ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹೃದಯ ವೈಶಾಲ್ಯವೇ ಧರ್ಮ

ಭಾಗ –6: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 25 ಡಿಸೆಂಬರ್ 2021, 6:44 IST
Last Updated 25 ಡಿಸೆಂಬರ್ 2021, 6:44 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಧರ್ಮ ಅಂದರೆ ಅದೊಂದು ಅಗಾಧ ಪ್ರಭೆ. ಅದನ್ನ ಸಂಕುಚಿತ ಮನಸ್ಸಿನವರು ನೋಡಲು ಸಾಧ್ಯವಿಲ್ಲ. ಧರ್ಮದ ಜ್ಯೋತಿಯನ್ನು ನೋಡಲು ವಿಶಾಲ ಮನಸ್ಸಿರಬೇಕು. ಶುದ್ಧಮನಸ್ಸಿಲ್ಲದವರಲ್ಲಿ ಧರ್ಮದ ಜ್ಞಾನಜ್ಯೋತಿ ಬೆಳಗುವುದಿಲ್ಲ, ಬದಲಿಗೆ ಅವರ ಬುದ್ಧಿಯನ್ನು ಸುಡುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನುಷ ಸಂಘರ್ಷಗಳಿಗೆಲ್ಲಾ ಇಂಥ ಬುದ್ಧಿ ಸುಟ್ಟುಕೊಂಡ ಧರ್ಮಾಂಧರೇ ಮೂಲಕಾರಣ. ಧರ್ಮದ ವಿಚಾರ ಸರಿಯಾಗಿ ಅರ್ಥೈಸದೆ ಬುದ್ಧಿ ಸುಟ್ಟುಕೊಂಡ ಜನರು, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ, ಬುದ್ಧಿ ಇದ್ದರೂ ಮತಿಹೀನರಂತೆ ದುರ್ವರ್ತನೆ ತೋರಿಸುತ್ತಾರೆ. ಧರ್ಮದ ಹೆಸರಲ್ಲಿ ತಾರತಮ್ಯವಾಡುತ್ತಾ ಮನುಷ್ಯರ ನಡುವೆ ದ್ವೇಷದ ಬೀಜ ಬಿತ್ತುತ್ತಾರೆ. ಧರ್ಮದ ವಿಶಾಲಾರ್ಥ ತಿಳಿಯದ ಇಂಥ ಮೂಢರಿಂದ ಸಾವಿರಾರು ವರ್ಷಗಳಿಂದ ಮನುಕುಲ ನಲುಗುತ್ತಿದೆ.

ದೇವರನ್ನು ಪೂಜಿಸಿದಾಕ್ಷಣ ಹೇಗೆ ಒಲಿಯುವುದಿಲ್ಲವೋ ಹಾಗೇ, ಒಂದು ಧರ್ಮವನ್ನು ಅನುಸರಿಸಿದಾಕ್ಷಣ ಧರ್ಮವಂತರಾಗಲು ಸಾಧ್ಯವಿಲ್ಲ. ಶುದ್ಧಮನಸ್ಸಿನಿಂದ ಪ್ರಾರ್ಥಿಸಿದರೆ ದೇವರು ಒಲಿದಂತೆ, ಧರ್ಮದ ವಿಶಾಲ ಅರ್ಥ ತಿಳಿದವರಿಗೆ ಮಾತ್ರ ಧರ್ಮದ ದರ್ಶನವಾಗುತ್ತದೆ. ಧರ್ಮದ ಬೆಳಕಿನಿಂದ ಉತ್ತಮ ಹಾದಿ ತುಳಿಯಬೇಕೇ ಹೊರತು ಕೆಟ್ಟ ಹಾದಿಯನ್ನಲ್ಲ. ಕೆಟ್ಟ ಹಾದಿ ತುಳಿದವರಿಗೆ ದೇವರೂ ಕಾಣುವುದಿಲ್ಲ, ಧರ್ಮಜ್ಞಾನವೂ ಸಿದ್ಧಿಸುವುದಿಲ್ಲ. ‘ಚಿತ್ತವಿಲ್ಲದೆ ಗುಡಿ-ಗೋಪುರ ಸುತ್ತಿದರೇನು ಪ್ರಯೋಜನವಿಲ್ಲ. ಗಾಣದ ಎತ್ತು ಕಣ್ಣು ಮುಚ್ಚಿಕೊಂಡು ಸುತ್ತಿದಷ್ಟೇ ಫಲ’ ಅಂತ ಸರ್ವಜ್ಞ ಸುಮ್ಮನೆ ಹೇಳಿಲ್ಲ. ಆಗಿನ ಕಾಲದ ಕುರುಡು ಧರ್ಮಾಚರಣೆ ಕಂಡೇ ಅನುಭಾವಿ ಆಶುಕವಿಯಾದ ಸರ್ವಜ್ಞ ಅರ್ಥರಹಿತ ಧರ್ಮಾಚರಣೆಯನ್ನು ವಿಡಂಬಿಸಿದ್ದಾನೆ. ‘ಕರ್ನಾಟಕ ಸಂಗೀತದ ಪಿತಾಮಹ’ ಪುರಂದರದಾಸರಂತು ‘ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದರೇನು ಫಲ’ ಅಂತ ಜನರ ದುರ್ನಡತೆಯನ್ನ ವಿಶ್ಲೇಷಿಸಿದ್ದಾರೆ. ಶುದ್ಧ ಮನಸ್ಸಿಲ್ಲದವರು ಎಂಥ ಗುಡಿ–ಗೋಪುರದೊಳಗಿದ್ದರೂ ಅವರ ಸ್ವಭಾವ ಬದಲಾಗುವುದಿಲ್ಲ. ಇಂಥವರಿಗೆ ಎಂಥ ಪವಿತ್ರಗ್ರಂಥದ ಸಾರ ಹಿಂಡಿ ಕುಡಿಸಿದರೂ ಪ್ರಯೋಜನವಾಗುವುದಿಲ್ಲ ಅನ್ನೋ ಪುರಂದರದಾಸರ ಈ ಗೀತೆಯ ತಾತ್ಪರ್ಯವು ಇಂದಿನ ಧರ್ಮಾಂಧರಿಗೆ ಸರಿಯಾಗಿ ಹೊಂದುತ್ತದೆ.

ಧರ್ಮ ಅನ್ನೋದು ಮನುಕುಲವನ್ನು ಪೊರೆದ ಸುಧಾರಣಮಾರ್ಗ. ಮನುಷ್ಯ ಧರ್ಮಮಾರ್ಗ ಅನುಸರಿಸಿದ್ದರಿಂದಲೇ ಕಾಡಿನಲ್ಲಿ ಮೃಗದಂತೆ ಇದ್ದವನು, ನಾಡು ಕಟ್ಟಿಕೊಂಡು ನಾಗರಿಕನಾಗಿದ್ದಾನೆ. ಇಂಥ ಧರ್ಮದ ವಿಚಾರದಲ್ಲಿ ‘ಆ ಧರ್ಮ, ಈ ಧರ್ಮ’ ಅಂತ ಭೇದಭಾವ ಮಾಡುವುದು ನಾಗರಿತೆ ಲಕ್ಷಣವಲ್ಲ. ಎಲ್ಲ ಧರ್ಮದೊಳಗಿನ ಉತ್ತಮ ತಿರುಳನ್ನು ತಿಳಿದು, ತನ್ನೊಳಗಿನ ತಿಮಿರವನ್ನು ಅಳಿಸಿಕೊಂಡು ಜ್ಞಾನವಂತನಾಗುವುದು ಮನುಷ್ಯರ ಲಕ್ಷಣ. ಮನುಷ್ಯರಲ್ಲಿ ಭೇದಭಾವ ತೋರಿಸುವುದು ಕಾಡುಮೃಗದ ಲಕ್ಷಣ. ಮನುಷ್ಯ ಆಕಾರ ಇದ್ದವರನ್ನೆಲ್ಲಾ ಮನುಷ್ಯರೆಂದು ಕರೆಯಲಾಗುವುದಿಲ್ಲ. ಮನುಷ್ಯತನ ಇದ್ದಾಗಲೇ ಅವರನ್ನು ಮನುಷ್ಯರೆನ್ನುವುದು. ವಿಶಾಲ ಹೃದಯವಂತಿಕೆ ಉಳ್ಳವರು ಮಾತ್ರ ಧರ್ಮವಂತರೆನಿಸಿಕೊಳ್ಳುತ್ತಾರೆ.

ADVERTISEMENT

ಧರ್ಮ-ಕರ್ಮಗಳಲ್ಲಿ ಸರಿಯಾದ ನಂಬಿಕೆ ಇಟ್ಟವರಿಗೆ ವಿವೇಕ-ವಿವೇಚನೆ ಬೆಳೆಯುತ್ತದೆ. ಧರ್ಮದ ವಿಶಾಲ ಅರ್ಥ ಅರಿಯದವರಲ್ಲಿ ಅವಿವೇಕ ತಾಂಡವವಾಡುತ್ತದೆ. ಇಂಥವರಲ್ಲಿ ಕೇವಲ ಧರ್ಮದ ಢಾಂಬಿಕತನ ಗೋಚರಿಸುತ್ತದೆ. ಮನುಷ್ಯನಿಗೆ ಶಾಂತಿ-ನೆಮ್ಮದಿ ನೀಡುವ ಆಶಯದಿಂದ ಹುಟ್ಟಿದ ಧರ್ಮಗಳೇ ಆತನ ನೆಮ್ಮದಿಗೆ ಭಂಗ ತರುತ್ತಿವೆ. ಮತಭ್ರಾಂತ ಜನರಿಂದ ಮಾನವರ ಜೀವ ಮತ್ತು ಜೀವನಕ್ಕೆ ಕುತ್ತು ಬರುತ್ತಿದೆ. ವಿಶಾಲ ತಳಹದಿಯಲ್ಲಿ ವಿಚಾರಶೀಲವಾಗಿ ಅರಳಿದ ಧರ್ಮಗಳು ಮತಾಂಧರಿಂದ ಸಂಕುಚಿತಗೊಳ್ಳುತ್ತಿರುವುದು ದುರದೃಷ್ಟಕರ. ಇಡೀ ಜಗತ್ತೇ ದೇವರದು. ಆತನ ಅಧೀನದಲ್ಲಿ ಸಕಲ ಜೀವರಾಶಿಗಳಿವೆ ಎಂದು ಧರ್ಮಗಳು ಹೇಳುತ್ತವೆ. ಆದರೆ ಅಂತಹ ಸರ್ವಶಕ್ತ ಮಹಿಮನನ್ನು ಒಂದು ಧರ್ಮಕ್ಕೆ ಮಾತ್ರ ಸೀಮಿತಗೊಳಿಸುವುದು ಮೂರ್ಖತನ. ಜಗತ್ತಿನ ಎಲ್ಲಾ ಧರ್ಮಗಳು, ಎಲ್ಲಾ ದೇವರುಗಳನ್ನು ಮಾನವರೆಲ್ಲಾ ಭೇದಭಾವವಿಲ್ಲದೆ ಗೌರವಿಸಿದಾಗ ‘ಸಚ್ಚಿದಾನಂದ’ದ ಜ್ಞಾನಜ್ಯೋತಿ ಎಲ್ಲೆಡೆ ಬೆಳಗುತ್ತದೆ..

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.