ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಬುದ್ಧಿಗೆ ವಿವೇಕದ ಕವಚ ಬೇಕು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 15 ಜನವರಿ 2021, 19:30 IST
Last Updated 15 ಜನವರಿ 2021, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮನುಷ್ಯ ಭೂಮಿಗೆ ಬಂದಾಗಿನಿಂದ ಅವನ ಬುದ್ಧಿಯ ಬೆಳವಣಿಗೆ ಅಗಾಧವಾಗಿ ಬೆಳೆಯುತ್ತಲೇ ಇದೆ. ಆಗ ಶಿಶುವಿನಂತಿದ್ದ ಬುದ್ಧಿ ಈಗ, ವಯಸ್ಕನ ಮಟ್ಟಕ್ಕೆ ಬೆಳೆದಿದೆ. ಆದರೆ ಬುದ್ಧಿ ಬೆಳೆದಷ್ಟು ಅವನಲ್ಲಿ ವಿವೇಕ ಬೆಳೆದಿಲ್ಲ. ಇದೇ ಅವನ ದುರಂತಸ್ಥಿತಿಗೆ ಕಾರಣವಾಗಿದೆ. ಹಿರಿಯರ ತಪ್ಪುಗಳನ್ನು ಹುಡುಕುವುದರಲ್ಲಿನ ಅವನ ಉತ್ಸುಕತೆ, ತನ್ನ ತಪ್ಪುಗಳನ್ನು ಅರಿಯುವುದರಲ್ಲಿ ತೋರಿಸುವುದಿಲ್ಲ. ಅವನ ಅವಿವೇಕ ಎಷ್ಟರ ಮಟ್ಟಿಗಿದೆ ಎಂದರೆ, ನಮ್ಮ ಹಿರಿಯರು ಹಾಕಿಕೊಟ್ಟ ಧರ್ಮಮಾರ್ಗದಲ್ಲೂ ಕುಚೋದ್ಯ ಕಾಣುತ್ತಾನೆ. ತಾನೇ ಹಿಂದಿನ ತಲೆಮಾರಿನವರೆಲ್ಲರಿಗಿಂತ ಬುದ್ಧಿವಂತನೆಂದು ಭ್ರಮಿಸಿ, ಸಂಭ್ರಮಿಸುತ್ತಾನೆ.

ಹಿಂದಿನ ತಲೆಮಾರಿನ ಜನರ ಬುದ್ಧಿಗೂ, ಇಂದಿನ ತಲೆಮಾರಿನ ಜನರ ಬುದ್ಧಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನವರಲ್ಲಿ ವಿವೇಕ ಇತ್ತು. ಹೀಗಾಗಿ ಶ್ರೀರಾಮ ಅಗಸನ ಮಾತಿಗೆ ಬೆಲೆಕೊಟ್ಟು ಸೀತೆಯನ್ನು ಕಾಡಿಗೆ ಕಳುಹಿಸಿದ್ದನ್ನು ಆಗಿನ ಜನ ‘ಶ್ರೀರಾಮ ಎಂಥ ಮರ್ಯಾದಾ ಪುರುಷೋತ್ತಮ’ ಅಂತ ಕೊಂಡಾಡುತ್ತಿದ್ದರು. ಆದರೆ ಈಗಿನ ಜನ ‘ಯಾರೋ ಮಾತಾಡಿದ್ರು ಅಂತ ಹೆಂಡ್ತಿಯನ್ನ ಕಾಡಿಗೆ ಕಳುಹಿಸಿದ್ದು ತಪ್ಪು’ ಅಂತ ಹೀಗಳೆಯುತ್ತಾರೆ. ಆದರೆ ಇಲ್ಲಿ ಏಳುವ ‘ಅರಸನಿಗೊಂದು ನ್ಯಾಯ-ಅಗಸನಿಗೊಂದು ನ್ಯಾಯವೇ?’ ಎಂಬ ಶ್ರೀರಾಮನ ಸಾಮಾಜಿಕ ತಕ್ಕಡಿ ತೂಗಿ ನೋಡುವ ವಿವೇಕ ಇಂದಿನ ಜನರಲ್ಲಿಲ್ಲ.

‘ತಂಗಿ ಮಗುವಿನಿಂದ ತನಗೆ ಸಾವು ಬರುತ್ತದೆ ಎಂದು ಕಂಸ, ಆಕೆಗೆ ಹುಟ್ಟಿದ ಮಗುವನ್ನು ಕೊಲ್ಲುವುದರ ಬದಲು, ದೇವಕಿ ಮತ್ತು ವಸುದೇವ ದಂಪತಿಯನ್ನು ಪ್ರತ್ಯೇಕ ಸೆರೆಮನೆಯಲ್ಲಿರಿಸಿದ್ದರೆ ಮಕ್ಕಳೇ ಹುಟ್ಟುತ್ತಿರಲಿಲ್ಲವಲ್ಲ’ ಅಂತ ಇಂದಿನ ತಲೆಮಾರಿನ ಜನ ಬಹಳ ಬುದ್ಧಿವಂತರಂತೆ ಮಾತಾಡುತ್ತಾರೆ. ಆದರೆ, ಕಂಸ ಆ ರೀತಿ ಮಾಡಿದ್ದರೆ ಜನರ ದೃಷ್ಟಿಯಲ್ಲಿ ಹೇಡಿ ಆಗುತ್ತಿದ್ದ ಎಂಬ ವಿವೇಕವನ್ನು ಇಂದಿನ ಜನ ಮರೆಯುತ್ತಾರೆ. ಅಂದಿನ ಕಾಲದಲ್ಲಿ ರಾಕ್ಷಸಬುದ್ಧಿಯ ಕಂಸನೇ ಜನರ ಭಾವನೆಗೆ ಸ್ಪಂದಿಸುತ್ತಿದ್ದ ಎಂಬ ಸಾಮಾನ್ಯಪ್ರಜ್ಞೆಯನ್ನು ಇಂದಿನ ಮಹಾಬುದ್ಧಿವಂತರು ಕಳೆದುಕೊಂಡಿದ್ದಾರೆ.

ADVERTISEMENT

‘ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಗೀತೋಪದೇಶ ಮಾಡುತ್ತಿದ್ದಾಗ ಕೌರವರು ಸುಮ್ಮನೆ ನೋಡುತ್ತಾ ನಿಂತಿದ್ರಾ?’ ಅಂತ ಕುಹಕವಾಡುವ ಬುದ್ಧಿವಂತರು ಇಂದು ಬಹಳಷ್ಟಿದ್ದಾರೆ. ಆದರೆ ಹಿಂದಿನ ಕಾಲದ ಜನ ಆ ಪ್ರಸಂಗದಲ್ಲಿ ಕೊಂಕು ಕಾಣಲಿಲ್ಲ. ಬದಲಿಗೆ ಶ್ರೀಕೃಷ್ಣ ತಿಳಿಸಿದ ಯುದ್ಧನೀತಿಯಲ್ಲಿರುವ ಉತ್ತಮ ಅಂಶಗಳಿಗೆ ತಲೆದೂಗಿದ್ದರು. ಜಾಗೃತಿ ಮೂಡಿಸುವ ವಿಚಾರದಲ್ಲಿ ಅಂದಿನ ಜನ ಅವಿವೇಕದ ಮೂಗು ತೂರಿಸುತ್ತಿರಲಿಲ್ಲ. ಹೀಗಾಗಿ ಸಾವಿರಾರು ವರ್ಷಗಳಿಂದ ಅದನ್ನು ‘ಭಗವದ್ಗೀತೆ’ ಅಂತ ಗೌರವಿಸಿ, ಆರಾಧಿಸುತ್ತಾ ಬಂದರು. ಆದರೆ ಇಂದಿನ ಜನ ಸಣ್ಣ ವಿಚಾರವನ್ನು ಎತ್ತಾಡುವ ಅವಿವೇಕ ತೋರಿಸಿದರು.

ದೈಹಿಕರೋಗ ನಿರೋಧಕ್ಕೆ ಸಣ್ಣ ದುಷ್ಪರಿಣಾಮವನ್ನು ಕಡೆಗಣಿಸಿ ಲಸಿಕೆ ಹಾಕಿಸಿಕೊಳ್ಳಬೇಕೆಂಬ ವೈಜ್ಞಾನಿಕಬುದ್ಧಿ ಇಂದಿನ ಜನರಲ್ಲಿ ಹೇಗೆ ಬೆಳೆದಿದೆಯೋ, ಹಾಗೆ, ಮಾನಸಿಕರೋಗ ನಿರೋಧಕ್ಕೆ ಇರುವ ಧರ್ಮಗ್ರಂಥ, ನೀತಿಕಥೆಗಳಲ್ಲಿರುವ ಸಣ್ಣಪುಟ್ಟ ದೋಷಗಳನ್ನು ಬದಿಗಿಟ್ಟು, ಅದರಲ್ಲಿರುವ ಜೀವನಸಾರವನ್ನು ಅರಿಯಬೇಕೆಂಬ ವಿವೇಕವನ್ನು ಬೆಳೆಸಿಕೊಳ್ಳಬೇಕು. ಬುದ್ಧಿಗೆ ವಿವೇಕದ ಅಂಕುಶ ಇಲ್ಲದಿದ್ದರೆ, ಮನುಷ್ಯನ ಬುದ್ಧಿ ಅಡ್ಡಾದಿಡ್ಡಿಯಾಗಿ ಓಡಿ ಕೊಂಕು ಬಾಧಿಸುತ್ತದೆ. ಆಗ ಅವನ ಬದುಕು ಬರ್ಬರವಾಗುತ್ತದೆ. ಅಂಕಿತ ಬುದ್ಧಿ, ಶಂಕಿತ ಮನಸ್ಸಿಗೆ ಕಡಿವಾಣ ಹಾಕಿ, ವಿವೇಕದ ಕವಚ ಹಾಕಿದಾಗ ಮಾತ್ರ ಮನುಷ್ಯನಿಗೆ ‘ಸಚ್ಚಿದಾನಂದ’ದ ಸತ್ಯ ಅರಿವಾಗುತ್ತದೆ ಎಂಬುದನ್ನು ಸದಾನೆನಪಿಡಬೇಕು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.