ADVERTISEMENT

ಶಿವಾರಾಧನೆಯ ಮೈಸೂರು ಚಿತ್ರಕಲೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 9:10 IST
Last Updated 22 ಫೆಬ್ರುವರಿ 2020, 9:10 IST
.
.   

ತ್ರಿಮೂರ್ತಿಗಳಲ್ಲಿ ಸೃಷ್ಟಿಕರ್ತ ಬ್ರಹ್ಮ, ಸ್ಥಿತಿಕರ್ತ ವಿಷ್ಣು, ಲಯಕರ್ತ ಶಿವ. ಶಿವನಿಗೆ ನೂರೆಂಟು ಹೆಸರು. ನೂರೆಂಟು ರೂಪ, ದೇವತೆಗಳಿಗೆ ರಾತ್ರಿ ಪೂಜೆ ಪ್ರಶಸ್ತವಲ್ಲ. ಆದರೂ, ಶಿವರಾತ್ರಿ ದಿನ ಶಿವನಿಗೆ ರಾತ್ರಿಯೇ ಪೂಜೆ. ಅಭಿಷೇಕಪ್ರಿಯ, ಬಿಲ್ವಪತ್ರೆ, ತುಂಬೆ, ದಾಸವಾಳ ಹೂವುಗಳಿಂದ ಪೂಜಿಸಿದಲ್ಲಿ ಶಿವ ಸಂತಸಗೂಳ್ಳುತ್ತಾನೆ.

ಶಿವ ಕೈಲಾಸವಾಸಿ, ಮೂರು ಕಣ್ಣುಳ್ಳವನು, ಗಜಚರ್ಮ ಧರಿಸಿದವನು, ಜಟೆಯಲ್ಲಿ ಚಂದ್ರನನ್ನು ಗಂಗೆಯನ್ನು ಅಲಂಕರಿಸಿಕೊಂಡವನು, ವಾಹನ ನಂದಿ, ಆಯುಧ ತ್ರಿಶೂಲ, ವಾದ್ಯ ಡಮರು, ಕೊರಳಲ್ಲಿ ಹಾವು, ಹಣೆಯಲ್ಲಿ ಭಸ್ಮ, ಅರ್ಧಾಂಗಿ ಪಾರ್ವತಿ, ಮಕ್ಕಳು ಗಣೇಶ ಸುಬ್ರಹ್ಮಣ್ಯ, ಶಿವನ ಅಷ್ಟಮೂರ್ತಿಗಳು ಶರ್ವ, ಭವ, ಉಗ್ರ, ರುದ್ರ, ಬೀಮ, ಪಶುಪತಿ, ಮಹದೇವ ಮತ್ತು ಈಶಾನ.

ಶಿವನಿಗೆ ಶಂಕರ, ಪರಮೇಶ್ವರ, ಸದಾಶಿವ, ಮಹಾದೇವ, ತ್ರಿನೇತ್ರ, ಪರಶಿವ, ರುದ್ರ, ಉಮಾಪತಿ, ನೀಲಕಂಠ, ಹರ, ಶಂಭು, ತ್ರೈಂಬಕ, ಚಂದ್ರಶೇಖರ, ವಿಶ್ವನಾಥ, ಶೂಲಪಾಣಿ, ಪಶುಪತಿ, ಹೀಗೆ ಹತ್ತು ಹಲವು ಹೆಸರುಗಳು. ಶಿವನನ್ನು ಪೂಜಿಸುವುದು ಲಿಂಗದ ರೂಪದಲ್ಲಿ. ಗುರುತು, ಸಂಕೇತ, ಚಿಹ್ನೆಗಳಿಂದ ನೋಡುವಾಗ ಲಿಂಗ ದೇವರನ್ನು ಸೂಚಿಸುತ್ತದೆ. ಶಿವ ಪ್ರಮಾಣಾತೀತ ಉದ್ದ ಅಗಲ ಎತ್ತರ ಗಾತ್ರ ಮಾನಗಳಿಗೆ ನಿಲುಕದವನು, ಹುಟ್ಟು ಸಾವು ಇಲ್ಲದೆ ಅನಂತನಾಗಿರುವವನು.

ADVERTISEMENT

ಮೈಸೂರು ಸಾಂಪ್ರದಾಯಕ ಶೈಲಿಯ ಹಿರಿಯ ಚಿತ್ರಕಲಾವಿದ ಶ್ರೀಧರ್‍ರಾವ್‍ ಅವರು ಶಿವನ ಹಲವಾರು ರೂಪಗಳ ಚಿತ್ರಗಳನ್ನು ರಚಿಸಿದ್ದಾರೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪೂಜಿಸುತ್ತಿರುವ ಇವರ ಕಲಾಕೃತಿಗಳನ್ನು ದೈವೀನೆಲೆಯಲ್ಲಿ ಕಂಡಾಗ ಭಕ್ತಿಪೂರ್ವಕವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಶ್ರೀಧರ್‌ರಾವ್ ಅವರು ಹೇಳುವಂತೆ ಶಿವನ ರಚನೆಯು ತುಂಬಾ ಅದ್ಬುತ. ನಿರಾಕಾರನಾದ ಶಿವನಿಗೆ ಆಕಾರ ಕಲ್ಪಿಸುವುದು ಸವಾಲಿನ ಕೆಲಸ. ಅವತಾರಗಳು, ಲೀಲೆಗಳು, ರೂಪಗಳ ಸನ್ನಿವೇಶಗಳನ್ನು ಸಂಯೋಜಿಸಿ ಭಕ್ತನಿಗೆ ದೇವರನ್ನು ತೋರಿಸಬೇಕಾಗುತ್ತದೆ. ರೇಖೆ ಬಣ್ಣಗಳಲ್ಲಿ ಸಮತೋಲನ, ಶೈಲಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪ್ರಮಾಣ ಬದ್ಧ ಅಂಶಗಳು, ಪ್ರಾಧಾನ್ಯತೆ, ಪೀಠ, ಆಸನ, ಪ್ರಭಾವಳಿ, ಆಭರಣಗಳು, ವಸ್ತ್ರಗಳು, ಕಿರೀಟ, ಚೌಕಟ್ಟು, ಆಯುಧ, ವಾದ್ಯಗಳು, ದ್ವಾರಪಾಲಕರು, ಸೇವಕರು, ವಾಹನ, ದೀಪಗಳು, ಹೂವಿನಾಲಂಕಾರ, ಇತರೆ ಪರಿಕರಗಳನ್ನು ಆಯಾ ದೇವತೆಗಳಿಗೆ ಸಂಬಂಧಿಸಿದಂತೆ ಸಂದರ್ಭಾನುಸಾರ ಚಿತ್ರಿಸಬೇಕಾಗುತ್ತದೆ.

ಶ್ರೀಧರ್‌ರಾವ್‌ ಅವರು ಕಳೆದ 30 ವರ್ಷಗಳಿಂದ ನಿರಂತರವಾಗಿ ಮೈಸೂರು ಸಾಂಪ್ರದಾಯಕ ಶೈಲಿಯ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ತಂದೆ ಸಿದ್ದೋಜಿರಾವ್ ತಾಯಿ ಲಲಿತಾಬಾಯಿ ಪತ್ನಿ ಸುಮತಿಬಾಯಿ ಮಗಳು ದೀಪಾರಾವ್ ಇವರ ಸಹಕಾರವನ್ನು ನೆನೆಯುತ್ತಾರೆ. ಈ ಶೈಲಿಯಲ್ಲಿ ಬಂಗಾರದ ರೇಕುಗಳ ಬಳಕೆಯು ತುಂಬಾ ಆಕರ್ಷಕವಾಗಿರುತ್ತದೆ. ಜಸ್ಸೋ ಮೇಲಿನ ಉಬ್ಬುತಗ್ಗುಗಳು ನಕ್ಷೆಗಳು, ಹೂಬಳ್ಳಿಗಳು, ಜಲಚರಗಳು, ಪ್ರಾಣಿಪಕ್ಷಿಗಳ ಅಲಂಕಾರಿಕ ಅಂಶಗಳನ್ನು ಚಿತ್ರಕ್ಕೆ ಹೊಂದುವಂತೆ ಚಿತ್ರಿಸಿರುತ್ತಾರೆ. ಮುಖ್ಯ ದೇವತೆಯನ್ನು ಹಿಗ್ಗಿಸಿ ಇತರರನ್ನು ಕುಗ್ಗಿಸಿ ಚಿತ್ರಿಸಲಾಗುತ್ತದೆ. ಪ್ರಾಮುಖ್ಯತೆಯನ್ನು, ಆಕರ್ಷಕ ಮೂಲ ಬಣ್ಣಗಳನ್ನು ಮುಖ್ಯ ದೇವತೆಗೆ ಮಾತ್ರ ನೀಡಲಾಗುತ್ತದೆ. ಇದರಿಂದ ಕಲಾಕೃತಿಯು ನಿರ್ದಿಷ್ಟತೆಯನ್ನು ಪಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.