ADVERTISEMENT

ದಿನದ ಸೂಕ್ತಿ | ಅತಿಥಿ ದೇವೋ ಭವ!

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಆಗಸ್ಟ್ 2020, 1:50 IST
Last Updated 5 ಆಗಸ್ಟ್ 2020, 1:50 IST
   

ಏಹ್ಯಾಗಚ್ಛ ಸಮಾಶ್ರಯಾಸನಮಿದಂ ಕಸ್ಮಾಚ್ಚಿರಾದ್ದೃಶ್ಯಸೇ
ಕಾ ವಾರ್ತಾ ಹ್ಯತಿದುರ್ಬಲೋಽಸಿ ಕುಶಲಂ ಪ್ರೀತೋಽಸ್ಮಿ ತೇ ದರ್ಶನಾತ್ ।
ಏವಂ ಯೇ ಸಮುಪಾಗತಾನ್ಪ್ರಣಯಿನಃ ಪ್ರಹ್ಲಾದಯಂತ್ಯಾದರಾತ್‌
ತೇಷಾಂ ಯುಕ್ತಮಶಂಕಿತೇನ ಮನಸಾ ಹರ್ಮ್ಯಾಣಿ ಗಂತುಂ ಸದಾ ॥

ಇದರ ತಾತ್ಪರ್ಯ ಹೀಗೆ:

‘ಬನ್ನಿ ಬನ್ನಿ, ಈ ಆಸನದಲ್ಲಿ ಕುಳಿತುಕೊಳ್ಳಿ, ತುಂಬ ದಿನಗಳಿಂದಲೂ ನೀವು ಕಾಣಲಿಲ್ಲವಲ್ಲ, ಏಕೆ? ಏನು ಸಮಾಚಾರ, ತುಂಬ ಸೊರಗಿದಂತೆ ಕಾಣುತ್ತಿದ್ದೀರಲ್ಲ? ಎಲ್ಲ ಕ್ಷೇಮ ತಾನೆ? ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು‘ – ಹೀಗೆ ಯಾರು ಮಿತ್ರರನ್ನು ಆದರದಿಂದ ಸಂತೋಷಗೊಳಿಸುವರೋ ಅಂಥವರ ಮನೆಗೆ ಯಾವ ಸಂದೇಹವೂ ಇಲ್ಲದ ಮನಸ್ಸಿನಿಂದ ಯಾವಾಗಲೂ ಹೋಗಬಹುದು.‘

ADVERTISEMENT

ಹೌದು, ದಿಟ; ಸದ್ಯಕ್ಕೆ ಇಂಥ ಆದರಾತಿಥ್ಯವನ್ನು ನೀಡುವಂಥ ಅಥವಾ ಸವಿಯುವಂಥ ಸನ್ನಿವೇಶ ಇಲ್ಲ. ಆದರೆ ಇದೇ ಪರಿಸ್ಥಿತಿ ಶಾಶ್ವತವಾಗಿ ಇರದೆನ್ನಿ!

ಮನುಷ್ಯ–ಮನುಷ್ಯರ ಮಧ್ಯೆ ಸಂಬಂಧಗಳು ಸೌಹಾರ್ದವಾಗಿರಬೇಕು, ಗಟ್ಟಿಯಾಗಿರಬೇಕು; ಪರಸ್ಪರ ಸಂತೋಷ–ಸಂಭ್ರಮಕ್ಕೆ ಪೂರಕವಾಗಿರಬೇಕು. ಇಂಥ ಸಂತಸದ ಪರಿಸರ ನಮ್ಮ ಏಳಿಗೆಗೂ ಕಾರಣವಾಗಬಲ್ಲದು. ಈ ವಿಧದ ಸೌಹಾರ್ದದ ವಾತಾವರಣ ನೆಲೆಗೊಳ್ಳಲು ಹಲವು ದಾರಿಗಳು; ಅವುಗಳಲ್ಲೊಂದು ಅತಿಥಿಗಳನ್ನು ಕುರಿತು ಆದರ–ಆತಿಥ್ಯ.

ನಮ್ಮ ಸಂಸ್ಕೃತಿಯಲ್ಲಿ ಅತಿಥಿಗಳನ್ನು ದೇವರೆಂದೇ ಆದರಿಸಲಾಗಿದೆ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ಜೀವನದ ಭಾಗವೇ ಆಗಿದೆ. ಹೀಗಾಗಿ ಮನೆಗೆ ಬಂದವರನ್ನು ಹೇಗೆ ಸತ್ಕರಿಸಬೇಕು – ಎಂಬುದರ ಬಗ್ಗೆ ಶಾಸ್ತ್ರದ ಹತ್ತುಹಲವು ಮಾತುಗಳು ನಮಗೆ ಶಾಸನಗಳೂ ಆಗಿವೆ. ದೇವತೆಗಳನ್ನೂ ಕೂಡ ವ್ರತ–ಪರ್ವಗಳ ದಿನಗಳಂದು ಮನೆಗೆ ಆಹ್ವಾನಿಸಿ, ಸತ್ಕರಿಸುವಂಥ ವಿಶಿಷ್ಟ ಪದ್ಧತಿ ನಮ್ಮ ಪರಂಪರೆಯಲ್ಲುಂಟು. ರಾಮಾಯಣ–ಮಹಾಭಾರತಗಳಂಥ ಪ್ರಾಚೀನ ಕಾವ್ಯಪರಂಪರೆಯಲ್ಲಿ ಅತಿಥಿಸತ್ಕಾರದ ಸೊಗಸಾದ ನಿರೂಪಣೆಗಳು ಕಂಡುಬರುತ್ತವೆ. ರಾಮಾಯಣದಲ್ಲಿ ಶ್ರೀರಾಮನಿಗೆ ಗುಹನು ಸಲ್ಲಿಸುವ ಆತಿಥ್ಯ, ಮಹಾಭಾರತದಲ್ಲಿ ಶ್ರೀಕೃಷ್ಣನಿಗೆ ವಿದುರನು ಸಲ್ಲಿಸುವ ಆತಿಥ್ಯ – ಇಂಥವು ಶ್ರೇಷ್ಠ ಉದಾಹರಣೆಗಳಾಗಿವೆ; ಅತಿಥಿ ಸತ್ಕಾರಕ್ಕೆ ಆಸ್ತಿ–ಅಂತಸ್ತುಗಳು ಮುಖ್ಯವಲ್ಲ, ಅಂತರಂಗದ ಭಾವನೆಯೇ ಮುಖ್ಯ ಎನ್ನುವುದನ್ನು ಇವು ಎತ್ತಿಹಿಡಿಯುತ್ತವೆ.

ಸುಭಾಷಿತ ಇಲ್ಲಿ ಹೇಳುತ್ತಿರುವುದನ್ನೂ ಇಂಥ ನಿಲುವನ್ನೇ.

ನಮ್ಮ ಮನೆಗೆ ಯಾರಾದರೂ ಬಂದ ಕೂಡಲೇ ಅವರಿಗೆ ಆಸನವನ್ನು ನೀಡಬೇಕು, ಬಾಯಾರಿಕೆಯನ್ನು ಪರಿಹರಿಸಲು ಮೊದಲು ಅವರಿಗೆ ಪಾನೀಯವನ್ನು ಕೊಡಬೇಕು, ಬಳಿಕ ಕ್ಷೇಮಸಮಾಚಾರವನ್ನು ವಿಚಾರಿಸಬೇಕು, ಅವರನ್ನು ಸತ್ಕರಿಸುವ ಸಮಯದುದ್ದಕ್ಕೂ ಪ್ರಿಯವಾದ ಹಿತವಾದ ಮಾತುಗಳನ್ನೇ ಆಡುತ್ತಿರಬೇಕು.

ಈ ಕ್ರಮವನ್ನು ನಾವು ನಮ್ಮಲ್ಲಿ ಬಂದವರಿಗೆ ಅನುಸರಿಸಬೇಕೆನ್ನುವುದು ಸುಭಾಷಿತದ ಇಂಗಿತ, ಹೌದು. ಆದರೆ ನಾವು ಯಾರ ಮನೆಗಾದರೂ ಹೋದಾಗ, ಅಲ್ಲಿ ನಾವು ನಿರೀಕ್ಷಿಸುವುದಾದರೂ ಇದನ್ನೇ ಅಲ್ಲವೆ? ವ್ಯಕ್ತಿ ವ್ಯಕ್ತಿಗಳೂ, ಕುಟುಂಬ ಕುಟುಂಬಗಳೂ ಪರಸ್ಪರ ಬಯಸುವ ದಿಟವಾದ ಸೌಭಾಗ್ಯ ಎಂದರೆ ಈ ಅಂತರಂಗದ ಸಂಸ್ಕಾರವೇ ಹೌದು. ನಮಗೆ ಇಂಥ ಸಂಪತ್ತು ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಹೋಗಲು ಮನಸ್ಸು ಸದಾ ತುಡಿತದಲ್ಲಿರುವುದೂ ಸುಳ್ಳಲ್ಲ.

ಹೀಗಲ್ಲದೆ, ಮನೆಗೆ ಯಾರಾದರೂ ಬಂದಾಗ ’ಇವರು ಯಾಕಾದರೂ ವಕ್ಕರಿಸಿದರೋ‘ ಎಂದು ಮುಖ ತಿರುಗಿಸಿಕೊಂಡು, ಒರಟಾಗಿ ನಡೆದುಕೊಂಡರೆ, ನಮ್ಮಲ್ಲಿಗೆ ಇನ್ನೊಮ್ಮೆ ಅವರು ಏಕಾದರೂ ಬರುತ್ತಾರೆ? ಟಿವಿಯಲ್ಲಿಯ ಧಾರಾವಾಹಿಯಲ್ಲಿಯ ಅತಿಥಿಸತ್ಕಾರದ ದೃಶ್ಯವನ್ನು ಸವಿಯುವುದಕ್ಕೆ ಅಡ್ಡಿಯಾದರೆಂದು, ಮನೆಗೆ ನೇರವಾಗಿಯೇ ಬಂದಿರುವ ಅತಿಥಿಗಳನ್ನು ಉಪೇಕ್ಷಿಸುತ್ತೇವೆ, ಅನಾದರಿಂದ ನಡೆದುಕೊಳ್ಳುತ್ತವೆ, ಸಂಸ್ಕೃತಿಯನ್ನೂ ಮರೆತು ವಿಕೃತವಾಗಿ ನಡೆದುಕೊಳ್ಳುತ್ತೇವೆ – ಕನ್ನಡಿಯ ಗಂಟಿಗೆ ಆಸೆ ಪಟ್ಟು ಕೈಯಲ್ಲಿರುವ ನಿಧಿಯನ್ನು ಕಳೆದುಕೊಂಡಂತೆ! ಜೀವನದಲ್ಲಿ ಎಲ್ಲ ಆಸ್ತಿಗಳಲ್ಲೂ ದೊಡ್ಡದು ಎಂದರೆ ನಮ್ಮ ನೋವು–ನಲಿವುಗಳಲ್ಲಿ ಭಾಗವಹಿಸಬಲ್ಲಂಥ ನಾಲ್ವರು ಆತ್ಮೀಯರನ್ನು ಸಂಪಾದಿಸುವುದು. ಆತ್ಮೀಯತೆಯ ಅಭಿವ್ಯಕ್ತಿಯಲ್ಲಿ ಅತಿಥಿ–ಅಭ್ಯಾಗತರ ಸತ್ಕಾರ ಕೂಡ ಒಂದು ಎಂಬುದನ್ನು ನಾವು ಮರೆಯಬಾರದು. ಮಾತ್ರವಲ್ಲ, ಇದು ಸಂಘಜೀವಿಯಾದ ಮನುಷ್ಯನ ಅನಿವಾರ್ಯ ಸಂಸ್ಕಾರವೂ ಹೌದು. ಬಸವಣ್ಣನವರ ಈ ವಚನವನ್ನು ನೋಡಿ:

‘ಏನು ಬಂದಿರಿ, ಹದುಳವಿದ್ದಿರೆ?‘ ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ?
‘ಕುಳ್ಳಿರೆಂ‘ದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರ-ಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.