಮೆರವಣಿಗೆ ಹೊರಟಿರುವ ಗೌಳಿಗರು (ಸಂಗ್ರಹ ಚಿತ್ರ)</p></div>

ಹುಬ್ಬಳ್ಳಿಯಲ್ಲಿ ದೀಪಾವಳಿ ಹಬ್ಬದಂದು ಸಿಂಗರಿಸಿದ ಎಮ್ಮೆಗಳ ಜೊತೆ ಮೆರವಣಿಗೆ ಹೊರಟಿರುವ ಗೌಳಿಗರು (ಸಂಗ್ರಹ ಚಿತ್ರ)

   

ಐದು–ಆರು ತಲೆ ಮಾರುಗಳಿಂದ ಎಮ್ಮೆಗಳನ್ನು ಸಾಕುತ್ತ, ಅದರಿಂದಲೇ ಬದುಕು ಕಂಡುಕೊಂಡಿದ್ದೇವೆ. ದೀಪಾವಳಿ ಹಬ್ಬ ಎಂದರೆ ಗೌಳಿಗರಿಗೆ ಎಮ್ಮೆಗಳ ಹಬ್ಬ. ಅವುಗಳನ್ನು ಸಿಂಗರಿಸಿ, ಪೂಜೆ ಸಲ್ಲಿಸಿ ಮೃಷ್ಟಾನ್ನ ಭೋಜನ ನೀಡಿದೆವೆಂದರೆ ಸಾರ್ಥಕ ಭಾವ...

ಇದು ಹುಬ್ಬಳ್ಳಿಯ ಗೌಳಿಗರ ಸಮಾಜದ ಹಿರಿಯ ಸತ್ಯಪ್ಪ ಉಪ್ಪಾರ ಅವರ ಮನದಾಳದ ಮಾತು. ನಗರದ ಕೊಪ್ಪಿಕರ ರಸ್ತೆ ಮತ್ತು ದಾಜೀಬಾನ್‌ ಪೇಟೆ ರಸ್ತೆಯ ಥಳಕುವ ಮಾರುಕಟ್ಟೆ ಮಧ್ಯೆ ಇರುವ ಗೌಳಿಗಲ್ಲಿಯಲ್ಲಿ ಇವರ ವಾಸ. 65 ಕುಟುಂಬಗಳು ಇಲ್ಲಿ ವಾಸವಾಗಿದ್ದು, ಅಪ್ಪಟ ಗ್ರಾಮೀಣ ಶೈಲಿ ಇಲ್ಲಿ ಕಾಣಬಹುದು.

ADVERTISEMENT

ಸೆಗಣಿ ಮೆತ್ತಿದ ಎಮ್ಮೆ–ಕರುಗಳು, ಬಾರುಕೋಲು ಹಿಡಿದು ಎಮ್ಮೆ ಜೊತೆ ಒಡನಾಡುತ್ತಿರುವ ಮಕ್ಕಳು, ಸಂಜೆಯಾದಂತೆ ಕೊಟ್ಟಿಗೆಯಲ್ಲಿ ಹಾಲು ಹಿಂಡುವ ಯಜಮಾನ, ಕೊಟ್ಟಿಗೆ ಶುಚಿಗೊಳಿಸಿ, ಎಮ್ಮೆ ಮೈ ತೊಳಿಸುವ ಯಜಮಾನಿ, ಕಣ್ಣಾಡಿಸಿದಲ್ಲೆಲ್ಲ ಎಮ್ಮೆ–ಕರುಗಳು... ದೀಪಾವಳಿ ಸಮೀಪಿಸುತ್ತಿರುವುದರಿಂದ ಇಲ್ಲಿನ ಕೊಟ್ಟಿಗೆಳು ಬಣ್ಣಬಣ್ಣದ ದೀಪ ಹಾಗೂ ಹೂಗಳಿಂದ ಸಿಂಗಾರಗೊಳ್ಳುತ್ತಿವೆ.

‘ಎಮ್ಮೆ ನಮಗೆ ಮನೆ ಮಹಾಲಕ್ಷ್ಮಿ. ವರ್ಷಪೂರ್ತಿ ಹಾಲು ನೀಡುವ ಅವುಗಳಿಗೆ, ಸ್ನಾನ ಮಾಡಿಸಿ, ಮೈಗೆ ಶೇಡಿ ಹಚ್ಚಿ, ಕೋಡುಗಳಿಗೆ ಬಣ್ಣ ಹಚ್ಚಿ, ನವಿಲುಗರಿ ಕಟ್ಟಿ, ಆಲಂಕಾರಿಕ ವಸ್ತುಗಳಿಂದ ಸಿಂಗರಿಸಿ, ಪೂಜಿಸುತ್ತೇವೆ. ಅವುಗಳಿಗಾಗಿಯೇ ಹೋಳಿಗೆ ತಯಾರಿಸಿ ಉಣಬಡಿಸುತ್ತೇವೆ’ ಎನ್ನುತ್ತಾರೆ ಸತ್ಯಪ್ಪ ಉಪ್ಪಾರ.

‘ಗಲ್ಲಿಯಲ್ಲಿರುವ ಎಲ್ಲ ಕುಟುಂಬದವರು ದೀಪಾವಳಿಯ ಬಲಿಪಾಡ್ಯದಂದು, ಸಿಂಗರಿಸಿದ ಎಮ್ಮೆಗಳನ್ನು ಮೂರುಸಾವಿರ ಮಠದವರೆಗೆ ಮೆರವಣಿಗೆ ನಡೆಸಿ, ನೆಹರೂ ಮೈದಾನಕ್ಕೆ ಕರೆದೊಯ್ಯುತ್ತಾರೆ. ಮನೆ ಯಜಮಾನ ಹೆಗಲ ಮೇಲೆ ಕಂಬಳಿ ಹೊದ್ದು, ಬಾರುಕೋಲು ಹಿಡಿದು ಹಲಗೆ, ಜಾಗಟೆ ಬಾರಿಸುತ್ತ ಮುಂದೆ ನಡೆದ ಎಂದರೆ, ಎಮ್ಮೆಗಳು ಕುಣಿಯುತ್ತ ಹಿಂದೆ ಓಡುತ್ತವೆ. ಕುತ್ತಿಗೆಯಲ್ಲಿನ ಗಂಟೆ ಅಲುಗಾಡುತ್ತ ಸದ್ದು ಮಾಡುವಾಗ, ಹಬ್ಬದ ಸಂಭ್ರಮ ಎಲ್ಲೆ ಮೀರುತ್ತದೆ’ ಎಂದರು.

ಸುಮಾರು 300 ಎಮ್ಮೆಗಳು ನೆಹರೂ ಮೈದಾನದಲ್ಲಿ ಜಮಾಯಿಸುತ್ತವೆ. ಸೆಗಣಿಯಿಂದ ಮಾಡಿದ ಪಂಚ–ಪಾಂಡವರ ಮೂರ್ತಿಗಳಿಗೆ ಅಲ್ಲಿ ಅರ್ಚಕರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಎಮ್ಮೆಗಳಿಗೆ ವಿಭೂತಿ ಹಚ್ಚಿ, ಪೂಜೆ ಮಾಡಿ, ನೈವೇದ್ಯ ನೀಡಲಾಗುತ್ತದೆ. ಗೌಳಿ ಸಮುದಾಯದವರಷ್ಟೇ ಅಲ್ಲ, ಸುತ್ತಲಿನ ಎಲ್ಲ ಸಮುದಾಯದವರು ಇದನ್ನು ಕಣ್ತುಂಬಿಸಿಕೊಳ್ಳಲು, ಅಲ್ಲಿ ಜಮಾಯಿಸುತ್ತಾರೆ.

‘ಎಮ್ಮೆ ನಮಗೆ ಮನೆ ಮಗಳು’: ‘ಮನೆ ಹೆಣ್ಣುಮಕ್ಕಳಿಗೆ ಹೇಗೆ ಆಭರಣಗಳನ್ನು ಖರೀದಿಸುತ್ತೇವೆಯೋ ಹಾಗೆಯೇ, ಎಮ್ಮೆಗಳಿಗೆ ದೀಪಾವಳಿಯಂದು ಆಲಂಕಾರಿಕ ವಸ್ತುಗಳನ್ನು ಖರೀದಿಸಿ ಸಿಂಗರಿಸುತ್ತೇವೆ. ಮನೆ ಮಗಳಾದ ಅವುಗಳಿಗೆ ಕವಡಿ ಮತ್ತು ಕಂಠಿ ಸರ ಕಟ್ಟಿ ಅಂದ ಹೆಚ್ಚಿಸುತ್ತೇವೆ. ನಮ್ಮ ಸಮುದಾಯದವರು ಈಗಲೂ ದೈವಿ ಸ್ವರೂಪಿಯಾದ ಎಮ್ಮೆಯ ಸಾಕಾಣಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಹಳ್ಳಿ ಸಂಸ್ಕೃತಿ, ಆಚಾರದ ಜೊತೆಗೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದೇವೆ’ ಎಂದು ನಿಂಗಪ್ಪ ಉಪ್ಪಾರ ಹೇಳಿದರು.

ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಎಮ್ಮೆಯ ಜೊತೆ ಗೌಳಿಗರ ಸಂಭ್ರಮ
ನೆಹರೂ ಮೈದಾನದಲ್ಲಿ ಎಮ್ಮೆಗಳನ್ನು ಓಡಿಸುತ್ತಿರುವ ಗೌಳಿಗರು
ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಎಮ್ಮೆಗಳನ್ನು ಓಡಿಸಿ ಸಂಭ್ರಮಿಸುತ್ತಿರುವ ಗೌಳಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.