ADVERTISEMENT

ಮಹಾವೀರ: ಸುಖದ ಸೇತು

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಏಪ್ರಿಲ್ 2023, 21:10 IST
Last Updated 3 ಏಪ್ರಿಲ್ 2023, 21:10 IST
ಮಹಾವೀರ
ಮಹಾವೀರ   

ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಹಲವು ದರ್ಶನಗಳಲ್ಲಿ ಒಂದು: ಜೈನದರ್ಶನ. ಈ ದರ್ಶನದ ಮೂಲತತ್ತ್ವಗಳು ಪ್ರಧಾನವಾಗಿ ಮಹಾವೀರನ ಜೀವನ ಮತ್ತು ಕಾಣ್ಕೆಗಳನ್ನು ಆಶ್ರಯಿಸಿವೆ.

ವಸ್ತುತಃ ಜೈನಮತವು ಮಹಾವೀರನಿಗಿಂತಲೂ ಪ್ರಾಚೀನವಾದುದು; ಮಹಾವೀರ, ಜೈನಪರಂಪರೆಯಲ್ಲಿ ಇಪ್ಪತ್ತನಾಲ್ಕನೆಯ ತೀರ್ಥಂಕರ. ಹೀಗಿದ್ದರೂ ಜೈನಮತದ ಮೇಲೆ ಮಹಾವೀರನ ಪ್ರಭಾವ ತುಂಬ ದೊಡ್ಡದು. ಮಹಾವೀರನ ಕಾಲ ಸುಮಾರು ಕ್ರಿ.ಪೂ. ಆರನೆಯ ಶತಮಾನ. ಇದರಿಂದ ಜೈನಮತದ ಪ್ರಾಚೀನತೆಯನ್ನು ಗ್ರಹಿಸಬಹುದಾಗಿದೆ. ಮಹಾವೀರ ಮತ್ತು ಬುದ್ಧ ಭಗವಂತನು ಸಮಕಾಲೀನರು ಎಂಬ ಎಣಿಕೆಯೂ ಉಂಟು.

ಮಹಾವೀರನು (ವರ್ಧಮಾನ ಎಂಬ ಹೆಸರೂ ಅವನಿಗೆ ಇದ್ದಿತು) ರಾಜಕುಮಾರ. ಆದರೆ ಅವನಿಗೆ ಎಳವೆಯಲ್ಲಿಯೇ ಲೌಕಿಕ ಜಗತ್ತಿನ ಆಸೆ–ಆಕರ್ಷಣೆಗಳಿಂದ ವಿಮುಖತೆ ಒದಗಿತು; ತೀವ್ರವಾದ ತಪಸ್ಸಿನಲ್ಲಿ ತೊಡಗಿದ; ದಿವ್ಯಜ್ಞಾನವನ್ನು ಸಂಪಾದಿಸಿದ; ಮೂವತ್ತನೆಯ ವಯಸ್ಸಿನಲ್ಲೇ ಸನ್ಯಾಸಿಯಾದ. ತಾನು ಕಂಡುಕೊಂಡ ಲೋಕೋತ್ತರವಾದ ಅರಿವನ್ನು ಸಮಾಜದಲ್ಲಿ ಪಸರಿಸುತ್ತ, ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಶರೀರವನ್ನು ತ್ಯಜಿಸಿದ.

ADVERTISEMENT

ಮಹಾವೀರನು ಸನ್ಯಾಸಿಗಳಿಗೂ ಗೃಹಸ್ಥರಿಗೂ ಆಧ್ಯಾತ್ಮಿಕತೆಯನ್ನೂ ಲೌಕಿಕ ನೀತಿ–ನಿಯಮಗಳನ್ನೂ ಉಪದೇಶಿಸಿದ. ಅವನ ಉಪದೇಶಗಳಲ್ಲಿ ಪ್ರಧಾನವಾಗಿ ಐದು ವ್ರತಗಳನ್ನೂ ಇಪ್ಪತ್ತೆರಡು ವಿಧದ ಸಹನೆಗಳನ್ನೂ ಗುರುತಿಸಬಹುದು. ಇಂದು ಜೈನಧರ್ಮ ಎಂಬುದು ಅಹಿಂಸೆಗೆ ಪರ್ಯಾಯಪದವೇ ಆಗಿರುವುದನ್ನು ನಾವು ಬಲ್ಲೆವು. ಮಹಾವೀರನು ಅಹಿಂಸಾತತ್ತ್ವವನ್ನು ತನ್ನ ದರ್ಶನಪದ್ಧತಿಯಲ್ಲಿ ಗಟ್ಟಿಗೊಳಿಸಿದ.

ಜೈನಮತ ಇಂದಿಗೂ ಜೀವಂತವಾಗಿರುವ ಜೀವನಪದ್ಧತಿ ಮತ್ತು ದಾರ್ಶನಿಕ ಪಂಥ. ಭಾರತದ ಉದ್ದಗಲಕ್ಕೂ ಇದು ಹರಡಿಕೊಂಡಿರುವುದನ್ನು ಕಾಣಬಹುದು. ಒಂದು ಕಾಲದಲ್ಲಿ ಕರ್ನಾಟಕ ಪ್ರಮುಖ ಜೈನಕೇಂದ್ರಗಳಲ್ಲಿ ಒಂದಾಗಿದ್ದಿತು. ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಒಂದೇ ಸಾಕು, ಜೈನಮತದ ಜೀವಂತಿಕೆಯನ್ನು ಸಾರಲು. ಈ ಮತದ ಧಾರೆಗಳಾದ ದಿಗಂಬರಪಂಥ ಮತ್ತು ಶ್ವೇತಾಂಬರಪಂಥ – ಈ ಎರಡೂ ಧಾರೆಗಳಲ್ಲಿ ಅಂದಿನಿಂದ ಇಂದಿನವರೆಗೂ ಹಲವರು ತ್ಯಾಗಿಗಳು ಸನ್ಯಾಸವನ್ನು ಸ್ವೀಕರಿಸುತ್ತ, ಜೈನಪರಂಪರೆಯ ತತ್ತ್ವಗಳನ್ನು ಸಮಾಜದಲ್ಲಿ ಎತ್ತಿಹಿಡಿಯುತ್ತಿದ್ದಾರೆ. ಆಧುನಿಕ ಜಗತ್ತಿನ ಎಲ್ಲ ಆಕರ್ಷಣೆಗಳ ನಡುವೆಯೂ ಕಠಿಣವಾದ ಸನ್ಯಾಸಧರ್ಮವನ್ನು ಪಾಲಿಸುತ್ತಿರುವ ಜೈನಮುನಿಗಳ ಬದ್ಧತೆ ದಿಟವಾಗಿಯೂ ಪ್ರಶಂಸಾರ್ಹ.

ಜೈನದರ್ಶನದಲ್ಲಿ ಗೃಹಸ್ಥನು ಅತಿ ಮುಖ್ಯವಾಗಿ ಅನುಸರಿಸಬೇಕಾದ ಐದು ವ್ರತಗಳನ್ನು ಒಕ್ಕಣಿಸಲಾಗಿದೆ; ಇವನ್ನು ಅಣುವ್ರತಗಳು ಎಂದು ಕರೆಯುತ್ತಾರೆ. ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ – ಇವೇ ಆ ವ್ರತಗಳು. ಆಧುನಿಕ ಕಾಲದ ಹಲವು ಸಮಸ್ಯೆಗಳ ಪರಿಹಾರಕ್ಕೆ ಈ ವ್ರತಗಳ ಅನುಸಂಧಾನ ಪೂರಕವಾಗುತ್ತದೆ ಎಂಬುದು ಸ್ಪಷ್ಟ. ಆದರೆ ಆ ದಿಕ್ಕಿನತ್ತ ಸಮಾಜವು ದೃಷ್ಟಿಯನ್ನು ಹರಿಸಬೇಕಷ್ಟೆ.

‘ತೀರ್ಥಂಕರ’ ಎಂಬುದಕ್ಕೆ ‘ಸೇತುವೆಯನ್ನು ಕಟ್ಟುವವನು’ ಎಂಬ ಅರ್ಥವೂ ಇದೆ. ಇದರ ಧ್ವನಿ ಏನೆಂದರೆ: ದುಃಖಸಾಗರವನ್ನು ದಾಟಲು ನಮ್ಮ ಸಹಾಯಕ್ಕೆ ಒದಗುವವನೇ ತೀರ್ಥಂಕರ. ವರ್ಧಮಾನ ಮಹಾವೀರ ಅಂಥ ತೀರ್ಥಂಕರ; ನಮ್ಮನ್ನು ದುಃಖದ ದಡದಿಂದ ಸಂತೋಷದ ದಡಕ್ಕೆ ತಲುಪಿಸಬಲ್ಲವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.