ADVERTISEMENT

ಸಂಸ್ಕೃತಿ ಸಂಭ್ರಮ | ನಾಗ; ಕುಂಡಲಿನೀಶಕ್ತಿಗೂ ಸಂಕೇತ

ದೀಪಾ ಫಡ್ಕೆ
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ನಾಗರಪಂಚಮಿ ಪ್ರಯುಕ್ತ ಮೈಸೂರಿನ ಅಮೃತೇಶ್ವರ ದೇಗುಲದ ಬಳಿ ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸಿದರು. ನಾಗಪ್ಪನಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ಹಾಲಿನಿಂದ ಅಭಿಷೇಕ ನೆರವೇರಿಸಿದರು
ನಾಗರಪಂಚಮಿ ಪ್ರಯುಕ್ತ ಮೈಸೂರಿನ ಅಮೃತೇಶ್ವರ ದೇಗುಲದ ಬಳಿ ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸಿದರು. ನಾಗಪ್ಪನಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ಹಾಲಿನಿಂದ ಅಭಿಷೇಕ ನೆರವೇರಿಸಿದರು   
""

ವರ್ಷಕಾಲದ ಎರಡನೆ ಹೆಜ್ಜೆ ಶ್ರಾವಣಮಾಸ; ಬೆನ್ನಿಗೇ ಬರುವ ಸಾಲು ಹಬ್ಬಗಳಿಗೆ ನಾಂದಿಗೀತ ಹಾಡುವುದೇ ನಾಗರಪಂಚಮಿ. ಸಾಂಕೇತಿಕವಾಗಿ ಕಲ್ಲನಾಗನಿಗೆ ಹಾಲೆರೆದು, ಪೂಜಿಸಿ ಸಂತಾನ ಮತ್ತು ಕುಟುಂಬದ ಸಮೃದ್ಧಿಯನ್ನು ಕಾಪಾಡು ಎಂದು ಪ್ರಾರ್ಥಿಸುವ ಹಬ್ಬ. ಇಷ್ಟೇ ಆಗುತ್ತಿದ್ದರೆ ಈ ಆರಾಧನೆಯೂ ಒಂದು ದಿನದ ಆಚರಣೆಯಾಗಿ ಹಾಗೇ ಬಂದು ಹೋಗುತ್ತಿತ್ತೇನೋ?

ಆದರೆ ನಾಗಾರಾಧನೆಗೆ ಮನುಷ್ಯನ ದೇಹದೊಳಗಿರುವ ಕುಂಡಲಿನೀಶಕ್ತಿಯೊಡನೆ ಇರುವ ಸಂಬಂಧವನ್ನು ನಮ್ಮ ಪ್ರಾಚೀನರು ವರ್ಣಿಸಿದ್ದುಂಟು. ‘ನಮೋ ಅಸ್ತು ಸರ್ಪೇಭ್ಯೋ ಯೇಕೆಚ ಪೃಥಿವೀಮನು| ಯೇ ಅಂತರಿಕ್ಷೆ ಯೇ ದಿವಿತೇಭ್ಯಃ ಸರ್ಪೇಭ್ಯೋ ನಮಃ’(ಯಜುರ್ವೇದ ಸೂಕ್ತಿ). ಇಡೀ ಪ್ರಪಂಚದ ನಾಗಶಕ್ತಿಯನ್ನು ವಂದಿಸುತ್ತೇನೆ ಎನ್ನುವ ಸೂಕ್ತಿಯಿದು. ಕಣ್ಣಿಗೆ ಕಾಣದ ದೇವರಿಗೆ ಮೂರ್ತರೂಪವೊಂದನ್ನು ನೀಡಿ ಪೂಜಿಸಿದಂತೇ ಯೋಗಿಗಳು ಶರೀರದ ಅಂತಃಶಕ್ತಿಯಾಗಿರುವ ಕುಂಡಲಿನೀಶಕ್ತಿಯನ್ನು ಸರ್ಪಾಕಾರದಲ್ಲಿ ಕಂಡ ಕಾರಣ ಪ್ರತೀಕಗ್ರಹಣನ್ಯಾಯದ ಮೂಲಕ ಅದೇ ಸ್ವರೂಪದಲ್ಲಿ ಪೂಜಿಸುವ ಪದ್ಧತಿ ಆರಂಭವಾಗಿರುವುದನ್ನೂ ಮತ್ತು ವೇದಗಳ ಕಾಲದಿಂದಲೂ ಇದು ಅನೂಚಾನವಾಗಿ ನಡೆದುಬಂದಿರುವುದನ್ನೂ ನೋಡಬಹುದು.

ಶ್ರಾವಣ ಶುದ್ಧ ಪಂಚಮಿಯಂದು ನಾಗರಪಂಚಮಿಯೆಂದು ಆಚರಿಸುವ ನಮ್ಮಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವೈವಿಧ್ಯಮಯ ಆಚರಣೆಗಳನ್ನು ನೋಡಬಹುದು. ಪ್ರಾಯಶಃ ವೈದಿಕ–ಅವೈದಿಕ ಎರಡೂ ಸಂಪ್ರದಾಯಗಳಲ್ಲಿ ಸ್ಥಾನ ಪಡೆದುಕೊಂಡಿರುವ ಆಚರಣೆಯಿದು. ದಕ್ಷಿಣ ಕರ್ನಾಟಕದಲ್ಲಿ ಇದು ಕುಟುಂಬದ ಒಳಿತಿಗೆ ಭ್ರಾತೃತ್ವದ ಉಳಿವಿಗೆ ಪೂಜಿಸುವ ಹಬ್ಬವಾಗಿದೆ. ಸರ್ಪ ಕಚ್ಚಿ ಅಣ್ಣಂದಿರನ್ನು ಕಳಕೊಂಡ ಹೆಣ್ಣೊಬ್ಬಳು ನಾಗನನ್ನು ಪೂಜಿಸಿ ಮತ್ತೆ ಅಣ್ಣನಿಗೆ ಜೀವದಾನ ಮಾಡಿಸಿಕೊಂಡ ಕಾರಣ ಕಲ್ಲನಾಗರನಿಗೆ ಹಾಲೆರೆದು ಪೂಜಿಸಿ ಕೃತಜ್ಞತೆ ಹೇಳುತ್ತಾ, ‘ಇನ್ನು ಮುಂದೆಯೂ ನಮ್ಮಿಂದಾಗುವ ತಪ್ಪನ್ನು ಕ್ಷಮಿಸುತ್ತಾ ಕುಟುಂಬವನ್ನು ಕಾಪಾಡು’ ಎನ್ನುತ್ತಾ ಕುಟುಂಬದ ಎಲ್ಲರೊಂದಿಗೆ ಸೇರಿ ಪೂಜಿಸಿ ಉಯ್ಯಾಲೆಯಾಡಿ ಸಂಭ್ರಮ ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ಈ ಕಥಾನಕಕ್ಕೆ ಕೃಷ್ಣನ ನಂಟು ಇರದೇ ಇರುವುದೇ! ಯಮನೆಯಲ್ಲಿ ಮನೆ ಮಾಡಿಕೊಂಡಿದ್ದ ಕಾಳಿಂಗನನ್ನು ಕೃಷ್ಣ ಮರ್ದನ ಮಾಡಿದ ದಿನ ಶ್ರಾವಣ ಶುಕ್ಲ ಪಂಚಮಿ.

ADVERTISEMENT

ಕರಾವಳೀತೀರವನ್ನು ನಾಗಾರಾಧನೆಯ ತವರೆಂದೇ ಹೇಳುವುದುಂಟು. ಕಾಡು, ಗಿಡಮರ, ಬಳ್ಳಿಗಳಿಂದ, ಕೇದಗೆಯ ಬನ(ವನ)ಗಳಿಂದಲೇ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸರ್ಪಗಳು ಇರುವುದು ಸಹಜ. ಹಾಗೆ ನಾಗಪಂಚಮಿ ಇಲ್ಲಿ ಬಹಳ ವಿಶೇಷ. ಕರಿದ ಅಹಾರ ನಾಗನಿಗೆ ನೈವೇದ್ಯವಾಗದು. ಹಸಿ ತಂಬಿಟ್ಟು ವಿಶೇಷ ಅಂದು.

ನೀರಿನ ಆಶ್ರಯವಿದ್ದಲ್ಲಿ ಸಸ್ಯಸಂಪತ್ತು, ಸಸ್ಯವಿದ್ದಲ್ಲಿ ನೆರಳು, ನೆರಳಿದ್ದಲ್ಲಿ ಸರ್ಪ. ಜಲಸಂಪತ್ತು ಸಮೃದ್ಧವಾಗಿದ್ದಲ್ಲಿ ಗಿಡಮರಗಳ ಸಸ್ಯಸಂಪತ್ತೂ ಅಷ್ಟೇ ಸಮೃದ್ಧವಾಗಿರುತ್ತದೆ. ವನವೆಂದರೆ ಫಲವತ್ತಾದ, ಪುಷ್ಟಿಯಾದ ನೆಲ. ಅಲ್ಲಿ ಹಾವು, ಕ್ರಿಮಿಕೀಟಗಳು, ಹಕ್ಕಿಗಳು ಒಟ್ಟಿನಲ್ಲಿ ಪ್ರಕೃತಿ ಸಮೃದ್ಧತೆಯ ಪೂರ್ಣರೂಪದಲ್ಲಿರುತ್ತದೆ. ದಕ್ಷಿಣ ಕನ್ನಡದ ಇಂಥ ಸಮೃದ್ಧ ಬನಗಳಲ್ಲಿ ಗಿಡಮರಗಳ ಟೊಂಗೆಯನ್ನೂ ಕೂಡ ಕಡಿಯಲು ನಿಷೇಧವಿದೆ. ಅದು ನಾಗವನವೆನ್ನುವ ಗೌರವಭಾವ. ನಾಗಪಂಚಮಿಯಂದು ಭೂಮಿಗೆ ಒಂದು ಗಾಯವನ್ನೂ ಮಾಡಬಾರದು. ಹಾರೆ, ಗುದ್ದಲಿಗಳಿಗಂದು ರಜೆ. ಧಡಧಡನೆ ಕಾಲನ್ನೆತ್ತಿ ನೆಲಕ್ಕೆ ಬಡಿದಂತೆ ನಡೆದರೂ ಕೂಡ ನಾಗನಿಗೆ ನೋವಾದೀತು, ಏಕೆಂದರೆ ಅಲ್ಲಿ ಅಂದು ನಾಗನ ಸಂತತಿ ಓಡಾಡಿಕೊಂಡಿರುತ್ತದೆ ಎನ್ನುವ ತರ್ಕ ಮೀರಿದ ಭಾವಶ್ರದ್ಧೆ ಈ ಹೊತ್ತಿನಲ್ಲಿಯೂ ಇದೆ.

ಮನುಷ್ಯ ಮತ್ತೆ ಹೊಸತಾಗಿ ಹುಟ್ಟುವುದು ಸಂತತಿಯ ಮೂಲಕ. ಶರೀರದ ಅಂತಃಶಕ್ತಿ ಸರ್ಪಾಕೃತಿಯಿದ್ದ ಕಾರಣವೋ, ಹಾವನ್ನು ಬಯಕೆಗೆ ಸಂಕೇತವಾಗಿಯೂ ನಾಗನ ಆರಾಧನೆಯನ್ನು ಸಂತತಿಗೆ ಕಾರಕವಾಗಿಯೂ ನೋಡುವ ಸಂಪ್ರದಾಯ ಪ್ರಾಚೀನಕಾಲದಿಂದಲೂ ಇದೆ. ಪೊರೆ ಕಳಚುವ ನಾಗನ ಆರಾಧನೆಯಿಂದ ಚರ್ಮರೋಗಗಳನ್ನು ದೂರ ಮಾಡಬಹುದೆನ್ನುವ ನಂಬಿಕೆಯಿದೆ. ರೋಗ ದೂರವಾಗುವುದೆಂದರೆ ಮತ್ತೆ ಹೊಸತಾಗುವುದು! ಅತ್ಯಂತ ವಿಷಮ ಸ್ಥಿತಿಯಲ್ಲಿ ಸಿಲುಕಿರುವ ನಾವೆಲ್ಲರೂ ಪರ್ಯಾವರಣದ ಬಗ್ಗೆ ಯೋಚಿಸಲು ಸಕಾಲವಿದು. ನಮ್ಮ ಸಂಸ್ಕೃತಿಯ ಮೂಲದ್ರವ್ಯ ಪ್ರಕೃತಿಯ ಆರಾಧನೆ. ಪ್ರಕೃತಿಯೇ ದೈವ. ನಾಗಾರಾಧನೆ ಅಂತಹ ಸಮೃದ್ಧ ಪ್ರಕೃತಿಯ ಪೂಜೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.