ADVERTISEMENT

ಮಹಾಶಿವರಾತ್ರಿ | ಭವತಾಪಹಾರಕ ಭವ

ಮಹೇಶ ಭಟ್ಟ ಆರ್.ಹಾರ್ಯಾಡಿ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
   

ಶಿವರಾತ್ರಿಯಲ್ಲಿ ಉಪವಾಸ ಮತ್ತು ಜಾಗರಣ ಮುಖ್ಯವಾದ ಅಂಗಗಳೆನಿಸಿವೆ. ಉಪವಾಸವೆನ್ನುವುದು ಕೇವಲ ದೈಹಿಕಾರ್ಥಕ್ಕೆ ಸೀಮಿತವಾಗದೆ ಮನಸ್ಸಿನ ಆಹಾರವಾದ ವಿಷಯಪದಾರ್ಥಗಳಿಗೂ ಸಂಬಂಧಿಸುತ್ತದೆ. ಶಿವರಾತ್ರಿಯಲ್ಲಿ ಎಚ್ಚರವಾಗಿರಬೇಕೆನ್ನುವುದು ’ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ’ ಎಂದು ಭಗವದ್ಗೀತೆಯಲ್ಲಿ ಹೇಳುವಂತೆ ತಮಸ್ಸಿನಲ್ಲಿ ಕಳೆದು ಹೋಗದೆ ಎಚ್ಚರವಾಗಿರಬೇಕು ಎನ್ನುವುದರ ಸಂಕೇತ. ಶಿವನ ಕುರಿತು ನೆನೆದಾಗಲೆಲ್ಲ ಅಪ್ಪಯ್ಯದೀಕ್ಷಿತರ ‘ಕುವಲಯಾನಂದ’ ಎಂಬ ಅಲಂಕಾರಶಾಸ್ತ್ರಗ್ರಂಥದಲ್ಲಿ ಉಪಮಾಲಂಕಾರಕ್ಕೆ ಉದಾಹರಣೆಯಾಗಿ ನೀಡಿರುವ ಈ ಪದ್ಯವು ತಪ್ಪದೆ ನೆನಪಾಗುತ್ತದೆ.

ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ |

ಶಿರಸಾ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ ||

ADVERTISEMENT

ಶಿವನಿಂದ ನಾವು ಅರಿತುಕೊಳ್ಳಬೇಕಾದದ್ದು ಏನು ಎಂಬುದನ್ನು ಈ ಶ್ಲೋಕದಲ್ಲಿ ಕಂಡರಿಸಿದ್ದಾರೆ.

ಶಿವನು ಚಂದ್ರನನ್ನು ತಲೆಯ ಮೇಲೆ ಹೊತ್ತು ಮೆರೆಸುವಂತೆ ವಿದ್ವಾಂಸನು ಇತರರ ಗುಣಗಳನ್ನು ತಲೆದೂಗಿ ಪ್ರಶಂಸಿಸುತ್ತಾನೆ. ಶಿವನು ವಿಷವನ್ನು ಕಂಠದಲ್ಲಿಯೇ ಇರಿಸಿಕೊಂಡಂತೆ ವಿದ್ವಾಂಸನು ಇತರರ ದೋಷಗಳನ್ನು ತನ್ನ ಕಂಠದಲ್ಲಿಯೇ ಇರಿಸಿಕೊಂಡಿರುತ್ತಾನೆ ಎಂದರೆ ಮಾತಿನ ಮೂಲಕ ಪ್ರಕಟಪಡಿಸಿ ಆಡಿಕೊಳ್ಳುವುದಿಲ್ಲ. ಆದ್ದರಿಂದ ಸಂಸ್ಕೃತದಲ್ಲಿ ವಿದ್ವಾಂಸರನ್ನು ದೋಷಜ್ಞ ಎನ್ನುತ್ತಾರೆಯೇ ಹೊರತು ದೋಷವಾದಿ ಎನ್ನುವುದಿಲ್ಲ. ಹೀಗೆ ಶಿವನಂತೆ ಒಳ್ಳೆಯದನ್ನು ಆದರಿಸುವುದನ್ನು ಮತ್ತು ಕೆಟ್ಟದ್ದನ್ನು ಹರಡಲು ಆಸ್ಪದ ನೀಡದೆ ನಿಯಂತ್ರಿಸುವುದನ್ನು ರೂಢಿಸಿಕೊಂಡರೆ ಸಮಾಜವು ಸ್ವಸ್ಥವಾಗಿರುತ್ತದೆ.

ಸಂಗೀತಕಲಾನಿಧಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಭಾವಾರ್ದ್ರವಾಗಿ ರಾಗಮಾಲಿಕೆಯ ರೂಪದಲ್ಲಿ ಹಾಡಿ ಪ್ರಚುರಗೊಳಿಸಿದ ಅಪ್ಪಯ್ಯದೀಕ್ಷಿತರದ್ದೆಂದು ಹೇಳಲಾಗುವ ಶಿವನ ಕುರಿತಾದ ಈ ಮುಂದಿನ ಶ್ಲೋಕವು ಮನೋಜ್ಞವಾಗಿದೆ:

ಮೌಲೌ ಗಂಗಾಶಶಾಂಕೌ ಕರಚರಣತಲೇ ಶೀತಲಾಂಗಾ ಭುಜಂಗಾ

ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ |

ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವ ಶಕ್ತಿ-

ಶ್ಚಿತ್ತೇ ನಿರ್ವೇದತಪ್ತೇ ಯದಿ ಭವತಿ ನ ತೇ ನಿತ್ಯವಾಸೋ ಮದೀಯೇ ||

ಕನಕಸಭಾಪತಿಯಾದ ಶಿವನೇ! ನಿನ್ನ ಮುಡಿಯಲ್ಲಿ ಗಂಗೆ ಮತ್ತು ಚಂದ್ರ, ಕೈಕಾಲುಗಳಲ್ಲೆಲ್ಲ ತಂಪಾದ ಹಾವುಗಳು, ಎಡ ಭಾಗದಲ್ಲಿ ಹಿಮವಂತನ ಮಗಳಾದ ದಯೆಯಿಂದ ತಂಪಾದ ಪಾರ್ವತಿ, ಸಮಗ್ರದೇಹದಲ್ಲಿ ಚಂದನ – ಹೀಗೆ ಇವೆಲ್ಲವುಗಳಿಂದ ನಿನಗೆ ತಂಪಿನ ಸಂಬಂಧ ಹೆಚ್ಚಾಗಿದೆ. ಒಂದು ವೇಳೆ ಸಂಸಾರದ ಕುರಿತಾದ ಹೇವರಿಕೆಯಿಂದ ಸುಡುತ್ತಿರುವ ನನ್ನ ಮನಸ್ಸಿನಲ್ಲಿ ನೀನು ಸದಾ ವಾಸಮಾಡುವುದಿಲ್ಲವೆಂದಾದರೆ ಆ ಹೆಚ್ಚಾದ ಚಳಿಯನ್ನು ಸಹಿಸಲು ನಿನಗೆಲ್ಲಿ ಸಾಮರ್ಥ್ಯವಿದೆ? ಹೀಗೆ ತನ್ನ ಸುಡುತ್ತಿರುವ ಮನಸ್ಸನ್ನು ಸೇರಿದರೆ ಶಿವನು ಚಳಿಯನ್ನು ನೀಗಿಸಿಕೊಳ್ಳಬಹುದು, ಸುಡುತ್ತಿರುವ ತನ್ನ ಮನಸ್ಸು ಅಂತಹ ಶಿವನ ಸನ್ನಿಧಾನದಿಂದ ತಂಪಾಗುತ್ತದೆ, ಭವತಾಪ ನೀಗುತ್ತದೆ ಎಂಬ ಸ್ವಾರಸ್ಯವನ್ನು ಹೊಮ್ಮಿಸುವ ಈ ಶ್ಲೋಕವು ಭಗವಂತನಿಗೇ ಪ್ರಲೋಭನೆ ಮಾಡುವ ರೀತಿಯಲ್ಲಿ ಅದೆಷ್ಟು ಸೊಗಸಾಗಿದೆ. ಆ ಭಕ್ತನ ಕೋರಿಕೆಯೇ ನಮ್ಮೆಲ್ಲರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.